ಗುರುವಾರ , ಜೂಲೈ 2, 2020
22 °C

ಸರ್ಕಾರದ ಧಮಕಿಗೆ ಹೆದರುವುದಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರ್ಕಾರದ ಧಮಕಿಗೆ ಹೆದರುವುದಿಲ್ಲ

ತುಮಕೂರು: ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವ ಪಕ್ಷದ ಶಾಸಕರು,

ಕಾರ್ಯಕರ್ತರನ್ನು ಜೈಲಿಗೆ ಕಳುಹಿಸಿ, ಅವರ ಆಸ್ತಿ ಸರ್ವೆ ಮಾಡಿಸುವ ಮೂಲಕ ಧಮಕಿ ಹಾಕುವ ಕೆಲಸವನ್ನು ಮಡಲಾಗುತ್ತಿದೆ. ಸರ್ಕಾರದ ಈ ಧಮಕಿಗೆ  ಹೆದರುವುದಿಲ್ಲ. ಪಕ್ಷದ ಹೋರಾಟ ಮುಂದುವರಿಯಲಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಹೇಳಿದರು.ನ್ಯಾಯಾಂಗ ಬಂಧನದಲ್ಲಿರುವ ಶಾಸಕ ಎಂ.ಟಿ.ಕೃಷ್ಣಪ್ಪ ಅವರನ್ನು ಭೇಟಿಯಾಗಲು ಬುಧವಾರ ನಗರಕ್ಕೆ ಬಂದಿದ್ದ ಅವರು ಭೇಟಿಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಪ್ರಾಮಾಣಿಕರು, ಕೆಲಸ ಮಾಡುವವರನ್ನು ಅಡ್ಡಿಪಡಿಸುವ ಕೆಲಸ ಜಾಸ್ತಿಯಾಗುತ್ತಿದೆ. ಯಾವುದೇ ಸರ್ಕಾರಿ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷೆತೆ ಸ್ಥಳೀಯ ಶಾಸಕರೆ ವಹಿಸಬೇಕೆಂಬ ನಿಯಮವಿದೆ. ಅದನ್ನು ಗಾಳಿಗೆ ತೂರಿ ಶಾಸಕರ ಮೇಲೆ ವಿನಾ ಕಾರಣ ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿದರು.ಸದನ ನಡೆಯುವಾಗ ಶಾಸಕರನ್ನು ಬಂಧಿಸಿದ್ದರೂ ಸೌಜನ್ಯಕ್ಕಾದರು ಕೇಳುವ ಗೋಜಿಗೆ ಮುಖ್ಯಮಂತ್ರಿ ಹೋಗಿಲ್ಲ. ಗೃಹ ಇಲಾಖೆಯ ಸಲಹೆಯನ್ನು ತಿರಸ್ಕರಿಸಿ ಬಿಜೆಪಿ ಕಾರ್ಯಕರ್ತರ ಮೇಲಿನ ಸಾಕಷ್ಟು ಮೊಕದಮೆಗಳನ್ನು ವಾಪಸ್ ಪಡೆದಿರುವ ಸರ್ಕಾರ ಶಾಸಕರ ಮೇಲಿನ ಮೊಕದ್ದಮೆ ಯಾಕೆ ವಾಪಸ್ ಪಡೆಯಲಿಲ್ಲ. ಶಾಸಕರ ಬಂಧನವಾಗುತ್ತಿದ್ದಂತೆ ಅದನ್ನು ಸದನದಲ್ಲಿ ಚರ್ಚಿಸಿ ಮೊಕದ್ದಮೆ ವಾಪಸ್ ಪಡೆದು ನ್ಯಾಯಾಲಯಕ್ಕೆ ತಿಳಿಸಿ ಶಾಸಕರನ್ನು ಬಿಡುಗಡೆಗೊಳಿಸಬೇಕಿತ್ತು ಎಂದರು.ಶಾಸಕರು ಯಾವುದೇ ಕೊಲೆ ಆಪಾದನೆಯಲ್ಲಿ ಜೈಲಿಗೆ ಹೋಗಿಲ್ಲ. ಅವರ ಮೇಲೆ ಸುಳ್ಳು ಮೊಕದ್ದಮೆ ಹಾಕಿರುವುದನ್ನು ಖಂಡಿಸಿ ಜಾಮೀನು ಪಡೆಯದೇ ಜೈಲಿನಲ್ಲಿ ಉಳಿದಿದ್ದಾರೆ. ಘಟನೆ ಲಾಭ ಪಡೆಯುವ ಯಾವ ಉದ್ದೇಶವು ಪಕ್ಷಕ್ಕೆ, ಶಾಸಕರಿಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಮಿತಿ ಮೀರಿದ ಭ್ರಷ್ಟಚಾರ, ಸ್ವಜನಪಕ್ಷಪಾತದ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸದ್ಯದಲ್ಲೆ ದೇವರೆ ಶಿಕ್ಷೆ ನೀಡುತ್ತಾನೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕರಾದ ಎಸ್.ಪಿ. ಮುದ್ದಹನುಮೇಗೌಡ, ಡಿ.ನಾಗರಾಜಯ್ಯ, ವಿಧಾನಪರಿಷತ್ ಸದಸ್ಯ ಡಾ. ಹುಲಿನಾಯ್ಕರ್, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ನಿಂಗಪ್ಪ, ಪ್ರಧಾನ ಕಾರ್ಯದರ್ಶಿ ಬೋರೇಗೌಡ, ವಕ್ತಾರ ಮಲ್ಲಿಕಾರ್ಜುನ ಇತರರು ಇದ್ದರು.  ನಂತರ ಜೈಲಿಗೆ ಭೇಟಿ ನೀಡಿದ ಎಚ್.ಡಿ.ರೇವಣ್ಣ ಹತ್ತು ನಿಮಿಷ ಕಾಲ ಶಾಸಕರೊಂದಿಗೆ ಮಾತುಕತೆ ನಡೆಸಿದರು.

 

ಶಾಸಕರ ಬಿಡುಗಡೆಗೆ ಕೋರ್ಟ್ ಆದೇಶ

ತುರುವೇಕೆರೆ:  ಶಾಸಕ ಎಂ.ಟಿ.ಕೃಷ್ಣಪ್ಪ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಇಲ್ಲಿನ ಹಿರಿಯ ಶ್ರೇಣಿ ನ್ಯಾಯಾಧೀಶ ಎಚ್.ಆರ್.ಬನ್ನಿಕಟ್ಟಿ ಬುಧವಾರ ಸಂಜೆ ಆದೇಶಿಸಿದ್ದಾರೆ.ಮಂಗಳವಾರ 12 ಜನ ಬಂಧಿತರ ಪೈಕಿ 10 ಜನ ಜಾಮೀನಿನ ಮೇಲೆ ಬಿಡುಗಡೆಗೆ ಅರ್ಜಿ ಸಲ್ಲಿಸಿದ್ದರು. ಬುಧವಾರ ಶಾಸಕರು ಮತ್ತು ಅವರ ಬೆಂಬಲಿಗರಾದ ಮಂಗೀಕುಪ್ಪೆ ಬಸವರಾಜು ನ್ಯಾಯಾಂಗ ಬಂಧನದ ಅವಧಿ ಮುಗಿಯುವ ಮುನ್ನ ಜಾಮೀನಿಗಾಗಿ ಮುಂಗಡ ಅರ್ಜಿ ಸಲ್ಲಿಸಿದ್ದರು. ಇದನ್ನು ಪುರಸ್ಕರಿಸಿದ ನ್ಯಾಯಾಲಯ ಅವರ ಬಿಡುಗಡೆಗೆ ಆದೇಶ ಹೊರಡಿಸಿದೆ. ಶಾಸಕರು ಗುರುವಾರ ಬೆಳಿಗ್ಗೆ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ.ಸೋಮವಾರ ಜಾಮೀನು ನಿರಾಕರಿಸಿ ಈಗ ಜಾಮೀನು ಪಡೆದ ಬಗ್ಗೆ `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದ ಶಾಸಕ ಎಂ.ಟಿ.ಕೃಷ್ಣಪ್ಪ ರಾಷ್ಟ್ರ ನಾಯಕ ದೇವೇಗೌಡ ಹಾಗೂ ಮುಖಂಡ ರೇವಣ್ಣ ಅವರ ಅಣತಿ ಮೇರೆಗೆ ತಾವು ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾಗಿ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.