ಶೀಘ್ರ 5000 ಪೊಲೀಸ್ ಸಿಬ್ಬಂದಿ ನೇಮಕ: ಮುಖ್ಯಮಂತ್ರಿ

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ಬಲವರ್ಧನೆಗಾಗಿ ಸದ್ಯದಲ್ಲೇ ಐದು ಸಾವಿರ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತಿಳಿಸಿದರು.
ನಗರದ ಕೋರಮಂಗಲದಲ್ಲಿರುವ ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್ಆರ್ಪಿ) ಮೈದಾನದಲ್ಲಿ ಸೋಮವಾರ ನಡೆದ ಪೊಲೀಸ್ ಧ್ವಜ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.
ಹೊಸದಾಗಿ ನೇಮಕಗೊಳ್ಳುವ ಸಿಬ್ಬಂದಿಯಲ್ಲಿ ಕೆಎಸ್ಆರ್ಪಿ ಮತ್ತು ರಾಜ್ಯ ಕೈಗಾರಿಕಾ ಭದ್ರತಾ ಪಡೆಗೆ (ಕೆಎಸ್ಐಎಫ್) ತಲಾ ಎರಡು ಸಾವಿರ, ಮಂಗಳೂರು ಕಮಿಷನರೇಟ್ ವ್ಯಾಪ್ತಿಗೆ 200 ಮಂದಿ ಮತ್ತು ಉಳಿದ ಸಿಬ್ಬಂದಿಯನ್ನು ಇಲಾಖೆಯ ವಿವಿಧ ವಿಭಾಗಗಳಿಗೆ ನಿಯೋಜಿಸಲಾಗುವುದು. ಕೆಎಸ್ಐಎಫ್ನ ಎರಡು ಮತ್ತು ಮೂರನೇ ಘಟಕಗಳು ಸದ್ಯದಲ್ಲೇ ಕಾರ್ಯಾರಂಭ ಮಾಡಲಿವೆ ಎಂದು ಮಾಹಿತಿ ನೀಡಿದರು.
ಕೆಎಸ್ಆರ್ಪಿ ಸಿಬ್ಬಂದಿಗಾಗಿ ಆರಂಭಿಸಲಾಗಿರುವ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲು ಒಂದು ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ನಿವೃತ್ತ ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬ ಸದಸ್ಯರಿಗೂ ಆರೋಗ್ಯ ವಿಮೆ ಸೌಲಭ್ಯ ನೀಡಲಾಗುತ್ತದೆ. ನಿವೃತ್ತ ಸಿಬ್ಬಂದಿಯ ಕ್ಷೇಮಾಭಿವೃದ್ಧಿಗೆ ಬಜೆಟ್ನಲ್ಲಿ ಐದು ಕೋಟಿ ಮೀಸಲಿಡಲಾಗಿದೆ ಎಂದರು.
ರಾಜ್ಯ ಪೊಲೀಸ್ ಇಲಾಖೆಯ ಶೇ 45ರಷ್ಟು ಸಿಬ್ಬಂದಿಗೆ ಮಾತ್ರ ವಸತಿ ಸೌಕರ್ಯ ಸಿಕ್ಕಿದೆ. ಆದ್ದರಿಂದ ಶೇ 75ರಷ್ಟು ಸಿಬ್ಬಂದಿಗೆ ವಸತಿ ಸೌಕರ್ಯ ಕಲ್ಪಿಸಲು ನಿರ್ಧರಿಸಲಾಗಿದ್ದು, ಈ ಕಾರ್ಯಕ್ಕೆ 50 ಕೋಟಿ ರೂಪಾಯಿ ಮೀಸಲಿಡಲಾಗಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾ ಚಟುವಟಿಕೆಗಳಲ್ಲಿ ಹಾಗೂ ಕರ್ತವ್ಯ ನಿರ್ವಹಣೆಯಲ್ಲಿ ವಿಶಿಷ್ಟ ಸಾಧನೆ ಮಾಡುವ ಮೂಲಕ ಇಲಾಖೆಗೆ ಕೀರ್ತಿ ತರುವ ಸಿಬ್ಬಂದಿಗೆ ಬಡ್ತಿ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಇಲಾಖೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಿರಿಯ ಅಧಿಕಾರಿಗಳು ಸೇರಿದಂತೆ ಒಟ್ಟು 98 ಸಿಬ್ಬಂದಿಗೆ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರದಾನ ಮಾಡಲಾಯಿತು. ಪೊಲೀಸ್ ಮಹಾನಿರ್ದೇಶಕ (ಹಂಗಾಮಿ) ಎ.ಆರ್.ಇನ್ಫಂಟ್, ಡಿಜಿಪಿ ಗಳಾದ ರೂಪಕ್ಕುಮಾರ್ ದತ್ತ, ಸುಶಾಂತ್ ಮಹಾಪಾತ್ರ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.