ಶನಿವಾರ, ಏಪ್ರಿಲ್ 17, 2021
31 °C

ಸಿಎನ್‌ಆರ್ ರಾವ್ ವೃತ್ತದಲ್ಲಿ ಸಂಪರ್ಕ ಅಂಡರ್‌ಪಾಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸಿಎನ್‌ಆರ್ ರಾವ್ ವೃತ್ತದಿಂದ ಐಐಎಸ್ಸಿ ಮುಂಭಾಗದವರೆಗೆ ನಡೆಯುತ್ತಿರುವ ಕೆಳಸೇತುವೆ ಕಾಮಗಾರಿ ಡಿಸೆಂಬರ್ ಒಳಗೆ ಪೂರ್ಣಗೊಳಿಸುವಂತೆ ಆದೇಶಿಸಲಾಗಿದೆ. ಈ ಕಾಮಗಾರಿ ಪೂರ್ಣಗೊಳ್ಳುವ ಮುನ್ನ ಇದೇ ವೃತ್ತದಲ್ಲಿ ಮತ್ತೊಂದು ಅಂಡರ್‌ಪಾಸ್ ಕಾಮಗಾರಿ ಆರಂಭಿಸಿ ಎರಡೂ ಅಂಡರ್‌ಪಾಸ್‌ಗಳಿಗೆ ಸಂಪರ್ಕ ಕಲ್ಪಿಸಲಾಗುವುದು’ ಎಂದು ಬೃಹತ್ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ರವೀಂದ್ರ ಶುಕ್ರವಾರ ತಿಳಿಸಿದರು.ನಗರದ ಸಿಎನ್‌ಆರ್ ರಾವ್ ವೃತ್ತದ ಕೆಳಸೇತುವೆ ನಿರ್ಮಾಣ ಕಾಮಗಾರಿ, ಯಶವಂತಪುರ ಮೇಲ್ಸೇತುವೆ ಹಾಗೂ ಸ್ಯಾಂಕಿ ಕೆರೆ ರಸ್ತೆಯಲ್ಲಿ ತಪಾಸಣೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.‘ಕಾಮಗಾರಿಯಿಂದಾಗಿ ಸಿಎನ್‌ಆರ್ ರಾವ್ ವೃತ್ತದಿಂದ ಐಐಎಸ್ಸಿ ಮುಂಭಾಗದವರೆಗೆ ರಸ್ತೆ ಸಂಚಾರವನ್ನು ನಿರ್ಬಂಧಗೊಳಿಸಲಾಗಿದೆ. ಇದೇ ಸಂದರ್ಭದಲ್ಲಿ ಸಿಎನ್‌ಆರ್ ವೃತ್ತದಲ್ಲಿ ಮತ್ತೊಂದು ಅಂಡರ್‌ಪಾಸ್ ಕಾಮಗಾರಿ ಕೈಗೆತ್ತಿಕೊಂಡರೆ ಎರಡೂ ಕಾಮಗಾರಿಗಳನ್ನು ಏಕಕಾಲಕ್ಕೆ ಪೂರ್ಣಗೊಳಿಸಬಹುದಾಗಿದೆ’ ಎಂದು ಅವರು ಹೇಳಿದರು.‘ಸಿಎನ್‌ಆರ್ ರಾವ್ ವೃತ್ತದಿಂದ ಐಐಎಸ್ಸಿ ಮುಂಭಾಗದವರೆಗಿನ ಕಾಮಗಾರಿ ಕಾಮಗಾರಿ ಶೇ 18ರಷ್ಟು ಪೂರ್ಣಗೊಂಡಿದೆ. ಕಾಮಗಾರಿ ನಡೆಯುತ್ತಿರುವ ಸೇತುವೆಯ ಒಟ್ಟು ಉದ್ದ 412.33 ಮೀಟರ್, ಎತ್ತರ 5.50 ಮೀಟರ್ ಅಗಲ 15 ಮೀಟರ್ ಇದೆ’ ಎಂದರು.‘ತುಮಕೂರು ಕಡೆಯಿಂದ ಎಲಿವೇಟೆಡ್ ರಸ್ತೆಯ ಮೇಲೆ ಬರುವ ವಾಹನಗಳು ಕೂಡ ಯಶವಂತಪುರ ಸೇತುವೆಯ ಮೇಲೆ ಚಲಿಸಲಿವೆ. ಈ ಹಿನ್ನೆಲೆಯಲ್ಲಿ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಮುಂಭಾಗದಲ್ಲಿ 6 ಮೀಟರ್ ರಸ್ತೆ ವಿಸ್ತರಿಸಲು ಚಿಂತಿಸಲಾಗಿದೆ. ಮೆಟ್ರೊ ಮಳಿಗೆ ಸಂಕೀರ್ಣದ ಮುಂಭಾಗದಲ್ಲಿ ಯು ಟರ್ನ್‌ಗೆ ಸ್ಥಳಾವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ’ ಎಂದರು.ಮಲ್ಲೇಶ್ವರ ಶಾಸಕ ಡಾ. ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ‘ಹೆಚ್ಚುತ್ತಿರುವ ಸಂಚಾರ ದಟ್ಟಣೆ ಸಮಸ್ಯೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ರಸ್ತೆ ವಿಸ್ತರಣೆಗೆ ಚಿಂತಿಸಲಾಗಿದೆ. ಯಶವಂತಪುರ ಬಸ್ ನಿಲ್ದಾಣದ ಮೂಲಕ ಸುಮಾರು 4000 ಬಸ್‌ಗಳು ಸಂಚರಿಸುತ್ತಿವೆ. ತುಮಕೂರು ರಸ್ತೆಯ ಮೂಲಕವೇ ನಗರದಿಂದ ರಾಜ್ಯದ ಅನೇಕ ಭಾಗಗಳಿಗೆ ಸಂಪರ್ಕ ಸಾಧ್ಯವಾಗಲಿದ್ದು ಇದಕ್ಕಾಗಿ ಯಶವಂತಪುರ ಬಳಿ ರಸ್ತೆ ವಿಸ್ತರಣೆಗೆ ಒತ್ತು ನೀಡಲಾಗಿದೆ’ ಎಂದರು.‘ನಗರಾಭಿವೃದ್ಧಿ ಯೋಜನೆ ಪ್ರಕಾರ ವೈಜ್ಞಾನಿಕವಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಸಿಎನ್‌ಆರ್ ವೃತ್ತದಲ್ಲಿ ಅಂಡರ್‌ಪಾಸ್ ಕಾಮಗಾರಿ ಪೂರ್ಣ ನಂತರ ಸುಗಮ ಸಂಚಾರ ಸಾಧ್ಯವಾಗಲಿದೆ’ ಎಂದು ಹೇಳಿದರು. ಸ್ಯಾಂಕಿ ರಸ್ತೆಯ ವಿಸ್ತರಣೆ ಬಗ್ಗೆಯೂ ಶೀಘ್ರದಲ್ಲೇ ತೀರ್ಮಾನ ತೆಗೆದುಕೊಳ್ಳುವುದಾಗಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. ಬಿಬಿಎಂಪಿ ಸದಸ್ಯ ಉದಯಶಂಕರ್, ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.