ಸೋಮವಾರ, ಜೂನ್ 14, 2021
22 °C

ಸಸ್ಯತಳಿ ಸಂರಕ್ಷಣೆ ಕಾಯ್ದೆ ಜಾಗೃತಿಗೆ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್‌: ಉದಾರೀಕರಣ, ಜಾಗತೀ­ಕರಣ ನೀತಿಯ ನಂತರ ದೇಶದಲ್ಲಿನ ಕೃಷಿಕರು ಮತ್ತು ಸಸ್ಯತಳಿ ರಕ್ಷಿಸುವ ಸಲುವಾಗಿ ಪ್ರತ್ಯೇಕ ಪ್ರಾಧಿಕಾರ ಮತ್ತು ಕಾಯ್ದೆ ಅಸ್ತಿತ್ವಕ್ಕೆ ಬಂದಿದ್ದು, ರೈತರು ಈ ಬಗೆಗೆ ಜಾಗೃತರಾಗಬೇಕು ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ  ವಿಸ್ತರಣಾ ನಿರ್ದೇಶಕ ಡಾ.ಕೆ.ಪಿ. ವಿಶ್ವನಾಥ ಹೇಳಿದರು.ಕೃಷಿ ವಿಜ್ಞಾನ ಕೇಂದ್ರ ಶುಕ್ರವಾರ ನಗರದಲ್ಲಿ ಸಸ್ಯತಳಿ ಮತ್ತು ರೈತರ ಹಕ್ಕುಗಳ ರಕ್ಷಣೆ ಕಾಯ್ದೆ ಕುರಿತು ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಸಂಕರಣ ಪ್ರಕ್ರಿಯೆಗಾಗಿ ದೇಸಿ ತಳಿ, ಬೀಜಗಳ ಸಂರಕ್ಷಣೆಯು ಹೆಚ್ಚು ಮಹತ್ವವಾದುದು ಎಂಬ ಹಿನ್ನೆಲೆಯಲ್ಲಿ ಇದು ಅಸ್ತಿತ್ವಕ್ಕೆ ಬಂದಿದೆ ಎಂದರು.2005ರಿಂದ ಈ ಕಾಯಿದೆ ಅಸ್ತಿತ್ವದಲ್ಲಿದೆ. ಕೃಷಿಕರು ದೇಸಿ ತಳಿ­ಯನ್ನು ಉಳಿಸಲು ಅನುಸರಿಸಬೇಕಾದ ಕ್ರಮವೇನು? ತಳಿ ಸಂರಕ್ಷಣೆ ಏನು? ಅದರ ಅನುಕೂಲಗಳೇನು ಎಂಬುದರ ವಿವರ ನೀಡಿದ ಅವರು, ರೈತರಲ್ಲಿ ಇದರ ಜಾಗೃತಿಯು ತಳಿ, ಬೀಜ ರಕ್ಷಣೆಗೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.ಬಹುರಾಷ್ಟ್ರೀಯ ಕಂಪೆನಿಗಳು ಬಂದ ನಂತರ ಸುಧಾರಿತ ತಳಿಗಳು, ಹೈಬ್ರೀಡ್ ಬೀಜಗಳು ಬಂದವು. ಈಗ ಮತ್ತೆ ನಮ್ಮ ಎಂದಿನ ಸಾಂಪ್ರದಾಯಿಕ ಬೆಳೆ ಪದ್ಧತಿಗೆ, ಬೀಜಗಳಿಗೆ ಬೇಡಿಕೆ ಬರುತ್ತಿದೆ.ಹೊಸ ಬೀಜ, ತಳಿಗಳ ಅನ್ವೇಷಣೆಗೆೆ ಸಂಕರಣ ನಡೆಸಲು ದೇಸಿ ಬೀಜಗಳು ಅಗತ್ಯ ಎಂಬುದನ್ನು ಮನಗಾಣಬೇಕು ಎಂದರು.ಸಾಂಪ್ರದಾಯಿಕ ತಳಿ, ಬೀಜಗಳನ್ನು ಉಳಿಸುವ ಕ್ರಮವಾಗಿ ಈ ಪ್ರಾಧಿಕಾರದಲ್ಲಿ  ಆರಂಭಿಕವಾಗಿ ವಿವಿಧ ತಳಿಗಳನ್ನು ನೋಂದಾಯಿಸಲಾಗುತ್ತದೆ. ನೋಂದಣಿ ಆಧರಿಸಿ ತಳಿಗಳ ವಿಶಿಷ್ಟತೆ, ಏಕರೂಪತೆ ಮತ್ತು ಸ್ಥಿರತೆ ಪರೀಕ್ಷೆ ನಡೆಯಲಿದೆ. ನೋಂದಾಯಿತ ಸಸ್ಯ ತಳಿಗಳ ಗುಣ ಧರ್ಮಗಳನ್ನು ಅಭಿವೃದ್ಧಿ ಪಡಿಸ­ಲಾಗುತ್ತದೆ. ದಾಖಲಿಸ­ಲಾಗುತ್ತದೆ ಮತ್ತು ಕಡ್ಡಾಯವಾಗಿ ಎಲ್ಲ ಸಸ್ಯ ತಳಿಗಳನ್ನು ಪಟ್ಟಿ ಮಾಡಲಾಗುತ್ತದೆ ಎಂದು ಹೇಳಿದರು.ಸನ್ಮಾನ:  ಪ್ರಶಸ್ತಿ ಪುರಸ್ಕೃತ ಕೃಷಿಕರಾದ ಬಗದಲ್‌ನ ಖಾದ್ರಿ ಮತ್ತು ಅತ್ಯುತ್ತಮ ಸಂಶೋಧನಾ ವಿಜ್ಞಾನಿ ಪ್ರಶಸ್ತಿ ಪುರಸ್ಕೃತ ಡಾ. ಸಿ.ಆರ್‌. ಕೊಂಡಾ ಅವರನ್ನು ಸನ್ಮಾನಿಸಲಾಯಿತು.ರಾಯಚೂರು ಕೃಷಿ ಮಹಾ ವಿದ್ಯಾಲಯದ ಪ್ರಾಧ್ಯಾಪಕ ಡಾ. ವಾಸುದೇವನ, ಕೃಷಿ ಮಹಾ ವಿದ್ಯಾಲಯದ ಡೀನ್‌ ಡಾ. ಎಂ.ಕೆ. ನಾಯಕ ಮತ್ತು ಕೃಷಿ ವಿಜ್ಞಾನ ಕೇಂದ್ರದ ಸಂಯೋಜಕ ರವಿ ದೇಶಮುಖ, ಅರಣ್ಯ ಸಂರಕ್ಷಣಾಧಿಕಾರಿ ಶಿವರಾಜ  ಹಾಗೂ ಸಿಬ್ಬಂದಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.