ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲಿನ್ಯ ನಿಯಂತ್ರಣಕ್ಕೆ ‘ಎನ್‌ಝೈಮ್ ಮದ್ದು’

Last Updated 20 ಡಿಸೆಂಬರ್ 2018, 4:55 IST
ಅಕ್ಷರ ಗಾತ್ರ

ವಾಹನದ ಹೊಗೆಯಲ್ಲಿರುವ ಇಂಗಾಲ, ವಿಷಕಾರಿ ರಾಸಾಯನಿಕ ಅಂಶಗಳು ವಾತಾವರಣವನ್ನು ಹಾಳು ಮಾಡುತ್ತಿರುವುದು ಗೊತ್ತಿದೆ. ಇದನ್ನು ನಿಯಂತ್ರಿಸಲು ಪ್ರಮುಖ ಕಂಪನಿಗಳು ಇಂಧನಕ್ಕೆ ಬೆರೆಸುವ ಬ್ಯಾಕ್ಟೀರಿಯಾಗಳನ್ನೊಳಗೊಂಡ ಎನ್‌ಝೈಮ್‌ ತಯಾರಿಸಿವೆ.

ಜಪಾನ್‌ ಮೂಲದ ಸೋಲ್‌ಟ್ರಾನ್‌, ಅಮೆರಿಕದ ಸ್ಟಾರ್‌ ಟ್ರಾನ್‌, ಗಮ್‌ಔಟ್‌... ಈ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಬ್ರಾಂಡ್‌ಗಳು. ಸದ್ಯ ಸೋಲ್ಟ್ರಾನ್‌ ಕಂಪನಿ ಭಾರತದಲ್ಲಿ ಮಾರುಕಟ್ಟೆ ವಿಸ್ತರಿಸಲು ಮುಂದಾಗಿದೆ.

ಏನಿದು ಎನ್‌ಝೈಮ್‌?

ಇಂಧನ ಕ್ಷಮತೆ ವೃದ್ಧಿಗೆ ಬೆರೆಸುವ ಹಲವು ದ್ರವ ಉತ್ಪನ್ನಗಳು (ಫ್ಯುಯೆಲ್‌ ಆಡಿಟಿವ್ಸ್‌) ಮಾರುಕಟ್ಟೆಯಲ್ಲಿವೆ. ಒಂದು ಹಂತದಲ್ಲಿ ಸೀಸರಹಿತ ಪೆಟ್ರೋಲ್‌, ಡೀಸೆಲ್‌ ಕೂಡಾ ಜನಪ್ರಿಯವಾಗಿತ್ತು. ಇದನ್ನೇ ಸ್ಪೀಡ್‌, ಎಕ್ಸ್ಟ್ರಾಮೈಲ್‌ ಹೆಸರಿನಲ್ಲಿ ಭಾರತೀಯ ತೈಲ ಕಂಪನಿಗಳು ಬಿಡುಗಡೆ ಮಾಡಿದವು. ಇದೀಗ ಎನ್‌ಝೈಮ್‌ ಸರದಿ.

ಏನು ಮಾಡುತ್ತದೆ?

ಮೊದಲು ಇಂಧನ ಟ್ಯಾಂಕ್‌ (ಪೆಟ್ರೋಲ್‌ ಅಥವಾ ಡೀಸೆಲ್‌)ನಲ್ಲಿರುವ ಕಲ್ಮಶಗಳನ್ನು ತೊಡೆದುಹಾಕುತ್ತದೆ. ಎಂಜಿನ್‌ ಸ್ವಚ್ಛ ಮಾಡುತ್ತದೆ. ಇಂಧನ ಹರಿಯುವ ಪ್ರತಿ ಭಾಗದಲ್ಲಿ ಸೃಷ್ಟಿಯಾಗುವ ಇಂಗಾಲದ ಕಣಗಳು, ಬ್ಯಾಕ್ಟೀರಿಯಾ, ಫಂಗಸ್‌ನ್ನು ನಿವಾರಿಸುತ್ತದೆ. ನೀರು ಬೆರೆತಿದ್ದಲ್ಲಿ ಅದನ್ನೂ ಬೇರ್ಪಡಿಸುತ್ತದೆ. ಇಂಧನ ಪೂರ್ಣ ಪ್ರಮಾಣದಲ್ಲಿ ದಹನವಾಗುವಂತೆ ಮಾಡುತ್ತದೆ. ಇಂಗಾಲ ಹೊರಸೂಸುವಿಕೆ ಪ್ರಮಾಣವನ್ನು ಅತ್ಯಂತ ಕನಿಷ್ಠ (ಕಂಪನಿ ಪ್ರತಿನಿಧಿಗಳು ಹೇಳುವ ಪ್ರಕಾರ ಶೂನ್ಯ)ಪ್ರಮಾಣಕ್ಕೆ ಇಳಿಸುತ್ತದೆ.

‘ಮುಂದೆ ಇಲ್ಲಿ ಯಾವುದೇ ಫಂಗಸ್‌ ಅಥವಾ ಬ್ಯಾಕ್ಟೀರಿಯಾ ಬೆಳೆಯಲು ಅವಕಾಶ ನೀಡುವುದಿಲ್ಲ ಎಂದು ಈ ಉತ್ಪನ್ನಗಳ ಕಂಪನಿಗಳು ಹೇಳಿವೆ.ಮೇಲೆ ನಡೆದ ಕೆಲಸಗಳ ಒಟ್ಟಾರೆ ಪರಿಣಾಮ ಮೈಲೇಜ್‌ ಮೇಲಾಗುತ್ತದೆ. ಶೇ 20ರಷ್ಟು ಎಂಜಿನ್‌ ದಕ್ಷತೆ ಹೆಚ್ಚುತ್ತದೆ’ ಎನ್ನುತ್ತಾರೆ ಸೋಲ್ಟ್ರಾನ್‌ ಕಂಪನಿಯ ಭಾರತದ ಫ್ರಾಂಚೈಸಿ ಸೋಲ್‌ಪವರ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ನ ಸಲಹೆಗಾರರಾದ ಬದರಿನಾಥ ಕತಾರೆ.

ಇದರಲ್ಲಿರುವುದು ಯಾವ ಬ್ಯಾಕ್ಟೀರಿಯಾ ಎಂಬ ಬಗ್ಗೆ ಕಂಪನಿಗಳು ಗುಟ್ಟು ಬಿಟ್ಟುಕೊಟ್ಟಿಲ್ಲ. ಸೋಲ್ಟ್ರಾನ್‌ ಕಂಪನಿಯು, ಮಣಿಪುರ, ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶದ ಪ್ರಮುಖ ಸಾರಿಗೆ ಕಂಪನಿಗಳಲ್ಲಿ ಇದರ ಪರೀಕ್ಷೆ ನಡೆಸಿದೆ. ರಾಜ್ಯದ ಪ್ರತಿಷ್ಠಿತ ಬಸ್‌ ಸಾರಿಗೆ ಕಂಪನಿಯೊಂದು ಈ ಬಗ್ಗೆ ಪ್ರಮಾಣೀಕರಣವನ್ನೂ ನೀಡಿದೆ.

ಗುರಿ ಯಾರು?

ಆರಂಭದಲ್ಲಿ ಈ ಉತ್ಪನ್ನಗಳನ್ನು ಹಡಗು, ಜನರೇಟರ್‌, ವಿಮಾನಗಳನ್ನು ಗುರಿಯಾಗಿಸಿಕೊಂಡು ಸಿದ್ಧಪಡಿಸಲಾಗಿತ್ತು. ವಿದೇಶಗಳಲ್ಲಿ ಕಟ್ಟುನಿಟ್ಟಾದ ಪರಿಸರ ನಿಯಮಗಳಿಂದಾಗಿ ಈ ಉತ್ಪನ್ನಗಳಿಗೆ ವ್ಯಾಪಕ ಬೇಡಿಕೆಯೂ ಇದೆ. ಸಮುದ್ರಕ್ಕೆ ಕಾರ್ಬನ್‌, ಸೀಸದ ಕಣಗಳು ಸೇರದಂತೆ ತಡೆಗಟ್ಟುವ ನಿಟ್ಟಿನಲ್ಲೂ ಇದರ ಬಳಕೆಯಾಗುತ್ತದೆ.

ಆದರೆ, ಮಾಲಿನ್ಯ ನಿಯಂತ್ರಣದ ಬಗ್ಗೆ ಕಾಳಜಿ ಹೆಚ್ಚುತ್ತಿರುವ ದಿನಗಳಲ್ಲಿ ಇತರ ವಾಹನಗಳಿಗೂ ಹಾಕಲು ಅನುಕೂಲವಾಗುವಂತೆ ಉತ್ಪನ್ನ ಸಿದ್ಧಪಡಿಸಲಾಗಿದೆ.

ಸವಾಲುಗಳೇನು?

‘ಭಾರತದ ವಾಹನ ಮಾರುಕಟ್ಟೆಯಲ್ಲಿ ಮಾಲಿನ್ಯ ಸಂಬಂಧಿ ಕಾಳಜಿ ಕಡಿಮೆ. ವಾಣಿಜ್ಯ ವಾಹನಗಳು ವರ್ಷಕ್ಕೊಮ್ಮೆ ಅರ್ಹತಾ ಪ್ರಮಾಣ ಪತ್ರ ಪಡೆಯುವಾಗಲಷ್ಟೇ ತಪಾಸಣೆ ಮಾಡಿಸಿಕೊಳ್ಳುತ್ತವೆ. ವಾಹನದ ಕ್ಷಮತೆ ಕಡಿಮೆಯಾದಂತೆ ಅದನ್ನು ಮಾರಾಟ ಮಾಡುವವರೇ ಹೆಚ್ಚು. ಹೀಗಾಗಿ ಅವರ ಮನವೊಲಿಸುವುದೇ ಕಷ್ಟ’ ಎನ್ನುತ್ತಾರೆ ಬದರಿನಾಥ.

ಇಂಥ ಉತ್ಪನ್ನಗಳ ದುಬಾರಿ ಬೆಲೆ (ಪ್ರತಿ ಲೀಟರ್‌ಗೆ ಭಾರತದ ಮಾರುಕಟ್ಟೆ ಬೆಲೆ ಸುಮಾರು ₹ 13 ಸಾವಿರ) ಕೂಡಾ ನಮ್ಮನ್ನು ಆಲೋಚಿಸುವಂತೆ ಮಾಡುತ್ತದೆ. ದೊಡ್ಡ ಪ್ರಮಾಣದಲ್ಲಿ ಇಂಧನ ಬಳಕೆದಾರರು ಇದನ್ನು ಖರೀದಿಸಬಹುದು ಎನ್ನುತ್ತಾರೆ ಗ್ರಾಹಕರು.‌

‘ಎನ್‌ಝೈಮ್‌ನ ಕೆಲಸಕ್ಕೆ ಹೋಲಿಸಿದರೆ ಬೆಲೆ ದುಬಾರಿಯಲ್ಲ. ಸಾಮಾನ್ಯ ಸ್ಥಿತಿಯಲ್ಲಿ 10 ಲೀಟರ್‌ ಇಂಧನಕ್ಕೆ 1 ಮಿಲಿಲೀಟರ್‌ ಎನ್‌ಝೈಮ್‌ ಬಳಸಿದರೆ ಸಾಕು. ಪ್ರತಿ ಮಿಲಿ ಲೀಟರ್‌ಗೆ ₹ 1.30 ವೆಚ್ಚವಾಗುತ್ತದೆ. ಎಂಥ ಕಳಪೆ ಎಂಜಿನ್‌ ಆದರೂ ಕಾರ್ಯಕ್ಷಮತೆ ಹೆಚ್ಚಿಸುತ್ತದೆ. ಅದಕ್ಕಾಗಿ ಚಿಕ್ಕ ಪ್ಯಾಕ್‌ಗಳ ಮೂಲಕ ಮಾರಾಟ ಮಾಡಲು ಮುಂದಾಗಿದ್ದೇವೆ’ ಎಂದು ಸಮರ್ಥಿಸುತ್ತಾರೆ ಬದರಿನಾಥ.

**

ಸಂಪರ್ಕಕ್ಕೆ: ಸಿ.ಎಂ. ಶಿವಯೋಗಿಮಠ, ಸೋಲ್‌ಪವರ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಮುಖ್ಯಸ್ಥ
(ಮೊ. 9987781910), ಬದರಿನಾಥ್‌ (ಮೊ. 94484 75768)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT