ಮಂಗಳವಾರ, ಜೂನ್ 15, 2021
24 °C

ಸಂಭ್ರಮದೊಂದಿಗೆ ಬೆಳದಿಂಗಳ ಬುತ್ತಿಜಾತ್ರೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ: `ವನಕಾಂಡ~ (ಬುತ್ತಿಜಾತ್ರೆ) ಹೆಸರಿನಲ್ಲಿ ಗುರುವಾರ ಹೋಳಿ ಹುಣ್ಣಿಮೆ ರಾತ್ರಿ ತಾಲ್ಲೂಕಿನ ತಳುವಗೇರಾದಲ್ಲಿ ಸಾಮೂಹಿಕ ಸಹಭೋಜನ ಸಂಪ್ರದಾಯ ಸಂಭ್ರಮ ಸಡಗರದೊಂದಿಗೆ ನೆರವೇರಿತು.ಮಕ್ಕಳು, ಮಹಿಳೆಯರು, ಪುರುಷರು ಸೇರಿದಂತೆ ತಳುವಗೇರಾ ವಣಗೇರಿ, ತೋಪಲಕಟ್ಟಿ, ಕೊರಡಕೇರಿ, ಕೆ.ಬೋದೂರು, ಹಾಗೂ ಸುತ್ತಲಿನ ಇನ್ನೂ ಅನೇಕ ಹಳ್ಳಿ ಪಟ್ಟಣಗಳಿಗೆ ಸೇರಿದ ಸಹಸ್ರ ಸಂಖ್ಯೆಯ ಜನ ಊರ ಹೊರವಲಯದಲ್ಲಿನ ಹೊಲದಲ್ಲಿ ಒಂದೇ ಕಡೆ ಕುಳಿತು ಎಲ್ಲರೊಂದಿಗೆ ಬೆರೆತು ಸಹಭೋಜನ ನಡೆಸುವ ವಿಶಿಷ್ಟ ಪರಂಪರೆಯನ್ನು ನೆನಪಿಸಿತು. ಕಳೆದ ಐದು ದಶಕಗಳಿಂದಲೂ ನಡೆದು ಬಂದಿರುವ ಈ ಬುತ್ತಿಜಾತ್ರೆ ಬದಲಾಗುತ್ತಿರುವ ಸಾಮಾಜಿಕ, ಆಧುನಿಕ ವ್ಯವಸ್ಥೆಯಲ್ಲೂ ಯಥಾರೀತಿ ಮುಂದುವರೆಯುವ ಮೂಲಕ ಕಳಚುತ್ತಿರುವ ಗ್ರಾಮೀಣ ಬದುಕಿನ ಸಾಮಾರಸ್ಯದ ಸಂಕೇತದ ಕೊಂಡಿಯನ್ನು ಬೆಸೆಯುತ್ತಿರುವುದು ಜಾತ್ರೆಯ ವಿಶೇಷವಾಗಿದೆ.ಬುತ್ತಿಜಾತ್ರೆಯ ಸಂಭ್ರಮ ಮಧ್ಯಾಹ್ನದಿಂದಲೇ ಆರಂಭಗೊಳ್ಳುತ್ತದೆ, ಸಿಂಗಾರಗೊಂಡ ಊರಿನ ಎಲ್ಲ ಮಹಿಳೆಯರು ಮನೆಯಲ್ಲಿ ಮಾಡಿದ ಹೋಳಿಗೆ, ಬಿಳಿಜೋಳದ ರೊಟ್ಟಿ, ಬದನೆಕಾಯಿ ಎಣ್ಣೆಗಾಯಿ ಪಲ್ಯೆ, ಇತರೆ, ಸಿಹಿ ಖಾರದ ತರಹೇವಾರಿ ತಿನಿಸುಗಳನ್ನೊಗೊಂಡ ಬುತ್ತಿಗಂಟನ್ನು ತಲೆಯಮೇಲೆ ಹೊತ್ತು ಸಾಲಾಗಿ ಮೆರವಣಿಗೆಯಲ್ಲಿ ತೆರಳಿದರು. ಜನಪದ ವೈವಿಧ್ಯದ ಮಜಲು, ಭಜನೆ, ಸಿಂಗಾರಗೊಂಡ ಎತ್ತಿನಗಾಡಿಗಳೊಂದಿಗೆ ಊರ ಹಿರಿಯರು, ಮಕ್ಕಳು ಸುತ್ತಲಿನ ಗ್ರಾಮಸ್ಥರು ಮೆರವಣಿಗೆಯಲ್ಲಿ ಹೆಜ್ಜೆಹಾಕಿದರು.ತಳುವಗೇರಾ ಗ್ರಾಮಸ್ಥರು ತಾವು ತಂದ ಬುತ್ತಿಯನ್ನು ಬೇರೆ ಊರುಗಳಿಂದ ಬಂದ ಸಹಸ್ರ ಸಂಖ್ಯೆ ಜನರಿಗೂ ಹಂಚಿ ಕೂಡಿ ಹರಟೆ ಹೊಡೆಯುತ್ತ ಬೆಳದಿಂಗಳಲ್ಲಿ ರುಚಿಯಾದ ಊಟ ಸವಿಯುವಾಗ ಚಂದ್ರಮ ನೆತ್ತಿಯ ಮೇಲೆ ಬಂದಿದ್ದ. ಊರಿನ ಎಲ್ಲ ಮನೆಯವರೂ ಬುತ್ತಿಜಾತ್ರೆಗೆ ಹೋದರೆ ವೃದ್ಧರು, ಅಶಕ್ತರು ಮಾತ್ರ ಮನೆಯಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.