ಶನಿವಾರ, ಮೇ 21, 2022
20 °C

ಸರ್ಕಾರಿ ಕಾಲೇಜಿಗೆ ವಿದ್ಯಾರ್ಥಿಗಳ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಪುರ: ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಹಾಗೂ ಪಟ್ಟಣದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದು, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚಿನ ಸರ್ಕಾರಿ ಕಾಲೇಜುಗಳನ್ನು ತೆರೆಯುವಂತೆ ಆಗ್ರಹಿಸಿ ಬಹುಜನ ಸಮಾಜ ಪಕ್ಷದ ನೇತೃತ್ವದಲ್ಲಿ ವಿದ್ಯಾರ್ಥಿಗಳು ತಾಲ್ಲೂಕು ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.ತಾಲ್ಲೂಕು ಶೈಕ್ಷಣಿಕವಾಗಿ ಹಿಂದುಳಿದಿದೆ. ಪಟ್ಟಣದಲ್ಲಿ ಕೇವಲ ಒಂದು ಸರ್ಕಾರಿ ಕಾಲೇಜು ಇದ್ದು ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಪಟ್ಟಣ ಹಾಗೂ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯ ಸರ್ಕಾರಿ ಮತ್ತು ಖಾಸಗಿ ಪ್ರೌಢಶಾಲೆಗಳಿವೆ. ಆದರೆ ಸರ್ಕಾರಿ ಕಾಲೇಜು ಮಾತ್ರ ಇಲ್ಲ. ಇದರಿಂದ ಶೇ 80 ರಷ್ಟು ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಇಲ್ಲಿನ ಸರ್ಕಾರಿ ಕಾಲೇಜಿನಲ್ಲಿ ಪ್ರವೇಶಕ್ಕೆ ಅವಕಾಶ ದೊರೆಯದ ವಿದ್ಯಾರ್ಥಿಗಳು ವಿಧಿಯಿಲ್ಲದೆ ಖಾಸಗಿ ಕಾಲೇಜುಗಳಲ್ಲಿ ನಿಗದಿತ ಶುಲ್ಕ ನೀಡಿ ವಿದ್ಯಾಭ್ಯಾಸ ಮಾಡಬೇಕಿದೆ. ಇದರಿಂದ ಬಡ ವಿದ್ಯಾರ್ಥಿಗಳಿಗೆ ತೀವ್ರವಾಗಿ ಅನಾನುಕೂಲವಾಗುತ್ತಿದೆ. ಸಮಸ್ಯೆ ಬಗ್ಗೆ ಕ್ಷೇತ್ರದ ಶಾಸಕರು, ಸಂಸದರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಗಮನಹರಿಸುತ್ತಿಲ್ಲ ಎಂದು ಬಿಎಸ್‌ಪಿ ಘಟಕದ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ್ ಜನಪ್ರತಿನಿಧಿಗಳ ವಿರುದ್ಧ ಕಿಡಿಕಾರಿದರು.  ತಾಲ್ಲೂಕಿನಾದ್ಯಂತ 100ಕ್ಕೂ ಹೆಚ್ಚು ಮದ್ಯದ ಅಂಗಡಿಗಳಿಗೆ ಸರ್ಕಾರವು ಪರವಾನಗಿ ನೀಡಿದೆ. ಆದರೆ ಪಟ್ಟಣ ಹಾಗೂ ಕಸಬಾ ಹೋಬಳಿ ವ್ಯಾಪ್ತಿಗೆ ಒಂದೇ ಸರ್ಕಾರಿ ಕಾಲೇಜಿದ್ದರೂ ಹೊಸ ಕಾಲೇಜು ತೆರೆಯುವ ಬಗ್ಗೆ  ಗಮನಹರಿಸುತ್ತಿಲ್ಲ.

 

ಬಡ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಸರ್ಕಾರಿ ಕಾಲೇಜು ತೆರೆಯುವಂತೆ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಮಾಡಬೇಕಾಗಿರುವುದು ದುರದೃಷ್ಟಕರ. ಈಗಲಾದರು ಸಂಬಂಧಪಟ್ಟವರು ಗಮನಹರಿಸಿ ಸರ್ಕಾರಿ ಪದವಿ ಕಾಲೇಜುಗಳನ್ನು ತೆರೆಯುವ ಮೂಲಕ ಎಲ್ಲಾ ಕೋರ್ಸ್‌ಗಳ ಅಭ್ಯಾಸಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.ಬಿಎಸ್‌ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೀಲಿ ರಮೇಶ್, ಕುಂಬಾರ ಸಂಘದ ಸ್ವಾಮಿ, ಕುರುಬ ಸೇನೆಯ ಅಧ್ಯಕ್ಷ ಸುಂದರೇಶ್, ಈಡಿಗರ ಸಂಘದ ಮಧು, ಅಂಬೇಡ್ಕರ್ ನಗರದ ಸಿ.ಕೆ.ಶ್ರೀನಿವಾಸ, ಮಾದಿಗ ದಂಡೋರ ಸಮಿತಿ ತಾಲ್ಲೂಕು ಅಧ್ಯಕ್ಷ ವೆಂಕಟೇಶ್, ಇಂದಿರಾನಗರದ ವೆಂಕಟರಮಣಯ್ಯ ಮತ್ತು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ನಂತರ ಸಮಸ್ಯೆ ಕುರಿತು ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.