ಮಂಗಳವಾರ, ಮೇ 17, 2022
25 °C

ಸೀತಾಫಲ ಸುಗ್ಗಿ ಆರಂಭ: ಹೆಚ್ಚಿದ ಬೆಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ:  ಬೇಸಿಗೆ ಕಾಲ ಶುರುವಾದ ಕೂಡಲೇ ಮಾವಿನ ಹಣ್ಣುಗಳ ಭರಾಟೆ ಆರಂಭವಾಗುತ್ತದೆ.

ರತ್ನಾಗಿರಿ ಆಪೂಸ್ ಸೇರಿದಂತೆ ಹಲವಾರು ಬಗೆಯ ಮಾವುಗಳು ಮಾರುಕಟ್ಟೆಯನ್ನು ಅಲಂಕರಿಸುತ್ತವೆ.ಮಲೆನಾಡಿನಲ್ಲಿ ಮಾವಿನ ಸುಗ್ಗಿ ಜೋರಾಗಿಯೇ ನಡೆಯುವಂತೆ, ಬಿಸಿಲು ನಾಡಾದ ಯಾದಗಿರಿ ಜಿಲ್ಲೆಯಲ್ಲಿ ಸೀತಾಫಲ ಹಣ್ಣುಗಳ ಭರಾಟೆ ಇದೀಗ ಆರಂಭವಾಗಿದೆ.ಚಳಿಗಾಲ ಆರಂಭವಾದ ತಕ್ಷಣ ಜಿಲ್ಲೆಯ ಕಲ್ಲಿನ ಬೆಟ್ಟಗಳ ಪೊದೆಗಳಲ್ಲಿ ಸೀತಾಫಲ ಹಣ್ಣುಗಳು ಘಮಘಮಿಸುತ್ತವೆ.

ಜಿಲ್ಲೆಯ ಅದರಲ್ಲಿಯೂ ಯಾದಗಿರಿ ತಾಲ್ಲೂಕಿನಲ್ಲಿ ಸೀತಾಫಲ ಹಣ್ಣುಗಳು ಹೆಚ್ಚಿಗೆ ಬೆಳೆಯುತ್ತವೆ. ಗುರುಮಠಕಲ್, ಮೋಟ್ನಳ್ಳಿ, ಚಿಂತನಪಲ್ಲಿ, ಮೈಲಾಪುರ, ಮಸ್ಕನಹಳ್ಳಿ, ರಾಮಸಮುದ್ರ, ಬಳಿಚಕ್ರ, ಮುಂಡರಗಿ, ಯರಗೋಳ, ಬಾಚವಾರ, ಕಟಗಿಶಾಪೂರ ಸೇರಿದಂತೆ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿರುವ ಬೆಟ್ಟಗಳಲ್ಲಿ ಸೀತಾಫಲ ಹಣ್ಣಿನ ಗಿಡಗಳು ವಿಪುಲವಾಗಿ ಬೆಳೆದಿವೆ. ನೈಸರ್ಗಿಕವಾಗಿ ಬೆಳೆದಿರುವ ಸೀತಾಫಲ ಗಿಡಗಳು, ಬೆಟ್ಟಗಳ ಅಂಚಿನಿಂದಲೇ ಜನರನ್ನು ಆಕರ್ಷಿಸುತ್ತವೆ.ದಸರಾ ಹಬ್ಬ ಬರುತ್ತಿದ್ದಂತೆಯೇ ಸುತ್ತಲಿನ ಕಾಡುಗಳಲ್ಲಿ ಬೆಳೆಯುವ ಮಾಗಿದ ಸೀತಾಫಲಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ನೈಸರ್ಗಿಕವಾಗಿ ಹಣ್ಣಾಗುವ ಸೀತಾಫಲದ ರುಚಿ ಅದ್ಭುತ. ಮಾವಿನ ಹಣ್ಣುಗಳನ್ನು ಬುಟ್ಟಿಯಲ್ಲಿ ಇಟ್ಟುಕೊಂಡು ತಿನ್ನುವಂತೆ, ಈ ಭಾಗದಲ್ಲಿ ಸೀತಾಫಲ ಹಣ್ಣುಗಳನ್ನು ಬುಟ್ಟಿಗಳಲ್ಲಿ ಇಟ್ಟುಕೊಂಡು, ಮನೆ ಮಂದಿಯೆಲ್ಲ ಸವಿಯುತ್ತಾರೆ. ಈ ಭಾಗದ ಜನರಿಗೆ ಸೀತಾಫಲ ಹಣ್ಣಿನ ಸುಗ್ಗಿ ಎಂದರೆ ಎಲ್ಲಿಲ್ಲದ ಸಂಭ್ರಮ.ನೆರೆ ರಾಜ್ಯದಲ್ಲಿ ಹೆಚ್ಚಿದ ಬೇಡಿಕೆ: ಸೀತಾಫಲ ಗಿಡಗಳನ್ನು ಬೆಳೆಸುವ ಅವಶ್ಯಕತೆ ಇಲ್ಲ. ಅದಕ್ಕಾಗಿ ಪ್ರತ್ಯೇಕವಾಗಿ ತೋಟ ಬೆಳೆಸಬೇಕಾಗಿಲ್ಲ. ಬೆಟ್ಟದ ಕಲ್ಲುಗಳ ಮಧ್ಯೆ ನೈಸರ್ಗಿಕವಾಗಿ ಬೆಳೆಯುವ ಸೀತಾಫಲ ಗಿಡಗಳು, ಸಾಕಷ್ಟು ಫಸಲು ನೀಡುತ್ತವೆ. ನಿಸರ್ಗದತ್ತವಾಗಿರುವ ಈ ಹಣ್ಣುಗಳು ರುಚಿಯಾಗಿದ್ದು, ನೆರೆ ರಾಜ್ಯಗಳಲ್ಲೂ ಸಾಕಷ್ಟು ಬೇಡಿಕೆ ಪಡೆದಿವೆ.ಬೆಟ್ಟಗಳಲ್ಲಿ ಬೆಳೆದಿರುವ ಸೀತಾಫಲ ಗಿಡಗಳನ್ನು ಅರಣ್ಯ ಇಲಾಖೆಯು ಪ್ರತಿ ಎರಡು ವರ್ಷಕ್ಕೊಮ್ಮೆ ಹರಾಜು ಮಾಡುತ್ತದೆ. ಕೇವಲ ರೂ.1,600, ರೂ.1,400 ಕ್ಕೆ ಈ ಬೆಟ್ಟಗಳಲ್ಲಿ ಬೆಳೆದಿರುವ ಸೀತಾಫಲ ಗಿಡಗಳನ್ನು ಹರಾಜು ಮಾಡಲಾಗುತ್ತಿದೆ. ಆದರೆ ಈ ಬೆಟ್ಟಗಳಲ್ಲಿ ಬೆಳೆದಿರುವ ಸೀತಾಫಲ ಗಿಡಗಳು ಅಪಾರ ಪ್ರಮಾಣದ ಹಣ್ಣುಗಳನ್ನು ನೀಡುತ್ತಿದ್ದು, ಈ ಹಣ್ಣುಗಳನ್ನು ಮುಂಬೈ, ಪುಣೆ, ಸೊಲ್ಲಾಪುರ ಸೇರಿದಂತೆ ದೇಶದ ವಿವಿಧೆಡೆ ಪೂರೈಕೆ ಮಾಡಲಾಗುತ್ತದೆ.ಪ್ರತಿ ವರ್ಷ ಸೀತಾಫಲ ಹಣ್ಣಿನ ಸುಗ್ಗಿ ಆರಂಭವಾದ ಕೂಡಲೇ ಹಳ್ಳಿಯ ಜನರಿಗೆ ಬಿಡುವಿಲ್ಲದ ಕೆಲಸ.

ದಿನವೆಲ್ಲ ಬೆಟ್ಟಗಳನ್ನು ಸುತ್ತಾಡಿ ಬೆಳೆದಿರುವ ಹಣ್ಣುಗಳನ್ನು ಕಿತ್ತುಕೊಂಡು ಬರುತ್ತಾರೆ. ಬೆಟ್ಟದಲ್ಲಿನ ಸೀತಾಫಲ ಗಿಡಗಳನ್ನು ಗುತ್ತಿಗೆ ಪಡೆದವರು, ಈ ಹಣ್ಣುಗಳನ್ನು ಲಾರಿಗಳಲ್ಲಿ ವಿವಿಧೆಡೆ ಮಾರಾಟ ಮಾಡುತ್ತಾರೆ. ಇನ್ನು ಕೆಲವರು ಬುಟ್ಟಿಗಳಲ್ಲಿ ತುಂಬಿಕೊಂಡು ನಗರದ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.ಹೆಚ್ಚಿದ ದರ: ಈ ಬಾರಿ ಮಳೆ ಸರಿಯಾಗಿ ಆಗದೇ ಇರುವುದರಿಂದ ಸೀತಾಫಲ ಹಣ್ಣುಗಳ ಪ್ರಮಾಣವೂ ಕಡಿಮೆ ಆಗಿದೆ. ಹೀಗಾಗಿ ಈ ವರ್ಷ ಹಣ್ಣುಗಳ ಬೆಲೆಯೂ ಸ್ವಲ್ಪ ಹೆಚ್ಚಾಗಿದೆ. ರೂ.2ಕ್ಕೆ ಒಂದರಂತೆ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತಿದ್ದು, ಬಹುತೇಕ ಜನರು ಮುಗಿಬಿದ್ದು ಖರೀದಿಸುತ್ತಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.