ಮಂಗಳವಾರ, ಮೇ 11, 2021
26 °C

13 ಸೇತುವೆ ಸಂಚಾರಕ್ಕೆ ಮುಕ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಮಹಾರಾಷ್ಟ್ರದಲ್ಲಿ ಮಳೆ ಕಡಿಮೆ ಆಗಿರುವುದರಿಂದ ಕೃಷ್ಣಾ ಹಾಗೂ ಮಲಪ್ರಭಾ ನದಿಯಲ್ಲಿ ನೀರಿನ ಹರಿವು ಗಣನೀಯವಾಗಿ ಕಡಿಮೆಯಾಗಿದ್ದು, ಜಿಲ್ಲೆಯ ಕುಡಚಿ ಸೇರಿದಂತೆ 13 ಸೇತುವೆಗಳು ಶನಿವಾರ ಸಂಚಾರಕ್ಕೆ ಮುಕ್ತವಾಗಿವೆ.ಮಲಪ್ರಭಾ ಅಣೆಕಟ್ಟೆಯಲ್ಲಿ ನೀರಿನ ಹೊರ ಹರಿವು 4,109 ಕ್ಯೂಸೆಕ್‌ಗೆ ಇಳಿದಿರುವುದರಿಂದ ರಾಮದುರ್ಗ ಪಟ್ಟಣ ಹಾಗೂ ಕೆಲವು ಗ್ರಾಮಕ್ಕೆ ನುಗ್ಗಿದ್ದ ನೀರು ಶನಿವಾರ ಇಳಿದಿದೆ. ಜೊತೆಗೆ ತಾಲ್ಲೂಕಿನ ನಾಲ್ಕು ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ.ರಾಜಾಪುರ ಬ್ಯಾರೇಜ್‌ನಿಂದ ಕೃಷ್ಣಾ ನದಿಗೆ 95,981 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ದೂಧಗಂಗಾ ಹಾಗೂ ವೇದಗಂಗಾ ನದಿಯ ಪ್ರವಾಹವೂ ನಿಧಾನ ಗತಿಯಲ್ಲಿ ಕಡಿಮೆಯಾಗುತ್ತಿದೆ.ರಾಯಬಾಗ ತಾಲ್ಲೂಕಿನ ಕುಡಚಿ ಸೇತುವೆ, ರಾಯಬಾಗ- ಚಿಂಚಲಿ ರಸ್ತೆ, ಹುಕ್ಕೇರಿ ತಾಲ್ಲೂಕಿನ ಸುಲ್ತಾನಪುರ ಸೇತುವೆ, ಅಥಣಿ ತಾಲ್ಲೂಕಿನ ಉಗಾರ ಬಿ.ಕೆ.- ಉಗಾರ ಕೆ.ಎಚ್. ರಸ್ತೆ, ಉಗಾರ ಬಿ.ಕೆ.- ಕುಸನಾಳ ರಸ್ತೆ, ಇಂಗಳಗಾಂವ- ತೀರ್ಥ ರಸ್ತೆ, ಸಪ್ತಸಾಗರ- ತೀರ್ಥ ರಸ್ತೆ, ಶಂಕ್ರಟ್ಟಿ- ಖವಟಕೊಪ್ಪ ರಸ್ತೆ, ರಾಮದುರ್ಗ ತಾಲ್ಲೂಕಿನ ಮುನವಳ್ಳಿ ಸಮೀಪದ ಸೇತುವೆ, ರಾಮದುರ್ಗ- ಬೆಳಗಾವಿ ರಸ್ತೆ, ರಾಮದುರ್ಗ- ಕೊಣ್ಣೂರು ರಸ್ತೆ, ಅವರಾದಿ- ಬೆನ್ನೂರ ಸೇತುವೆ, ರೊಕ್ಕದಕಟ್ಟಿ ಸೇತುವೆ ಹಾಗೂ ಸವದತ್ತಿ ತಾಲ್ಲೂಕಿನ ಮುನವಳ್ಳಿ ಸಮೀಪದ ಸೇತುವೆ ಸಂಚಾರಕ್ಕೆ ಮುಕ್ತವಾಗಿವೆ.ಚಿಕ್ಕೋಡಿ ತಾಲ್ಲೂಕಿನ 8, ಖಾನಾಪುರ ತಾಲ್ಲೂಕಿನ ಎರಡು, ಗೋಕಾಕ ತಾಲ್ಲೂಕಿನಲ್ಲಿ ಒಂದು ಸೇತುವೆ ಇನ್ನೂ ಮುಳುಗಿವೆ. ಬೆಳಗಾವಿ ತಾಲ್ಲೂಕಿನಲ್ಲಿ 8 ಮನೆಗಳು, ಹುಕ್ಕೇರಿ ತಾಲ್ಲೂಕಿನಲ್ಲಿ 8 ಹಾಗೂ ರಾಮದುರ್ಗ ತಾಲ್ಲೂಕಿನಲ್ಲಿ 5 ಮನೆಗಳು ಭಾಗಶಃ ಕುಸಿದಿರುವ ಬಗ್ಗೆ ವರದಿಯಾಗಿದೆ.ರಾಮದುರ್ಗ ವರದಿ

ರಾಮದುರ್ಗ ಪಟ್ಟಣದ ತುಂಬೆಲ್ಲ ಶುಕ್ರವಾರ ಉಕ್ಕಿ ಹರಿದ ಮಲಪ್ರಭೆ ಶನಿವಾರ ಬೆಳಿಗ್ಗೆ ಹೊತ್ತಿಗೆ ಸಂಪೂರ್ಣ ಇಳಿಮುಖವಾಗಿದ್ದು, ನೀರಿನಲ್ಲಿ ಮುಳುಗಿದ್ದ ಮನೆಗಳ ಜನರು ನಿಟ್ಟುಸಿರು ಬಿಡುವಂತಾಗಿದೆ.ಸವದತ್ತಿಯ ನವಿಲುತೀರ್ಥ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಅಗತ್ಯಕ್ಕಿಂತ ಹೆಚ್ಚಾಗಿ ಶೇಖರಣೆಗೊಂಡಿದ್ದರಿಂದ ಆ ನೀರನ್ನು ನದಿಗೆ ಬಿಡಲಾಗಿತ್ತು. ಹೀಗೆ ಬಿಟ್ಟ ನೀರಿನಿಂದಲೇ ರಾಮದುರ್ಗದಲ್ಲಿನ ಮಲಪ್ರಭೆ ನದಿಗೆ ಒಳ ಹರಿವು ಹೆಚ್ಚಾಗಿತ್ತು. ಇದರಿಂದ ಪಟ್ಟಣದ ಕೆಲವು ಸ್ಥಳಗಳಿಗೆ ಹಾಗೂ ತಾಲ್ಲೂಕಿನ ಹಲವು ಹಳ್ಳಿಗಳಿಗೆ ನೀರು ಹೊಕ್ಕು ಹಲವು ಕುಟುಂಬಗಳು ಆಸ್ತಿಪಾಸ್ತಿಗಳನ್ನು ಕಳೆದುಕೊಂಡಿದ್ದವು.ಮಲಪ್ರಭಾ ಜಲಾಶಯದಿಂದ ಶುಕ್ರವಾರ ನದಿಗೆ ಸುಮಾರು 12 ಸಾವಿರ ಕ್ಯೂಸೆಕ್ ನೀರನ್ನು ಹರಿ ಬಿಟ್ಟ ಪರಿಣಾಮ ಸಂಗಳ ಗ್ರಾಮದಲ್ಲಿ 5 ಮನೆಗಳು ಭಾಗಶಃ ಹಾನಿಗೀಡಾಗಿವೆ. ತಾಲ್ಲೂಕಿನಲ್ಲಿ ಸುಮಾರು 1306 ಹೆಕ್ಟೇರ್‌ನಲ್ಲಿ ಬೆಳೆದ ವಿವಿಧ ಬೆಳೆಗಳಿಗೆ ಹಾನಿಯಾಗಿದೆ ಎಂದು ತಹಸೀಲ್ದಾರ ಗೀತಾ ಕೌಲಗಿ ಮತ್ತು ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಪವಾರ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.ಚಿಕ್ಕೋಡಿ ವರದಿ

ನೆರೆಯ ಮಹಾರಾಷ್ಟ್ರದಲ್ಲಿ ಮಳೆ  ಆರ್ಭಟ ಕಡಿಮೆಯಾಗಿದ್ದು, ಅಲ್ಲಿಯ ವಿವಿಧ ಜಲಾಶಯಗಳಿಂದ ಹರಿದು ಬರುತ್ತಿದ್ದ ನೀರಿನ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹೀಗಾಗಿ ತಾಲ್ಲೂಕಿನಲ್ಲಿ ಕೃಷ್ಣಾ ಮತ್ತು ಉಪನದಿಗಳ ಪ್ರವಾಹ ಇಳಿಮುಖವಾಗಿದೆ.ಶನಿವಾರ ಮಹಾರಾಷ್ಟ್ರದಿಂದ ರಾಜಾಪುರ ಬ್ಯಾರೇಜು ಮೂಲಕ 95,981 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಕೃಷ್ಣಾ ಮತ್ತು ಉಪನದಿಗಳಾದ ದೂಧಗಂಗಾ, ವೇದಗಂಗಾ, ಪಂಚಗಂಗಾ ಮತ್ತು ಚಿಕುತ್ರಾ ನದಿಗಳು ಕ್ರಮೇಣ ಇಳಿಯತೊಡಗಿವೆ. ತಾಲ್ಲೂಕಿನಲ್ಲಿ ಎಂಟು ಸೇತುವೆಗಳು ಇನ್ನೂ ಮುಳುಗಡೆಯಾಗಿದ್ದು, ಸಂಚಾರಕ್ಕೆ ಜನ ಪರದಾಡುತ್ತಿದ್ದಾರೆ.ಮಹಾರಾಷ್ಟ್ರದ ಕೊಯ್ನಾದಲ್ಲಿ 14 ಮಿ.ಮೀ ಮಾತ್ರ ಮಳೆಯಾಗಿದ್ದು, ನವಜಾ, ವಾರಣಾ, ಮಹಾಬಳೇಶ್ವರಗಳಲ್ಲಿ ಮಳೆ ಬಿದ್ದಿಲ್ಲ ಎಂದು ತಾಲ್ಲೂಕು ಆಡಳಿತ ತಿಳಿಸಿದೆ.ರಾಯಬಾಗ ವರದಿ

ಕೃಷ್ಣಾ ನದಿಯ ಪ್ರವಾಹ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಕುಡಚಿ ಬಳಿಯ ರಸ್ತೆ ಸೇತುವೆ ಶನಿವಾರ ರಾತ್ರಿ ಸಂಚಾರಕ್ಕೆ ಮುಕ್ತವಾಗಿದೆ.ಸಂಜೆಯ ವೇಳೆಗೆ ಸೇತುವೆ ಮೇಲೆ ಸುಮಾರು ಒಂದು ಅಡಿಯಷ್ಟು ನೀರು ಇರುವಾಗಲೇ ಸ್ಥಳೀಯರು ಸೇತುವೆ ಮೇಲೆ ಸಂಚರಿಸಲು ಆರಂಭಿಸಿದ್ದರು.ಪ್ರವಾಹದ ಇಳಿಕೆಯು ಗಂಟೆಗೆ 9 ಸೆಂಟಿಮೀಟರ್‌ನಷ್ಟು ಆಗುತ್ತಿದೆ ಎಂದು ಜಲಮಾಪನಾ ಅಧಿಕಾರಿ ಎಸ್.ಎ. ಹಿರೇಕೋಡಿ ತಿಳಿಸಿದ್ದಾರೆ.ಅದೇ ರೀತಿ ತಾಲ್ಲೂಕಿನ ಚಿಂಚಲಿ ಬಳಿಯ ಹಾಲಹಳ್ಳದ ರಸ್ತೆ ಸೇತುವೆ ಸಹ ಶನಿವಾರ ಬೆಳಿಗ್ಗೆ ಸಂಚಾರಕ್ಕೆ ಮುಕ್ತವಾಗಿದೆ. ಕೃಷ್ಣಾ ನದಿಯ ಪ್ರವಾಹ ಇಳಿಕೆಯಾದ ಹಿನ್ನೆಲೆಯಲ್ಲಿ ನದಿ ತೀರದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.