ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Asia Cup: ಸಿರಾಜ್ ದಾಳಿಗೆ ಲಂಕಾ ದೂಳೀಪಟ, 5 ವರ್ಷಗಳ ಪ್ರಶಸ್ತಿ ಬರ ನೀಗಿಸಿದ ಭಾರತ

Published : 17 ಸೆಪ್ಟೆಂಬರ್ 2023, 23:31 IST
Last Updated : 17 ಸೆಪ್ಟೆಂಬರ್ 2023, 23:31 IST
ಫಾಲೋ ಮಾಡಿ
Comments

ಕೊಲಂಬೊ: ಭಾನುವಾರ ಮಧ್ಯಾಹ್ನ ಮಳೆ ಸುರಿದು ನಿಂತ ಮೇಲೆ ಭಾರತದ ಮೊಹಮ್ಮದ್ ಸಿರಾಜ್ ಮಿಂಚಿನ ದಾಳಿಗೆ  ಶ್ರೀಲಂಕಾ ತಂಡವು  ತತ್ತರಿಸಿತು.

ಆರ್‌.ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಸಿರಾಜ್ ಆರು ವಿಕೆಟ್‌ಗಳನ್ನು (ಸಿಕ್ಸರ್) ಪಟಪಟನೆ ಕಿತ್ತು ತಮ್ಮ ಬುಟ್ಟಿಗೆ ಹಾಕಿಕೊಂಡರು. ಇದರಿಂದಾಗಿ ಕೇವಲ 50 ರನ್‌ಗಳಿಗೆ ಆಲೌಟ್ ಆದ ಲಂಕಾ ತಂಡವು ಸೋಲಿನ ದವಡೆಗೆ ಸಿಲುಕಿತು. ಈ ಅಲ್ಪಮೊತ್ತದ ಗುರಿ ಬೆನ್ನಟ್ಟಿದ ಭಾರತ ತಂಡವು 10 ವಿಕೆಟ್‌ಗಳ ಜಯ ದಾಖಲಿಸಿತು. ಇಶಾನ್ ಕಿಶನ್ ಮತ್ತು ಶುಭಮನ್ ಗಿಲ್ ಅವರು ತಂಡವನ್ನು 6.1 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ ಗುರಿ ಮುಟ್ಟಿಸಿದರು.

ಐದು ವರ್ಷಗಳಿಂದ ಪ್ರಮುಖ ಟೂರ್ನಿಗಳಲ್ಲಿ ಎದುರಿಸಿದ್ದ ಪ್ರಶಸ್ತಿ ಬರವನ್ನು ನೀಗಿಸಿಕೊಂಡಿತು. 2018ರ ನಂತರ ಈಗ ಮತ್ತೊಮ್ಮೆ ಏಷ್ಯಾ ಕಿರೀಟ ಭಾರತದ ಮುಡಿಗೇರಿತು.

ಸ್ಪಿನ್ನರ್‌ಗಳಿಗೆ ನೆರವಾಗುವುದೆಂದು ನಿರೀಕ್ಷಿಸಲಾಗಿದ್ದ ಪಿಚ್‌ನಲ್ಲಿ ಟಾಸ್ ಗೆದ್ದ ಲಂಕಾ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ, ದಸುನ್ ಶನಕಾ ಬಳಗವು ಆಡಲು ಸಾಧ್ಯವಾಗಿದ್ದು ಕೇವಲ 15.2 ಓವರ್‌ಗಳನ್ನು ಮಾತ್ರ. ಎಲ್ಲ ಹತ್ತು ವಿಕೆಟ್‌ಗಳೂ ವೇಗಿಗಳ ಪಾಲಾದವು!

ಮೊದಲ ಓವರ್‌ನ ಮೂರನೇ ಎಸೆತದಲ್ಲಿಯೇ ಕುಶಾಲ ಪೆರೆರಾ ಅವರ ವಿಕೆಟ್ ಗಳಿಸಿದ ಬೂಮ್ರಾ ಖಾತೆ ತೆರೆದರು. ನಾಲ್ಕನೇ ಓವರ್‌ನಲ್ಲಿ ಸಿರಾಜ್ ಕೊಟ್ಟ ಪೆಟ್ಟಿಗೆ ಲಂಕಾ ತಂಡವು ಸುಧಾರಿಸಿಕೊಳ್ಳಲು ಸಾಧ್ಯವೇ ಆಗಲಿಲ್ಲ.

ಇದೊಂದೇ ಓವರ್‌ನಲ್ಲಿ ನಾಲ್ಕು ವಿಕೆಟ್‌ಗಳನ್ನು ಉರುಳಿಸಿದ ಸಿರಾಜ್ ಫುಟ್‌ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಗೋಲು ಹೊಡೆದು ಸಂಭ್ರಮಿಸುವ ರೀತಿಯಲ್ಲಿಯೇ ಕುಣಿದಾಡಿದರು. ಆದರೆ ಹ್ಯಾಟ್ರಿಕ್ (ಓವರ್‌: 3.1, 3.3, 3.4, 3.6) ಅವಕಾಶ ಕೈತಪ್ಪಿತು. 

ತಮ್ಮ ಎಸೆತಗಳಲ್ಲಿ ವೇಗಕ್ಕಿಂತ ಲೈನ್ ಮತ್ತು ಲೆಂಗ್ತ್‌ಗೆ ಹೆಚ್ಚು ಪ್ರಾಶಸ್ತ್ಯ ನೀಡಿದ ಸಿರಾಜ್ ಯಶಸ್ವಿಯಾದರು.  ಬ್ಯಾಟರ್‌ಗಳ ಡ್ರೈವ್‌ ಲೆಂಗ್ತ್‌ ಬೌಲಿಂಗ್ ಮಾಡಿದರು. ಆದರೆ, ಟೈಮಿಂಗ್‌ ಮಾಡುವ ಅವಕಾಶ ಕಡಿಮೆ ಇರುವಂತೆ ಎಸೆತಗಳನ್ನು ಪ್ರಯೋಗಿಸಿದರು. ಇದರಿಂದಾಗಿ ತಡಬಡಾಯಿಸಿದ ಬ್ಯಾಟರ್‌ಗಳು ಬೀಟ್ ಆಗಿ ಬೌಲ್ಡ್ ಆದರು. ಇಲ್ಲವೇ ಫೀಲ್ಡರ್‌ಗಳಿಗೆ ಕ್ಯಾಚಿತ್ತರು.

ಇದರಿಂದಾಗಿ ಲಂಕಾ ತಂಡವು ಕೇವಲ 12 ರನ್‌ಗಳಿಗೇ 6 ವಿಕೆಟ್‌ ಕಳೆದುಕೊಂಡಿತು. ಆರಂಭಿಕ ಬ್ಯಾಟರ್ ಪಥುಮ್ ನಿಸಾಂಕ, ಲಂಕಾ ಪರ ಅತಿ ಹೆಚ್ಚು ರನ್ ಗಳಿಸಿದ ಕುಶಾಲ ಮೆಂಡಿಸ್ (17 ರನ್) ಸದೀರ ಸಮರವಿಕ್ರಮ, ಚರಿತ ಅಸಲಂಕಾ ವಿಕೆಟ್‌ಗಳನ್ನು ಗಳಿಸಿದರು.

ನಂತರ ಮಧ್ಯಮಕ್ರಮಾಂಕದ ಬ್ಯಾಟರ್‌ಗಳಿಗೂ ಪೆಟ್ಟುಕೊಟ್ಟರು. ಧನಂಜಯ ಡಿಸಿಲ್ವಾ ಮತ್ತು ನಾಯಕ ಶನಕಾ ವಿಕೆಟ್‌ಗಳನ್ನೂ ತಮ್ಮದಾಗಿಸಿಕೊಂಡರು. ಇದರೊಂದಿಗೆ ಶ್ರೀಲಂಕಾ ಎದುರಿಗೆ ವೈಯಕ್ತಿಕ ಶ್ರೇಷ್ಠ ಬೌಲಿಂಗ್ ಸಾಧನೆ ಮಾಡಿದರು.

ಇನ್ನೊಂದು ಬದಿಯಲ್ಲಿ ಹಾರ್ದಿಕ್ ಪಾಂಡ್ಯ ಕೂಡ ಲಂಕಾ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ಇರದಂತೆ ನೋಡಿಕೊಂಡರು. ಕೆಳಕ್ರಮಾಂಕದ ಮೂರು ವಿಕೆಟ್‌ ಗಳಿಸಿ ಕೇಕೆ ಹಾಕಿದರು. ದುಶಾನ್ ಹೇಮಂತ (13 ರನ್) ಅಜೇಯರಾಗುಳಿದರು.

ಲಂಕಾ ತಂಡವು ಭಾರತದ ಎದುರು ಏಕದಿನ ಕ್ರಿಕೆಟ್‌ನಲ್ಲಿ ಗಳಿಸಿದ ಕನಿಷ್ಠ ಮೊತ್ತ ಇದಾಗಿದೆ.

ನಿರಾಶೆಯಲ್ಲಿ ಮುಳುಗಿದ ಲಂಕಾ ಅಭಿಮಾನಿಗಳು

ಶ್ರೀಲಂಕಾ ತಂಡವು ತನ್ನದೇ ತವರಿನಂಗಳದಲ್ಲಿ ಹೀನಾಯವಾಗಿ ಸೋಲುವುದನ್ನು ಕಂಡ ಅಭಿಮಾನಿಗಳು ಕಣ್ಣೀರುಧಾರೆ ಸುರಿಸಿದರು. ಸೂಪರ್ ಫೋರ್ ಹಂತದಲ್ಲಿ ಪಾಕಿಸ್ತಾನ ವಿರುದ್ಧ ರೋಚಕವಾಗಿ ಗೆದ್ದ ಲಂಕಾ ತಂಡವು ಫೈನಲ್ ಪ್ರವೇಶಿಸಿತ್ತು. ಅದರಿಂದಾಗಿ ಈ ಪಂದ್ಯದಲ್ಲಿಯೂ ಭಾರತಕ್ಕೆ ದಿಟ್ಟ ಪೈಪೋಟಿಯೊಡ್ಡುವ ನಿರೀಕ್ಷೆ ಇತ್ತು. ಆದರೆ ಮೊದಲ ಓವರ್‌ನಿಂದಲೇ ವಿಕೆಟ್‌ಗಳು ತರಗೆಲೆಗಳಂತೆ ಉದುರಿದವು. ಇದರಿಂದಾಗಿ ಗ್ಯಾಲರಿಯಲ್ಲಿದ್ದ ಲಂಕಾದ ಕೆಲವು ಅಭಿಮಾನಿಗಳು ಬೇಸರದಿಂದ ಮುಖಮುಚ್ಚಿಕೊಂಡು ಕುಳಿತರು. ಇನ್ನೂ ಕೆಲವರು ಕಣ್ಣೀರುಗರೆದರು. ಪಂದ್ಯ ವಿಳಂಬ ಟಾಸ್ ಆದ ಕೆಲವೇ ನಿಮಿಷಗಳ ನಂತರ ಮಳೆ ಸುರಿಯಿತು. ಇದರಿಂದಾಗಿ ಪಂದ್ಯವನ್ನು 40 ನಿಮಿಷ ತಡವಾಗಿ ಆರಂಭಿಸಲಾಯಿತು. ಈ ಟೂರ್ನಿಯ ಬಹುತೇಕ ಎಲ್ಲ ಪಂದ್ಯಗಳಲ್ಲಿ ಮಳೆ ಬಂದು ಕೆಲಹೊತ್ತಿನ ಆಟ ನಷ್ಟವಾಗಿತ್ತು. ಫೈನಲ್‌ ಕೂಡ ಪೂರ್ಣವಾಗಿ ಮಳೆಯಲ್ಲಿ ಕೊಚ್ಚಿಹೋಗುವ ಸಾಧ್ಯತೆ ಇತ್ತು. ಆದರೆ ಮಳೆ ಬೇಗನೆ ನಿಂತಿತು. ಆದರೆ ಸಿರಾಜ್ ಬೌಲಿಂಗ್‌ ದಾಳಿಗೆ ಲಂಕಾ ಕೊಚ್ಚಿಹೋಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT