ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂದರ್‌ ಪಿಚಾಯಿ ಗೂಗಲ್‌ ಸಿಇಒ ಆದ ಕಥೆ..!

Last Updated 11 ಆಗಸ್ಟ್ 2015, 13:57 IST
ಅಕ್ಷರ ಗಾತ್ರ

ನವದೆಹಲಿ: ಚೆನ್ನೈನ ಮಧ್ಯಮವರ್ಗದ ಕುಟುಂಬವೊಂದರಲ್ಲಿ ಜನಿಸಿದ ಸುಂದರ ರಾಜನ್‌ ಪಿಚಾಯಿ, ಗೂಗಲ್‌ನ ‘ಸಿಇಒ’ ಹುದ್ದೆಗೇರುವ ತನಕ ಕ್ರಮಿಸಿದ ಹಾದಿ ಅತ್ಯಂತ ರೋಚಕ. ಮಾರುಕಟ್ಟೆ ಮೌಲ್ಯದಲ್ಲಿ ಇಂದು ಗೂಗಲ್‌ ವಿಶ್ವದ ಮುಂಚೂಣಿ ಕಂಪೆನಿ. ಆದರೆ, ಅದರ ಚುಕ್ಕಾಣಿ ಹಿಡಿದಿರುವ ಪಿಚಾಯಿ, ಬೆಳ್ಳಿಯ ಚಮಚವನ್ನು ಬಾಯಿಗಿಟ್ಟುಕೊಂಡು ಹುಟ್ಟಿದವರಲ್ಲ. ಅವರ ಬಾಲ್ಯ ಬಡತನದಿಂದಲೇ  ಕೂಡಿತ್ತು.  ಪ್ರತಿಭೆ ಮತ್ತು ಪರಿಶ್ರಮದಿಂದ ವ್ಯಕ್ತಿಯೊಬ್ಬರು ಎಂಥ ಉನ್ನತ ಹುದ್ದೆಗೆ ಬೇಕಾದರೂ ಏರಬಹುದು ಎನ್ನುವುದಕ್ಕೆ ಪಿಚಾಯಿ ಉದಾಹರಣೆಯಾಗಿ ನಿಲ್ಲುತ್ತಾರೆ.

ಪಿಚಾಯಿ ಉದ್ಯೋಗಕ್ಕೆ ಸೇರುವ ತನಕ ಅವರ ಬಳಿ ಸ್ವಂತವಾಗಿ ಒಂದು ಕಾರು ಕೂಡ ಇರಲಿಲ್ಲ.  ಗೂಗಲ್‌ ಸೇರುವ  ಮುನ್ನ ಅವರು ಮ್ಯಾಕೆನ್ಸಿ ಕನ್ಸಲ್ಟನ್ಸಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದರು. ಬಸ್ಸಿನಲ್ಲೇ ಓಡಾಡುತ್ತಿದ್ದರು. ತಂದೆ ವೃತ್ತಿಯಲ್ಲಿ  ಎಲೆಕ್ಟ್ರಿಕಲ್‌ ಎಂಜಿನಿಯರ್‌ ಆಗಿದ್ದರು.  ಸ್ವಂತವಾಗಿ ಎಲೆಕ್ಟಿಕಲ್‌ ಬಿಡಿಭಾಗಗಳನ್ನು ತಯಾರಿಸುವ ಫ್ಯಾಕ್ಟರಿ ಒಂದನ್ನು ನಡೆಸುತ್ತಿದ್ದರು. ತಾಯಿ ಸ್ಟೆನೊಗ್ರಾಫರ್‌ ಆಗಿದ್ದರು. ಆದರೆ, ಪಿಚಾಯಿ ಜನಿಸಿದ ನಂತರ ಅವರು ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿ, ಸಂಪೂರ್ಣ ಗೃಹಿಣಿಯಾದರು. 

ತಂದೆ ನಡೆಸುತ್ತಿದ್ದ ಫ್ಯಾಕ್ಟರಿಯ ಬಗ್ಗೆ ಪಿಚಾಯಿಗೆ ವಿಶೇಷ ಒಲವಿತ್ತು. ಎಲೆಕ್ಟ್ರಿಕಲ್‌ ಬಿಡಿಭಾಗಗಳ ಬಗ್ಗೆ ತಿಳಿದುಕೊಳ್ಳಲು ಆತ ಸದಾ ಉತ್ಸಾಹ ತೋರುತ್ತಿದ್ದ. ಅದರ ಕಾರ್ಯನಿರ್ವಹಣಾ ತಂತ್ರಜ್ಞಾನ ಆತನನ್ನು ಆಕರ್ಷಿಸಿತ್ತು. ಮಗ ತಂತ್ರಜ್ಞಾನ ಕ್ಷೇತ್ರಕ್ಕೆ ಬರಲು ಇದೇ ಕಾರಣ ಇರಬಹುದು ಎಂದು ತಂದೆ ರಘುನಾಥ ಪಿಚಾಯಿ ಈಗ ಸ್ಮರಿಸಿಕೊಳ್ಳುತ್ತಾರೆ.

ಎರಡು ಬೆಡ್‌ರೂಂಗಳ ಅಪಾರ್ಟ್‌ಮೆಂಟ್‌ನಲ್ಲಿ ನಾಲ್ವರನ್ನು ಒಳಗೊಂಡಿದ್ದ ಪಿಚಾಯಿಯ ಪುಟ್ಟ ಕುಟುಂಬ ವಾಸವಿತ್ತು. ತನ್ನ ತಮ್ಮನ ಜತೆಗೆ ಪಿಚಾಯಿ ಹಾಲ್‌ನಲ್ಲೇ ಮಲಗುತ್ತಿದ್ದರು. ಬಾಲ್ಯದಲ್ಲಿ ಅವರ ಮನೆಯಲ್ಲಿ ಟಿವಿ ಕೂಡ ಇರಲಿಲ್ಲ. ಓಡಾಟಕ್ಕೆ ತಂದೆಯ ಬಳಿ ನೀಲಿ ಬಣ್ಣದ ಲ್ಯಾಂಬ್ರೆಟಾ ಸ್ಕೂಟರ್‌ ಇತ್ತು. ಕುಟುಂಬದ ನಾಲ್ವರೂ ಒಟ್ಟಾಗಿ ಅದರಲ್ಲೇ ಪ್ರಯಾಣಿಸುತ್ತಿದ್ದರು. ಪಿಚಾಯಿಗೆ 12 ವರ್ಷವಿದ್ದಾಗ ಅವರ ಮನೆಗೆ ಮೊದಲ ದೂರವಾಣಿ ಸಂಪರ್ಕ ಲಭಿಸಿತು. ಈ ಫೋನ್‌ ಅವರ ಜೀವನದ ಮೇಲೆ ಗಾಢ ಪರಿಣಾಮ ಬೀರಿತು. ಅಂದರೆ ಪ್ರತಿಯೊಂದು ದೂರವಾಣಿ ಸಂಖ್ಯೆಯನ್ನೂ ಪಿಚಾಯಿ ನೆನಪಿಟ್ಟುಕೊಳ್ಳುತ್ತಿದ್ದರು. ಅಂಕಿ ಸಂಖ್ಯೆಗಳನ್ನು ನೆನಪಿಟ್ಟುಕೊಳ್ಳುವುದು ಅವರಿಗೆ ಹವ್ಯಾಸವಾಯಿತು. ನಂತರ ಇದರಲ್ಲಿ ಪ್ರಾವೀಣ್ಯ ಪಡೆದುಕೊಂಡರು. ಸಂಬಂಧಿಗಳಲ್ಲಿ ಯಾರ ಫೋನ್‌ ನಂಬರ್‌, ಕೇಳಿದರೂ, ಅವರು ಥಟ್ಟನೆ ಹೇಳುತ್ತಿದ್ದರು. ಪ್ರತಿಯೊಂದು ನಂಬರ್‌ ಅವರ ನಾಲಿಗೆ ತುದಿಯಲ್ಲಿಯೇ ಇರುತ್ತಿತ್ತು. ಯಾರಾದಾರೂ ಫೋನ್‌ ನಂಬರ್‌ ಕಳೆದು ಹೋದರೆ, ಸಂಬಂಧಿಗಳು ಪಿಚಾಯಿ ಅವರನ್ನೇ ಕೇಳುತ್ತಿದ್ದರು. 

ಗೂಗಲ್‌ನ ಸಹೋದ್ಯೋಗಿಗಳು ಕೂಡ ಅಂಕಿ ಅಂಶಗಳನ್ನು ನೆನಪಿಟ್ಟುಕೊಳ್ಳುವ, ಪಿಚಾಯಿ ಅವರ ಅದ್ಭುತ ಸ್ಮರಣ ಶಕ್ತಿಯ ಕುರಿತು ಈಗ ಸ್ಮರಿಸುತ್ತಾರೆ.

ಖರಗ್‌ಪುರದ ಐಐಟಿಯಿಂದ ಪದವಿ ಪಡೆದ ಪಿಚಾಯಿ ನಂತರ,  ಸ್ಕಾಲರ್‌ಷಿಪ್‌ ಪಡೆದು, ಸ್ಟ್ಯಾನ್‌ಫೋರ್ಡ್‌ ವಿವಿಯಲ್ಲಿ ಮೆಟಿರಿಯಲ್‌ ಸೈನ್ಸ್‌ ಮತ್ತು ಸೆಮಿಕಂಡಕ್ಟರ್‌ ಫಿಸಿಕ್ಸ್‌ನಲ್ಲಿ ಅಧ್ಯಯನ ಮುಂದುವರಿಸುತ್ತಾರೆ. 2002ರಲ್ಲಿ ವಾರ್ಟನ್‌ ಸ್ಕೂಲ್‌ ಆಫ್‌ ಬಿಸಿನೆಸ್‌ನಿಂದ ಎಂಬಿಎ ಪದವಿ ಪಡೆಯುತ್ತಾರೆ.  2004ರಲ್ಲಿ ಗೂಗಲ್‌ ಸೇರುತ್ತಾರೆ.

ಗೂಗಲ್‌ ಸೇರುವುದಕ್ಕೆ ಸಂಬಂಧಿಸಿದಂತೆ ಅವರಿಗೆ 2004ರ ಏಪ್ರಿಲ್‌ 1ರಂದು ಇಮೇಲ್‌ ಮೂಲಕ ಆಹ್ವಾನ ಪತ್ರಿಕೆ ಬರುತ್ತದೆ.   ಗೂಗಲ್‌ನ ಜಿಮೇಲ್‌ ಸೇವೆ ಪ್ರಾರಂಭಗೊಂಡ ದಿನ ಅದು. ಆದರೆ ಅಂದು ಏಪ್ರಿಲ್‌ 1. ಈ ಮೇಲ್‌ ‘ಏಪ್ರಿಲ್‌ ಫೂಲ್‌’ ಇರಬಹುದು ಎಂದೇ  ಪಿಚಾಯಿ ಭಾವಿಸುತ್ತಾರೆ. ಆದರೆ, ಗೂಗಲ್‌ ಸೇರಿದ ಅವರ ಜೀವನವೇ ಬದಲಾಗುತ್ತದೆ. ಈಗ ಮೊಬೈಲ್‌ ಮಾರುಕಟ್ಟೆ ಆಳುತ್ತಿರುವ ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಂನಿಂದ ಹಿಡಿದು, ಗೂಗಲ್ ಮ್ಯಾಪ್‌, ಗೂಗಲ್‌ ಡ್ರೈವ್‌, ಕ್ರೋಮ್‌ ಆಪರೇಟಿಂಗ್‌ ಸಿಸಂ ಹೀಗೆ ಕಂಪೆನಿಯ ಎಲ್ಲ ಪ್ರಮುಖ ಸೇವೆಗಳಲ್ಲೂ ಪಿಚಾಯಿ ಅವರ ಕೊಡುಗೆ ಇದೆ. ನೀಳಕಾಯಕದ, ಈ ಸರಳ ಭಾರತೀಯನ ಕೈಗೆ ಈಗ ಗೂಗಲ್‌ ಜಾಗತಿಕ ಜಾಲದ ಕೀಲಿ ಕೈಯನ್ನೇ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT