ಶನಿವಾರ, ಏಪ್ರಿಲ್ 17, 2021
33 °C

ಸರಬ್ಜಿತ್ ವಿಚಾರಣೆಯಲ್ಲಿ ಲೋಪ- ವಕೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಹೋರ್ (ಪಿಟಿಐ): ಗಲ್ಲು ಶಿಕ್ಷೆಗೆ ಗುರಿಯಾಗಿರುವ ಸರಬ್ಜಿತ್ ಸಿಂಗ್ ವಿಚಾರಣೆಯಲ್ಲಿ ಲೋಪ ಗುರುತಿಸಿರುವ ಅವರ ವಕೀಲ ಅವೈಸ್ ಶೇಖ್, ಪಾಕ್ ಸರ್ಕಾರ ಸರಬ್ಜಿತ್ ಶಿಕ್ಷೆಯನ್ನು ಜೀವಾವಧಿಗೆ ಇಳಿಸಬೇಕು ಎಂದು ಆಗ್ರಹಿಸಿದ್ದಾರೆ.1990ರ ಸ್ಫೋಟ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಮರಣ ದಂಡನೆಗೆ ಗುರಿಯಾಗಿರುವ ಸರಬ್ಜಿತ್ ಸಿಂಗ್ ವಿಚಾರಣೆ ಹಾಗೂ ಅವರ ಕ್ಷಮಾದಾನ ಅರ್ಜಿ ಕುರಿತಂತೆ ನಿರ್ಧಾರ ತೆಗೆದುಕೊಳ್ಳುವ ವೇಳೆ ನ್ಯಾಯಾಲಯಗಳಿಂದ ಅನೇಕ ಲೋಪಗಳು ಆಗಿದ್ದವು ಎಂದು ಶೇಖ್ ಹೇಳಿದ್ದಾರೆ.`ಸೂಕ್ತ ಪುರಾವೆಗಳು ಲಭ್ಯವಾಗದಿದ್ದಾಗ ಆರೋಪಿಗಳನ್ನು ನಿರಪರಾಧಿ ಎಂದು ನ್ಯಾಯಾಲಯಗಳು ಬಹುತೇಕ ಸಂದರ್ಭಗಳಲ್ಲಿ ಘೋಷಿಸುತ್ತವೆ. ಆದರೆ ಸರಬ್ಜಿತ್ ಪ್ರಕರಣದ ವಿಚಾರಣೆಯಲ್ಲಿ ಲೋಪವಾಗಿರುವುದರಿಂದ ಅವರು ಈ ಅವಕಾಶದಿಂದ ವಂಚಿತರಾಗಬೇಕಾಯಿತು~ ಎಂದು ಶೇಖ್ ತಿಳಿಸಿದ್ದಾರೆ.`ಮೊದಲನೆಯದಾಗಿ ಇದು ತಪ್ಪಾಗಿ ಗುರುತಿಸಿದ ಪ್ರಕರಣವಾಗಿದೆ. ಪಾಕಿಸ್ತಾನದಲ್ಲಿ ಭಯೋತ್ಪಾದಕ ಕೃತ್ಯಕ್ಕೆ ಹೊಣೆಯಾದ ಮಂಜಿತ್ ಸಿಂಗ್ ಎಂಬಾತನ ಬದಲು ಗುಪ್ತಚರ ಸಂಸ್ಥೆಗಳು ಸರಬ್ಜಿತ್ ಸಿಂಗ್ ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಿದ್ದರು~ ಎಂದು ಸುದ್ದಿಗಾರರಿಗೆ  ಹೇಳಿದ್ದಾರೆ. `ಹೆಸರಿನಿಂದ ಏನೂ ವ್ಯತ್ಯಾಸವಾಗದು. ಸರಬ್ಜಿತ್ ತಪ್ಪೊಪ್ಪಿಕೊಂಡಿರುವುದು ಎಲ್ಲವನ್ನೂ ಹೇಳುತ್ತದೆ~ ಎಂದು ಗಲ್ಲು ಶಿಕ್ಷೆಯನ್ನು ಪ್ರಶ್ನಿಸಿ ಸರಬ್ಜಿತ್ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ವೇಳೆ ಲಾಹೋರ್ ಹೈಕೋರ್ಟ್ ಆದೇಶ ನೀಡಿತ್ತು.

ಆದರೆ ಸರಬ್ಜಿತ್ ಕೋರ್ಟ್ ಮುಂದಾಗಲೀ, ತನಿಖಾ ಸಂಸ್ಥೆಯ ಮುಂದಾಗಲೀ ತಪ್ಪೊಪ್ಪಿಕೊಂಡಿರಲಿಲ್ಲ~ ಎಂದ ಅವರು ಇದಕ್ಕೆ ಸಮರ್ಥನೆ ನೀಡುವಂತೆ ವಿಶೇಷ ನ್ಯಾಯಾಧೀಶರು ದಾಖಲಿಸಿಕೊಂಡಿದ್ದ ಹೇಳಿಕೆಯನ್ನು ಬಹಿರಂಗಪಡಿಸಿದ್ದಾರೆ.`ಟಿ.ವಿ. ಕ್ಯಾಮೆರಾ ಎದುರು ಸರಬ್ಜಿತ್ ಸಿಂಗ್ ತಪ್ಪೊಪ್ಪಿಕೊಳ್ಳುವಂತೆ ಮಾಡಿದ್ದು, ಇದಕ್ಕೆ ಕಾನೂನು ಮಾನ್ಯತೆ ಇಲ್ಲ~ ಎಂದ ಶೇಖ್, ನ್ಯಾಯಾಧೀಶರು ಸರಬ್ಜಿತ್ ಅವರನ್ನು ಪ್ರಶ್ನೆಗೊಳಪಡಿಸಿದ ವಿವರಗಳನ್ನು ನೀಡುತ್ತಾ, ಪ್ರಾಸಿಕ್ಯೂಶನ್ ತಮ್ಮ ವಿರುದ್ಧ ಮಾಡಿದ ಆರೋಪವನ್ನು ಸರಬ್ಜಿತ್ ಸಂಪೂರ್ಣವಾಗಿ ನಿರಾಕರಿಸಿದ್ದರು ಎಂದಿದ್ದಾರೆ.ಪಾಕಿಸ್ತಾನದ ಸ್ವಾತಂತ್ರ್ಯ ದಿನವಾದ ಆಗಸ್ಟ್ 14ರಂದು ಸರಬ್ಜಿತ್ ಅವರನ್ನು ಬಿಡುಗಡೆ ಮಾಡುವಂತೆ ಪಾಕ್ ಅಧ್ಯಕ್ಷರಿಗೆ ಶೇಖ್ ಮನವಿ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಪಾಕ್ ಸರ್ಕಾರವು ಸರಬ್ಜಿತ್ ಸಿಂಗ್ ಅವರನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ ಕೆಲವೇ ತಾಸುಗಳಲ್ಲೇ ತಾನು ಬಿಡುಗಡೆ ಮಾಡುತ್ತಿರುವುದು ಸರಬ್ಜಿತ್ ಅಲ್ಲ; ಸುರ್ಜಿತ್ ಸಿಂಗ್ ಎಂದು ಹೇಳಿ ವಿವಾದ ಎಬ್ಬಿಸಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.