ಸೋಮವಾರ, ಡಿಸೆಂಬರ್ 9, 2019
17 °C
ಎಲೆಕ್ಟ್ರಿಕ್‌ ವಾಹನ ಅನಾವರಣ

ಛಿದ್ರವಾಯ್ತು ಟ್ರಕ್‌ನ ಅಭೇದ್ಯ ಗಾಜು; ಟೆಸ್ಲಾಗೆ ಮುಜುಗರ ತಂದ ಲೈವ್‌ ಡೆಮೊ

Published:
Updated:

ಲಾಸ್‌ ಏಂಜಲೀಸ್‌: ವೇಗದ ವಿದ್ಯುತ್‌ ಚಾಲಿತ ಕಾರುಗಳ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ಜನಪ್ರಿಯಗೊಳ್ಳುತ್ತಿರುವ ಟೆಸ್ಲಾ ಹೊಸ ಎಲೆಕ್ಟ್ರಿಕ್‌ ಪಿಕ್‌–ಅಪ್‌(ಟ್ರಕ್) ಅನಾವರಣದ ವೇಳೆ ಮುಜುಗರಕ್ಕೆ ಒಳಗಾಗಿದೆ. ಎಂಥದ್ದೇ ಅಪ್ಪಳಿಸುವಿಕೆಯಲ್ಲೂ ಅಭೇದ್ಯವಾದ ಕಿಟಕಿಗಳನ್ನು ಹೊಂದಿದೆ ಎಂದು ಹೇಳಿಕೊಂಡ ಸಂದರ್ಭದಲ್ಲೇ ಕಿಟಕಿ ಗಾಜು ಛಿದ್ರವಾಯಿತು. 

ಟೆಸ್ಲಾ ಸಹ–ಸಂಸ್ಥಾಪಕ ಎಲಾನ್‌ ಮಸ್ಕ್‌ ಶಪಿಸಿಕೊಳ್ಳುತ್ತಲೇ ಒಡೆದ ಗಾಜಿನ ಟ್ರಕ್‌ ಮುಂದೆಯೇ ಅದರ ವಿಶೇಷತೆಗಳನ್ನು ಸಭಿಕರಿಗೆ ವಿವರಿಸಿದರು. ಗುರುವಾರ ಕ್ಯಾಲಿಫೋರ್ನಿಯಾದಲ್ಲಿ ಪೂರ್ಣ ಬ್ಯಾಟರಿ ಶಕ್ತಿಯೊಂದಿಗೆ ಚಲಿಸುವ ಟೆಸ್ಲಾ 'ಸೈಬರ್‌ಟ್ರಕ್‌' ಅನಾವರಣ ಕಾರ್ಯಕ್ರಮ ನಡೆಯಿತು. 

ಟ್ರಕ್‌ ವಿಂಡೊ ಗಾಜಿನ ವಿಶೇಷತೆ ತಿಳಿಸುವಾಗ ಎಂಥ ಆಘಾತವನ್ನು ತಡೆದುಕೊಳ್ಳುವ 'ಆರ್ಮರ್‌ ಗ್ಲಾಸ್‌' ಹೇಗೆ ಹೊರಗಿನ ಪರಿಣಾಮವನ್ನು ತಡೆದುಕೊಳ್ಳುತ್ತದೆ ಎಂಬುದಕ್ಕೆ ಡೆಮೊ ನೀಡಲಾಯಿತು. ಎಲಾನ್‌ ಅವರ ಸೂಚನೆ ಮೇರೆಗೆ ವ್ಯಕ್ತಿಯೊಬ್ಬ ಸ್ಟೀಲ್‌ ಚೆಂಡು ತೂರಿದ; ಒಂದೇ ಹೊಡೆತಕ್ಕೆ ಟ್ರಕ್‌ನ ಗಾಜು ಚೂರಾಯಿತು. 

 

ಬಿರುಕು ಬಿಟ್ಟ ಕಿಟಕಿಯನ್ನು ನೋಡುತ್ತ ಎಲಾನ್‌ ಮಸ್ಕ್‌ 'ಬಹುಶಃ ಹೆಚ್ಚು ಬಿರುಸಾಗಿ ತೂರಿರಬೇಕು' ಎಂದು ಕಾರ್ಯಕ್ರಮವನ್ನು ಮುಂದುವರಿಸುತ್ತ, ಮತ್ತೊಂದು ಪ್ರಯತ್ನಕ್ಕೆ ಒಪ್ಪಿಗೆ ನೀಡಿದರು. ಎರಡನೇ ಬಾರಿಯ ಎಸೆತ ಮತ್ತೊಂದು ಕಿಟಿಕಿಯನ್ನು ಛಿದ್ರಗೊಳಿಸಿತು. 

ಹೇಳಿಕೊಂಡದ್ದು ಪೂರ್ಣ ಸಾಬೀತಾಗದ ಸ್ಥಿತಿಯಲ್ಲಿ ಎಲಾನ್‌, 'ಆದರೆ, ಸ್ಟೀಲ್‌ ಚೆಂಡು ಗಾಜನ್ನು ಸೀಳಿ ಒಳಹೋಗಲಿಲ್ಲ...' ಎಂದು ನಗುತ್ತಲೇ ಮುಜುಗರದಿಂದ ಹೊರಬರಲು ಪ್ರಯತ್ನಿಸಿದರು. ಮುಂದೆ, ಟ್ರಕ್‌ನ ವೇಗ, ಸಾಮರ್ಥ್ಯ, ಚಾರ್ಜಿಂಗ್‌, ಹೊರುವ ತೂಕ,..ಹೀಗೆ ಎಲ್ಲವನ್ನು ಒಡೆದ ಕಿಟಕಿಗಳ ಟ್ರಕ್‌ ಮುಂದಿಟ್ಟುಕೊಂಡೇ ಬಹಿರಂಗ ಪಡಿಸಿದರು. 

ಗಂಟೆಗೆ 0–100 ಕಿ.ಮೀ ವೇಗವನ್ನು 3 ಸೆಕೆಂಡ್‌ಗಳಲ್ಲಿ ತಲುಪುವ ಸೈಬರ್‌ಟ್ರಕ್‌ ಬೆಲೆ ₹28.63 ಲಕ್ಷ (39,900 ಡಾಲರ್‌). 2021ರ ವೇಳೆಗೆ ಈ ಟ್ರಕ್‌ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು