ಗುರುವಾರ , ಏಪ್ರಿಲ್ 22, 2021
30 °C

ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ ಜಾರಿ: ಸಚಿವ ರವೀಂದ್ರನಾಥ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಹವಾಮಾನಕ್ಕೆ ಹೊಂದುವಂತಹ ಹಣ್ಣುಗಳನ್ನು ಬೆಳೆಯುವ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯನ್ನು ಪ್ರಸಕ್ತ ಸಾಲಿನಿಂದ ಜಾರಿಗೆ ತರಲಾಗುವುದು. ಈ ಯೋಜನೆಗಾಗಿ 305 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ~ ಎಂದು ತೋಟಗಾರಿಕೆ ಸಚಿವ ಎಸ್.ಎ. ರವೀಂದ್ರನಾಥ ಹೇಳಿದರು.

ತೋಟಗಾರಿಕೆ ಪಿತಾಮಹ ಡಾ.ಎಂ.ಎಚ್. ಮರಿಗೌಡ ಅವರ 96 ನೇ ಜನ್ಮ ದಿನ ಸ್ಮರಣಾರ್ಥ ಲಾಲ್‌ಬಾಗ್‌ನ ತೋಟಗಾರಿಕೆ ಮಾಹಿತಿ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತೋಟಗಾರಿಕೆ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಈ ಯೋಜನೆಯಡಿಯ ಪ್ರಾಯೋಗಿಕವಾಗಿ ರಾಜ್ಯದ ಪ್ರತಿ ತಾಲ್ಲೂಕಿನ ಎರಡು ಹಳ್ಳಿಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿಯ ಹವಾಮಾನಕ್ಕೆ ಹೊಂದುವಂತೆ ಹಣ್ಣುಗಳನ್ನು ಬೆಳೆಯಲಾಗುವುದು. ಈ ಉದ್ದೇಶಕ್ಕಾಗಿ ಈ ವರ್ಷ 105 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುವುದು. ಈ ಯೋಜನೆ ಯಶಸ್ವಿಯಾದರೆ ಬೇರೆ ತಾಲ್ಲೂಕುಗಳಿಗೂ ಹಂತ- ಹಂತವಾಗಿ ವಿಸ್ತರಿಸಲಾಗುವುದು~ ಎಂದು ಸಚಿವರು ಹೇಳಿದರು.

`ಈ ಯೋಜನೆಯು ಸಫಲವಾದರೆ ಮುಂದಿನ ದಿನಗಳಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟದ ಜತೆಗೆ ಹಣ್ಣುಗಳನ್ನು ಕೂಡ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸರ್ಕಾರ ಚಿಂತನೆ ನಡೆಸಿದೆ~ ಎಂದು ಅವರು ತಿಳಿಸಿದರು.

ಉಪನ್ಯಾಸ ನೀಡಿದ ಪತ್ರಕರ್ತ ಶ್ರೀ ಪಡ್ರೆ, `ಹಲಸು ನಮ್ಮ ರಾಜ್ಯದಲ್ಲಿ ಅತಿ ನಿರ್ಲಕ್ಷಿತವಾದ ವೃಕ್ಷ. ಹಲಸಿನ ಹಣ್ಣಿನ ಉಪಯೋಗ ನಮ್ಮ ಜನಕ್ಕೆ ಅಷ್ಟಾಗಿ ತಿಳಿದಿಲ್ಲ. ಆದರೆ, ಮಲೇಷ್ಯಾ ಮತ್ತು ವಿಯೆಟ್ನಾಂ ದೇಶಗಳಲ್ಲಿ ಹಲಸನ್ನು ಕೃಷಿ ಬೆಳೆಯನ್ನಾಗಿ ಬೆಳೆಯುತ್ತಾರೆ. ಅಲ್ಲಿ ಹಲಸಿನ ವಿವಿಧ ರೀತಿಯ ಉಪಯೋಗವನ್ನು ಕಂಡುಕೊಂಡಿದ್ದಾರೆ~ ಎಂದರು.

`ಹಲಸನ್ನು ಬರೀ ಹಣ್ಣಾಗಿ ಮಾತ್ರ ಉಪಯೋಗಿಸದೆ, ಅದನ್ನು ತರಕಾರಿಯನ್ನಾಗಿಯೂ ಸಹ ಬಳಕೆ ಮಾಡಬಹುದು. ಅದಕ್ಕಾಗಿ ಹಾಪ್‌ಕಾಮ್ಸ ಹಲಸನ್ನು ತರಕಾರಿಯನ್ನಾಗಿಯೂ ಮಾರಾಟ ಮಾಡಿ ಜನರೆಲ್ಲ ಬಳಕೆ ಮಾಡುವಂತೆ ಮಾಡಲು ಗಮನಹರಿಸಬೇಕು~ ಎಂದು ಸಲಹೆ ಮಾಡಿದರು.

ಕಾರ್ಯಕ್ರಮದಲ್ಲಿ ಶಾಸಕ ಡಿ. ಹೇಮಚಂದ್ರಸಾಗರ್, ಬಿಬಿಎಂಪಿ ಸದಸ್ಯರಾದ ಅನಿಲ್ ಕುಮಾರ್, ಉದಯಶಂಕರ್, ಕಂದಾಯ ಇಲಾಖೆಯ ಕಾರ್ಯದರ್ಶಿ ಅಮರ ನಾರಾಯಣ, ತೋಟಗಾರಿಕೆ ಇಲಾಖೆ ನಿರ್ದೇಶಕ ಕೆ.ಜಿ.ಜಗದೀಶ್ ಮತ್ತಿತರರು ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.