ಗುರುವಾರ , ಫೆಬ್ರವರಿ 25, 2021
29 °C

ಹೊಸ ಖೈದಿ ಹಳೆ ಚಾಂದಿನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸ ಖೈದಿ ಹಳೆ ಚಾಂದಿನಿ

‘ಇದು ನೈಜ ಘಟನಾವಳಿಗಳನ್ನೇ ಆಧರಿಸಿ ಮಾಡುತ್ತಿರುವ ಸಿನಿಮಾ’ ಎಂದರು ನಿರ್ದೇಶಕ ಆರ್‌. ಗುರುದತ್‌. ಕಲ್ಪನೆಗಳಿಗಿಂತ ವಾಸ್ತವ ಸಂಗತಿಗಳೇ ಸಿನಿಮಾದಲ್ಲಿ ಹೆಚ್ಚಿರುತ್ತದೆ ಎನ್ನುವುದು ಅವರ ವಿವರಣೆ.ದಶಕಗಳ ಹಿಂದೆ ವಿಷ್ಣುವರ್ಧನ್‌ ‘ಖೈದಿ’ ಚಿತ್ರದಲ್ಲಿ ನಟಿಸಿದ್ದರು. ಇತ್ತೀಚೆಗೆ ಆ ಸಿನಿಮಾ ಮರು ಬಿಡುಗಡೆಯೂ ಆಗಿತ್ತು. ಗುರುದತ್‌ ನಿರ್ದೇಶಿಸುತ್ತಿರುವ ಚಿತ್ರದ ಹೆಸರೂ ‘ಖೈದಿ’. ಈ ಚಿತ್ರದಲ್ಲಿ ಹಲವು ವಿಶೇಷಗಳ ಲಾಭವನ್ನು ಪಡೆದುಕೊಳ್ಳುವ ಇರಾದೆ ಗುರುದತ್‌ ಅವರದು.‘ಎ’, ‘ಎಕೆ 47’ ಚಿತ್ರಗಳಲ್ಲಿ ನಟಿಸಿದ್ದ ಚಾಂದಿನಿ ಒಂದೂವರೆ ದಶಕದ ಬಳಿಕ ಮತ್ತೆ ಚಿತ್ರರಂಗಕ್ಕೆ ನಾಯಕಿಯಾಗಿಯೇ ಮರಳಿದ್ದಾರೆ. ‘ಖೈದಿ’ಯ ‘ತಾಳೆ ಹೂವ ಪೊದೆಯಿಂದ...’ ಜನಪ್ರಿಯ ಹಾಡನ್ನು ರೀಮಿಕ್ಸ್‌ ಮಾಡಿ ಇಲ್ಲಿ ಬಳಸಲಾಗುತ್ತಿದೆ.ಗುರುದತ್‌ ಈ ಹಿಂದೆ ‘ಸೈಕೋ’ ಚಿತ್ರಕ್ಕೆ ಬಂಡವಾಳ ಹೂಡಿದ್ದವರು. ಹಲವು ಕಾರಣಗಳಿಂದ ಮತ್ತೆ ಸಿನಿಮಾ ಕೈಗೆತ್ತಿಕೊಳ್ಳದಿದ್ದ ಅವರು ‘ಖೈದಿ’ಯ ಮೂಲಕ ನಿರ್ದೇಶಕನ ಟೊಪ್ಪಿಯನ್ನು ಧರಿಸುತ್ತಿದ್ದಾರೆ.‘ಖೈದಿ’ಯ ಉಪಶೀರ್ಷಿಕೆ ‘ಸಿಸ್ಟಮ್ ಎರರ್’. ಅದರ ಅರ್ಥವೇ ಹೇಳುವಂತೆ ವ್ಯವಸ್ಥೆಯಲ್ಲಿನ ಲೋಪದೋಷಗಳು, ಓರೆಕೋರೆಗಳನ್ನು ವಿಡಂಬಿಸುವ ಮತ್ತು ಮುಗ್ಧರನ್ನು ವ್ಯವಸ್ಥೆ ಹೇಗೆ ಬಲಿಪಶುಗಳನ್ನಾಗಿಸುತ್ತದೆ ಎನ್ನುವ ಸಂಗತಿಗಳನ್ನು ಸಿನಿಮಾ ತೆರೆದಿಡುತ್ತದೆ.‘ಸೈಕೋ’, ‘ನಮಸ್ತೆ ಇಂಡಿಯಾ’ ಚಿತ್ರಗಳಲ್ಲಿ ನಟಿಸಿದ್ದ ಧನುಷ್, ಮೊದಲ ಬಾರಿಗೆ ಪೂರ್ಣಪ್ರಮಾಣದ ನಾಯಕರಾಗಿ ನಟಿಸುತ್ತಿದ್ದಾರೆ. ಸ್ಲಂನಲ್ಲಿ ಬೆಳೆಯುವ ಜಾಲಿ ಹುಡುಗನ ಪಾತ್ರ ಅವರದು. ತಮ್ಮ ಕನಸಿನ ಪ್ರಾಜೆಕ್ಟ್‌ ಇದು ಎಂದು ಪುಳಕಿತರಾದರು ಅವರು.ನಟಿ ಚಾಂದಿನಿ ಮಾತಿನಲ್ಲಿ ಇಂಗ್ಲಿಷ್‌ ಹೆಚ್ಚಿದ್ದರೂ ಕನ್ನಡದೆಡೆಗಿನ ಅಭಿಮಾನವೇ ತುಂಬಿತ್ತು. ಚಿತ್ರರಂಗ­ದಲ್ಲಿನ ಹಳೆಯ ಒಡನಾಟಗಳು, ನಂತರ ಉತ್ತರ ದಿಕ್ಕಿನತ್ತ ಪಯಣಿಸಿ, ಅಲ್ಲಿ ಸಿನಿಮಾ ಹಂಚಿಕೆ, ಮಾರ್ಕೆಟಿಂಗ್‌, ಬೋಧನೆ ಇತ್ಯಾದಿಗಳಲ್ಲಿ ತೊಡಗಿದ್ದು ಮುಂತಾದ ವಿಚಾರಗಳನ್ನು ಅವರು ಹಂಚಿಕೊಂಡರು.ಕನ್ನಡದಲ್ಲಿ ಉತ್ತಮ ಚಿತ್ರಗಳು ಹಿಂದಿನಿಂದಲೂ ಬರುತ್ತಿವೆ. ಆದರೆ ಅದರ ಮಾರುಕಟ್ಟೆ ಸೀಮಿತವಾಗಿದೆ. ಈ ಕಾರಣಕ್ಕಾಗಿಯೇ ಚಿತ್ರಗಳು ಬೇರೆ ರಾಜ್ಯದವರಿಗೆ ತಲುಪುತ್ತಿಲ್ಲ. ನಮ್ಮ ಚಿತ್ರಗಳನ್ನು ಹೊರದೇಶಗಳಲ್ಲಿಯೂ ಬಿಡುಗಡೆ ಮಾಡುವಂತೆ ಆಗಬೇಕು ಎಂದು ಆಶಯ ವ್ಯಕ್ತಪಡಿಸಿದ ಚಾಂದಿನಿ, ಸ್ವತಃ ಆ ಕೆಲಸ ಮಾಡುವ ಉತ್ಸುಕತೆಯನ್ನೂ ತೋರಿದರು.ಚಿತ್ರತಂಡದ ಹೆಚ್ಚಿನವರು ಪರಭಾಷಿಗರು. ಅವರ ಆಯ್ಕೆಗೆ ಕಾರಣಗಳನ್ನು ನೀಡುತ್ತಲೇ ಅದನ್ನು ಸಮರ್ಥಿಸಿಕೊಂಡರು ನಿರ್ದೇಶಕ ಗುರುದತ್‌. ಕೇರಳ ಮೂಲದ ಜಸ್ಟಿನ್‌ ಮತ್ತು ಕನ್ನಡದವರಾದ ಉದಯ್‌ ಜೊತೆಗೂಡಿ ಸಂಗೀತ ಹೊಸೆಯುತ್ತಿದ್ದಾರೆ.ನಿರ್ಮಾಪಕರಾದ ಕಲಾ ಭಕ್ತ ಮತ್ತು ನಯನ ಶರತ್‌, ಛಾಯಾಗ್ರಾಹಕ ರಾಜಶೇಖರನ್‌ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.