ಬುಧವಾರ, ಜೂನ್ 3, 2020
27 °C

10ನೇ ಜಿ.ಕ.ಸಾ. ಸಮ್ಮೇಳನ ಅಧ್ಯಕ್ಷರಾಗಿ ಹ.ಕ.ರಾಜೇಗೌಡ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

10ನೇ ಜಿ.ಕ.ಸಾ. ಸಮ್ಮೇಳನ ಅಧ್ಯಕ್ಷರಾಗಿ ಹ.ಕ.ರಾಜೇಗೌಡ ಆಯ್ಕೆ

ಮಂಡ್ಯ: ನಾಗಮಂಗಲದ ಆದಿಚುಂಚನಗಿರಿಯಲ್ಲಿ ಜಿಲ್ಲಾ ಮಟ್ಟದ ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನ ನ. 6 ಮತ್ತು 7ರಂದು ನಡೆಯಲಿದ್ದು, ಸಮ್ಮೇಳನಾಧ್ಯಕ್ಷರಾಗಿ ಜಾನಪದ ವಿದ್ವಾಂಸ ಡಾ. ಹ.ಕ.ರಾಜೇಗೌಡ ಅವರು ಆಯ್ಕೆಯಾಗಿದ್ದಾರೆ.ನಾಗಮಂಗಲದಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ ನುಡಿಹಬ್ಬದ ಕಾರ್ಯಕ್ರಮವನ್ನು ವೈಭವಯುತ, ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಅಧ್ಯಕ್ಷ ಡಾ. ಎಚ್.ಎಸ್.ಮುದ್ದೇಗೌಡ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಚುಂಚನಗರಿ ಕ್ಷೇತ್ರದ ಪೀಠಾಧ್ಯಕ್ಷರಾದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳು ಸಮ್ಮೇಳನದ ಎರಡು ದಿನವೂ ಅನ್ನ ದಾಸೋಹ ಮತ್ತು ವಾಸ್ತವ್ಯದ ವ್ಯವಸ್ಥೆಯನ್ನು ಕಲ್ಪಿಸಲಿದ್ದಾರೆ. ಸಮ್ಮೇಳನದ ಸಿದ್ಧತೆಗಳು ಅಂತಿಮ ಹಂತದಲ್ಲಿದೆ ಎಂದು ಹೇಳಿದರು.ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದ ಡಾ.ಚಂದ್ರಶೇಖರ ಕಂಬಾರ ಅವರನ್ನು ಸಮ್ಮೇಳನ ಉದ್ಘಾಟಿಸಲು ಆಹ್ವಾನಿಸಲಾಗಿದ್ದು, ಒಪ್ಪಿಗೆ ಸೂಚಿಸಿದ್ದಾರೆಂದರು. ರಾಜ್ಯೋತ್ಸವ ಸಂದರ್ಭದಲ್ಲೇ ಕನ್ನಡ ಹಬ್ಬವನ್ನು ಹಮ್ಮಿಕೊಂಡಿರುವುದು ಸಂಭ್ರಮವನ್ನು ಇಮ್ಮಡಿಗೊಳಿಸಿದೆ ಎಂದರು.ಪ್ರಸಕ್ತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ವಿಚಾರಗೋಷ್ಠಿಗಳು, ನಾಟಕ, ಕವಿಗೋಷ್ಠಿ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಮಕ್ಕಳ ಅಭಿರುಚಿಗೆ ಪೂರಕವಾದ ಕಾರ್ಯಕ್ರಮವಿದೆ. ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಹಲವು ಜಾನಪದ ಕಲಾ ತಂಡಗಳು ಪಾಲ್ಗೊಳ್ಳಲಿವೆ ಎಂದರು.ಸಾಹಿತ್ಯ ಕ್ಷೇತ್ರದಲ್ಲಿ ಉನ್ನತ ಸಾಧನೆಗೈದ ನಾಗಮಂಗಲ ತಾಲ್ಲೂಕಿನವರೇ ಆದ `ಕನ್ನಡದ ಕಣ್ವ~ ಬಿ.ಎಂ.ಶ್ರೀಕಂಠಯ್ಯ, ಜಾನಪದ ವಿದ್ವಾಂಸ ಜಿ.ಶಂ.ಪರಮಶಿವಯ್ಯ ಹಾಗೂ ಡಾ. ಎಚ್.ಎಲ್.ನಾಗೇಗೌಡರ ಹೆಸರಿನಲ್ಲಿ ಪ್ರಮುಖ ದ್ವಾರಗಳನ್ನು ನಿರ್ಮಿಸಲಾಗುವುದೆಂದರು.ಸಮ್ಮೇಳನದ ನೆನಪಿಗಾಗಿ ಇದೇ ಸಂದರ್ಭದಲ್ಲಿ ಜಿಲ್ಲೆಯ ಪ್ರಾತಿನಿಧಿಕ ಕಥಾ ಸಂಕಲನ ಕೃತಿಯನ್ನು ಬಿಡುಗಡೆ ಮಾಡಲಾಗುವುದು. ಜಿಲ್ಲೆಯ ಸಾಹಿತಿಗಳು, ಯುವಜನರಿಂದ ಆಹ್ವಾನಿಸಿದ್ದ ಕಥೆಗಳ ಪೈಕಿ ಉತ್ತಮವಾದ ಕಥೆಗಳು ಈ ಸಂಕಲನ ಕೃತಿಯಲ್ಲಿರುತ್ತದೆ ಎಂದು ಹೇಳಿದರು.ಅಲ್ಲದೆ, ಸಮ್ಮೇಳನ ಸ್ಥಳಕ್ಕೆ ಆಗಮಿಸಲು ಅನುಕೂಲವಾಗುವಂತೆ ಎಲ್ಲ ತಾಲ್ಲೂಕು ಕೇಂದ್ರದಿಂದ ಬಸ್ ಸೌಲಭ್ಯ ಕಲ್ಪಿಸಲು ವ್ಯವಸ್ಥೆ ಮಾಡಲಾಗಿದೆ. ಎಲ್ಲ ಜನ ಪ್ರತಿನಿಧಿಗಳನ್ನು ಒಳಗೊಂಡಂತೆ ಸ್ವಾಗತ ಸಮಿತಿ ರಚಿಸಿದ್ದು, ಬಾಲಗಂಗಾಧರನಾಥ ಸ್ವಾಮೀಜಿ ಮಹಾಪೋಷಕರಾಗಿದ್ದಾರೆ ಎಂದರು.ಕಸಾಪ ಪದಾಧಿಕಾರಿಗಳಾದ ಎಂ.ಕೃಷ್ಣ, ಚನ್ನಸಂದ್ರ ಮಹದೇವು, ಕೃಷ್ಣ ಸ್ವರ್ಣಸಂದ್ರ, ಬಲ್ಲೇನಹಳ್ಳಿ ಮಂಜುನಾಥ್, ಕೆ.ಪ್ರಹ್ಲಾದ್‌ರಾವ್ ಹಾಜರಿದ್ದರು.ವ್ಯಕ್ತಿ ಪರಿಚಯ

ಮಂಡ್ಯ: ನಾಗಮಂಗಲ ತಾಲ್ಲೂಕು ಹನುಮನಹಳ್ಳಿಯ ಕೃಷಿಕ ಕುಟುಂಬದ ಹ.ಕ.ರಾಜೇಗೌಡರು ನಾಡಿನ ಪ್ರಮುಖ ಸಂಶೋಧ ಕರಲ್ಲಿ ಒಬ್ಬರು.  ಕನ್ನಡ ಸ್ನಾತಕೋತ್ತರ ಪದವೀಧ ರರಾದ  ಅವರು ಬೆಂಗಳುರು, ಕನಕಪುರದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದು,  ಬಳಿಕ ಮೈಸುರು ವಿಶ್ವವಿದಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂಶೋಧನಾ ವಿಭಾಗಕ್ಕೆ ಸೇರ್ಪಡೆಗೊಂಡರು.ಕುವೆಂಪು, ದೇಜಗೌ, ಹಾ.ಮಾ.ನಾಯಕ ಅವರ ಆತ್ಮೀಯ ವಲಯದಲ್ಲಿ ಗುರುತಿಸಿಕೊಂಡಿದ್ದ ರಾಜೇಗೌಡರು, ತಮ್ಮ ಸಂಶೋಧನಾ ಕೃತಿಗಳ ಮೂಲಕ ಸಾಹಿತ್ಯಕ ವಲಯದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.`ವಿವೇಚನೆ~ ವಿಮರ್ಶಾ ಕೃತಿ, ಜಗ್ತಿನ ಜನಪದ ಕಥೆಗಳು, ಮಳೆ ಹುಯ್ಯುತ್ತಿದೆ ಕಥಾ ಸಂಕಲನಗಳು, ಹಿಂದಿ, ಮರಾಠಿ, ತಮಿಳು,  ಮಲೆಯಾಳಂ, ಒರಿಯಾ, ಪಂಜಾಬಿ ಭಾಷೆಗಳ ಕಥೆಗಳ ಅನುವಾದ ಕೃತಿಯನ್ನು ತಂದಿದ್ದಾರೆ.ಜಿಲ್ಲೆಯಲ್ಲಿ ಪ್ರಮುಖರ ಅಭಿನಂದನಾ ಕೃತಿಗಳನ್ನು ತರುವಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು, 6 ವರ್ಷ ಕಾಲ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯರು, ಕರ್ನಾಟಕ ಕನ್ನಡ ಅಧ್ಯಾಪಕರ ಸಂಘದ ಅಧ್ಯಕ್ಷರು, ಸಂಶೋಧಕರ ಸಂಘದ ಅಧ್ಯಕ್ಷರು ಆಗಿದ್ದಾರೆ. 74ರ ಈ ವಯಸ್ಸಿನ್ಲ್ಲಲಿಯೂ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.