ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನಕುಂಭ ಮೇಳ!

Last Updated 19 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ದೆಹಲಿಯ ಹೊರ ವಲಯದ ಗ್ರೇಟರ್ ನೊಯಿಡಾದ ಇಂಡಿಯಾ ಎಕ್ಸ್‌ಪೊ ಮಾರ್ಟ್‌ನಲ್ಲಿ ಇದೇ 5 ರಿಂದ 12ರವರೆಗೆ ನಡೆದ ಏಷ್ಯಾದ ಅತಿದೊಡ್ಡ ವಾಹನ ಮೇಳವು, ಚೀನಾದಲ್ಲಿ ಕೊರೊನಾ (ಕೋವಿಡ್‌–19) ವೈರಸ್ ಸೃಷ್ಟಿಸಿದ ತಲ್ಲಣದ ಮಧ್ಯೆಯೇ ಯಶಸ್ವಿಯಾಗಿ ನಡೆಯಿತು. ‘ವಾಹನ ಲೋಕದಲ್ಲಿ ಹೊಸ ಸಾಧ್ಯತೆಗಳ ಹುಡುಕಾಟ’ ಮುಖ್ಯ ಧ್ಯೇಯವಾಗಿದ್ದ ಮೇಳದಲ್ಲಿ ಈ ಆಶಯಕ್ಕೆ ಪೂರಕವಾದ ಅನೇಕ ವಿದ್ಯಮಾನಗಳು ಕಂಡು ಬಂದವು.

ಮಾರಾಟ ಕುಸಿತದಿಂದ ಉದ್ದಿಮೆಯಲ್ಲಿ ಮಂಕು ಕವಿದಿದ್ದರೂ, ಮೇಳದಲ್ಲಿ ವಾಹನ ತಯಾರಿಕಾ ಸಂಸ್ಥೆಗಳ ಉತ್ಸಾಹಕ್ಕೇನೂ ಕೊರತೆ ಇದ್ದಿರಲಿಲ್ಲ. ವಾಹನ ತಯಾರಕರಲ್ಲಿ ಒಳಗೊಳಗೆ ಎದೆಗುದಿ ಇದ್ದರೂ, ಯಾರೊಬ್ಬರೂ ಎದೆಗುಂದಿದಂತೆ ತೋರ್ಪಡಿಸಿಕೊಳ್ಳಲಿಲ್ಲ. ಕೆಲ ಕಂಪನಿಗಳು ವೆಚ್ಚ ಮತ್ತು ಉತ್ಸಾಹದ ಕೊರತೆಯಿಂದ ದೂರ ಉಳಿದಿದ್ದರೂ, ದೇಶದ ಪ್ರಮುಖ ಮತ್ತು ವಿದೇಶದ ಅದರಲ್ಲೂ ಚೀನಾದ ಕಂಪನಿಗಳು ಅತ್ಯುತ್ಸಾಹದಿಂದ ಭಾಗವಹಿಸಿ ಮೇಳದ ಮೆರುಗು ಹೆಚ್ಚಿಸಿದ್ದವು.

ಮಾರಾಟ ಕುಸಿತದ ತೀವ್ರ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದ ಸಂದರ್ಭದಲ್ಲಿಯೇ ನಡೆದ 15ನೇ ಬಾರಿಯ ವಾಹನ ಮೇಳದಲ್ಲಿ ವಾಹನ ತಯಾರಿಕಾ ಕಂಪನಿಗಳ ಉತ್ಸಾಹಕ್ಕೇನೂ ಬರ ಕಂಡು ಬರಲಿಲ್ಲ. ನಿರಂತರವಾಗಿ ಮಾರಾಟ ಕುಸಿತ ಕಾಣುತ್ತಿದ್ದರೂ ವಾಹನ ಉದ್ದಿಮೆಯು ಎದೆಗುಂದದಿರುವುದನ್ನು ಮೇಳದಲ್ಲಿನ ಉತ್ಸಾಹಕರ ವಾತಾವರಣವು ದೃಢಪಡಿಸಿತು. ಭವಿಷ್ಯದ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಜಾಗರೂಕ ಭಾವವೂ ಕಂಡು ಬಂದಿತು. ಇದೇ ಕಾರಣಕ್ಕೆ ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ ಈ ಬಾರಿ ಸೀಮಿತ ಸಂಖ್ಯೆಯಲ್ಲಿ ಹೊಸ ವಾಹನಗಳು ಅನಾವರಣಗೊಂಡವು. ಈ ಕೊರತೆ ಬದಿಗಿಟ್ಟು ನೋಡಿದರೂ ದೇಶಿ ವಾಹನ ತಯಾರಿಕಾ ಉದ್ದಿಮೆಯ ವಿರಾಟ ರೂಪ ಪರಿಚಯಿಸುವಲ್ಲಿ ಮೇಳವು ಯಶಸ್ವಿಯಾಯಿತು. ಒಂದರ್ಥದಲ್ಲಿ ವಾಹನಗಳ ಮಹಾ ಕುಂಭ ಮೇಳವೇ ಇದಾಗಿತ್ತು.

ಈಗ ಹೆಚ್ಚಾಗಿ ಸದ್ದು ಮಾಡುತ್ತಿರುವ ವಿದ್ಯುತ್‌ ಚಾಲಿತ ವಾಹನಗಳ ಕಾರಣಕ್ಕೆ ಮೇಳದ ತುಂಬ ’ಇವಿ‘ ವಾಹನಗಳದ್ದೇ ಪ್ರಾಬಲ್ಯ ಎದ್ದು ಕಂಡಿತು. ಯಾವುದೇ ಮಳಿಗೆಗೆ ಹೋಗಲಿ ಅಲ್ಲಿ ಒಂದಕ್ಕಿಂತ ಹೆಚ್ಚು ‘ಇವಿ’ ಕಾರ್, ಬಸ್‌, ಬೈಕ್‌ ಜತೆಗೆ ಆಟೊ ಗಮನ ಸೆಳೆಯುತ್ತಿದ್ದವು. ಪ್ರತಿಯೊಂದು ವಾಹನ ತಯಾರಿಕಾ ಕಂಪನಿಯು ಒಂದಲ್ಲ ಒಂದು ವಿದ್ಯುತ್‌ ಚಾಲಿತ (ಇವಿ) ವಾಹನ ಪ್ರದರ್ಶಿಸಿದ್ದವು. ಮುಂಬರುವ ದಿನಗಳಲ್ಲಿ ಕೈಗೆಟುಕುವ ಬೆಲೆಗೆ ’ಇವಿ‘ ಹೊರ ತರುವುದಾಗಿ ಅನೇಕ ಕಂಪನಿಗಳು ವಾಗ್ದಾನ ನೀಡಿರುವುದು ಈ ಬಾರಿಯ ವಿಶೇಷತೆಯಾಗಿತ್ತು.

ಮಹೀಂದ್ರಾದ ಕಾನ್ಸೆಪ್ಟ್‌ ಎಸ್‌ಯುವಿ ಫನ್‌ಸ್ಟರ್‌

ಬಿಎಸ್‌4 ನಿಂದ ಬಿಎಸ್‌6 ಬದಲಾವಣೆ
ವಾಹನಗಳು ಹೊರಸೂಸುವ ಹೊಗೆ ಪ್ರಮಾಣಕ್ಕೆ ಕಡಿವಾಣ ಹಾಕುವ ಮಾಲಿನ್ಯ ನಿಯಂತ್ರಣದ ಹೊಸ ಮಾನದಂಡವಾದ ಬಿಎಸ್‌6 ಅಳವಡಿಕೆಯಲ್ಲಿ ಮುಂಚೂಣಿಯಲ್ಲಿ ಇರುವ ಟಾಟಾ ಮೋಟರ್ಸ್‌, ತನ್ನ ವಿಶಾಲ ಮಳಿಗೆಯಲ್ಲಿ 14 ವಾಣಿಜ್ಯ ವಾಹನ ಮತ್ತು 12 ಪ್ರಯಾಣಿಕರ ವಾಹನಗಳನ್ನು ಪ್ರದರ್ಶಿಸಿ ಗಮನ ಸೆಳೆದಿತ್ತು.

ಮಹೀಂದ್ರಾ ಮತ್ತು ಮಹೀಂದ್ರಾದ ಮಳಿಗೆಯನ್ನೂ ನಿರ್ಲಕ್ಷಿಸುವಂತಿರಲಿಲ್ಲ. ಕಂಪನಿಯ ಎಸ್‌ಯುವಿಗಳ ಎಲ್ಲ ಮಾದರಿಗಳು ಮತ್ತು ಟ್ರಕ್‌ಗಳು ಪ್ರದರ್ಶನದಲ್ಲಿದ್ದವು.

ವಿದ್ಯುತ್‌ಚಾಲಿತ ವಾಹನಗಳ ಆಕರ್ಷಣೆ
ವಿದ್ಯುತ್‌ ಚಾಲಿತ (ಇವಿ) ವಾಹನಗಳು ಒಟ್ಟಾರೆ ಮೇಳದ ದೊಡ್ಡ ಆಕರ್ಷಣೆಯಾಗಿದ್ದವು. ಇವು ಬರೀ ಭವಿಷ್ಯದ (concept) ವಾಹನಗಳಾಗಿರಲಿಲ್ಲ. ಸದ್ಯದಲ್ಲೇ ರಸ್ತೆಗೆ ಇಳಿಯಲಿದ್ದ ವಾಹನಗಳ ಸಂಖ್ಯೆಯೂ ದೊಡ್ಡದಿತ್ತು.

ಮರ್ಸಿಡಿಸ್‌ ಬೆಂಜ್‌ನ ಇಕ್ಯು ವಿದ್ಯುತ್‌ಚಾಲಿತ ಎಸ್‌ಯುವಿ – ದೇಶದಲ್ಲಿ ಮೊದಲ ಬಾರಿಗೆ ಲಭ್ಯ ಇರಲಿರುವ ವಿಲಾಸಿ ವಿದ್ಯುತ್‌ಚಾಲಿತ ಕಾರ್‌ ಆಗಿತ್ತು. ಈಗಾಗಲೇ ಚೀನಾದಲ್ಲಿ ಮಾರಾಟವಾಗುತ್ತಿರುವ ರೆನೊದ ಇ–ಕ್ವಿಡ್‌ ಸದ್ಯದಲ್ಲೇ ಭಾರತದ ರಸ್ತೆಗೆ ಇಳಿಯಲಿದೆ.

ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುತ್ತಿರುವ ವಾಹನ ಮೇಳವು ವರ್ಷದಿಂದ ವರ್ಷಕ್ಕೆ ಹೊಸತನ ಮೈಗೂಡಿಸಿಕೊಳ್ಳುತ್ತಲೇ ಬಂದಿದೆ. ವಾಹನ ಬಳಕೆದಾರರಿಗೆ ವಿಶಿಷ್ಟ ಮತ್ತು ಸಮೃದ್ಧ ಅನುಭವ ನೀಡುತ್ತ ವಾಹನ ಮಾರುಕಟ್ಟೆಯನ್ನೂ ಶ್ರೀಮಂತಗೊಳಿಸುತ್ತ ಬಂದಿದೆ. ಜಾಗತಿಕವಾಗಿ ವಾಹನ ತಯಾರಿಕೆ ಉದ್ದಿಮೆಯಲ್ಲಿ ಕಂಡು ಬರುತ್ತಿರುವ ಬದಲಾವಣೆಗಳು ದೇಶದಲ್ಲಿಯೂ ಛಾಪು ಮೂಡಿಸುತ್ತಿರುವುದನ್ನು ಈ ವಾಹನ ಮೇಳವು ದೃಢಪಡಿಸಿತು.

ಉದ್ದಿಮೆಯ ದೈತ್ಯ ಕಂಪನಿಗಳಾದ ಮಾರುತಿ ಸುಜುಕಿ ಇಂಡಿಯಾ, ಹುಂಡೈ, ಟಾಟಾ ಮೋಟರ್ಸ್‌ ಸೇರಿದಂತೆ ಮಹೀಂದ್ರಾ ಆ್ಯಂಡ್ ಮಹೀಂದ್ರಾ, ರೆನೊ, ಮರ್ಸಿಡಿಸ್‌ ಬೆಂಜ್‌, ಫೋಕ್ಸ್‌ವ್ಯಾಗನ್‌, ಸ್ಕೋಡಾ ಜತೆಗೆ ಹೊಸದಾಗಿ ರಂಗ ಪ್ರವೇಶಿಸಿರುವ ಕಿಯಾ ಮತ್ತು ಹೆಕ್ಟರ್‌ ಕಂಪನಿಗಳು ತಮ್ಮ ವಿಶಾಲ ಶ್ರೇಣಿಯ ವೈವಿಧ್ಯಮಯ ವಾಹನಗಳು, ಭವಿಷ್ಯದ (concept) ಕಾರ್‌, ಬೈಕ್‌, ಬಸ್‌ಗಳು ಮತ್ತು ನವೀಕೃತ ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌ಗಳನ್ನು (ಎಸ್‌ಯುವಿ) ಪ್ರದರ್ಶಿಸಿದವು. ಮುಂಬರುವ ದಿನಗಳಲ್ಲಿ ವಾಹನಗಳಲ್ಲಿ ಅಳವಡಿಸಲಿರುವ ಭಾರಿ ಬದಲಾವಣೆಗಳನ್ನು ಪರಿಚಯಿಸುವಲ್ಲಿ ಸಫಲಗೊಂಡವು.

ರೆನೊದಸಂಪೂರ್ಣ ವಿದ್ಯುತ್‌ ಚಾಲಿತ ಝೋಯಿ

ಶುದ್ಧ ಇಂಧನದ ಪರಿಸರ ಸ್ನೇಹಿ, ಹೆಚ್ಚು ಸುರಕ್ಷಿತ, ಚಾಲಕ ಮತ್ತು ರಸ್ತೆಯಲ್ಲಿನ ಇತರ ವಾಹನಗಳ ಜತೆ ಸಂವಹನ ನಡೆಸುವ ವೈವಿಧ್ಯಮಯ ಸಂಪರ್ಕ ತಂತ್ರಜ್ಞಾನದ (connected vehicles), ವಿದ್ಯುತ್‌ ಚಾಲಿತ ಬೈಕ್‌, ಕಾರ್‌, ಬಸ್‌, ಸೌರ ಫಲಕ ಅಳವಡಿಸಿದ್ದ ವಿದ್ಯುತ್‌ ಚಾಲಿತ ಆಟೊ ರಿಕ್ಷಾ ಮತ್ತು ಫ್ಯುಯೆಲ್‌ ಸೆಲ್‌ನ ಭವಿಷ್ಯದ ವಾಹನ– ಹೀಗೆ ವಾಹನಗಳ ತಯಾರಿಕೆಯಲ್ಲಿ ಭವಿಷ್ಯದಲ್ಲಿ ಕಂಡು ಬರಲಿರುವ ಭಾರಿ ಬದಲಾವಣೆಗಳ ಬಗೆಗಿನ ಸಮಗ್ರ ಹೂರಣ ಅಲ್ಲಿತ್ತು. ಭವಿಷ್ಯದಲ್ಲಿ ದೇಶಿ ರಸ್ತೆಗಳ ಮೇಲೆ ಸಂಚರಿಸಲಿರುವ ಸಂಪೂರ್ಣ ವಿದ್ಯುತ್‌ ಚಾಲಿತ ವಾಹನಗಳ ಮಾದರಿಗಳೂ ಅಲ್ಲಿದ್ದವು.

ದೇಶಿ ವಾಹನ ಉದ್ದಿಮೆಯ ದೊಡ್ಡಣ್ಣ ಮಾರುತಿ ಸುಜುಕಿ ಇಂಡಿಯಾದ ಫ್ಯೂಚರೊ–ಇ, ಹುಂಡೈ –

ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣದ ಅನುಭವ ನೀಡುವಂತಹ ಜನರಿಗೆ ಹೆಚ್ಚು ಇಷ್ಟವಾಗುವಂತಹ ಆಕರ್ಷಕ ವಿನ್ಯಾಸದ ಮತ್ತು ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌ಗಳಿಗೆ ವಾಹನ ತಯಾರಿಕಾ ಕಂಪನಿಗಳು ಹೆಚ್ಚು ಒತ್ತು ನೀಡುತ್ತಿರುವುದು ಮೇಳದಲ್ಲಿ ಪ್ರದರ್ಶನಗೊಂಡ ವೈವಿಧ್ಯಮಯ ವಾಹನಗಳನ್ನು ಕಂಡಾಗ ಸ್ಪಷ್ಟವಾಯಿತು.

ವಾಹನ ತಯಾರಿಕೆ ಉದ್ದಿಮೆ ಲೋಕದಲ್ಲಿ ಭಾರತವು ವಿಶ್ವದ ನಾಲ್ಕನೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ಇದು ದೇಶಿ ಆರ್ಥಿಕತೆಯಲ್ಲಿಯೂ ತನ್ನದೇ ಅದ ಮಹತ್ವ ಹೊಂದಿದೆ. 2026ರ ವೇಳೆಗೆ ದೇಶಿ ವಾಹನ ತಯಾರಿಕೆ ಉದ್ದಿಮೆಯು ಎಂಜಿನಿಯರಿಂಗ್, ತಯಾರಿಕೆ ಮತ್ತು ರಫ್ತು ಕ್ಷೇತ್ರದಲ್ಲಿ ವಿಶ್ವದ ಮುಂಚೂಣಿ ಮೂರನೇ ದೇಶವಾಗುವ ನಿಟ್ಟಿನಲ್ಲಿ ಸಾಗಲು ಈ ಮೇಳವು ಮುನ್ನುಡಿ ಬರೆಯುವಲ್ಲಿ ಸಫಲವಾಗಿದೆ.

ಸುರಕ್ಷಿತ, ದಕ್ಷ, ಪರಿಸರ ಸ್ನೇಹಿಯಾದ ಜಾಗತಿಕ ಗುಣಮಟ್ಟದ ಕಾರ್‌, ಬಸ್‌, ಬೈಕ್‌ ಮತ್ತು ಸರಕು ಸಾಗಣೆ ವಾಹನಗಳನ್ನು ಕೈಗೆಟುಕುವ ಬೆಲೆಗೆ ಒದಗಿಸುವ ಭರವಸೆಯೊಂದಿಗೆ ಮೇಳಕ್ಕೆ ತೆರೆ ಬಿದ್ದಿದೆ. ಒಟ್ಟು ಆಂತರಿಕ ಉತ್ಪನ್ನದಲ್ಲಿ (ಜಿಡಿಪಿ) ಶೇ 12ರಷ್ಟು ಪಾಲು ಹೊಂದುವ ಮತ್ತು 6.5 ಕೋಟಿ ಉದ್ಯೋಗ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆ ಹಾಕುವ ಭರವಸೆಯೂ ಮೇಳದಲ್ಲಿ ಕಂಡು ಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT