ಗುರುವಾರ , ಆಗಸ್ಟ್ 6, 2020
27 °C

ಹೀಗೊಂದು ಮೈಕ್ರೋ ಡುಕಾಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೀಗೊಂದು ಮೈಕ್ರೋ ಡುಕಾಟಿ

ಅಪ್ಪ-ಅಮ್ಮಂದಿರು ತಮ್ಮ ಪುಟ್ಟ ಮಕ್ಕಳಿಗಾಗಿ ಆಟಿಕೆಗಳನ್ನು ಕೊಡಿಸುವುದು ಸಾಮಾನ್ಯ. ಆದರೆ ಹುಬ್ಬಳ್ಳಿಯಲ್ಲೊಬ್ಬರು ಅಪ್ಪ ತಮ್ಮ ಮಗನಿಗೆಂದು ಸ್ವತಃ ಬೈಕ್ ಒಂದನ್ನು ರೂಪಿಸಿಕೊಟ್ಟಿದ್ದಾರೆ, ಸ್ವಂತ ಶ್ರಮದಲ್ಲಿ.ಈ ಪುಟ್ಟ ಬೈಕ್‌ನ ಹೆಸರು `ಎಸ್‌ಜಿಎಕ್ಸ್~ ಅರ್ಥಾತ್ ಸಿದ್ಧಾರ್ಥ್ ಗೌತಮ್ ಎಕ್ಸಪರಿವೆುಂಟಲ್ ಬೈಕ್! ಎರಡು ಅಡಿ ಎತ್ತರವಿರುವ ಈ ವಾಹನ ಇಟಲಿಯ ಡುಕಾಟಿ ಮಾನ್‌ಸ್ಟರ್-795 ಬೈಕ್‌ನ ತದ್ರೂಪು. ಮೂಲ ಬೈಕ್‌ಗೆ ಹೋಲುವಂತೆಯೇ ವಿನ್ಯಾಸವಿದೆ.ಟ್ಯಾಂಕ್, ಸೈಲೆನ್ಸರ್, ಲೈಟ್ಸ್, ಕಡೆಗೆ ಕನ್ನಡಿ, ನೇಮ್‌ಪ್ಲೇಟ್ ಕೂಡ ಡ್ಯುಕಾಟಿಯಂತೆಯೇ ಇದೆ. ಹೀಗಾಗಿ ಇದನ್ನು ನೋಡಿದವರಿಗೆ ಇದು ಡುಕಾಟಿ ಕಂಪೆನಿಯದ್ದೇ ಮೈಕ್ರೋ ಬೈಕ್ ಎಂದೆನಿಸಿದರೆ ಅಚ್ಚರಿಯಿಲ್ಲ.ಈ ಬೈಕ್ ರೂಪಿಸಿದವರು ಮೇಜರ್ ಗೌತಮ್ ಶಂಕರ್ ಗಿರಿ. ಕಳೆದ 13 ವರ್ಷಗಳಿಂದ ಅವರು ಮಿಲಿಟರಿಯಲ್ಲಿ ಉದ್ಯೋಗದಲ್ಲಿದ್ದಾರೆ. ಸದ್ಯ ಶ್ರೀನಗರ ವಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಮಗ ಸಿದ್ಧಾರ್ಥ್‌ಗೆ ಬರೀ ನಾಲ್ಕು ವರ್ಷ. ಹುಬ್ಬಳ್ಳಿಯ ಭುವನೇಶ್ವರಿ ನಗರದಲ್ಲಿ ಅವರ ಕುಟುಂಬ ವಾಸವಿದೆ.

 

ಮಗನಿಗೆ ಗೊಂಬೆ ಕೊಡಿಸುವುದು ಮಾಮೂಲು. ಹೀಗಾಗಿ ಬೇರೆ ಏನಾದರೂ ಕೊಡಬೇಕೆಂಬ ಆಸೆ ಅವರದ್ದು. ಹೀಗೆ ಯೋಚಿಸುವಾಗ ಹೊಳೆದದ್ದೇ ಬೈಕ್ ವಿನ್ಯಾಸ. ಆಗ ಚಂಡೀಗಢದಲ್ಲಿ ಕೆಲಸ ಮಾಡುತ್ತಿದ್ದ ಗೌತಮ್ ಕಣ್ಣಿಗೆ ಬಿದ್ದದ್ದು ಅಲ್ಲಿನ ಡುಕಾಟಿ ಶೋರೂಂನಲ್ಲಿದ್ದ ಬೈಕ್‌ಗಳು.ಅದನ್ನೇ ಕಣ್ಮುಂದೆ ತಂದುಕೊಂಡ ಗೌತಮ್, ಅಂತಹದ್ದೊಂದು ಮಿನಿ ಬೈಕ್ ಅನ್ನು ಮಗನಿಗೆ ತಯಾರಿಸಿಕೊಡುವ ಕನಸು ಹೊತ್ತರು. ಅದಕ್ಕಾಗಿ ಎಲೆಕ್ಟ್ರಾನಿಕ್ಸ್ ಮಳಿಗೆಗಳಲ್ಲಿ, ಇಂಟರ್‌ನೆಟ್‌ನಲ್ಲಿ ಹುಡುಕಿ ಮಾಹಿತಿ ಕಲೆಹಾಕಿದರು. ಬೈಕ್ ರಚನೆಗೆ ಬೇಕಾದ ಸಣ್ಣ, ಸಣ್ಣ ಭಾಗಗಳನ್ನು ಪಟ್ಟಿ ಮಾಡಿಕೊಂಡರು.

 

ಚಂಡೀಗಢದ ಗುಜರಿ ಅಂಗಡಿಗಳಲ್ಲಿ ಹುಡುಕಿ, ಬೇರೆ ಬೇರೆ ಸ್ಕೂಟರ್‌ಗಳ ಹಳೆಯ ಅಥವಾ ನಿರುಪಯೋಗಿ ಭಾಗಗಳನ್ನು ಆಯ್ದುಕೊಂಡರು. ಟಿವಿಎಸ್‌ನ ಟ್ಯಾಂಕ್, ಸ್ಕೂಟಿಯ ಹ್ಯಾಂಡಲ್, ಬಜಾಜ್ ಸನ್ನಿ ಎಂಜಿನ್, ಬೇರೆ ಬೇರೆ ಸ್ಕೂಟರ್‌ಗಳ ಲೈಟ್, ನಟ್, ಬೋಲ್ಟ್ ಎಲ್ಲವೂ ದೊರಕಿದವು.ಕಾನೂನು ವಿಷಯದ ವಿದ್ಯಾರ್ಥಿಯಾದ ಗೌತಮ್ ಎಂಜಿನಿಯರ್‌ನಂತೆ ಬೈಕ್ ವಿನ್ಯಾಸವನ್ನು ಅಭ್ಯಸಿಸಿ ಈ ಬೈಕ್‌ರೂಪಿಸಲು ಶ್ರಮಿಸಿದರು. ಅಲ್ಲಿನ ಗ್ಯಾರೇಜುಗಳಿಗೆ ತೆರಳಿ ಕೆಲಸಗಾರರ ಸಹಾಯದಿಂದ ಸಣ್ಣ ಸಣ್ಣ ಬಿಡಿ ಭಾಗಗಳನ್ನು ತಮಗೆ ಬೇಕಾದ ರೀತಿಯಲ್ಲಿ ಮಾರ್ಪಾಡು ಮಾಡಿಕೊಂಡು ಬೈಕ್‌ಗೆ ಅಳವಡಿಸಿದರು.

 

ಹೀಗೆ ಸುಮಾರು ಒಂದೂವರೆ ತಿಂಗಳ ಸತತ ಶ್ರಮದ ನಂತರ ಈ ಬೈಕ್ ಪೂರ್ಣವಾಗಿ ಸಿದ್ಧವಾಗಿದೆ. ಮೇಜರ್ ಗೌತಮ್ ತಮ್ಮ ಕೆಲಸದ ನಡುವೆ ದೊರೆಯುತ್ತಿದ್ದ ಬಿಡುವಿನ ಅವಧಿಯನ್ನು ಇದಕ್ಕಾಗಿಯೇ ವಿನಿಯೋಗಿಸಿದ್ದಾರೆ. ಇದಕ್ಕಾಗಿ ಖರ್ಚು ಮಾಡುವ ಹಣದ ಲೆಕ್ಕ ಅವರಲ್ಲಿಲ್ಲ.ಬೈಕ್ ಶಿಕ್ಷಣ

ಗೌತಮ್ ಕೇವಲ ಮಗನಿಗೆ ಷೋಕೇಸ್ ಪೀಸ್ ಆಗಿ ಇಟ್ಟುಕೊಳ್ಳಲು ಈ ಬೈಕ್ ನಿರ್ಮಿಸಿಲ್ಲ. ಇದನ್ನು ಸಾಮಾನ್ಯ ಬೈಕ್‌ಗಳಂತೆಯೇ ಚಲಾಯಿಸಬಹುದು. ಮೂಲ ಡುಕಾಟಿ ಬೈಕ್ 800 ಸಿಸಿ ಹಾಗೂ 90 ಬಿಎಚ್‌ಪಿ ಸಾಮರ್ಥ್ಯ ಹೊಂದಿದೆ. ಗೌತಮ್ ವಿನ್ಯಾಸದ ಈ ಬೈಕ್ ಸುಮಾರು 45 ಕೆ.ಜಿ. ತೂಕವಿದ್ದು, 50 ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿದೆ.ಒಂದು ಲೀಟರ್ ಸಂಗ್ರಹಣಾ ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ಇದೆ. ಬಜಾಜ್ ಸನ್ನಿ ಎಂಜಿನ್ ಬಳಸಿದ್ದು, ಬೈಕ್ ಕಡಿಮೆ ತೂಕವಿರುವ ಕಾರಣ ನೂರು ಕಿ.ಮೀ. ವರೆಗೂ ಈ ಬೈಕ್ ಮೈಲೇಜ್ ನೀಡಬಲ್ಲದು ಎನ್ನುತ್ತಾರೆ ಗೌತಮ್.ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಬೈಕ್‌ನ ಕಾರ್ಬೋರೇಟರ್ ಹಾಗೂ ಎಕ್ಸಲರೇಟರ್ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ. ಗೇರ್‌ಗಳಿಗೆ ಬದಲಾಗಿ ಬರಿ ಎಕ್ಸಲರೇಟರ್ ಅನ್ನು ಬಳಸಿ ಇದನ್ನು ಚಲಾಯಿಸುವಂತೆ ಮಾರ್ಪಾಡು ಮಾಡಲಾಗಿದೆ.

 

ಹೀಗಾಗಿ ಮಕ್ಕಳು ಇದನ್ನು ಸುಲಭವಾಗಿ ಇದನ್ನು ಚಲಾಯಿಸಬಹುದು.`ಇವತ್ತಿನ ಮಕ್ಕಳು ಕೇವಲ ಕಂಪ್ಯೂಟರ್ ಗೇಮ್‌ಗಳಲ್ಲೇ ಹೆಚ್ಚಿನ ಕಾಲ ಕಳೆಯುತ್ತಾರೆ. ಅವರಿಗೆ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ, ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶವೇ ಸಿಗುತ್ತಿಲ್ಲ.ಹೀಗಾಗಿ ಮಗನಿಗೆ ಎಳೆಯ ವಯಸ್ಸಿನಲ್ಲಿಯೇ ಪ್ರಾಯೋಗಿಕ ಅನುಭವ ನೀಡುವ ದೃಷ್ಟಿಯಿಂದ ಇದನ್ನು ವಿನ್ಯಾಸಗೊಳಿಸಿದ್ದೇನೆ. ಸೈಕಲ್ ಓಡಿಸುವಂತೆಯೇ ಇದನ್ನು ಓಡಿಸಬಹುದಾಗಿದೆ~ ಎನ್ನುತ್ತಾರೆ ಗೌತಮ್.ಇವತ್ತಿನ ಯುವಕರು 16-18 ವರ್ಷಕ್ಕೇ ಬೈಕ್ ತೆಗೆದುಕೊಳ್ಳುತ್ತಾರೆ. ಆದರೆ ಅವರಿಗೆ ರೈಡಿಂಗ್ ಬಗ್ಗೆ ಸಾಮಾನ್ಯ ಜ್ಞಾನ ಕೂಡ ಇರುವುದಿಲ್ಲ. ಚಾಲನೆಯ ನಿಯಮಗಳು, ಶಿಸ್ತು ತಿಳಿದಿರುವುದಿಲ್ಲ. ನನ್ನ ಮಗ ಬೈಕ್ ಓಡಿಸುವ ಮೊದಲೇ ಇದೆಲ್ಲವನ್ನೂ ತಿಳಿದುಕೊಳ್ಳಬೇಕು ಎನ್ನುವ ಬಯಕೆ ನನ್ನದು.ಅವನಿಗೆ ಹತ್ತು ವರ್ಷ ತುಂಬುವ ಮೊದಲೇ ಆತ ಬೈಕ್ ಕಾರ್ಯನಿರ್ವಹಿಸುವ ಬಗ್ಗೆ, ಅದರ ಎಂಜಿನ್ ಬಗ್ಗೆ ತಿಳಿದುಕೊಂಡಿರುತ್ತಾನೆ. ಇದರಿಂದ ಮುಂದೆ ಆತನಿಗೆ ವಿಜ್ಞಾನದಲ್ಲೂ ಆಸಕ್ತಿ ಬೆಳೆಯಬಹುದು ಎನ್ನುವ ವಿಶ್ವಾಸ ಅವರದ್ದು.`ಈಗಾಗಲೇ ಚಂಡೀಗಢದಲ್ಲಿ ನಮ್ಮ ಮನೆಯ ಅಕ್ಕಪಕ್ಕದ ಅನೇಕ ಮಕ್ಕಳು ಈ ಬೈಕ್ ಅನ್ನು ಓಡಿಸಿದ್ದಾರೆ.

 

ಸಾಕಷ್ಟು ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಇದರ ಪ್ರಾಯೋಗಿಕ ಪರೀಕ್ಷೆ ಕೂಡ ಆಗಿಹೋಗಿದೆ. ಅಪ್ಪ-ಅಮ್ಮನ ಕಣ್ಗಾವಲಿನಲ್ಲಿ ರಸ್ತೆಗಳಲ್ಲಿ ಮಕ್ಕಳು ಇದನ್ನು ಸುಲಭವಾಗಿ ಓಡಿಸಬಹುದು. ವೇಗದ ಪ್ರಮಾಣ ತಗ್ಗಿಸಿರುವುದರಿಂದ ಜೋರಾಗಿ ಓಡಿಸುವ ಭಯ ಕೂಡ ಇಲ್ಲ.ಆದರೂ ಮಕ್ಕಳು ತುಂಟರು. ಹೀಗಾಗಿ ಇದಕ್ಕೆ ರಿಮೋಟ್ ಅಳವಡಿಸಿ, ಬೇಕೆಂದಾಗ ಅದರ ಚಾಲನೆಯನ್ನು ಪೋಷಕರು ನಿಯಂತ್ರಿಸುವಂತೆ ಮಾಡಲು ಸಹ ಯೋಜಿಸಿದ್ದೇನೆ~ ಎನ್ನುತ್ತಾರೆ ಗೌತಮ್.

 ಚಿತ್ರಗಳು: ಎಂ.ಆರ್. ಮಂಜುನಾಥ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.