ಸೋಮವಾರ, ಮೇ 17, 2021
21 °C

ಶ್ರೀರಾಮಪುರ ಜೋಡಿ ಕೊಲೆ ಪ್ರಕರಣ:ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಶ್ರೀರಾಂಪುರದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಮೂವರು ಆರೋಪಿಗಳಿಗೆ ನಗರದ ಎರಡನೇ ತ್ವರಿತಗತಿ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 15 ಸಾವಿರ ದಂಡ ವಿಧಿಸಿ ಗುರುವಾರ ತೀರ್ಪು ನೀಡಿದೆ.ತಮಿಳುನಾಡಿನ ವೆಲ್ಲೂರಿನವರಾದ ಸುರೇಂದ್ರನ್(29), ವಿಂಧ್ಯಾ (25) ಹಾಗೂ ಖಫ್ತಾನ್ ಖಾನ್ ಶಿಕ್ಷೆಗೊಳಗಾದವರು.ಆರೋಪಿಗಳು ಹಣದ ಆಸೆಗೆ 2007ರ ಜನವರಿಯಲ್ಲಿ ಶ್ರೀರಾಂಪುರದ ಪುಷ್ಪಾ ಹಾಗೂ ಅವರ ಮಗಳು ಹೇಮಲತಾ ಅವರನ್ನು ಕೊಲೆ ಮಾಡಿದ ನಂತರ ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು.ಪುಷ್ಪಾ ಅವರು ಶ್ರೀರಾಂಪುರದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದರು. ಅವರ ಮಗಳು ಹೇಮಲತಾ ಐದನೇ ತರಗತಿ ಓದುತ್ತಿದ್ದರು.ಸುಲಭವಾಗಿ ಹಣ ಗಳಿಸಬೇಕು ಎಂಬ ಉದ್ದೇಶದಿಂದ ಆರೋಪಿಗಳು ಮಹಿಳೆಯರನ್ನು ಕೊಲೆ ಮಾಡಿ ದರೋಡೆ ಮಾಡಲು ನಿರ್ಧರಿಸಿದ್ದರು.ಪುಷ್ಪಾ ಅವರೊಂದಿಗೆ ಪರಿಚಯ ಬೆಳೆಸಿಕೊಂಡ ವಿಂಧ್ಯಾ, ಹುಟ್ಟುಹಬ್ಬದ ಆಚರಣೆಗೆ ಮನೆಗೆ ಬರುವಂತೆ ಅವರನ್ನು ಕರೆದಿದ್ದರು. ಆದರೆ, ಪುಷ್ಪಾ ಅವರು ಆಚರಣೆಗೆ ಹೋಗಿರಲಿಲ್ಲ.ಇದರಿಂದ ಮತ್ತಿನ ಔಷಧ ಬೆರೆಸಿದ ಸಿಹಿ ತಿಂಡಿ ತೆಗೆದುಕೊಂಡು ಪುಷ್ಪಾ ಅವರ ಮನೆಗೆ ಬಂದ ವಿಂಧ್ಯಾ, ಅದನ್ನು ತಾಯಿ ಹಾಗೂ ಮಗಳಿಗೆ ತಿನ್ನಿಸಿದ್ದರು.ಅವರು ಪ್ರಜ್ಞೆ ತಪ್ಪಿದ ನಂತರ ಇಬ್ಬರನ್ನೂ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಪುಷ್ಪಾ ಕೊಲೆ ನಂತರ ಅವರಿಂದ ಕಳವು ಮಾಡಿದ್ದ ಮೊಬೈಲ್ ಅನ್ನು ವಿಂಧ್ಯಾ ಬಳಸುತ್ತಿದ್ದರು.

ಆ ಮೊಬೈಲ್ ಸಿಗ್ನಲ್‌ನ ಮೂಲಕ ಮಾಹಿತಿ ಕಲೆ ಹಾಕಿದ ಪೊಲೀಸರು ಆರೋಪಿಗಳಾದ ವಿಂಧ್ಯಾ, ಆಕೆಯ ಪ್ರಿಯಕರ ಸುರೇಂದ್ರನ್ ಹಾಗೂ ಮತ್ತೊಬ್ಬ ಆರೋಪಿ ಖಫ್ತಾನ್ ಖಾನ್‌ನನ್ನು ವೆಲ್ಲೂರಿನಲ್ಲಿ ಬಂಧಿಸಿದ್ದರು.ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಗುರುನಾಥ್ ಶಂಭ ರೇವಂಕರ್ ಅವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.