ಶನಿವಾರ, ಜನವರಿ 18, 2020
19 °C

‘ಯೋಜನೆ ಸದ್ಬಳಕೆಯಿಂದ ಆರ್ಥಿಕ ಸ್ವಾವಲಂಬನೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಮನಾಬಾದ್: ಆಹಾರ ಧಾನ್ಯ ಉತ್ಪಾದಿಸುವ ಸದುದ್ದೇಶದಿಂದ ಸರ್ಕಾರ ಜಾರಿಗೆ ತಂದ ವಿವಿಧ ಯೋಜನೆ­ಗಳನ್ನು ಸದ್ಬಳಕೆ ಮಾಡಿ­ಕೊಂಡು ಅಧಿಕ ಇಳುವರಿ ತೆಗೆಯುವ ಮೂಲಕ  ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ವೀರಣ್ಣ ಎಚ್‌.ಪಾಟೀಲ ರೈತರಿಗೆ ಸಲಹೆ ನೀಡಿದರು.  ತಾಲ್ಲೂಕಿನ ಸಿತಾಳಗೇರಾ ಗ್ರಾಮದಲ್ಲಿ ಕೃಷಿ ಇಲಾಖೆ ಗುರುವಾರ ಹಮ್ಮಿಕೊಂಡಿದ್ದ ಕಡಲೆ ಬೆಳೆ ಸಮಗ್ರ ಪೀಡೆ ನಿರ್ವಹಣೆ ಕಿಟ್‌ ವಿತರಣಾ ಕಾರ್ಯಕ್ರಮ ಹಾಗೂ ಸುರಕ್ಷಿತ ಕೀಟನಾಶಕ ಬಳಕೆ ವಿಧಾನ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತ­ನಾಡಿದ ತಾಲ್ಲೂಕು ಪಂಚಾಯಿತಿ ಸದಸ್ಯ ಬಾಬುರಾವ ಎಸ್‌.ಟೈಗರ್‌ ,­ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಚುನಾವಣಾ ಪೂರ್ವದಲ್ಲಿ ರೈತರಿಗೆ ನೀಡಿದ್ದ ಬಹುತೇಕ ಭರವಸೆಗಳನ್ನು ಈಡೇರಿಸಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ರೈತರಿಗೆ ಶೇ 90ರಷ್ಟು ರಿಯಾಯ್ತಿ ದರದಲ್ಲಿ, ಇತರೆ ರೈತರಿಗೆ ಶೇ 75ರಷ್ಟು ರಿಯಾಯ್ತಿ ದರದಲ್ಲಿ ವಿವಿಧ ಕೃಷಿ ಸಾಮಗ್ರಿಗಳನ್ನು ವಿತರಿಸುತ್ತಿದ್ದು,  ಸಿತಾಳಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಪ್ರತಿ ರೈತರಿಗೆ ಎರಡು ಕಿಟ್‌ಗಳಂತೆ ಒಟ್ಟು 256 ರೈತರಿಗೆ ಕಿಟ್‌ ವಿತರಿಸಲಾಗಿದೆ ಎಂದರು.ಸಹಾಯಕ ಕೃಷಿ ನಿರ್ದೇಶಕ ಡಾ.ಎಂ.ಪಿ ಮಲ್ಲಿಕಾರ್ಜುನ ಮಾತ­ನಾಡಿ, ಕಬ್ಬಿನ ಇಳುವರಿ ಸಂಬಂಧ ಅನುಸರಿಸಬೇಕಾದ 12 ವಿನೂತನ ಅಂಶ, ಅಧಿಕ ತೊಗರಿ ಇಳುವರಿಗೆ ಸಂಬಂಧಿಸಿದ 14ಅಂಶ, ಅಧಿಕ ಸೋಯಾ ಅವರೆ ಇಳುವರಿ ಕುರಿತು 12ಅಂಶಗಳು ಹಾಗೂ ಮಣ್ಣಿನ ಸಂರಕ್ಷಣೆ ಹಾಗೂ ಅಧಿಕ ಉಳುವರಿ ಸಂಬಂಧ ಕಾಂಪೊಸ್ಟ್‌ ತಯಾರಿಕೆ ಹಾಗೂ ಬಳಕೆ ವಿಧಾನ ಕುರಿತು ವಿವರಿಸಿದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಸದಸ್ಯ ಮಹಾಂತಯ್ಯ ತೀರ್ಥ, ಕಾರ್ಯಾಗಾರ­ದಲ್ಲಿನ ಮಾಹಿ­ತಿ­ಯನ್ನು  ರೈತರು ಕೃಷಿ ಚಟುವಟಿಕೆ­ಯಲ್ಲಿ ಬಳಸಿ­ಕೊಂಡಾಗ ಮಾತ್ರ ಅಧಿಕಾರಿಗಳ ಶ್ರಮ ಸಾರ್ಥಕ ಎಂದರು.ಕೃಷಿಕ ಸಮಾಜ ಅಧ್ಯಕ್ಷ ವಿಶ್ವನಾಥ ಪಾಟೀಲ ಮಾಡ್ಗುಳ್‌, ಗ್ರಾಮ ಪಂಚಾ­ಯಿತಿ ಅಧ್ಯಕ್ಷೆ ಮಹಾನಂದಾ ಬಾಬುರಾವ, ಸದಸ್ಯರುಗಳಾದ ಭೀಮರಾವ, ಮುದುಕಪ್ಪ, ಶಿವಪುತ್ರಪ್ಪ, ಸುನಂದಾ, ಬಸವರಾಜ ಮಾಳಗೆ, ಶಿವಾನಂದ, ವಿಜಯಕುಮಾರ ಪಾಟೀಲ, ಹರೀಶಕುಮಾರ ವೇದಿಕೆಯಲ್ಲಿ ಇದ್ದರು. ಸುಭಾಷ ಗಂಗಾ ನಿರೂಪಿಸಿದರು. ರೈತ ಸಂಪರ್ಕ ಕೇಂದ್ರ ಅಧಿಕಾರಿ ಪಾಂಡುರಂಗ ವಂದಿಸಿದರು.

ಪ್ರತಿಕ್ರಿಯಿಸಿ (+)