ಶನಿವಾರ, ಜೂನ್ 19, 2021
29 °C

ಹರಿದು ಹಂಚಿ ಹೋದ ಯಾದಗಿರಿ ಜಿಲ್ಲೆ

ಪ್ರಜಾವಾಣಿ ವಾರ್ತೆ/ ಚಿದಂಬರ ಪ್ರಸಾದ Updated:

ಅಕ್ಷರ ಗಾತ್ರ : | |

ಯಾದಗಿರಿ: ಲೋಕಸಭೆ ಚುನಾವಣೆ ಘೋಷಣೆ­ಯಾಗಿದೆ. ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆ ಕಸರತ್ತು ನಡೆಸುತ್ತಿವೆ. ಇದೀಗ ಆಕಾಂಕ್ಷಿ­ಗಳ ದಂಡು ಬೆಂಗಳೂರು, ದೆಹಲಿಯಲ್ಲಿ ಬೀಡು ಬಿಟ್ಟಿದೆ. ಯಾರು ಅಭ್ಯರ್ಥಿ ಎನ್ನುವ ಮತದಾ­ರರ ಆಸಕ್ತಿ ಇನ್ನೂ ಹಾಗೆಯೇ ಉಳಿದಿದೆ. ಇಷ್ಟೆಲ್ಲ ನಡೆ­ಯುತ್ತಿದ್ದರೂ, ಯಾದಗಿರಿ ಜಿಲ್ಲೆ­ಯಲ್ಲಿ ಮಾತ್ರ ಲೋಕ­ಸಭೆ ಚುನಾವಣೆ ಭರಾಟೆಯೇ ಕಾಣುತ್ತಿಲ್ಲ.ರಾಜ್ಯದ 30ನೇ ಜಿಲ್ಲೆಯಾಗಿರುವ ಯಾದ­ಗಿರಿ­ಯಲ್ಲಿ ಲೋಕಸಭೆ ಚುನಾವಣೆಯ ಪ್ರಚಾರ ಹಾಗೂ ಮತದಾನ ಹೊರತುಪಡಿಸಿದರೆ, ಬೇರಾವ ಪ್ರಕ್ರಿಯೆಗಳು ನಡೆಯುವುದಿಲ್ಲ. ಜಿಲ್ಲೆ­ಯಲ್ಲಿರುವ ನಾಲ್ಕು ವಿಧಾನಸಭೆ ಕ್ಷೇತ್ರಗಳು, ಅಕ್ಕಪಕ್ಕದ ಜಿಲ್ಲೆಯ ಲೋಕಸಭಾ ಕ್ಷೇತ್ರಗಳಲ್ಲಿ ಹಂಚಿ ಹೋಗಿರುವುದೇ ಇದಕ್ಕೆ ಕಾರಣ.ನಾಮಪತ್ರ ಸಲ್ಲಿಕೆ, ಹಿಂತೆಗೆದುಕೊಳ್ಳುವುದು ಸೇರಿದಂತೆ ಎಲ್ಲ ಪ್ರಕ್ರಿಯೆಗಳು ಆಯಾ ಲೋಕಸಭೆ ಕ್ಷೇತ್ರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಲಿವೆ. ಯಾದಗಿರಿ ಜಿಲ್ಲೆಯಲ್ಲಿ ಕೇವಲ ಮತದಾನ ಮಾತ್ರ ನಡೆಯುವುದರಿಂದ ಅಧಿ­ಕಾರಿಗಳು ಸ್ವಲ್ಪ ನಿರಾಳ­ರಾಗಿದ್ದಾರೆ.ಆದರೂ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಎಚ್ಚರಿಕೆ ವಹಿಸುವ ಜವಾಬ್ದಾರಿ ಮಾತ್ರ ಇಲ್ಲಿಯ ಅಧಿಕಾರಿಗಳ ಮೇಲಿದೆ.

ನಾಲ್ಕು ಕ್ಷೇತ್ರಗಳು: ಸುಮಾರು 11 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಯಾದಗಿರಿ ಜಿಲ್ಲೆಯಲ್ಲಿ ನಾಲ್ಕು ವಿಧಾನಸಭೆ ಕ್ಷೇತ್ರಗಳಿವೆ. ಇದರಲ್ಲಿ ಶಹಾಪುರ, ಯಾದಗಿರಿ ಹಾಗೂ ಸುರಪುರ ವಿಧಾನಸಭೆ ಕ್ಷೇತ್ರಗಳು ರಾಯ­ಚೂರು ಲೋಕಸಭೆ ಕ್ಷೇತ್ರ ವ್ಯಾಪ್ತಿಗೆ ಬರುತ್ತಿದ್ದು, ಗುರುಮಠಕಲ್‌ ಕ್ಷೇತ್ರ ಮಾತ್ರ ಗುಲ್ಬರ್ಗ ಲೋಕಸಭೆ ಕ್ಷೇತ್ರಕ್ಕೆ ಸೇರಿದೆ.ಇರುವ ನಾಲ್ಕು ಕ್ಷೇತ್ರಗಳೂ, ಎರಡು ಲೋಕ­ಸಭೆ ಕ್ಷೇತ್ರಗಳಲ್ಲಿ ಹಂಚಿ ಹೋಗಿರುವುದರಿಂದ ಯಾದಗಿರಿ ಜಿಲ್ಲೆಯಲ್ಲಿ ಚುನಾವಣೆ ಭರಾಟೆ ಅಷ್ಟಾಗಿ ಕಂಡು ಬರುತ್ತಿಲ್ಲ. ಲೋಕಸಭೆಗೆ ಸ್ಪರ್ಧಿಸುವ ಅಭ್ಯರ್ಥಿಗಳೂ, ಹೆಚ್ಚಾಗಿ ರಾಯ­ಚೂರು ಹಾಗೂ ಗುಲ್ಬರ್ಗ ಜಿಲ್ಲೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದರಿಂದ ಜಿಲ್ಲೆಯಲ್ಲಿ ಪ್ರಚಾರದ ಭರಾಟೆಯೂ ಕಡಿಮೆ.ರಾಯಚೂರು ಕ್ಷೇತ್ರದಲ್ಲಿ ಪ್ರಭಾವ: ಜಿಲ್ಲೆಯ ಮೂರು ವಿಧಾನಸಭೆ ಕ್ಷೇತ್ರಗಳು ರಾಯಚೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರುವುದರಿಂದ ಯಾದಗಿರಿ ಜಿಲ್ಲೆಯ ಮತದಾರರು ಮಹತ್ವದ ಪಾತ್ರ ನಿರ್ವಹಿಸಲಿದ್ದಾರೆ. ಅಂತೆಯೇ ವಿವಿಧ ರಾಜಕೀಯ ಪಕ್ಷಗಳು ಯಾದಗಿರಿ ಜಿಲ್ಲೆಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಉತ್ಸಾಹ ತೋರುತ್ತಿವೆ.ರಾಯಚೂರು ಲೋಕಸಭಾ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 16 ಲಕ್ಷದಷ್ಟಿದ್ದು, ಅದ­ರಲ್ಲಿ ಯಾದಗಿರಿ, ಸುರಪುರ ಹಾಗೂ ಶಹಾಪುರ ವಿಧಾನಸಭೆ ಕ್ಷೇತ್ರಗಳಲ್ಲಿ 6,20,184 ಮತ­ದಾರರಿದ್ದಾರೆ. ಹೀಗಾಗಿ ರಾಯಚೂರು ಲೋಕ­ಸಭೆ ಕ್ಷೇತ್ರದಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಯಾದಗಿರಿ ಜಿಲ್ಲೆಗೆ ಹೆಚ್ಚಿನ ಆದ್ಯತೆ ನೀಡುವುದು ಅನಿವಾರ್ಯ ಎನ್ನಲಾಗುತ್ತದೆ. ಯಾದಗಿರಿ ಮತ್ತು ಸುರಪುರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರಿದ್ದರೆ, ಶಹಾಪುರದಲ್ಲಿ ಮಾತ್ರ ಕೆಜೆಪಿ ಶಾಸಕ ಆಯ್ಕೆಯಾಗಿದ್ದಾರೆ.ಇನ್ನು ಗಡಿ ಭಾಗದಲ್ಲಿರುವ ಗುರುಮಠಕಲ್‌ ವಿಧಾನಸಭೆ ಕ್ಷೇತ್ರ ಮಾತ್ರ ಗುಲ್ಬರ್ಗ ಲೋಕಸಭೆ ಕ್ಷೇತ್ರ ವ್ಯಾಪ್ತಿಗೆ ಸೇರುತ್ತಿದ್ದು, ಕ್ಷೇತ್ರದಲ್ಲಿ 2,09,449 ಮತದಾರರಿದ್ದಾರೆ. ಸದ್ಯಕ್ಕೆ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ­ರಾಗಿರುವ ಬಾಬುರಾವ ಚಿಂಚನಸೂರ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.ಈಗಾಗಲೇ ಗುಲ್ಬರ್ಗ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ರಾಯಚೂರು ಕ್ಷೇತ್ರ­ದಲ್ಲಿ ಬಿಜೆಪಿ ಮಾತ್ರ ಅಭ್ಯರ್ಥಿಯ ಹೆಸರನ್ನು ಘೋಷಿಸಿದೆ. ಆದರೆ, ಕಾಂಗ್ರೆಸ್‌ನಿಂದ ಮಾತ್ರ ಇನ್ನೂ ಅಭ್ಯರ್ಥಿಗಳ ಘೋಷಣೆ ಆಗಿಲ್ಲ.ಇದರಿಂದಾಗಿ ಯಾದಗಿರಿ ಜಿಲ್ಲೆಯವರೇ ಕಾಂಗ್ರೆಸ್‌ ಅಭ್ಯರ್ಥಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ ಎನ್ನಲಾಗುತ್ತಿದೆ. ಸುರಪುರ ಕ್ಷೇತ್ರದ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರನ್ನು ರಾಯಚೂರು ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯನ್ನಾಗಿ ಮಾಡಲು ಲೆಕ್ಕಾಚಾರಗಳು ನಡೆದಿವೆ. ಆದರೆ, ಇನ್ನೊಬ್ಬ ಮಾಜಿ ಸಚಿವರೂ ಕಾಂಗ್ರೆಸ್‌ ಸೇರುವ ಮೂಲಕ ಟಿಕೆಟ್‌ ಪಡೆ­ಯಲು ಪ್ರಯತ್ನ ಆರಂಭಿಸಿದ್ದಾರೆ ಎನ್ನುವ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.