ಶನಿವಾರ, ಮಾರ್ಚ್ 6, 2021
21 °C

‘ಬಸವಣ್ಣನ ತತ್ವ, ಸಂದೇಶ ದಾರಿದೀಪ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಬಸವಣ್ಣನ ತತ್ವ, ಸಂದೇಶ ದಾರಿದೀಪ’

ಉಡುಪಿ: ‘ಹನ್ನೆರಡನೇ ಶತಮಾನದಲ್ಲಿ ನಡೆದ ಸಾಮಾಜಿಕ, ಧಾರ್ಮಿಕ ಕ್ರಾಂತಿಗೆ ಬಸವಣ್ಣನವರು ಮೂಲ ಕಾರಣಕರ್ತರು. ಸಾರ್ವಕಾಲಿಕವಾದ ಅವರ ಸಂದೇಶ– ತತ್ವಗಳನ್ನು ಎಲ್ಲರಿಗೂ ಮಾರ್ಗದರ್ಶಕ ಮತ್ತು ದಾರಿದೀಪ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ ಹೇಳಿದರು.ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಹಾಗೂ ಮಹಾಜಗದ್ಗುರು ಬಸವಣ್ಣ ಧರ್ಮಾರ್ಥದತ್ತಿ ಜಿಲ್ಲಾ ಘಟಕ ನಗರದ ಮಹಾತ್ಮಾ ಗಾಂಧಿ ಸ್ಮಾರಕ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.ವಿಶ್ವದಲ್ಲಿಯೇ ದೊಡ್ಡ ವಿಚಾರವಾದಿ ಎಂದು ಬಸವಣ್ಣನವರನ್ನು ಗುರುತಿಸಲಾಗುತ್ತದೆ. ಸಮಾಜ­ವಾದ, ಸಮತಾವಾದಕ್ಕೆ ಅವರು ಬುನಾದಿ ಹಾಕಿದರು. ಆರಿಸ್ಟಾಟಲ್‌, ಪ್ಲೇಟೋ, ಕಾರ್ಲ್‌­ಮಾರ್ಕ್ಸ್‌ ಅವರ ಆದರ್ಶ ಸಮಾಜದ ಪರಿಕಲ್ಪನೆ­ಯನ್ನು ಬಸವಣ್ಣ 12ನೇ ಶತನಾಮದಲ್ಲಿಯೇ ಹೇಳಿ­ದ್ದರು. ಜನ ಸಾಮಾನ್ಯರಿಗೂ ಅರ್ಥವಾಗುವ ಅವರ ವಚನ ಸಾಹಿತ್ಯ ಪ್ರಜಾ ಸಾಹಿತ್ಯವಾಗಿತ್ತು ಎಂದರು.ಕಾಯಕದ ಮಹತ್ವನ್ನು ಅವರು ಹೇಳಿದರು. ಯಾವುದೇ ಕೆಲಸವನ್ನು ಮನಪೂರ್ವಕವಾಗಿ ಮಾಡ­ಬೇಕು ಎಂದಿದ್ದರು. ಅಲ್ಲದೆ ದಯಮೇ ಧರ್ಮದ ಮೂಲ ಎಂದೂ ತಿಳಿಸಿದ್ದರು. ಅಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ತನ್ನ ಬಣ್ಣಿಸಬೇಡ, ಅನ್ಯರಿಗೆ ಅಸಹ್ಯ ಪಡಬೇಡ ಎಂಬ ಅವರ ಸೂತ್ರಗಳು ಎಲ್ಲ ಕಾಲಕ್ಕೂ ಪ್ರಸ್ತುತ ಎಂದು ಹೇಳಿದರು.‘770 ವಿವಿಧ ಕಾಯಕದವರ ಜೊತೆಗೂಡಿ ಬಸವಣ್ಣನವರು ದೊಡ್ಡ ಆಂದೋಲನವನ್ನೇ ಮಾಡಿದರು. ಅವರ ತತ್ವಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಜಗನ್ನಾಥ ಪನಸಾಳೆ ಹೇಳಿದರು.ಸಾಹಿತಿ ದಿವಾನ್‌ ಕೇಶವ ಭಟ್‌ ಅವರು ವಿಶೇಷ ಉಪನ್ಯಾಸ ನೀಡಿದರು. ಡಿವೈಎಸ್ಪಿ ಡಾ. ಪ್ರಭುದೇವ ಬಿ ಮಾನೆ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಿ. ಪ್ರಾಣೇಶ್‌ ರಾವ್‌, ಮುಖ್ಯ ಯೋಜನಾಧಿಕಾರಿ ವಿಜಯ್‌ ಕುಮಾರ್‌ ಶೆಟ್ಟಿ, ಮಲ್ಪೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮೇಟಿಮುದಿಯಪ್ಪ, ನಾಗಲಿಂಗ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಅಂಕುಶ್‌ ಉಪಸ್ಥಿತರಿದ್ದರು.ಪ್ರೊ. ಸಂಧ್ಯಾರಾಣಿ ಮತ್ತು ತಂಡದವರು ಪ್ರಾರ್ಥನೆ ಮಾಡಿದರು. ಇಲಾಖೆಯ ತಾಂತ್ರಿಕ ಅಧಿಕಾರಿ ಪೂರ್ಣಿಮಾ ಸ್ವಾಗತಿಸಿದರು.  ಬೆಂಗಳೂರಿನ ವಿದ್ವಾನ್ ಪ್ರಸನ್ನ ಮಾಧವಗುಡಿ, ಉಡುಪಿಯ ವಿದ್ವಾನ್ ಮಹಾಬಲೇಶ್ವರ ಭಾಗವತ್ ಮತ್ತು ಬೆಂಗಳೂರಿನ ವಿದುಷಿ ಪೂರ್ಣಿಮ ಭಟ್ ಕುಲಕರ್ಣಿ ಅವರು ವಚನ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.