ಬುಧವಾರ, ಮೇ 18, 2022
27 °C

ಸೊರಬದಲ್ಲಿ ಗರಿಗೆದರಿದ ಕೃಷಿ ಚಟುವಟಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೊರಬ: ಮುಂಗಾರು ತಡವಾಗಿ ಆರಂಭಗೊಂಡಿದ್ದರೂ, ಕಳೆದ ಮೂರು ದಿನಗಳ ಕಾಲ ಹದವಾಗಿ ಮಳೆಯಾಗಿ ಈಗ ಬಿಡುವು ನೀಡಿದೆ. ತಾಲ್ಲೂಕಿನಲ್ಲಿ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.ಮಳೆ ಆರಂಭ ಆಗಿದ್ದಾಗಿನಿಂದ ವಾರಗಟ್ಟಲೇ ಮಳೆ ಬಿಡುವುದಿಲ್ಲ ಎಂಬ ಚಿಂತೆಯಲ್ಲಿ ತಾಲ್ಲೂಕಿನ ರೈತರು ಮುಳುಗಿದ್ದರು. ಆದರೆ, ಎರಡು ದಿನಗಳಿಂದ ಮಳೆ ಬಿಡುವು ನೀಡಿದ್ದು, ರೈತರು ತಮ್ಮ ಕೃಷಿಭೂಮಿಯನ್ನು ಉಳುಮೆ ಮಾಡುತ್ತಿರುವುದು ಹಾಗೂ ಶುಂಠಿ, ಜೋಳ, ರಾಗಿ ಇನ್ನಿತರೆ ಬೆಳೆಗಳ ಬೀಜಗಳನ್ನು ಭೂಮಿಗೆ ಬಿತ್ತುತ್ತಿರುವುದು ತಾಲ್ಲೂಕಿನಲ್ಲಿ ಭರದಿಂದ ಸಾಗಿದೆ. ಒಂದೆಡೆ ರೈತನ ಕೃಷಿ ಚಟುವಟಿಕೆಗೆ ವರುಣ ಅನುಕೂಲ ಮಾಡಿಕೊಟ್ಟಿದ್ದರೂ ಬಾವಿ, ಕೆರೆ-ಕಟ್ಟೆಗಳಲ್ಲಿ ನೀರು ತುಂಬದೇ ಕುಡಿಯುವ ನೀರಿನ ಸಮಸ್ಯೆ ಹಲವಾರು ಹಳ್ಳಿಗಳಲ್ಲಿ ಉಲ್ಬಣಗೊಂಡಿರುವ ಪರಿಸ್ಥಿತಿ ನಿರ್ಮಾಣ ಆಗಿದೆ. ಮಳೆಯ ಆರಂಭದ ಪರಿಸ್ಥಿತಿಯನ್ನು ನೋಡಿದರೆ ಈ ವರ್ಷ ಉತ್ತಮ ಮಳೆಯ ನಿರೀಕ್ಷೆ ಬಹಳ ಕಡಿಮೆ.ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷಕ್ಕೆ ಈವರೆಗಿನ ಮಳೆ ಬಹಳ ಕಡಿಮೆ ಪ್ರಮಾಣದ್ದಾಗಿದೆ. ಪ್ರತಿವರ್ಷ ಈ ವೇಳೆಗಾಗಲೇ ಉತ್ತಮ ಮಳೆಯಾಗಿ ಕೆರೆ-ಕಟ್ಟೆ, ನದಿಗಳು ತುಂಬುತ್ತಿದ್ದವು. ಮತ್ತೆ ಒಂದು ವಾರ ನಂತರ ಮಳೆ ಆರಂಭವಾಗದಿದ್ದರೆ ರೈತಾಪಿ ಜನರು ಆತಂಕಕ್ಕೀಡಾಗಲಿದ್ದಾರೆ.ಉತ್ತಮ ಮಳೆಯಾಗಿ ಭೂಮಿ ಹದವಾದರೆ ಮಾತ್ರ ಕೃಷಿ ಚಟುವಟಿಕೆಗೆ ಅನುಕೂಲ ಆಗುತ್ತದೆ. ಇಲ್ಲದೇ ಹೋದರೆ ವ್ಯವಸಾಯ ದುಸ್ತರ ಆಗುವುದರಲ್ಲಿ ಸಂದೇಹವಿಲ್ಲ. ಬೆಳೆ ಬೆಳೆಯಲು ಸಾವಿರಾರು ರೂಪಾಯಿಗಳನ್ನು ಭೂಮಿಗೆ ಚೆಲ್ಲಿ ಉತ್ತಮ ಬೆಳೆ ಬೆಳೆದು ಉತ್ತಮ ಬೆಲೆ ನಿರೀಕ್ಷೆ ಮಾಡುವ ರೈತರಿಗೆ ಈ ವರ್ಷ ಉತ್ತಮ ಮಳೆಯಾಗಿ ಬೆಳೆದ ಪೈರು ಕೈಗೆ ಬಂದು ಉತ್ತಮ ಬೆಲೆ ಸಿಗುವ ನಿರೀಕ್ಷೆಯಲ್ಲಿ ಇದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.