ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಕಾಲದಲ್ಲಿ ಕಾರು, ಬೈಕ್ ಕಾರ್ಖಾನೆಗಳು; ಬೇಡಿಕೆ, ತಯಾರಿಕೆ ಎರಡೂ ಇಲ್ಲ

Last Updated 28 ಏಪ್ರಿಲ್ 2020, 9:49 IST
ಅಕ್ಷರ ಗಾತ್ರ
ADVERTISEMENT
""
""
""
""
""

ಬೆಂಗಳೂರು: ಕಳೆದ ವರ್ಷ ಡಿಸೆಂಬರ್‌ನಲ್ಲಿ ಚೀನಾದ ವುಹಾನ್‌ನಲ್ಲಿ ಪತ್ತೆಯಾದ ಕೊರೊನಾ ವೈರಸ್‌ ಸೋಂಕು ಅತ್ಯಂತ ವೇಗವಾಗಿ ಜಗತ್ತಿನಾದ್ಯಂತ ಹರಡಿದೆ. ಇದರಿಂದಾಗಿ ಬಹುತೇಕ ಎಲ್ಲ ವಲಯಗಳ ಕಾರ್ಯಚಟುವಟಿಕೆಗಳು ಹಾಗೂ ವ್ಯಾಪಾರ, ವಹಿವಾಟುಗಳಿಗೂ ಪೆಟ್ಟು ಬಿದ್ದಿದೆ. 2019ರಿಂದಲೂ ತೆವಳುವ ಸ್ಥಿತಿಯಲ್ಲಿದ್ದ ಆಟೊಮೊಟಿವ್‌ ಇಂಡಸ್ಟ್ರಿ ಈಗ ಸಂಪೂರ್ಣ ಸ್ಥಗಿತಗೊಂಡಿವೆ. ಹೊಸ ವಾಹನಗಳ ತಯಾರಿಕೆ ಇಲ್ಲ, ಈಗಾಗಲೇ ಸಿದ್ಧವಿರುವ ವಾಹನಗಳನ್ನು ಖರೀದಿಸುವವರೂ ಇಲ್ಲದೆ ಆಟೊ ಇಂಡಸ್ಟ್ರಿ ವಹಿವಾಟು ಬಹುತೇಕ ಸ್ಥಗಿತವಾಗಿದೆ. ಸರ್ಕಾರದ ಆದೇಶಗಳಿಗಾಗಿ ಕಂಪನಿಗಳು ಎದುರು ನೋಡುತ್ತಿವೆ.

ಮಾರಾಟ ಇಳಿಕೆ ಒತ್ತಡದ ನಡುವೆಯೂ ಬಿಡಿಭಾಗಗಳ ಪೂರೈಕೆದಾರರು ಕಾರ್ಯಾಚರಿಸಿದರು, ಜನವರಿ ಮತ್ತು ಫೆಬ್ರುವರಿಯಲ್ಲಿ ಕಂಪನಿಗಳು ತಯಾರಿಕೆ ಮುಂದುವರಿಸಿದವು. ಮಾರ್ಚ್‌ ವೇಳೆಗೆ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಕಾಡ ತೊಡಗಿದವು. ಪೂರೈಕೆ ಹಾಗೂ ಮಾರಾಟ ತೀವ್ರ ಕುಸಿತಕ್ಕೆ ಒಳಗಾಯಿತು. ಸರ್ಕಾರದ ಸೂಚನೆಗಳ ಅನ್ವಯ ಸಿಬ್ಬಂದಿ ಸುರಕ್ಷತೆ ನಿಟ್ಟಿನಲ್ಲಿ ಕಾರ್ಖಾನೆಗಳು ಕಾರ್ಯಾಚರಣೆ ನಿಲ್ಲಿಸಿದವು.

ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್‌–19 ಸಾಂಕ್ರಾಮಿಕ ಎಂದು ಘೋಷಿಸುತ್ತಿದ್ದಂತೆ ಜಗತ್ತಿನಾದ್ಯಂತ ಕಾರು, ಬೈಕ್‌ ಷೋರೂಂಗಳಿಗೆ ಭೇಟಿ ನೀಡುವ ಜನರ ಸಂಖ್ಯೆ ಶೂನ್ಯಕ್ಕೆ ಇಳಿಕೆಯಾಯಿತು. ಮಾರಾಟ ಮಳಿಗೆಗಳು ಮುಚ್ಚಿದವು. ಜಿನೆವಾ ಮೋಟಾರ್‌ ಷೋ ಸೇರಿದಂತೆ ಆಟೊ ಕ್ಷೇತ್ರದ ಪ್ರಮುಖ ಕಾರ್ಯಕ್ರಮಗಳು, ಹೊಸ ವಾಹನಗಳ ಬಿಡುಗಡೆ ಸಮಾರಂಭಗಳು ರದ್ದಾದವು. ಕೆಲವು ಕಂಪನಿಗಳು ಡಿಜಿಟಲ್‌ ವೇದಿಕೆಗಳ ಮೂಲಕ ಗ್ರಾಹಕರನ್ನು ತಲುಪುವ ಪ್ರಯತ್ನ ನಡೆಸಿದವು. ಆದರೆ, ವಾಹನ ಮಾರಾಟ ಪ್ರಮಾಣ ತೀವ್ರ ಇಳಿಮುಖವಾಯಿತು. ಸೋಂಕು ಪ್ರಕರಣಗಳು, ಅದರಿಂದ ರಕ್ಷಿಸಿಕೊಳ್ಳುವ ವಿಧಾನಗಳು, ಮನೆಯಿಂದಲೇ ಕಚೇರಿ ಕೆಲಸಗಳನ್ನು ನಿರ್ವಹಿಸುತ್ತಿರುವ ಜನರು ವಾಹನಗಳ ಕುರಿತು ಗಮನ ಹರಿಸುವುದನ್ನು ಮರೆತಿರುವಂತೆ ತೋರುತ್ತಿದೆ. ಖರೀದಿ ಉತ್ಸಾಹವು ಮಾಯವಾಗಿದೆ.

ಫ್ರಾನ್ಸ್‌ನಲ್ಲಿ ಜೂನ್‌ 28ರಂದು ನಡೆಯಬೇಕಿದ್ದ 2020 ಫ್ರೆಂಚ್‌ ಎಫ್‌1 ಗ್ರ್ಯಾಂಡ್‌ ಪ್ರಿಕ್ಸ್‌ ರೇಸ್‌ ಕೋವಿಡ್‌–19 ಬಿಕ್ಕಟ್ಟಿನಿಂದಾಗಿ ರದ್ದಾಗಿದೆ. ಜುಲೈ ವರೆಗೂ ಫ್ರಾನ್ಸ್‌ ಸರ್ಕಾರ ಯಾವುದೇ ಕಾರ್ಯಕ್ರಮಗಳಿಗೆ ಅವಕಾಶ ನೀಡಿಲ್ಲ. ಇನ್ನೂ ಭಾರತದಲ್ಲಿ ವಾಹನ ತಯಾರಿಕಾ ಕಂಪನಿಗಳು ಕೊರೊನಾ ವೈರಸ್‌ ವಿರುದ್ಧ ಹೋರಾಟಕ್ಕೆ ಅಗತ್ಯವಿರುವ ವೆಂಟಿಲೇಟರ್‌ಗಳು, ಮಾಸ್ಕ್‌ಗಳು, ಫೇಸ್‌ ಶೀಲ್ಡ್‌, ಪಿಪಿಇ ಕಿಟ್‌ಗಳನ್ನು ತಯಾರಿಸುವುದರಲ್ಲಿ ತೊಡಗಿಸಿಕೊಂಡಿವೆ.

ಟಾಟಾ ಮೋಟಾರ್‌ 'ಕ್ಲಿಕ್‌ ಟು ಡ್ರೈವ್‌' ಡಿಜಿಟಲ್‌ ವ್ಯವಸ್ಥೆಯ ಮೂಲಕ ವಾಹನ ಖರೀದಿಗೆ ಅವಕಾಶ ಮಾಡಿದೆ. ದೇಶದಲ್ಲಿನ 750ಕ್ಕೂ ಹೆಚ್ಚು ಕಾರು ತಯಾರಿಕಾ ಔಟ್‌ಲೆಟ್‌ಗಳೊಂದಿಗೆ ಗ್ರಾಹಕರನ್ನು ವೇದಿಕೆ ಸಂಪರ್ಕಿಸುತ್ತದೆ. ಇಷ್ಟದ ಕಾರು ಖರೀದಿಸಿ, ಹೋಂ ಡೆಲಿವರಿ ಆಯ್ಕೆ ಮಾಡಿದರೆ; ನಿಗದಿತ ದಿನದಂದು ಕಾರು ಮನೆಗೆ ತಲುಪುತ್ತದೆ.

ದ್ವಿಚಕ್ರ ವಾಹನ ತಯಾರಿಕ ಕಂಪನಿ ಬಜಾಜ್‌ ಆಟೊ, ಔರಂಗಬಾದ್‌ ಘಟಕದಲ್ಲಿ ವಾಹನ ತಯಾರಿಸುವ ಕಾರ್ಯಾಚರಣೆ ಶುರು ಮಾಡಿದೆ. ಈ ಘಟಕದಲ್ಲಿ ಸಿದ್ಧವಾಗುವ ವಾಹನಗಳು ವಿದೇಶಗಳಿಗೆ ರಫ್ತಾಗುತ್ತವೆ. ₹1,000 ಕೋಟಿ ಮೌಲ್ಯದ ಆರ್ಡರ್‌ ಪೂರೈಸುವ ನಿಟ್ಟಿನಲ್ಲಿ ಬಜಾಜ್‌ ಕಾರ್ಯಾಚರಣೆಗೆ ಮುಂದಾಗಿದ್ದು, ಕಾರ್ಖಾನೆಯೊಳಗೆ 850 ಸಿಬ್ಬಂದಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ.

ಲಾಕ್‌ಡೌನ್ ದಿನಗಳಲ್ಲಿ ಪೂರ್ಣಗೊಂಡಿರುವ ವಾರಂಟಿ ಅವಧಿ ಹಾಗೂ ಉಚಿತ ಸರ್ವೀಸ್‌ಗಳಿಗೆ ಪಿಯಾಜಿಯೊ ಗ್ರೂಪ್‌ ಹೆಚ್ಚುವರಿ ಕಾಲಾವಕಾಶ ಪ್ರಕಟಿಸಿದೆ. ಏಪ್ರಿಲಿಯಾ ಹಾಗೂ ವೆಸ್ಪಾ ವಾಹನಗಳ ವಾರಂಟಿ ಮತ್ತು ಸರ್ವೀಸ್‌ ಸೇವೆ ಲಾಕ್‌ಡೌನ್‌ ಅಂತ್ಯಗೊಂಡ ನಂತರದಿಂದ 30 ದಿನಗಳ ವಿಸ್ತರಣೆ ಅನ್ವಯವಾಗಲಿದೆ. ಮಹಾರಾಷ್ಟ್ರದ ಬಾರಾಮತಿಯಲ್ಲಿರುವ ಪಿಯಾಜಿಯೊ ಕಾರ್ಖಾನೆ ಸಮೀಪ ಸುಮಾರು 1,000 ವಲಸಿಗರು ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದ್ದು, ಆಹಾರವನ್ನೂ ಕಂಪನಿ ಪೂರೈಸುತ್ತಿದೆ. ಆಸ್ಪತ್ರೆಗಳಲ್ಲಿ ಸೋಂಕು ನಿವಾರಕ ಘಟಕಗಳ ಸ್ಥಾಪನೆ, ಐಸೊಲೇಷನ್‌ ವಾರ್ಡ್‌ಗಳನ್ನು ಸಿದ್ಧಪಡಿಸುವಲ್ಲಿ ಸರ್ಕಾರಿ ಆಸ್ಪತ್ರೆಗಳೊಂದಿಗೆ ಕೈಜೋಡಿಸಿದೆ.

ದೇಶದ ಬೃಹತ್‌ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ, ಹರಿಯಾಣದ ಮನೇಸರ್‌ ಘಟಕದಲ್ಲಿ ಕಾರ್ಯಾಚರಣೆಗೆ ಅನುಮತಿ ದೊರೆತಿದೆ. ಒಂದು ಶಿಫ್ಟ್‌ನಲ್ಲಿ ಮಾತ್ರ ಕಾರ್ಯಾಚರಿಸಲು ಅವಕಾಶ ನೀಡಲಾಗಿದ್ದು, ಅಂತರ ಕಾಯ್ದುಕೊಳ್ಳುವ ಸೂಚನೆಗಳನ್ನು ಅನುಸರಿಸಬೇಕಿದೆ. ಅಗತ್ಯ ಬಿಡಿ ಭಾಗಗಳ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದು ಹಾಗೂ ಗರಿಷ್ಠ 600 ಸಿಬ್ಬಂದಿಯೊಂದಿಗೆ ಕಾರ್ಯಾಚರಿಸಲು ಅನುಮತಿ ದೊರೆತಿರುವುದರಿಂದ ವಾಹನ ತಯಾರಿಕೆ ಪುನರಾರಂಭಿಸುವ ನಿರ್ಧಾರವನ್ನೂ ಕಂಪನಿ ಇನ್ನೂ ಪ್ರಕಟಿಸಿಲ್ಲ. ಈ ಘಟಕದಲ್ಲಿ ಎರಡು ಶಿಫ್ಟ್‌ ಕಾರ್ಯಾಚರಣೆಯಲ್ಲಿ ವಾರ್ಷಿಕ 8,80,000 ಆಲ್ಟೊ ಹಾಗೂ ಡಿಸೈರ್ ವಾಹನಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ.

ಈಗಾಗಲೇ ಕಂಪನಿ ಬಿಎಸ್‌–6 ಗುಣಮಟ್ಟದ 20,000 ವಾಹನಗಳನ್ನು ಕಾರ್ಖಾನೆಗಳಲ್ಲಿ ಹೊಂದಿದೆ ಹಾಗೂ ಮಾರಾಟ ಕೇಂದ್ರಗಳು ಸೇರಿ ಇತರೆ ಸಂಪರ್ಕಿತ ವಲಯಗಳಲ್ಲಿ 1.35 ಲಕ್ಷ ವಾಹನಗಳ ಸಂಗ್ರಹವಿದೆ. ಫ್ಯಾಕ್ಟರಿಗಳಿಂದ ರಿಟೇಲ್‌ ಮಾರಾಟ ಮಳಿಗೆಗಳಿಗೆ ವಾಹನಗಳು ಸಾಗಣೆಯಾಗುವವರೆಗೂ ತಯಾರಿಕೆಯಾಗುವ ಹೊಸ ವಾಹನಗಳಿಗೆ ಸ್ಥಳಾವಕಾಶದ ಕೊರತೆ ಎದುರಾಗಲಿದೆ. ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ಭಾಗವಾಗಿರುವ ಕೃಷ್ಣ ಮಾರುತಿ ಮೂಲಕ ಹರಿಯಾಣ ಮತ್ತು ಗುಜರಾತ್‌ ಸರ್ಕಾರಗಳಿಗೆ 10 ಲಕ್ಷ ಮಾಸ್ಕ್‌ಗಳನ್ನು ಸಿದ್ಧಪಡಿಸಿ ನೀಡುವುದಾಗಿ ಹೇಳಿದೆ. ಈಗಾಗಲೇ 2 ಲಕ್ಷ ಮಾಸ್ಕ್‌ಗಳನ್ನು ಪೂರೈಸಿದೆ.

ಮಾರ್ಚ್‌ 24ರಿಂದ ಮೇ 3ರ ವರೆಗೂ ವಾರಂಟಿ ಅವಧಿ ಅಂತ್ಯಕೊಂಡಿರುವ ಮೋಟಾರ್‌ಸೈಕಲ್‌ಗಳಿಗೆ ಜೂನ್‌ 1ರ ವರೆಗೂ ವಾರಂಟಿ ವಿಸ್ತರಿಸಿರುವುದಾಗಿ ಡುಕಾಟಿ ಇಂಡಿಯಾ ಹೇಳಿದೆ.

ಎಂಜಿ ಮೋಟಾರ್ ಇಂಡಿಯಾ 100 ಹೆಕ್ಟರ್‌ ಎಸ್‌ಯುವಿಗಳನ್ನು ಕೊರೊನಾ ವೈರಸ್‌ ಹೋರಾಟದಲ್ಲಿರುವವರಿಗಾಗಿ ಮೀಸಲಿರಿಸಿದೆ. ಅಗತ್ಯ ಸೇವೆಗಳನ್ನು ಪೂರೈಸುತ್ತಿರುವ ವೈದ್ಯರು, ಆರೋಗ್ಯ ಸಿಬ್ಬಂದಿ, ಪೊಲೀಸರು ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಪ್ರಯಾಣಿಸಲು ಅನುವಾಗುವ ನಿಟ್ಟಿನಲ್ಲಿ ಮೇ ಅಂತ್ಯದ ವರೆಗೂ ಹೆಕ್ಟರ್‌ ಕಾರುಗಳನ್ನು ಉಚಿತವಾಗಿ ನೀಡಿದೆ. ಕಾರುಗಳಿಗೆ ಅಗತ್ಯವಾದ ಇಂಧನ ಹಾಗೂ ಚಾಲಕರ‌ನ್ನೂ ಕಂಪನಿ ನೀಡುತ್ತಿದೆ.

ಹುಂಡೈ ಮೋಟಾರ್‌ ಇಂಡಿಯಾ ದೆಹಲಿ, ಹರಿಯಾಣ, ತಮಿಳುನಾಡು ಹಾಗೂ ಮಹಾರಾಷ್ಟ್ರ ಸರ್ಕಾರಗಳಿಗೆ 17,000 ಪಿಪಿಇ ಕಿಟ್‌ಗಳು, ಸುಮಾರು 20 ಲಕ್ಷ ಮಾಸ್ಕ್‌ಗಳು (ಎನ್‌–95 ಹಾಗೂ ಕ್ಲಿನಿಕಲ್‌ ಮಾಸ್ಕ್‌), 1.5 ಲಕ್ಷ ಸ್ಯಾನಿಟೈಸರ್‌ ಕಿಟ್‌ಗಳು ಹಾಗೂ 6,000 ಪ್ಯಾಕೆಟ್‌ ಆಹಾರ ಸಾಮಾಗ್ರಿಗಳು ಸೇರಿದಂತೆ ₹9 ಕೋಟಿಗೂ ಅಧಿಕ ಮೌಲ್ಯದ ಸಹಕಾರನೀಡಿದೆ.

ಲಾಕ್‌ಡೌನ್‌ ಮುಕ್ತಾಯಗೊಂಡ 15 ದಿನಗಳಲ್ಲಿ ಡೀಲರ್‌ಗಳಿಗೆ ಇನ್‌ವಾಯ್ಸ್‌ ಬಾಕಿ ಪೂರ್ಣಗೊಳಿಸುವುದಾಗಿ ಕಿಯಾ ಮೋಟಾರ್ಸ್‌ ಇಂಡಿಯಾ ಹೇಳಿದೆ. ಡೀಲರ್‌ಗಳ ಮೇಲಿನ ಒತ್ತಡ ನಿವಾರಿಸುವ ನಿಟ್ಟಿನಲ್ಲಿ ಕಂಪನಿ ಹಲವು ಕ್ರಮಗಳನ್ನು ಕೈಗೊಂಡಿದೆ.

ಓಲಾ ಎಮರ್ಜೆನ್ಸಿ ಸೇವೆಯನ್ನು ಕೋವಿಡ್‌–19 ಪೀಡಿತರಲ್ಲದವರು ಆಸ್ಪತ್ರೆಗೆ ತಲುಪಲು ಬಳಸಿಕೊಳ್ಳಬಹುದಾಗಿದೆ. ಬೆಂಗಳೂರು ಸೇರಿದಂತೆ ದೇಶದ 15 ನಗರಗಳಲ್ಲಿ ಓಲಾದ ಈ ಸೇವೆ ಲಭ್ಯವಿದೆ. ರಾಜ್ಯ ಸರ್ಕಾರಗಳೊಂದಿಗೆ ಜೊತೆಗೂಡಿ ಈ ಸೇವೆ ನೀಡಲಾಗುತ್ತಿದೆ. ಊಬರ್‌ ಸಹ ಇಂಥದ್ದೇ ತುರ್ತು ಸೇವೆಗಳನ್ನು ನೀಡುತ್ತಿದೆ.

ಮಹೀಂದ್ರಾ ವಾಹನ ತಯಾರಿಕಾ ಘಟಕದಲ್ಲಿ ವೆಂಟಿಲೇಟರ್‌ ಸಿದ್ಧಪಡಿಸಿರುವ ಇಂಜಿನಿಯರ್‌ಗಳು‌

ಬಿಎಂಡಬ್ಲ್ಯು ಗ್ರೂಪ್ ಇಂಡಿಯಾ ಕೊರೊನಾ ವೈರಸ್‌ ವಿರುದ್ಧದ ಹೋರಾಟಕ್ಕೆ ₹3 ಕೋಟಿ ಸಹಕಾರ ನೀಡುವುದಾಗಿ ಹೇಳಿದೆ. ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಉಚಿತ ತುರ್ತು ಟ್ಯಾಕ್ಸಿ ಸೇವೆಗಳನ್ನು ನೀಡುತ್ತಿದೆ. ವಾಹನ ತಯಾರಿಕಾ ಘಟಕಗಳಲ್ಲಿ ವೆಂಟಿಲೇಟರ್‌, ಫೇಸ್‌ ಶೀಲ್ಡ್‌ ಹಾಗೂ ಸ್ಯಾನಿಟೈಸರ್‌ ಸಿದ್ಧಪಡಿಸುತ್ತಿದೆ. ರಾಯಲ್‌ ಎನ್‌ಫೀಲ್ಡ್‌ 2 ತಿಂಗಳ ವರೆಗೂ ಸರ್ವೀಸ್‌ ಹಾಗೂ ವಾರಂಟಿ ಅವಧಿ ವಿಸ್ತರಿಸಿದೆ. ಟೊಯೊಟಾ ಸಹ ವಾರಂಟಿ ವಿಸ್ತರಣೆ ಮಾಡಿದೆ. ಬಹುತೇಕ ಎಲ್ಲ ಆಟೊ ಕಂಪನಿಗಳು ವಾರಂಟಿ ಅವಧಿ ವಿಸ್ತರಿಸಿವೆ ಹಾಗೂ ಪಿಎಂ ಕೇರ್ಸ್‌ ಫಂಡ್‌ಗೆ ಹಣಕಾಸು ಸಹಕಾರ ನೀಡುವುದು ಅಥವಾ ಅಗತ್ಯ ವಸ್ತುಗಳನ್ನು ಜನರಿಗೆ ತಲುಪಿಸುವುದು, ವೈದ್ಯಕೀಯ ಸಾಧನಗಳ ತಯಾರಿಕೆ ಸೇರಿದಂತೆ ಹಲವು ರೀತಿಯಲ್ಲಿ ಕೊರೊನಾ ವಿರುದ್ಧ ಹೋರಾಟಕ್ಕೆ ಕೈಜೋಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT