ಶನಿವಾರ, ಮೇ 15, 2021
24 °C
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಕಾರ್ಯಾಗಾರ

`ಸಿಬ್ಬಂದಿ ಕೊರತೆ: ಸಮರ್ಪಕ ಅನುಷ್ಠಾನಕ್ಕೆ ಹಿನ್ನಡೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: `ಸಿಬ್ಬಂದಿ ಕೊರತೆಯಿರುವುದರಿಂದ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಜಾರಿಗೆ ತಂದಿರುವ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ' ಎಂದು ನಿವೃತ್ತ ಹೆಚ್ಚುವರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಂ. ಚಲವಾದಿ ಹೇಳಿದರು.ಇಲ್ಲಿನ ಕುಮಾರ ಗಂಧರ್ವ ರಂಗಮಂದಿರದಲ್ಲಿ ಅರಣ್ಯ ಇಲಾಖೆ ಸೋಮವಾರ ಆಯೋಜಿಸಿದ್ದ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯ ವೃತ್ತಮಟ್ಟದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.`ಅರಣ್ಯ ಇಲಾಖೆಯು ರೈತರ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ, ಸಿಬ್ಬಂದಿ ಕೊರತೆಯಿರುವುದರಿಂದ ರೈತರಿಗೆ ಯೋಜನೆಗಳನ್ನು ಮುಟ್ಟಿಸುವಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಹೀಗಾಗಿ ಸರ್ಕಾರೇತರ ಸಂಘ ಸಂಸ್ಥೆಗಳ ನೆರವು ಪಡೆದು ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಅವಶ್ಯಕತೆಯಿದೆ' ಎಂದು ಸಲಹೆ ನೀಡಿದರು.ಬೆಂಗಳೂರಿನ ಹೆಚ್ಚುವರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ. ಶಿವನಗೌಡ ಮಾತನಾಡಿ, `ರಾಷ್ಟ್ರೀಯ ಅರಣ್ಯ ನೀತಿಯಂತೆ ದೇಶದ ಭೂ ಭಾಗದಲ್ಲಿ ಶೇ.33 ರಷ್ಟು ಅರಣ್ಯ ಪ್ರದೇಶವಿರಬೇಕು. ಆದರೆ, ಶೇ.20 ರಷ್ಟು ಮಾತ್ರ ಅರಣ್ಯ ಪ್ರದೇಶವಿದೆ. ಇನ್ನುಳಿದ ಶೇ 13 ರಷ್ಟು ಅರಣ್ಯ ಪ್ರದೇಶವನ್ನು ಕೃಷಿ ಹಾಗೂ ಅರಣ್ಯೇತರ ಜಮೀನುಗಳಲ್ಲಿ ಬೆಳೆಸುವ ಅವಶ್ಯವಿದೆ. ಈ ನಿಟ್ಟಿನಲ್ಲಿ ಇಲಾಖೆಯ ವತಿಯಿಂದ ವಿವಿಧ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಅರಣ್ಯ ಪ್ರದೇಶವನ್ನು ಹೆಚ್ಚಳ ಮಾಡಲು ನಿರಂತರವಾಗಿ ಶ್ರಮಿಸಲಾಗುತ್ತಿದೆ' ಎಂದರು.`ರೈತರು, ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಬೇಡಿಕೆಯಂತೆ ರೈತರಿಗೆ ರಿಯಾಯ್ತಿ ದರದಲ್ಲಿ ಸಸಿಗಳನ್ನು ವಿತರಿಸುವ ಮೂಲಕ 2011-12ನೇ ಸಾಲಿನಲ್ಲಿ ಇಲಾಖೆಯ ವತಿಯಿಂದ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿತ್ತು. ಆದರೆ, ಯೋಜನೆಯ ಪ್ರತಿಫಲ ಆಶಾದಾಯಕವಾಗಲಿಲ್ಲ. ಆದ್ದರಿಂದ ಮುಂಬರುವ ದಿನಗಳಲ್ಲಿ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಾರ್ಯಾಗಾರಗಳನ್ನು ಏರ್ಪಡಿಸಲಾಗುತ್ತಿದೆ' ಎಂದು ತಿಳಿಸಿದರು.`ಈ ಮೊದಲು ರೈತರಿಗೆ ಉಚಿತವಾಗಿ ಸಸಿ ನೀಡಲಾಗುತ್ತಿತ್ತು. 2005ರ ನಂತರ ರಿಯಾಯಿತಿ ದರದಲ್ಲಿ ಸಸಿ ನೀಡಲಾಯಿತು. ಆದರೆ, ಈ ಎರಡೂ ಯೋಜನೆಗಳಲ್ಲಿ ಪ್ರಗತಿ ಕಂಡು ಬರಲಿಲ್ಲ. 2011 ರಿಂದ ರಿಯಾಯ್ತಿ ದರದಲ್ಲಿ ಸಸಿ ವಿತರಿಸಿ ಅವುಗಳಿಗೆ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ. ಇದರಿಂದಾಗಿ ರೈತರು ಸಸಿ ನೆಟ್ಟು ಹಸಿರನ್ನು ಪಸರಿಸುವ ಜೊತೆಗೆ ಹೆಚ್ಚಿನ ಆದಾಯವನ್ನು ಪಡೆಯಬಹುದು. ಆದ್ದರಿಂದ ರೈತರು ತಮ್ಮ ಗ್ರಾಮಗಳಲ್ಲಿರುವ ಸ್ವಯಂ ಸೇವಾ ಸಂಸ್ಥೆಗಳಿಂದ ಸಸಿಗಳನ್ನು ಪಡೆದು ಕೃಷಿ ಭೂಮಿಯಲ್ಲಿ ನೆಡುವ ಮೂಲಕ ಹೆಚ್ಚಿನ ಆದಾಯ ಗಳಿಸಿ ಆರ್ಥಿಕವಾಗಿ ಸಬಲರಾಗಬೇಕು' ಎಂದು ಸಲಹೆ ನೀಡಿದರು.ಬೆಳಗಾವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂಬಾಡಿ ಮಾಧವ್ ಅವರು, `ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿಯಲ್ಲಿ 2011-12 ನೇ ಸಾಲಿನಲ್ಲಿ 2327 ಫಲಾನುಭವಿಗಳಿಗೆ 4,90,013 ಸಸಿಗಳನ್ನು ನೀಡಲಾಗಿತ್ತು. ಫಲಾನುಭವಿಗಳಿಗೆ ಒಟ್ಟು 21.14 ಲಕ್ಷ ರೂಪಾಯಿ ಪ್ರೋತ್ಸಾಹಧನ ನೀಡಲಾಗಿದೆ. ಅತ್ಯಧಿಕ ಸಂಖ್ಯೆಯಲ್ಲಿ ಸಸಿಗಳನ್ನು ರಕ್ಷಣೆ ಮಾಡಿದ ಖಾನಾಪುರ ತಾಲ್ಲೂಕಿನ ಅರಣ್ಯ ಸಮಿತಿಗೆ 24,90,211 ರೂಪಾಯಿ ಪ್ರೋತ್ಸಾಹಧನ ನೀಡಲಾಗಿದೆ. ರೈತರ ಆದಾಯವನ್ನು ಹೆಚ್ಚಿಸುವದೇ ಈ ಯೋಜನೆಯ ಉದ್ದೇಶವಾಗಿದ್ದು, ರೈತರು ಯೋಜನೆಯ ಸದುಪಯೋಗಪಡೆದುಕೊಳ್ಳುವ ಮೂಲಕ ತಮ್ಮ ವಾರ್ಷಿಕ ವರಮಾನವನ್ನು ಹೆಚ್ಚಿಸಿಕೊಳ್ಳಬೇಕು' ಎಂದರು.ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಎನ್. ಸಂಪಂಗಿ ಅವರು, ಕೃಷಿಭೂಮಿ ಕಡಿಮೆಯಿರುವುದರಿಂದ ಸಸಿಗಳನ್ನು ನೆಡಲು ರೈತರು ಹಿಂದೇಟು ಹಾಕುತ್ತಾರೆ. ಆದರೆ, ಕಡಿಮೆ ಕೃಷಿಭೂಮಿಯಲ್ಲಿಯೇ ಸಸಿ ನೆಟ್ಟು ಹೆಚ್ಚಿನ ಆದಾಯ ಪಡೆಯುವ ಮೂಲಕ ಸಾಧನೆ ಮಾಡಿರುವ ಹಲವಾರು ರೈತರಿದ್ದಾರೆ. ಅವರನ್ನು ಮಾದರಿಯಾಗಿಟ್ಟುಕೊಂಡು ಎಲ್ಲ ರೈತರು ಹೆಚ್ಚಿನ ಆದಾಯ ನೀಡುವ ಸಾಗವಾನಿ, ಹೆಬ್ಬೇವು, ಶ್ರೀಗಂಧ, ಹಲಸು, ನೇರಳೆ, ಜಂಬು ನೇರಳೆ ಬೆಳೆದು ಹೆಚ್ಚಿನ ಆದಾಯ ಪಡೆಯಬೇಕು' ಎಂದು ಸಲಹೆ ನೀಡಿದರು.ಎ.ಎಸ್.ಸದಾಶಿವಯ್ಯ ಮಾತನಾಡಿ, `ರೈತರು ವರ್ಷವಿಡಿ ಬೆಳೆದ ಬೆಳೆಯನ್ನು ಮಾರಾಟ ಮಾಡಲು ಕಷ್ಟು ಪಡುತ್ತಿದ್ದಾರೆ. ಅವರು ಮಾರುಕಟ್ಟೆಯಲ್ಲಿ ದಲ್ಲಾಳಿಗಳಿಂದ ಮೋಸ ಹೋಗುತ್ತಿದ್ದು, ತಮ್ಮ ವರಮಾನವನ್ನು ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಸಹಕಾರಿ ಮಟ್ಟದಲ್ಲಿ ಮಾರಾಟ ಮಾಡುವ ವ್ಯವಸ್ಥೆ ಜಾರಿಗೆ ಬರಬೇಕಿದೆ' ಎಂದರು.ಬಿ. ಶಿವನಗೌಡ ಅವರು ಗ್ರಾಮ ಅರಣ್ಯ ಸಮಿತಿಗಳಿಗೆ ಪ್ರೋತ್ಸಾಹಧನ ವಿತರಿಸಿದರು. ಬೆಳಗಾವಿ ವಲಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಕಾಂತ ಹೊಸೂರ ಅಧ್ಯಕ್ಷತೆ ವಹಿಸಿದ್ದರು.ಅಂಬಾಡಿ ಮಾಧವ್ ಸ್ವಾಗತಿಸಿದರು. ಸಿ.ಜಿ. ಮಿರ್ಜಿ ಕಾರ್ಯಕ್ರಮ ನಿರೂಪಿಸಿದರು. ಜೆ.ಎನ್. ಪಾಟೀಲ ವಂದಿಸಿದರು. ಕಾರ್ಯಾಗಾರದಲ್ಲಿ ಹಲವು ರೈತರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.