ಶುಕ್ರವಾರ, ಮೇ 14, 2021
21 °C
ಹರಿಹರ: ಗುಟ್ಕಾ ನಿಷೇಧ ಖಂಡಿಸಿ ತಾಲ್ಲೂಕು ಅಡಿಕೆ ಬೆಳೆಗಾರರ ಹಿತರಕ್ಷಣಾ ಸಮಿತಿ ಪ್ರತಿಭಟನೆ

ಸಾಲಮನ್ನಾ, ಬೆಂಬಲ ಬೆಲೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಿಹರ: ಅಡಿಕೆ ಬೆಳೆಗಾರರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಾಲ್ಲೂಕು ಅಡಿಕೆ ಬೆಳೆಗಾರರ ಹಿತರಕ್ಷಣಾ ಸಮಿತಿಯಿಂದ  ಸೋಮವಾರ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.ನಗರದ ಮಹಾತ್ಮ ಗಾಂಧಿ ವೃತ್ತದಿಂದ ಆರಂಭವಾದ ಅಡಿಕೆ ಬೆಳೆಗಾರರ ಪ್ರತಿಭಟನಾ ಮೆರವಣಿಗೆ ಶಿವಮೊಗ್ಗ ರಸ್ತೆ ಮೂಲಕ ತಾಲ್ಲೂಕು ಕಚೇರಿ ತಲುಪಿ ತಹಶೀಲ್ದಾರ್ ಜಿ.ನಜ್ಮಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಪ್ರತಿಭಟನೆ ನೇತೃತ್ವ ವಹಿಸಿದ್ದ ತಾಲ್ಲೂಕು ಪಂಚಾಯ್ತಿ ಸದಸ್ಯ ಡಿ. ಕುಮಾರ್ ಮಾತನಾಡಿ, ಸರ್ಕಾರದ ಗುಟ್ಕಾ ನಿಷೇಧ ಘೋಷಣೆ ರಾಜ್ಯದ ಅಡಿಕೆ ಬೆಳೆಗಾರರ ಆರ್ಥಿಕತೆ ಮೇಲೆ ದೊಡ್ಡ ಹೊಡೆತ ನೀಡಿದೆ. ರಾಜ್ಯದಲ್ಲಿ ಇರುವ ಎಲ್ಲಾ ಅಡಿಕೆ ಬೆಳೆಗಾರರ ಸಾಲಮನ್ನಾ ಮಾಡಬೇಕು.ರಾಜ್ಯದ ಅಡಿಕೆ ಬೆಳೆಗಾರರಿಗೆ ಅನುಕೂಲಕವಾಗುವಂತೆ ಗೋರಖ್ ಸಿಂಗ್ ವರದಿಯನ್ನು ಜಾರಿಗೊಳಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಕ್ವಿಂಟಲ್ ಅಡಿಕೆಗೆ 25ಸಾವಿರ ಬೆಂಬಲ ಬೆಲೆ ಘೋಷಣೆ ಮಾಡಬೇಕು. ವಿದೇಶದಿಂದ ಅಡಿಕೆ ಆಮದಿಗೆ ನಿರ್ಬಂಧ ಹೇರಬೇಕು ಎಂದು ಹೇಳಿದರು.ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಅಣ್ಣಪ್ಪ ಐರಣಿ ಮಾತನಾಡಿ, ರಾಜ್ಯ ಸರ್ಕಾರ, ಗುಟ್ಕಾ ನಿಷೇಧ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಪುನರ್‌ಪರಿಶೀಲನಾ ಅರ್ಜಿ ಸಲ್ಲಿಸಬೇಕು. ಇಲ್ಲವಾದಲ್ಲಿ ಎಲ್ಲಾ ರೀತಿಯ ತಂಬಾಕು ಉತ್ಪನ್ನಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.ರೈತ ಮುಖಂಡ ಎಚ್.ಓಂಕಾರಪ್ಪ ಮಾತನಾಡಿ, ಸರ್ಕಾರ ರೈತರ ಹಿತಾಸಕ್ತಿಯನ್ನು ವಿದೇಶಿ ಬಂಡವಾಳ ಶಾಯಿಗಳಿಗೆ ಮಾರಿಕೊಂಡಿದೆ. ರೈತರ ಬಗ್ಗೆ ಯಾವುದೇ ತೀರ್ಮಾನ ತೆಗೆದು ಕೊಳ್ಳುವುದಕ್ಕೂ ಮುಂಚೆ ರೈತರೊಂದಿಗೆ ಚರ್ಚಿಸಬೇಕು ಎಂದು ಹೇಳಿದರು.ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎ.ಎಂ.ವೀರೇಶ್, ತಾಲ್ಲೂಕು ಪಂಚಾಯ್ತಿ ಸದಸ್ಯ ಶಿವನಹಳ್ಳಿ ಸುರೇಶ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ನಾಗನಗೌಡ, ಎಪಿಎಂಸಿ ನಿರ್ದೇಶಕ ಬೆಳ್ಳೂಡಿ ರುದ್ರೇಶ್, ರೈತ ಮುಖಂಡರಾದ ಹಾಳೂರು ನಾಗರಾಜ್, ಪ್ರಭುಗೌಡ, ಕೆ.ವಿ, ರುದ್ರಮುನಿ, ಸಿ.ಎನ್. ಮಂಜುನಾಥ, ಕೆಂಚನಹಳ್ಳಿ ಶೇಖರಪ್ಪ, ನಾರಪ್ಪ, ಪ್ರಕಾಶ, ವಿರೂಪಾಕ್ಷಪ್ಪ, ಸಂತೋಷಕುಮಾರ್, ರುದ್ರಪ್ಪ, ಶಿವಕುಮಾರ್ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.