ಗುರುವಾರ , ಏಪ್ರಿಲ್ 15, 2021
31 °C

ಸ್ವಾಭಿಮಾನದ ಸ್ನೇಹದಲ್ಲಿ...

ಎಚ್.ಎಸ್. ರೋಹಿಣಿ Updated:

ಅಕ್ಷರ ಗಾತ್ರ : | |

`ಅಭಿನಯ ಎನ್ನುವುದು ನನಗೆ ವೃತ್ತಿಯಲ್ಲ. ತಾಯಿ ಮಗುವನ್ನು ಪ್ರೀತಿಸುವುದಕ್ಕೆ ಏನನ್ನುತ್ತೇವೆಯೋ ಅಂಥ ಭಾವ ನನಗೆ ಅಭಿನಯದ ಕಡೆಗಿದೆ~ ಎಂದರು ಸ್ನೇಹಾ ಸ್ವಾಭಿಮಾನಿ. `ಸ್ವಾಭಿಮಾನಿ~ ಎಂಬ ಪದಕ್ಕೆ ಮನಸೋತು ಅದನ್ನು ತಮ್ಮ ಹೆಸರಿನ ಮುಂದೆ ಬಳಸುವ ಸ್ನೇಹಾಗೆ, ತಮ್ಮ ಹೆಸರಿನವರು ತುಂಬಾ ಜನ ಇರುವುದರಿಂದ ಆ ಪದ ತಮ್ಮನ್ನು ವಿಭಿನ್ನ ಎನ್ನುವಂತೆ ಮಾಡಿದೆ ಎನ್ನುತ್ತಾರೆ.ಸ್ನೇಹಾ ಚಿತ್ರದುರ್ಗ ಜಿಲ್ಲೆ ಬೊಮ್ಮನಕುಂಟೆಯವರು. ಅವರ ತಂದೆ ಮತ್ತು ದೊಡ್ಡಪ್ಪ ಊರಿನ ನಾಟಕಗಳಲ್ಲಿ ಅಭಿನಯಿಸುತ್ತಿದ್ದರಂತೆ. ಅದನ್ನು ನೋಡಿಯೇ ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡ ಸ್ನೇಹಾಗೆ ಗಿರೀಶ್ ಜತ್ತಿ ಅವರ ಪತ್ನಿ ಸುಧಾ ಅವರ ಸಹಕಾರ ಸಿಕ್ಕಿತು.ಪದವಿ ಓದುವುದನ್ನು ಅರ್ಧಕ್ಕೆ ನಿಲ್ಲಿಸಿ ಅಭಿನಯದ ಕಡೆ ವಾಲಿ ಸ್ನೇಹಾ ಮೊದಲಿಗೆ `ಕದನ~ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಪಡೆದುಕೊಂಡರು. ಅದಾದ ನಂತರ ಅವರು ಸುಮಾರು 30 ಧಾರಾವಾಹಿಗಳಿಗೆ ಬಣ್ಣ ಹಚ್ಚಿದರು.`ಸೌಭಾಗ್ಯವತಿ~, `ಮಹಾನವಮಿ~, `ಕಸ್ತೂರಿ ನಿವಾಸ~, `ರಂಗೋಲಿ~, `ಮಾಂಗಲ್ಯ~, `ತಾಯವ್ವ~, `ಕಲ್ಯಾಣಿ~, `ಗುಪ್ತಗಾಮಿನಿ~ ಹೀಗೆ ಅವಕಾಶಗಳು ಸಿಗುತ್ತಾ ಹೋದವು. ಸದ್ಯ `ನನ್ನ ಪ್ರೀತಿಯ ಶ್ರೀಮತಿ~, `ಅಳುಗುಳಿಮನೆ~, `ಕಾಮನಬಿಲ್ಲು~, `ಅರುಣರಾಗ~ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.ಒಟ್ಟೊಟ್ಟಿಗೆ ಮೂರ‌್ನಾಲ್ಕು ಧಾರಾವಾಹಿಗಳಲ್ಲಿ ನಟಿಸುವುದು ತಮಗೆ ಗೊಂದಲವನ್ನೇನು ತರುವುದಿಲ್ಲ ಎನ್ನುವ ಅವರು ಆಯಾ ಪಾತ್ರಕ್ಕೆ ತಕ್ಕಂತೆ ಮೂಡು ಬದಲಾಯಿಸುವೆ ಎನ್ನುತ್ತಾರೆ.`ನನ್ನ ಪ್ರೀತಿಯ ಶ್ರೀಮತಿ~ಯಲ್ಲಿ ಸೌಮ್ಯ ಸ್ವಭಾವದ ರೇವತಿ, `ಅರುಣರಾಗ~ದಲ್ಲಿ ಆಧುನಿಕ ಹುಡುಗಿ, `ಕಾಮನಬಿಲ್ಲು~ನಲ್ಲಿ ವಿಧವೆ, `ಅಳುಗುಳಿಮನೆ~ಯಲ್ಲಿ ಮಾನಸಿಕ ಅಸ್ವಸ್ಥೆಯ ಪಾತ್ರ ನಿರ್ವಹಿಸುತ್ತಿರುವ ಸ್ನೇಹಾಗೆ ಎಲ್ಲವೂ ಸವಾಲು ಎನಿಸಿದೆ.ಇದರ ನಡುವೆ ರಂಗಭೂಮಿಯಲ್ಲಿಯೂ ಆಸಕ್ತಿ ಬೆಳೆಸಿಕೊಂಡಿರುವ ಸ್ನೇಹಾ `ಅಂಬಾರಿ~ ತಂಡದಲ್ಲಿ ಸಕ್ರಿಯರಾಗಿದ್ದಾರೆ. `ಮಾಯೆಯಂತೆ ಮಾಯೆ~ ನಾಟಕದಲ್ಲಿ ನಟಿಸಿರುವ ಅವರು ಹಲವು ನಾಟಕಗಳಲ್ಲಿ ಸಣ್ಣಪುಟ್ಟ ಪಾತ್ರ ನಿಭಾಯಿಸಿದವರು.`ನಾನು ಎಂದೂ ಕಳಪೆ ಎನ್ನುವ ಮಟ್ಟಕ್ಕೆ ನಟಿಸುತ್ತಿರಲಿಲ್ಲ. ಆದರೆ ಇದೀಗ ನನ್ನ ನಟನೆ ಹದ ಕಂಡುಕೊಂಡಿದೆ. ನಾನು ಅಂದುಕೊಂಡಂತೆ ನಟಿಸುತ್ತಿದ್ದೇನೆ~ ಎನ್ನುತ್ತಾರೆ.

`ನನಗೆ ಸಿನಿಮಾ ನೋಡುವುದು ಒಂಥರಾ ಹುಚ್ಚು. ರಾಜ್‌ಕುಮಾರ್- ಕಲ್ಪನಾ ಜೋಡಿಯ ಸಿನಿಮಾಗಳನ್ನು ಇಷ್ಟಪಡುತ್ತೇನೆ. ಅವುಗಳನ್ನು ನೋಡಿಯೇ ನಾನು ನನ್ನ ಅಭಿನಯವನ್ನು ತಿದ್ದಿಕೊಳ್ಳುವುದು~ ಎನ್ನುವ ಸ್ನೇಹಾಗೆ ಪೊಲೀಸ್ ಅಧಿಕಾರಿ ಮತ್ತು ಜಿಲ್ಲಾಧಿಕಾರಿ ಪಾತ್ರ ನಿರ್ವಹಿಸುವಾಸೆ ಇದೆ.`ಕಾಲ್ಗೆಜ್ಜೆ~, `ಒಲವೇ ವಿಸ್ಮಯ~, `ನಿನ್ನಲ್ಲೇ~ ಮುಂತಾದ ಸಿನಿಮಾಗಳಲ್ಲೂ ಕಾಣಿಸಿಕೊಂಡಿರುವ ಅವರಿಗೆ ಗ್ಲಾಮರ್ ಇಷ್ಟವಿಲ್ಲ. ಅದರಿಂದ ಕಿರುತೆರೆಯೇ ಅಚ್ಚುಮೆಚ್ಚು ಎನ್ನುವ ಸ್ನೇಹಾ ಒಪ್ಪಿಕೊಂಡ ಪಾತ್ರಕ್ಕಾಗಿ ಸಾಕಷ್ಟು ಸಿದ್ಧತೆ ನಡೆಸುತ್ತಾರಂತೆ.ಬಿಡುವಿನ ಸಮಯದಲ್ಲಿ ಪುಸ್ತಕ ಓದುವ, ಸಿನಿಮಾಗಳನ್ನು ನೋಡುವ, ಸಂಗೀತ ಆಲಿಸುವ ಸ್ನೇಹಾಗೆ ತಮಿಳು ಧಾರಾವಾಹಿಯಿಂದಲೂ ಅವಕಾಶ ಬಂದಿತ್ತಂತೆ. ಭಾಷೆ ಬರುವುದಿಲ್ಲ ಎಂಬ ಕಾರಣಕ್ಕೆ ನಿರಾಕರಿಸಿರುವ ಅವರು ತೆಲುಗು ಭಾಷೆಯಲ್ಲಿ ಅವಕಾಶ ಬಂದರೆ ನಟಿಸುವುದಾಗಿ ಹೇಳುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.