ಗುರುವಾರ , ಏಪ್ರಿಲ್ 15, 2021
21 °C

ಶಾಲೆಗೆ ಹೋದ ಮಕ್ಕಳ ಜೀವ ಎಷ್ಟು ಸುರಕ್ಷಿತ?

ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ಬಳ್ಳಾರಿ: ‘ಮಕ್ಕಳ ಭವಿಷ್ಯ ಉಜ್ವಲವಾಗಲಿ’ ಎಂಬ ಉದ್ದೇಶದಿಂದ ಪ್ರತಿಷ್ಠಿತ ಶಾಲೆಗಳತ್ತ ಒಲವು ತೋರುತ್ತಿರುವ ಪಾಲಕರಲ್ಲಿ ಸೋಮವಾರ ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳು ತೀವ್ರ ಆತಂಕ ಮೂಡಿಸಿವೆ.ನಗರದ ಪ್ರತಿಷ್ಠಿತ ಬೆಸ್ಟ್ ವಸತಿಯುತ ಶಾಲೆಯ ಕೋಣೆಯಲ್ಲಿ ಗುಲ್ಬರ್ಗ ಜಿಲ್ಲೆಯ ಹಳ್ಳಿಯೊಂದರ ವಿದ್ಯಾರ್ಥಿ ಲಿಂಗರಾಜ್ (17) ತನ್ನ ಸಹಪಾಠಿಯೊಂದಿಗೆ ಜಗಳವಾಡಿ ಹಲ್ಲೆಗೊಳಗಾಗಿ ಸಾವಿಗೀಡಾಗಿದ್ದರೆ, ತಾಲ್ಲೂಕಿನ ಕುಡಿತಿನಿ ಗ್ರಾಮದ ನೇತಾಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿದ್ದ ಅಲೆಮಾರಿ ಜನಾಂಗದ ಬುಡ್ಗ ಜಂಗಮ ಸಮುದಾಯಕ್ಕೆ ಸೇರಿದ ಬಸವರಾಜ್ (7) ಎಂಬ ಬಾಲಕ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾನೆ. ಈ ಘಟನೆಗಳು ಪಾಲಕರನ್ನು ತೀವ್ರ ವಿಚಲಿತವಾಗುವಂತೆ ಮಾಡಿದ್ದು, ಶಾಲೆಗೆ ಹೋದ ಮಕ್ಕಳ ಜೀವ ಎಷ್ಟು ಸುರಕ್ಷಿತ? ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.ಸಂಸ್ಥೆ ಮೇಲೇ ಶಂಕೆ: ಕುಡುತಿನಿ ಗ್ರಾಮದಲ್ಲಿರುವ ನೇತಾಜಿ ಆಂಗ್ಲ ಮಾಧ್ಯಮ ಶಾಲೆಯ ಕಟ್ಟಡದ ಮೊದಲ ಮಹಡಿಯ ನಿರ್ಮಾಣ ಕಾರ್ಯ ನಡೆದಿದ್ದು, ಮಗನನ್ನು ಬಲಿ ನೀಡಿರಬಹುದು ಎಂದೇ ಪಾಲಕರು ಶಂಕಿಸಿದ್ದಾರೆ.ಶಾಲೆಯಲ್ಲಿ ಕೇವಲ ಎರಡು ದಿನಗಳ ಹಿಂದಷ್ಟೇ ತನ್ನ ಬಟ್ಟೆ ಬಿಚ್ಚಿ ತಪಾಸಿಸಲಾಗಿದೆ ಎಂದು ಮಗ ತಮಗೆ ತಿಳಿಸಿದ್ದ. ಇದರ ಹಿಂದಿರುವ ಉದ್ದೇಶವಾದರೂ ಏನು ಎಂಬುದು ಪಾಲಕರ ಪ್ರಶ್ನೆಯಾಗಿದೆ. ತನ್ನ ತರಗತಿಗೆ ಹೋಗಿ ಬ್ಯಾಗ್ ಇಟ್ಟು ಹೊರ ಹೋದ ಮಗ ಶವವಾಗಿದ್ದೇಕೆ? ಆತನ ಮುಖ ಮತ್ತು ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವುದು ಸ್ಪಷ್ಟವಾಗಿದ್ದು, ಈ ದುಷ್ಕೃತ್ಯದ ಹಿಂದೆ ಯಾರ ಕೈವಾಡ ಇದೆ ಎಂಬುದು ಸೂಕ್ತ ತನಿಖೆಯಿಂದಲೇ ಬಹಿರಂಗವಾಗಬೇಕಿದೆ ಎಂಬುದು ಪಾಲಕರ ಆಗ್ರಹವಾಗಿದೆ.ಅಲ್ಲದೆ, ಶಾಲೆಗೆ ಹೋದ ಮಕ್ಕಳ ಬಗ್ಗೆ ನಿಗಾ ಇರಿಸಬೇಕಿರುವ ಆಡಳಿತ ಮಂಡಳಿಗಳು ಈ ರೀತಿ ನಿರ್ಲಕ್ಷ್ಯ ತೋರುತ್ತಿರುವುದು ಏಕೆ? ಎಂಬುದು ಅವರ ಪ್ರಶ್ನೆಯಾಗಿದೆ.

ಬಳ್ಳಾರಿಯ ಹೊರ ವಲಯದಲ್ಲಿರುವ ಬೆಸ್ಟ್ ವಸತಿಯುತ ಶಾಲೆಯಲ್ಲಿ ಶ್ರೀಮಂತರ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ (ಶುಲ್ಕ ಅತ್ಯಂತ ದುಬಾರಿ ಎಂಬುದು ಅದಕ್ಕೆ ಪ್ರಮುಖ ಕಾರಣ) ಓದುತ್ತಿದ್ದು, ರಾಜ್ಯದ ವಿವಿಧ ಮೂಲೆಗಳಿಂದಲೂ ಬಂದ ನೂರಾರು ವಿದ್ಯಾರ್ಥಿಗಳು ಇಲ್ಲಿದ್ದಾರೆ. ಕೇವಲ ವಿದ್ಯುದ್ದೀಪ ಹಚ್ಚುವ ಕ್ಷುಲ್ಲಕ ಕಾರಣದಿಂದ ನಡೆದ ಜಗಳ ಬಾಲಕನ ಸಾವಿನಲ್ಲಿ ಪರ್ಯಾವಸಾನ ಹೊಂದಿದೆ. ಅವರ ಕೊಠಡಿಯಲ್ಲಿನ ಮೇಲ್ವಿಚಾರಕರು ಇದನ್ನು ಗಮನಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಿಲ್ಲವೇಕೆ? ಎಂಬುದು ದುಃಖತಪ್ತ ಪಾಲಕರ ಪ್ರಶ್ನೆಯಾಗಿದೆ. ಮಕ್ಕಳು ಚೆನ್ನಾಗಿ ಓದಿ, ಉತ್ತಮ ಭವಿಷ್ಯ ರೂಪಿಸಿಕೊಳ್ಳಲಿ ಎಂಬ ಉದ್ದೇಶದಿಂದ ಸಾಲ ಮಾಡಿ ಶುಲ್ಕ ಪಾವತಿಸಿ, ‘ಪ್ರತಿಷ್ಠಿತ’ ಎನ್ನಿಸಿಕೊಂಡಿರುವ ಶಾಲೆಗೆ ಕಳುಹಿಸಿದರೆ, ಮಕ್ಕಳು ಕಾರಣವೇ ಇಲ್ಲದೆ ಸಾವಿಗೀಡಾಗಿರುವುದು ಪಾಲಕರನ್ನು ಚಿಂತೆಗೆ ಈಡುಮಾಡಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.