ಮಂಗಳವಾರ, ಮಾರ್ಚ್ 2, 2021
28 °C
ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿ: ಫೈನಲ್‌ನಲ್ಲಿ ಮುಗ್ಗರಿಸಿದ ಜೆಕ್‌ ಗಣರಾಜ್ಯದ ಜೋಡಿ

ಸಾನಿಯಾ–ಹಿಂಗಿಸ್‌ ಮುಡಿಗೆ ಮತ್ತೊಂದು ಕಿರೀಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾನಿಯಾ–ಹಿಂಗಿಸ್‌ ಮುಡಿಗೆ ಮತ್ತೊಂದು ಕಿರೀಟ

ಮೆಲ್ಬರ್ನ್‌ (ಎಎಫ್‌ಪಿ/ಪಿಟಿಐ): ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ  ಭಾರತದ ಸಾನಿಯಾ ಮಿರ್ಜಾ ಮತ್ತು ಸ್ವಿಟ್ಜರ್‌ಲೆಂಡ್‌ನ ಮಾರ್ಟಿನಾ ಹಿಂಗಿಸ್‌ ಅವರ ಪ್ರಶಸ್ತಿ ಬೇಟೆ ಮುಂದುವರಿದಿದೆ.ಈ ಋತುವಿನ ಮೊದಲ ಗ್ರ್ಯಾಂಡ್‌ಸ್ಲಾಮ್‌ ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಸಾನಿಯಾ ಮತ್ತು ಮಾರ್ಟಿನಾ ಟ್ರೋಫಿ ಎತ್ತಿಹಿಡಿದಿದ್ದಾರೆ. ಭಾರತ ಮತ್ತು ಸ್ವಿಸ್‌ ಜೋಡಿ ಜತೆಯಾಗಿ ಆಡಲು ಶುರು ಮಾಡಿದ ಬಳಿಕ ಗೆದ್ದ ಮೂರನೇ ಗ್ರ್ಯಾಂಡ್‌ಸ್ಲಾಮ್‌ ಪ್ರಶಸ್ತಿ ಇದಾಗಿದೆ. 2015ರಲ್ಲಿ ಸಾನಿಯಾ ಮತ್ತು ಹಿಂಗಿಸ್‌ ವಿಂಬಲ್ಡನ್‌ ಮತ್ತು ಅಮೆರಿಕ ಓಪನ್‌ ಟೂರ್ನಿಗಳಲ್ಲಿ ಚಾಂಪಿಯನ್‌ ಆಗಿದ್ದರು.ರಾಡ್‌ ಲೇವರ್‌ ಅರೇನಾದಲ್ಲಿ ಶುಕ್ರವಾರ ನಡೆದ ಫೈನಲ್‌ ಹೋರಾಟದಲ್ಲಿ ಅಗ್ರಗಣ್ಯ ಜೋಡಿ ಸಾನಿಯಾ ಮತ್ತು ಮಾರ್ಟಿನಾ 7–6, 6–3 ರಲ್ಲಿ ಜೆಕ್‌ ಗಣರಾಜ್ಯದ ಆ್ಯಂಡ್ರಿಯಾ ಹ್ಲಾವಕೋವಾ ಮತ್ತು ಲೂಸಿ ಹ್ರಾಡೆಕಾ ಅವರನ್ನು ಪರಾಭವಗೊಳಿಸಿದರು. ಇದರೊಂದಿಗೆ ಸತತ ಗೆಲುವಿನ ದಾಖಲೆಯನ್ನು 36ಕ್ಕೆ ಹೆಚ್ಚಿಸಿಕೊಂಡರು. ಇದು ಡಬ್ಲ್ಯುಟಿಎ ಇತಿಹಾಸದಲ್ಲಿಯೇ ಮೂರನೇ ಅತ್ಯುತ್ತಮ ಸಾಧನೆ ಎನಿಸಿದೆ.ಅಮೆರಿಕದ ಮಾರ್ಟಿನಾ ನವ್ರಟಿಲೋವಾ ಮತ್ತು ಪಾಮ್‌ ಶ್ರಿವರ್‌ ಅವರು ಸತತ 109 ಪಂದ್ಯಗಳಲ್ಲಿ ಗೆಲುವು ಗಳಿಸಿದ ದಾಖಲೆ ಹೊಂದಿದ್ದಾರೆ. ಸ್ವಿಟ್ಜರ್‌ಲೆಂಡ್‌ನ ಮಾರ್ಟಿನಾ ಗೆದ್ದ  ವೃತ್ತಿಜೀವನದ 12ನೇ ಗ್ರ್ಯಾಂಡ್‌ಸ್ಲಾಮ್‌ ಪ್ರಶಸ್ತಿ ಇದಾಗಿದೆ. ಸ್ವಿಸ್‌ ಆಟಗಾರ್ತಿ ಐದು ಬಾರಿ ಆಸ್ಟ್ರೇಲಿಯಾ ಓಪನ್‌, ಎರಡು ಸಲ ಫ್ರೆಂಚ್್ ಓಪನ್‌, ಮೂರು ಬಾರಿ  ವಿಂಬಲ್ಡನ್‌ ಹಾಗೂ ಎರಡು ಸಲ ನ್ಯೂಯಾರ್ಕ್‌ನ ಗಟ್ಟಿಮಣ್ಣಿನ ಅಂಕಣದಲ್ಲಿ ನಡೆದ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ.ಇದು ಸಾನಿಯಾ ವೃತ್ತಿ ಜೀವನದ ಮೂರನೇ ಗ್ರ್ಯಾಂಡ್‌ಸ್ಲಾಮ್‌ ಪ್ರಶಸ್ತಿಯಾಗಿದೆ. ಸಾನಿಯಾ ಗೆದ್ದ ಎಲ್ಲಾ ಟ್ರೋಫಿಗಳು ಮಾರ್ಟಿನಾ ಜತೆಗೂಡಿ ಆಡಿದ ಮೇಲೆ ಲಭಿಸಿರುವುದು ವಿಶೇಷ. ಈ ವರ್ಷದ ಆರಂಭದಲ್ಲಿ ಬ್ರಿಸ್ಬೇನ್‌ ಮತ್ತು ಸಿಡ್ನಿಯಲ್ಲಿ ಪ್ರಶಸ್ತಿ ಗೆದ್ದು ವಿಶ್ವಾಸದ ಉತ್ತುಂಗದಲ್ಲಿದ್ದ ಸಾನಿಯಾ ಮತ್ತು ಮಾರ್ಟಿನಾ ಫೈನಲ್‌ ಹೋರಾಟದಲ್ಲಿ ಉತ್ತಮ ಆರಂಭ ಪಡೆದರು.ತಮ್ಮ ಸರ್ವ್‌ ಕಾಪಾಡಿಕೊಂಡ ಭಾರತ– ಸ್ವಿಸ್‌ ಜೋಡಿ ಶೀಘ್ರವೇ ಮುನ್ನಡೆ ಪಡೆದು ಭರವಸೆ ಮೂಡಿಸಿತು. ಇದರಿಂದ ಜೆಕ್‌ ಆಟಗಾರ್ತಿಯರು ವಿಶ್ವಾಸ ಕಳೆದುಕೊಳ್ಳಲಿಲ್ಲ. ಈ ಜೋಡಿ ಗುಣಮಟ್ಟದ ಆಟ ಆಡಿತು. ಹ್ಲಾವಕೋವಾ ಬೇಸ್‌ಲೈನ್‌ ಸ್ಮ್ಯಾಷ್‌ಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದರೆ, ಹ್ರಾಡೆಕಾ ನೆಟ್‌ನ ಸಮೀಪ ಮಿಂಚಿನ ಆಟ ಆಡಿ ಅಗ್ರಗಣ್ಯ ಜೋಡಿಗೆ ತೀವ್ರ ಪೈಪೋಟಿ ಒಡ್ಡಿದರು.ಹೀಗಾಗಿ ಮೊದಲ ಸೆಟ್‌ 6–6ರಲ್ಲಿ ಸಮಬಲ ಹೊಂದಿತು. ‘ಟೈ ಬ್ರೇಕರ್‌’ನಲ್ಲಿ ಸಾನಿಯಾ ಮತ್ತು ಮಾರ್ಟಿನಾ ದಿಟ್ಟ ಆಟ ಆಡಿದರು. ಸೊಬಗಿನ ಸರ್ವ್‌ ಹಾಗೂ ಬಿರುಗಾಳಿ ವೇಗದ ರಿಟರ್ನ್‌ಗಳನ್ನು ಮಾಡಿದ ಅವರು ಎದುರಾಳಿಗಳ ಸವಾಲು ಮೆಟ್ಟಿನಿಂತು ಸೆಟ್‌ ಗೆದ್ದುಕೊಂಡರು.ತೀವ್ರ ಪೈಪೋಟಿಯ ಹೊರತಾ ಗಿಯೂ ಸೆಟ್‌ ಕೈಚೆಲ್ಲಿದ ಜೆಕ್‌ ಆಟಗಾರ್ತಿ ಯರು ವಿಶ್ವಾಸ ಕಳೆದುಕೊಳ್ಳಲಿಲ್ಲ. ಎರಡನೇ ಸೆಟ್‌ನಲ್ಲಿ ಜೆಕ್‌ ಗಣರಾಜ್ಯದ ಜೋಡಿ ಆಟ ರಂಗೇರಿತು. ಅಮೋಘ ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ ಮತ್ತು ಬಲಿಷ್ಠ ಮುಂಗೈ ಹೊಡೆತಗಳ ಮೂಲಕ ಶೀಘ್ರವಾಗಿ ಗೇಮ್‌ ಗೆದ್ದ ಅವರು ಭಾರತ–ಸ್ವಿಸ್‌ ಜೋಡಿಯ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಿದರು.ಇದರಿಂದ ಸಾನಿಯಾ ಮತ್ತು ಮಾರ್ಟಿನಾ ಕಿಂಚಿತ್ತೂ ಧೃತಿಗೆಡಲಿಲ್ಲ. ಸಂಕಷ್ಟದ ಸಮಯದಲ್ಲೂ ನಿರಾಂತಕ ವಾಗಿ ಆಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದ ಭಾರತ–ಸ್ವಿಸ್‌ ಜೋಡಿ 3–3ರಲ್ಲಿ ಸಮಬಲ ಸಾಧಿಸಿ ಎದುರಾಳಿಗಳಿಗೆ ತಿರುಗೇಟು ನೀಡಿತು.ಆ ಬಳಿಕ ಸಾನಿಯಾ–ಮಾರ್ಟಿನಾ ಆಕ್ರಮಣಕಾರಿ ಆಟಕ್ಕೆ ಒತ್ತುಕೊಟ್ಟರು. ಅಂಗಳದಲ್ಲಿ ಪಾದರಸದಂತಹ ಚಲನೆಯ ಮೂಲಕ ಎದುರಾಳಿಗಳು ಬಾರಿಸಿದ ಚೆಂಡನ್ನು ರಿಟರ್ನ್‌ ಮಾಡುತ್ತಿದ್ದ ಅವರು ಅವಕಾಶ ಸಿಕ್ಕಾಗಲೆಲ್ಲಾ ಶರವೇಗದ ಸ್ಮ್ಯಾಷ್‌ ಸಿಡಿಸುವುದನ್ನು ಮರೆಯಲಿಲ್ಲ.ಬಲಿಷ್ಠ ಹಿಂಗೈ ಮತ್ತು ಮುಂಗೈ ಹೊಡೆತಗಳ ಮೂಲಕ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿ ಸತತ ಮೂರು ಗೇಮ್‌ ಗೆದ್ದುಕೊಂಡ ಸಾನಿಯಾ ಮತ್ತು ಮಾರ್ಟಿನಾ 1ಗಂಟೆ 45 ನಿಮಿಷಗಳಲ್ಲಿ ಜಯದ ತೋರಣ ಕಟ್ಟಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.