ಹೆಡಗಿಮದ್ರಾ ತಲುಪಿದ ಪಾದಯಾತ್ರೆ
ಯಾದಗಿರಿ: ಅಬ್ಬೆತುಮಕೂರಿನ ಸಿದ್ಧಸಂಸ್ಥಾನ ಮಠದ ಗಂಗಾಧರ ಸ್ವಾಮೀಜಿ ನೇತೃತ್ವದಲ್ಲಿ ಗುಲ್ಬರ್ಗ ಜಿಲ್ಲೆ ಗಂವ್ಹಾರದಿಂದ ಆರಂಭವಾಗಿರುವ ಪರಂಪರಾ ಪಾದಯಾತ್ರೆ ಬುಧವಾರ ಸಂಜೆ ತಾಲ್ಲೂಕಿನ ಹೆಡಗಿಮದ್ರಾ ಗ್ರಾಮಕ್ಕೆ ತಲುಪಿದೆ.
ಅಣಬಿ, ಪರಶಿ ಶಿರವಾಳ ಸೀಮೆ ಮೂಲಕ ಸನ್ನತ್ತಿಗೆ ಆಗಮಿಸಿದ ಪಾದಯಾತ್ರೆಯು, ಸನ್ನತಿ ಚಂದ್ರಲಾಂಬಾ ದೇವಸ್ಥಾನ ತಲುಪಿತು. ಅಲ್ಲಿ ಗಂಗಾಧರ ಶ್ರೀಗಳು ದೇವಿಗೆ ಕುಂಕುಮಾರ್ಚನೆ ನೆರವೇರಿಸಿದರು. ಅಲ್ಲಿಂದ ಸಾಗಿದ ಪಾದಯಾತ್ರೆ ಕನಗಾನಹಳ್ಳಿ, ಉಳವಂಡಗೇರಾ ತಾಂಡಾ, ಬನ್ನಟ್ಟಿ ಮೂಲಕ ತಳಕ್ ಗ್ರಾಮ ಪ್ರವೇಶಿಸಿತು. ಗ್ರಾಮದ ಜನರು ಸಂಭ್ರಮದಿಂದ ಪಾದಯಾತ್ರೆಯನ್ನು ಸ್ವಾಗತಿಸಿದರು. ಪಾದಯಾತ್ರೆ ನೆಪದಲ್ಲಿ ಪ್ರತಿ ವರ್ಷವೂ ಜಾತ್ರೆಯನ್ನೇ ನಡೆಸಿಕೊಂಡು ಬರಲಾಗುತ್ತಿದ್ದು, ಈ ಬಾರಿಯೂ ಸಡಗರದಿಂದ ಗ್ರಾಮದ ಜನತೆ ಉತ್ಸವ ನಡೆಸಿದರು.
ತಳಕ್ ಗ್ರಾಮದಿಂದ ಮುಂದುವರಿದ ಪಾದಯಾತ್ರೆ, ಹೆಡಗಿಮದ್ರಾ ತಲುಪುತ್ತಲೇ ಭಕ್ತರ ಸಂಭ್ರಮ ಎಲ್ಲೆ ಮೀರಿತ್ತು. ಇಡೀ ಗ್ರಾಮದ ಜನತೆ ಭಕ್ತಿ, ಶ್ರದ್ಧೆಗಳಿಂದ ಗ್ರಾಮದ ತುಂಬೆಲ್ಲ ಮೆರವಣಿಗೆ ನಡೆಸಿ, ಶ್ರೀಗಳನ್ನು ಗೌರವಿಸಿದರು. ಅಲ್ಲಿನ ಕ್ಷೇತ್ರನಾಥ ಶಾಂತ ಶಿವಯೋಗಿಶ್ವರ ಮಂದಿರದಲ್ಲಿ ನೆರೆದ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದ ಶ್ರೀಗಳು, ವಿಶ್ವಾರಾಧ್ಯರು ಅಗಣಿತ ಮಹಿಮಾಶಾಲಿಯಾಗಿದ್ದು, ಅವರ ಕೃಪಾಶೀರ್ವಾದದಿಂದ ಸಕಲರಿಗೂ ಲೇಸು ಉಂಟಾಗುತ್ತದೆ ಎಂದು ನುಡಿದರು.
ಗ್ರಾಮದ ರಾಮರೆಡ್ಡಿ ಸಾಹುಕಾರ, ಮಲ್ಲರಡ್ಡಿ ಅರಕೇರ ಅವರು ಪಾದಯಾತ್ರಾರ್ಥಿಗಳಿಗಾಗಿ ಉಪಹಾರ ಮತ್ತು ಪ್ರಸಾದ ವ್ಯವಸ್ಥೆ ಕಲ್ಪಿಸಿದ್ದರು. ಪ್ರಸಾದ ಸ್ವೀಕರಿಸಿದ ಭಕ್ತ ಸಮೂಹ ಗ್ರಾಮದ ಶಾಂತ ಶಿವಯೋಗಿ ಮಠದಲ್ಲಿ ವಾಸ್ತವ್ಯ ಮಾಡಿದರು. ಗುರುವಾರ ಸಂಜೆ ತಾಲ್ಲೂಕಿನ ಅಬ್ಬೆತುಮಕೂರಿಗೆ ಪಾದಯಾತ್ರೆ ಆಗಮಿಸಲಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.