ಭಾನುವಾರ, ಜುಲೈ 25, 2021
22 °C

ಸೀಮೆಎಣ್ಣೆ ವಿತರಣೆಗೆ ಆಗ್ರಹಿಸಿ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಪುರ: ಪಡಿತರ ಚೀಟಿಗೆ ಸೀಮೆಎಣ್ಣೆ ವಿತರಿಸದಿರುವ ಕ್ರಮವನ್ನು ವಿರೋಧಿಸಿ ಸಾರ್ವಜನಿಕರು ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಹಿಂದಿನಿಂದಲೂ ಸೀಮೆಎಣ್ಣೆ ನೀಡುತ್ತಿದ್ದವರು ಈಗ ದಿಢೀರನೆ ಸ್ಥಗಿತಗೊಳಿಸಿದ್ದಾರೆ. ಆದ್ದರಿಂದ ಸೀಮೆಎಣ್ಣೆ ವಿತರಣೆಯನ್ನು ಪುನರರಾಂಭಿಸಿಬೇಕೆಂದು ಪಟ್ಟಣದ ಮಳಗಾಳಿನ ನೂರಕ್ಕೂ ಹೆಚ್ಚು ಪಡಿತರದಾರರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.ಬೇರೆ ಕೆಲಸದ ಒತ್ತಡದ ಹಿನ್ನೆಲೆಯಲ್ಲಿದ್ದುದರಿಂದ ಸಾರ್ವಜನಿಕರ ಸಂದರ್ಶನದ ವೇಳೆಗೆ ಬರುವಂತೆ ಪ್ರತಿಭಟನಾಕಾರರಿಗೆ  ತಹಶೀಲ್ದಾರ್ ತಿಳಿಸಿದಾಗ ಕೋಪಗೊಂಡ ಅವರು ತಹಶೀಲ್ದಾರ್ ವಿರುದ್ದ  ಘೋಷಣೆಗಳನ್ನು ಕೂಗಿ ಪ್ರತಿಭಟನೆಗೆ ಮುಂದಾದರು.ಪ್ರತಿಭಟನೆ ತಾರಕಕ್ಕೇರಿದಾಗ ತಹಶೀಲ್ದಾರರು ಪೊಲೀಸರ ಸಹಾಯ ಕೋರಿದರು. ಇನ್‌ಸ್ಪೆಕ್ಟರ್ ಮಂಜುನಾಥ್ ಘಟನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಿ, ತಹಶೀಲ್ದಾರರು ತಮ್ಮ ಕೆಲಸಕ್ಕೆ ತೆರಳಲು ಅವಕಾಶ ಮಾಡಿಕೊಟ್ಟರು. ಪ್ರತಿಭಟನಾ ಕಾರರ ದೂರುಗಳನ್ನು ಶಿರಸ್ತೇದಾರರು ಸ್ವೀಕರಿಸಿ, ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಬೋಗಸ್ ಕಾರ್ಡ್: ರಾಜ್ಯದಲ್ಲಿ ಅರ್ಹರಿಗಿಂತ ಬೋಗಸ್ ಕಾರ್ಡುದಾರರೇ ಹೆಚ್ಚಿದ್ದಾರೆ. ಹಾಗೂ ಗ್ಯಾಸ್ ಸಂಪರ್ಕ ಪಡೆದಿದ್ದಾರೆ. ಸುಳ್ಳು ಮಾಹಿತಿ ನೀಡಿ ಅಕ್ರಮವಾಗಿ ಸೀಮೆಎಣ್ಣೆ ಪಡೆಯುತ್ತಿದ್ದಾರೆ.  ಇಲಾಖೆ ಇತ್ತೀಚೆಗೆ ನಡೆಸಿದ ಸದಸ್ಯತ್ವ ಪರಿಷ್ಕರಣೆಯಿಂದ ಈ ಅಂಶ ಬೆಳಕಿಗೆ ಬಂದಿದೆ. ಅದರಂತೆ ಗ್ಯಾಸ್ ಸಂಪರ್ಕ ಹೊಂದಿರುವವರಿಗೆ ಸೀಮೆ ಎಣ್ಣೆ ನೀಡದಂತೆ ಸರ್ಕಾರ ಆದೇಶ ಮಾಡಿದ್ದು, ಅದರನ್ವಯ ಸೀಮೆಎಣ್ಣೆಯನ್ನು ನಿಲ್ಲಿಸಲಾಗಿದೆ ಎಂದು ತಹಶೀಲ್ದಾರ್ ಪತ್ರಿಕೆಗೆ ತಿಳಿಸಿದರು.ಕನಕಪುರ ತಾಲ್ಲೂಕು ದೊಡ್ಡ ತಾಲ್ಲೂಕು ಆಗಿದೆ. ಕೆಲಸದ ಒತ್ತಡ ಹೆಚ್ಚಾಗಿದ್ದು, ಬೆಳಗಿನ ಸಮಯದಲ್ಲಿ ಹೋಬಳಿಗಳಿಗೆ ಭೇಟಿ ನೀಡಿ ಮಧ್ಯಾಹ್ನ ಸಾರ್ವಜನಿಕರ ಸಂದರ್ಶನ ಮಾಡಲಾಗುತ್ತಿದೆ. ಅದರ ವೇಳಾಪಟ್ಟಿಯನ್ನು ಕಚೇರಿಯ ಹೊರಗಡೆ ಪ್ರಕಟ ಮಾಡಲಾಗಿದೆ. ಆದರೂ ಸಾರ್ವಜನಿಕರು ಸಹಕರಿಸದೆ ಈ ರೀತಿ ತೊಂದರೆ ನೀಡುತ್ತಿದ್ದಾರೆ ಎಂದು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.