ಭಾನುವಾರ, ಏಪ್ರಿಲ್ 11, 2021
23 °C

ಸಂಭ್ರಮದ ರಾಜ್ಯೋತ್ಸವಕ್ಕೆ ಮಳೆ ಅಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಕನ್ನಡ ನಾಡಿನ ನೆಲ, ಜಲ ಮತ್ತು ಸಂಸ್ಕೃತಿ ಉಳಿವಿಗಾಗಿ ಕನ್ನಡಿಗರು ಕಂಕಣಬದ್ಧರಾಗಿ ನಿಲ್ಲುವ ಮೂಲಕ ನಾಡಿನ ಹಿತ ಕಾಯಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಕಳಕಪ್ಪ ಬಂಡಿ  ಸಲಹೆ ನೀಡಿದರು.ನಗರದ ಕೆ.ಎಚ್.ಪಾಟೀಲ ಕ್ರೀಡಾಂಗಣದಲ್ಲಿ ರಾಜ್ಯೋತ್ಸವ ಅಂಗವಾಗಿ ಗುರುವಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸರ್ಕಾರ ಕನ್ನಡಿಗರ ಏಳಿಗೆಗಾಗಿ ಬಡತನ, ನಿರುದ್ಯೋಗ ನಿರ್ಮೂಲನೆಗಾಗಿ ಅನೇಕ ಯೋಜನೆಗಳನ್ನು ರೂಪಿಸಿದೆ. ಪ್ರಮುಖವಾಗಿ ಜಿಲ್ಲೆಯ ಬರಪರಿಸ್ಥಿತಿ ನಿರ್ವಹಣೆಗಾಗಿ ರೂ. 12 ಕೋಟಿ ಅನುದಾನದಲ್ಲಿ 390 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದ್ದು, ಅದರಲ್ಲಿ 318 ಕಾಮಗಾರಿ ಪೂರ್ಣಗೊಂಡಿವೆ.  72 ಕಾಮಗಾರಿ ಪ್ರಗತಿಯಲ್ಲಿವೆ ಎಂದು ಬಂಡಿ ಹೇಳಿದರು.ಉದ್ಯೋಗ ಖಾತ್ರಿ ಯೋಜನೆಯಡಿ 34,424 ಜನರಿಗೆ ಉದ್ಯೋಗ ನೀಡಲಾ ಗಿದ್ದು, ರೂ. 21.36 ಕೋಟಿ  ಖರ್ಚು ಮಾಡಲಾಗಿದೆ.  ರಾಷ್ಟ್ರೀಯ ಕುಡಿಯುವ ನೀರು ಸರಬರಾಜು ಕಾರ್ಯಕ್ರಮದಡಿ 41 ಕೋಟಿ ರೂ. ಅನುದಾನದಲ್ಲಿ 427 ಕಾಮಗಾರಿ ಅನುಷ್ಠಾನಗೊಳಿಸಲಾಗು ವುದು. ಮಹಿಳಾ ಸಬಲೀಕರಣ ಯೋಜನೆಯಡಿ ವಿಭಾಗ ಮಟ್ಟದ ತರಬೇತಿ ಕೇಂದ್ರವನ್ನು ನಗರದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಭಾಗ್ಯಲಕ್ಷ್ಮಿ ಯೋಜನೆಯಡಿ 37927 ಫಲಾನುಭವಿಗಳಿಗೆ ಬಾಂಡ್ ವಿತರಿಸಲಾಗಿದೆ ಎಂದರು.ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ಸಿದ್ಧೇಶ್ವರ ಶಾಸ್ತ್ರಿ ತೆಲ್ಲೂರ, ಶಿಕ್ಷಕ ಎಸ್.ಎನ್.ಬಳ್ಳಾರಿ, ಸಂಗೀತ ಶಿಕ್ಷಕ ಶಿರೋಳ, ಎಎಸ್‌ಐ ಜಾವೂರ, ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಶಾಂತಪ್ಪ ಮೇಟಿ ಅವರನ್ನು ಸನ್ಮಾನಿಸಲಾಯಿತು. ಮಳೆ ಅಡ್ಡಿ: ನಗರದಲ್ಲಿ ಬೆಳಿಗ್ಗೆ ಯಿಂದಲೇ ಸುರಿದ ಜಿಟಿ ಜಿಟಿ ಮಳೆ ಸಂಭ್ರಮದ ರಾಜ್ಯೋತ್ಸವಕ್ಕೆ ಅಡ್ಡಿ ಉಂಟು ಮಾಡಿತು.ಮಳೆಯ ನಡುವೆಯೇ ಕ್ರೀಡಾಂಗಣದಲ್ಲಿ ಸಚಿವ ಬಂಡಿ ಧ್ವಜಾರೋಹಣ ನೆರೆವೇರಿಸಿದರು. ಆ ಸಂದರ್ಭದಲ್ಲಿ ಗಣ್ಯರಿಗೆ ಪೊಲೀಸರು ಕೊಡೆ ಹಿಡಿಯಬೇಕಾಯಿತು. ಬಳಿಕ ಕ್ರೀಡಾಂಗಣದ ಒಳಗೆ ವೇದಿಕೆ ಸಿದ್ದಪಡಿ ಸಲಾಗಿತ್ತು.ಜಾಗದ ಕೊರತೆಯಿಂದ ಕೆಲವರು ಹೊರಗೆ ನಿಂತುಕೊಂಡೆ ಕಾರ್ಯಕ್ರಮ ವೀಕ್ಷಿಸಿದರು. ರಾಜ್ಯೋತ್ಸವ ಆಚರಣೆಗೆ ಕಳೆ ತುಂಬು ತ್ತಿದ್ದ ಸ್ತಬ್ಧ ಚಿತ್ರಗಳ ಮೆರವಣಿಗೆಯು ಸ್ಥಗಿತಗೊಂಡಿತು.ಶಾಸಕ ಶ್ರೀಶೈಲಪ್ಪ ಬಿದರೂರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಎಸ್. ಪಾಟೀಲ, ಉಪಾಧ್ಯಕ್ಷ ರಮೇಶ ಮುಂದಿನಮನಿ, ಜಿಲ್ಲಾಧಿಕಾರಿ ಪಾಂಡು   ರಂಗ ನಾಯಕ, ಜಿಲ್ಲಾ ಪಂಚಾಯಿತಿ ಸಿಇಒ ವೀರಣ್ಣ ತುರಮರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕುಮಾರ ನಾಯಕ, ಪಿ.ಟಿ.ರುದ್ರಗೌಡ, ನಗರಸಭೆ ಅಧ್ಯಕ್ಷ ಶಿವಣ್ಣ ಮುಳಗುಂದ, ನಗರಸಭೆ ಸದಸ್ಯೆ ಜಯಶ್ರೀ ಉಗಲಾಟ, ಲಕ್ಷ್ಮಿಬಾಯಿ ಕಟ್ಟಿಮನಿ ಹಾಜರಿದ್ದರು.`ನಾಡಿನ ಹಿರಿಮೆ ಪ್ರಚುರಗೊಳಿಸಿ~

ಶಿರಹಟ್ಟಿ: ಮಕ್ಕಳಿಗೆ ಕನ್ನಡದ ನಾಡು, ನುಡಿ, ಸಾಹಿತ್ಯ ಹಾಗೂ ಸಂಸ್ಕೃತಿ ಬಗ್ಗೆ ಅಭಿಮಾನ ಮೂಡುವಂತೆ ಮಾಡು ವುದು ಪಾಲಕರು ಹಾಗೂ ಸಮು ದಾಯದ ಕರ್ತವ್ಯ ಎಂದು ತಹಶೀಲ್ದಾರ ಆರ್.ಡಿ.ಉಪ್ಪಿನ ಹೇಳಿದರು.ಗುರುವಾರ ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಜರುಗಿದ 57ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ವಿಶಿಷ್ಟ ಸ್ಥಾನವಿದೆ. ಕನ್ನಡ, ನೆಲ, ಜಲ ಹಾಗೂ ಸಂಸ್ಕೃತಿಯ ಅರಿವು ಮೂಡಿಸಬೇಕು. ಪಾಶ್ಚಾತ್ಯ ಸಂಸ್ಕೃತಿಗಳ ವ್ಯಾಮೋಹ ತೊರೆದು ನಮ್ಮ ಭಾಷೆಯನ್ನು ಉಳಿಸಿ ಬೆಳಸುವ ಕಾರ್ಯ ಜರುಗಬೇಕಿದೆ ಎಂದರು. ಶಾಸಕ ರಾಮಣ್ಣ ಲಮಾಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಭಾಷೆಗೆ ಶಾಸ್ತ್ರಿಯ ಸ್ಥಾನ ಮಾನ ದೊರೆತರೂ ಕೇಂದ್ರ ಸರ್ಕಾರ ಇಲ್ಲಿಯವರೆಗೂ ಹಣ ಬಿಡುಗಡೆ ಮಾಡುವ ಕೆಲಸ ಮಾಡಿಲ್ಲ ಎಂದು ಆರೋಪಿಸಿದರು.ಕನ್ನಡ ಭಾಷೆ ಆಡಳಿತದಲ್ಲಿ ಇನ್ನು ಸಂಪೂರ್ಣ ಜಾರಿ ಅಗದಿರುವದು ವಿಷಾ ದಕರ ಸಂಗತಿ. ರಾಜ್ಯದ ಉನ್ನತ ಮಟ್ಟದ ಅಧಿಕಾರಿಗಳಿಗೆ ಈವರೆಗೆ ಕನ್ನಡ ಬರೆ ಯಲು ಮತ್ತು ಓದಲು ಬರುವುದಿಲ್ಲ. ಅಂತಹ ಅಧಿಕಾರಿಗಳನ್ನು ಸರ್ಕಾರ ಕಿತ್ತೊಗೆಯಬೇಕು. ಯುವಕರು ಈ ನಿಟ್ಟಿನಲ್ಲಿ ಜಾಗೃತಿ ವಹಿಸಬೇಕು ಎಂದು ಸಲಹೆ ನೀಡಿದರು.ತಾಪಂ ಅಧ್ಯಕ್ಷೆ ಸುನಂದಾ ಬಿದರಳ್ಳಿ, ಉಪಾಧ್ಯಕ್ಷೆ ಶಾರದಾ ಕವಲೂರ, ತಾಪಂ ಅಧಿಕಾರಿ ವೈ.ಎಲ್. ಹಂಪಣ್ಣ,  ಸದಸ್ಯ ನಿಂಬಣ್ಣ ಮಡಿವಾಳರ, ಕ್ಷೇತ್ರ ಶಿಕ್ಷಣಾ ಧಿಕಾರಿ ಆರ್.ಎಸ್.ಬುರಡಿ,  ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಡಿ.ಟಿ. ದೂಡ್ಡಮನಿ, ಪಿಎಸ್‌ಐ ವಿಕಾಸ ಲಮಾಣಿ, ಎನ್.ಆರ್.ಕುಲಕರ್ಣಿ. ವಿವಿಧ ಇಲಾಖೆ ಅಧಿಕಾರಿಗಳು ಉಪ ಸ್ಥಿತರಿದ್ದರು. ಎಂ.ಕೆ.ಲಮಾಣಿ ನಿರೂಪಿಸಿ ದರು. ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎ. ಬಳಿಗಾರ ವಂದಿಸಿದರು.`ಭಾವನೆ ಅರಳಿಸಿ~

ಗಜೇಂದ್ರಗಡ: ನಾಡಿನ ನೆಲ-ಜಲ- ಭಾಷೆ-ಗಡಿ-ಸಂಸ್ಕೃತಿಗೆ ಅಡ್ಡಿಯಾಗು ವಂತಹ ಸೂಕ್ಷ್ಮ ವಿಚಾರಗಳು ಜನರ ಭಾವನೆಗಳನ್ನು ಕೆರಳಿಸುವುದು ಸಹಜ. ಅದರಲ್ಲೂ ಕರ್ನಾಟಕ ಇಂತಹ ಹೊಡೆತಗಳನ್ನು ಅನುಭವಿಸುತ್ತಲೇ ಬಂದಿದೆ ಎಂದು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರು ಚಳಗೇರಿ ಅಭಿಪ್ರಾಯ ಪಟ್ಟರು.57ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಇಲ್ಲಿನ ಪುರಸಭೆ ಕಾರ್ಯಾ ಲಯದಲ್ಲಿ ಆಯೋಜಿಸಲಾಗಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ವಿವಾದಗಳು ಸೃಷ್ಟಿಯಾದಾಗ ಹೋರಾಟಕ್ಕೆ ಪ್ರತಿಭಟನೆಗೆ ಸಜ್ಜಾಗುವ ವ್ಯಕ್ತಿಗಳು ಅಥವಾ ಸಂಘಟನೆಗಳು ಜನರ ಭಾವನೆಗಳನ್ನು ಕೆರಳಿಸಿ ವೈಯಕ್ತಿಕ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತಿರುವುದು ಕೂಡಾ ಬಹಿರಂಗ ಸತ್ಯ. ಇಲ್ಲಿ ಭಾವನಾಜೀವಿ ಕನ್ನಡಿಗರು ಎಲ್ಲವನ್ನೂ ಒಂದೇ ದೃಷ್ಟಿಯಿಂದ ನೋಡುವುದಿದೆ ಎಂದರು.ರಾಜೋತ್ಸವದ ಸಂಭ್ರಮ-ಸಡಗರದಲ್ಲಿರುವ ಕನ್ನಡಿಗರಿಗೆ ಕನ್ನಡ ಭಾಷೆಯ ಅಳಿವು-ಉಳಿವಿನ ಬಗ್ಗೆ ಅನೇಕ ವ್ಯಾಖ್ಯಾನಗಳು ನಡೆಯುತ್ತವೆ. ಭವಿಷ್ಯದ ಕನ್ನಡದ ಬಗ್ಗೆ ಹಲವರಿಂದ ಅನೇಕ ಆತಂಕಗಳು ವ್ಯಕ್ತವಾಗುತ್ತಿವೆ.ನಗರೀಕರಣ, ಉದ್ಯೋಗ ಅವಕಾಶ, ಆಂಗ್ಲಭಾಷೆ ವ್ಯಾಮೋಹ, ಕನ್ನಡ ಮಾಧ್ಯಮ ಶಿಕ್ಷಣದ ಬಗ್ಗೆ ಪೋಷಕ ರಲ್ಲಿರುವ ಕೀಳರಿಮೆ ಈ ರೀತಿ ಹಲವು ಕಾರಣಗಳಿಂದ ಇಂದು ಶಿಕ್ಷಣದಲ್ಲಿ ಕನ್ನಡವನ್ನು ಹಿಂದಟ್ಟಿ ಇಂಗ್ಲಿಷ್ ಹಿಡಿದುಕೊಂಡು ಹೋಗುತ್ತಿರುವವರೇ ಹೆಚ್ಚುತ್ತಿರುವುದರಿಂದ ಭವಿಷ್ಯದಲ್ಲಿ ಕನ್ನಡ ಕಲಿಯುವವರು ಯಾರು? ಎಂದು ಪ್ರಶ್ನಿಸಿದರು.ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಏಕೀಕರಣ ಹೋರಾಟದಲ್ಲಿ ಅಂದಾನಪ್ಪ ದೊಡ್ಡಮೇಟಿ ಅವರ ಪಾತ್ರ ಮಹತ್ವದಾಗಿದೆ. ಈ ಹಿನ್ನೆಲೆಯಲ್ಲಿ ಈ ಭಾಗದ ಮಣ್ಣಿನ ಗುಣ, ಹಿರಿಯನ್ನು ರಾಜ್ಯ ಮಟ್ಟದಲ್ಲಿ ಪರಿಚಯಿಸಿದ ಕೀರ್ತಿ ಕರ್ನಾಟಕ ಏಕೀಕರಣ ರೂವಾರಿ ಅಂದಾನಪ್ಪ ದೊಡ್ಡಮೇಟಿ ಅವರಿಗೆ ಸಲ್ಲುತ್ತದೆ ಎಂದರು.ಪುರಸಭೆ ಅಧ್ಯಕ್ಷೆ ದೇವಕ್ಕ ಬೆಳವಣಿಕಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಭಾಸ್ಕರ ರಾಯಬಾಗಿ, ಸದಸ್ಯರಾದ ತಿಮ್ಮಣ್ಣ ವನ್ನಾಲ, ಪ್ರಭು ಚವಡಿ,  ರಾಜೇಂದ್ರ ಘೋರ್ಪಡೆ, ಬಸವರಾಜ ಬಂಕದ, ವೆಂಕಟೇಶ ಮುದಗಲ್, ಪುಷ್ಪಾವತಿ ಭಾಂಡಗೆ, ರೇಖಾ ರಂಗ್ರೇಜಿ, ಸಾವಿತ್ರಿಬಾಯಿ ನಿಂಭಾಳ್ಕರ ಇತರರು ಉಪಸ್ಥಿತರಿದ್ದರು.`ನಾಡುನುಡಿ ರಕ್ಷಿಸಿ~

ರೋಣ: ನಾಡು, ನುಡಿ, ನೆಲ, ಜಲ ರಕ್ಷಣೆಯ ಜವಾಬ್ದಾರಿ ಪ್ರತಿಯೊಬ್ಬರದು. ಪ್ರತಿಯೊಬ್ಬ ಕನ್ನಡಿಗರು ಶ್ರಮಿಸಬೇಕು ಎಂದು ತಹಶೀಲ್ದಾರ ಎಸ್.ಆರ್.ಕಡಿವಾಲ ಹೇಳಿದರು.ಅವರು ಗುರುವಾರ  ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಸಭಾ ಭವನದಲ್ಲಿ ಸುವರ್ಣ ಕರ್ನಾಟಕ 57ನೇ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷಎಸ್.ವಿ.ಅಂದಾನಶೆಟ್ರ ಉಪನ್ಯಾಸ ನೀಡಿ, ಕನ್ನಡ ನಾಡು ನುಡಿಯ ರಕ್ಷಣೆಗೆ ಆಲೂರು ವೆಂಕಟ ರಾಯ, ಅಂದಾನಪ್ಪ ದೊಡ್ಡಮೇಟಿ ಯಂಥ ಹಿರಿಯರು ಸಾಕಷ್ಟು ಶ್ರಮಿಸಿದ ಫಲವಾಗಿ ಕರ್ನಾಟಕ ಏಕೀಕರಣ ಹೊಂದಿ ಕನ್ನಡಿಗರೆಲ್ಲರನ್ನು ಒಂದುಗೂಡಿ ಸುವ ಕೆಲಸ ನಡೆಯಿತು.18ನೇ ಶತಮಾನದಲ್ಲಿ ಕನ್ನಡ ಮಾತನಾಡುವ ಪರಿಸ್ಥಿತಿ ಇರಲಿಲ್ಲ. 1907ರಲ್ಲಿ ಆಲೂರ ವೆಂಕಟರಾಯರಂತಹ ಸಾಕಷ್ಟು ಸಾಹಿತಿಗಳು ಬೇರೆ ಬೇರೆ ಭಾಷೆಗಳಿಂದ ಅನುವಾದಿಸಿ ಕನ್ನಡ ಭಾಷೆಯನ್ನು ಮಾತನಾಡಲು ಬಳಕೆಯಲ್ಲಿ ತಂದರು ಎಂದರು.ಪುರಸಭೆಯ ಅಧ್ಯಕ್ಷೆ ನೀಲವ್ವ ಮುಗಳಿ, ತಾ.ಪಂ.ಅಧ್ಯಕ್ಷೆ ಲಲಿತಾ ಪೂಜಾರ, ತಾ.ಪಂ.ಕಾರ್ಯನಿರ್ವಾಹಧಿಕಾರಿ ರುದ್ರಸ್ವಾಮಿ ಮಾತನಾಡಿದರು.ಸಮಾರಂಭದಲ್ಲಿ ಜಿಪಂ ಎಂಜಿನಿಯರ್ ವಿ.ಕೆ.ಕಾಳಪ್ಪನವರ, ಅನಂತಕುಮಾರ ಚೂರಿ, ವಿ.ಎ.ಸೂಡಿಶೆಟ್ರ, ಸಿ.ಡಿ.ಪಿ.ಓ.ಕೆಂಪಹನಮಯ್ಯ, ಸಿ.ಪಿ.ಐ. ಎಂ.ಎಸ್.ನಾಯಕ, ಪಿ.ಎಸ್.ಐ. ಹತ್ತಿಕಟಗಿ, ಬಿ.ಇ.ಓ.ಪಾಟೀಲ, ಕೆ.ಡಿ.ಕರಮಳ್ಳಿ, ಮುಖ್ಯಾಧಿಕಾರಿ ರಮೇಶಹೊಸಮನಿ, ಉಪನೋಂದಣಾಧಿಕಾರಿ ಎಂ.ಪ್ರಸಾದ ಕುಮಾರ, ಎ.ಎ.ಕೊಡಲ, ಡಾ.ಹುಲಗಣ್ಣವರ, ಎ.ಬಿ.ಹೊನ್ನವಡ, ಎ.ಬಿ.ಮಠಪತಿ ಸೇರಿದಂತೆ ತಾಲ್ಲೂಕು ಅಧಿಕಾರಿಗಳು ಹಾಜರಿದ್ದರು.ಯಡಳ್ಳಿ ನಿರೂಪಿಸಿದರು, ವರದಪ್ಪನವರ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.