ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ| ಹಳೆ ವಾಹನ ಗುಜರಿಗೆ..?

Last Updated 9 ಫೆಬ್ರವರಿ 2021, 19:30 IST
ಅಕ್ಷರ ಗಾತ್ರ

ಇಪ್ಪತ್ತು ವರ್ಷಕ್ಕಿಂತ ಹಳೆಯ ಖಾಸಗಿ ವಾಹನ ಮತ್ತು 15 ವರ್ಷಕ್ಕಿಂತ ಹಳೆಯ ವಾಣಿಜ್ಯ ವಾಹನಗಳನ್ನು ಸ್ವಯಂಪ್ರೇರಿತವಾಗಿ ಗುಜರಿಗೆ ಹಾಕುವ ನೀತಿಯನ್ನು ಜಾರಿಗೆ ತರುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಹಳೆಯ, ಅಸುರಕ್ಷಿತ ಮತ್ತು ಹೆಚ್ಚು ಮಾಲಿನ್ಯಕಾರಕ ವಾಹನಗಳನ್ನು ರಸ್ತೆಯಿಂದ ತೆರವು ಮಾಡುವುದು ಈ ನೀತಿಯ ಗುರಿ ಎಂದು ಸರ್ಕಾರ ಹೇಳಿದೆ.

20 ವರ್ಷಕ್ಕಿಂತ ಹಳೆಯ ಖಾಸಗಿ ವಾಹನಗಳು ಮತ್ತು 15 ವರ್ಷಕ್ಕಿಂತ ಹಳೆಯ ವಾಣಿಜ್ಯ ವಾಹನಗಳನ್ನು ಗುಜರಿಗೆ ಹಾಕುವುದು ಕಡ್ಡಾಯವಲ್ಲ. ಬದಲಿಗೆ ಸ್ವಯಂಪ್ರೇರಿತವಾದುದು. ಆದರೆ, ಇಷ್ಟು ಹಳೆಯ ವಾಹನಗಳನ್ನು ಇನ್ನೂ ಬಳಸಬೇಕು ಎಂದು ಮಾಲೀಕರು ಬಯಸುವುದಾದರೆ, ಅತ್ಯಧಿಕ ಪ್ರಮಾಣದ ಹಸಿರು ತೆರಿಗೆಯನ್ನು ಪಾವತಿ ಮಾಡಬೇಕು. ಇದಕ್ಕಿಂತಲೂ ಮುಖ್ಯವಾಗಿ ಈ ವಾಹನಗಳು ರಸ್ತೆಯಲ್ಲಿ ಓಡಾಡಲು ಲಾಯಕ್ಕಿವೆ ಎಂಬುದಕ್ಕೆ ಯೋಗ್ಯತಾ ಪ್ರಮಾಣಪತ್ರ ಪಡೆಯಬೇಕು.

15 ವರ್ಷಕ್ಕಿಂತ ಹಳೆಯ ಖಾಸಗಿ ವಾಹನಗಳಿಗೆ ಈಗಲೂ ಪ್ರತಿ 5 ವರ್ಷಕ್ಕೊಮ್ಮೆ ಹಾಗೂ ವಾಣಿಜ್ಯ ವಾಹನಗಳಿಗೆ ವರ್ಷಕ್ಕೊಮ್ಮೆ ಇಂತಹ ಪರೀಕ್ಷೆ ನಡೆಸಲಾಗುತ್ತದೆ. ಈಗಿನ ವ್ಯವಸ್ಥೆಯಲ್ಲಿ ಯೋಗ್ಯತಾ ಪ್ರಮಾಣಪತ್ರ (ಫಿಟ್‌ನೆಸ್‌ ಸರ್ಟಿಫೀಕೇಟ್-ಎಫ್‌ಸಿ) ಪಡೆಯುವುದು ಅತ್ಯಂತ ಸುಲಭ. ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿನ ಇನ್‌ಸ್ಪೆಕ್ಟರ್‌ಗಳು ವಾಹನಗಳನ್ನು ಬರಿಗಣ್ಣಿನಿಂದ ಪರೀಕ್ಷಿಸಿ ಎಫ್‌ಸಿ ನೀಡುತ್ತಾರೆ. ಆದರೆ, ಗುಜರಿ ನೀತಿ ಜಾರಿಗೆ ಬಂದನಂತರ ಸಂಪೂರ್ಣ ಸ್ವಯಂಚಾಲಿತ ಫಿಟ್‌ನೆಸ್‌ ಪರೀಕ್ಷಾ ಕೇಂದ್ರಗಳಲ್ಲಿ (ಎಫ್‌ಎಎಫ್‌ಟಿಸಿ) ಇಂತಹ ಪರೀಕ್ಷೆಗಳು ನಡೆಯಲಿವೆ ಎಂದು ಸರ್ಕಾರ ಹೇಳಿದೆ. ಹಾಗಾದರೆ ಇನ್ನುಮುಂದೆ ಎಫ್‌ಸಿ ಪರೀಕ್ಷೆಗಳು ಹೇಗೆ ನಡೆಯಲಿವೆ ಎಂಬುದರ ಬಗ್ಗೆ ವಾಹನ ಮಾಲೀಕರಲ್ಲಿ ಪ್ರಶ್ನೆಗಳು ಮೂಡಿವೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಚರ್ಚೆ ನಡೆಯುತ್ತಿದೆ.

ಹಳೆಯ ವಾಹನ ಗುಜರಿ ನೀತಿಯನ್ನು ಜಾರಿಗೆ ತರುವುದಾಗಿ ಸರ್ಕಾರವು 2016ರಲ್ಲೇ ಹೇಳಿತ್ತು. ಇದಕ್ಕಾಗಿ ಕೆಲವು ಪೂರ್ವಸಿದ್ಧತೆಗಳನ್ನೂ ಮಾಡಿಕೊಂಡಿತ್ತು. ಎಫ್‌ಎಎಫ್‌ಟಿಸಿಗಳನ್ನು ಆರಂಭಿಸಲು ರೂಪುರೇಷೆ ಸಿದ್ಧಪಡಿಸಲಾಗಿತ್ತು. ಎಫ್‌ಎಎಫ್‌ಟಿಸಿ ಹೇಗೆ ಇರಬೇಕು, ಪರೀಕ್ಷಾ ವಿಧಾನಗಳು ಯಾವುವು, ಯಾವೆಲ್ಲಾ ಪರೀಕ್ಷೆಗಳನ್ನು ನಡೆಸಬೇಕು ಎಂಬುದನ್ನು ಭಾರತ ಸರ್ಕಾರದ ಅಂಗಸಂಸ್ಥೆಯಾದ ಇಂಟರ್‌ನ್ಯಾನಷಲ್ ಸೆಂಟರ್ ಫಾರ್ ಆಟೊಮೋಟಿವ್ ಟೆಕ್ನಾಲಜಿಯು (ಐಸಿಎಟಿ), ನ್ಯಾಷನಲ್ ಆಟೊಮೋಟಿವ್ ಟೆಸ್ಟಿಂಗ್ ಇನ್ಪ್ರಾಸ್ಟ್ರಕ್ಚರ್ ಸೊಸೈಟಿ (ಎನ್‌ಎಟಿಐಎಸ್‌) ಜತೆ ಜಂಟಿಯಾಗಿ ಅಂತಿಮಗೊಳಿಸಿದ್ದವು.

ದೇಶದಾದ್ಯಂತ ಎಫ್‌ಎಎಫ್‌ಟಿಸಿ ಕೇಂದ್ರಗಳನ್ನು ತೆರೆಯಲು ಟೆಂಡರ್‌ ಸಹ ಕರೆಯಲಾಗಿತ್ತು. ಎಫ್‌ಎಎಫ್‌ಟಿಸಿಗಳನ್ನು ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಆರಂಭಿಸಲು ಸರ್ಕಾರ ನಿರ್ಧರಿಸಿತ್ತು. ಈ ಟೆಂಡರ್‌ನ ಅನ್ವಯ ಜಾರ್ಖಂಡ್‌ನ ರಾಜಧಾನಿ ರಾಂಚಿಯಲ್ಲಿ ದೇಶದ ಮೊದಲ ಎಫ್‌ಎಎಫ್‌ಟಿಸಿ 2018ರ ಜುಲೈನಲ್ಲೇ ಆರಂಭವಾಗಿದೆ. ಟಿಯುವಿ ಎಸ್‌ಯುಡಿ ಎಂಬ ಬಹುರಾಷ್ಟ್ರೀಯ ಕಂಪನಿಯು ರಾಂಚಿಯಲ್ಲಿ ಎಫ್‌ಎಎಫ್‌ಟಿಸಿಯನ್ನು ಆರಂಭಿಸಿದೆ. ಎಲ್ಲಾ ರಾಜ್ಯಗಳಲ್ಲೂ ಎಫ್‌ಎಎಫ್‌ಟಿಸಿಗಳನ್ನು ತೆರೆಯಲು ಸರ್ಕಾರ ಯೋಜನೆ ಹಾಕಿಕೊಂಡಿತ್ತು. ಒಂದು ಲಕ್ಷಕ್ಕಿಂತ ಹೆಚ್ಚು ವಾಣಿಜ್ಯ ವಾಹನಗಳು ಇರುವ ಪ್ರತಿ ಜಿಲ್ಲೆಯಲ್ಲೂ ಎಫ್‌ಎಎಫ್‌ಟಿಸಿ ತೆರೆಯಲು ಯೋಜನೆ ಹಾಕಿಕೊಳ್ಳಲಾಗಿತ್ತು. ಹಳೆಯ ವಾಹನಗಳ ಗುಜರಿ ನೀತಿಯನ್ನು ಘೋಷಿಸಿದ ನಂತರ ಈಗಿನ ಯೋಜನೆಗಳ ವಿವರ ಲಭ್ಯವಾಗಲಿದೆ.

10ಕ್ಕೂ ಹೆಚ್ಚು ಪರೀಕ್ಷೆಗಳು

ಸಂಪೂರ್ಣ ಸ್ವಯಂಚಾಲಿತ ಯೋಗ್ಯತಾ ಪರೀಕ್ಷೆಯಲ್ಲಿ ವಾಹನಗಳನ್ನು ಹತ್ತಕ್ಕೂ ಹೆಚ್ಚು ಸ್ವರೂಪದ ಪರೀಕ್ಷೆಗಳಿಗೆ ಒಳಪಡಿಸಲಾಗುತ್ತದೆ. ಪ್ರತಿ ವಿಭಾಗದಲ್ಲೂ ವಾಹನಗಳು ಕನಿಷ್ಠ ಅಂಕಗಳನ್ನು ಪಡೆಯಬೇಕು. ಎಲ್ಲಾ ಅಂಕಗಳ ಸರಾಸರಿ ಅಂಕಗಳಿಗೂ ಕನಿಷ್ಠ ಮಿತಿ ಇದೆ. ಆಗ ಮಾತ್ರ ಚಾಲನೆಗೆ ಯೋಗ್ಯ ಎಂಬ ಪ್ರಮಾಣಪತ್ರ ಆ ವಾಹನಕ್ಕೆ ದೊರೆಯಲಿದೆ. ಯಾವೆಲ್ಲಾ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂಬುದರ ವಿವರ ಕೇಂದ್ರ ಸರ್ಕಾರದ ಟೆಂಡರ್‌ನಲ್ಲಿ ಇದೆ.

1. ವಾಯುಮಾಲಿನ್ಯ ನಿಯಂತ್ರಣ

15 ವರ್ಷಕ್ಕಿಂತ ಹಳೆಯ ವಾಹನಗಳಾದರೆ ಅವು ಬಿಎಸ್‌-2 ಪರಿಮಾಣದ ವಾಹನಗಳಾಗಿರುತ್ತವೆ. 20 ವರ್ಷಕ್ಕಿಂತಲೂ ಹಳೆಯ ವಾಹನಗಳಾಗಿದ್ದರೆ ಅವು ಬಿಎಸ್-1 ಅಥವಾ ಬಿಎಸ್‌ಪೂರ್ವ ಪರಿಮಾಣದ ವಾಹನಗಳಾಗಿರುತ್ತವೆ. ಆಯಾ ಪರಿಮಾಣದಲ್ಲಿ ಸೂಚಿತವಾಗಿರುವಷ್ಟು ಪ್ರಮಾಣದಲ್ಲಿ ಮಾಲಿನ್ಯಕಾರಕ ಕಣಗಳು, ಸಾರಜನಕದ ಆಕ್ಸೈಡ್, ಇಂಗಾಲದ ಮಾನಾಕ್ಸೈಡ್‌ ಅನ್ನು ವಾಹನಗಳು ಉಗುಳುತ್ತಿವೆಯೇ ಎಂಬುದನ್ನು ಪರೀಕ್ಷಿಸಲಾಗುತ್ತದೆ. ವಾಹನದ ಹೊಗೆಯಲ್ಲಿ ಇವುಗಳ ಪ್ರಮಾಣ ಸೂಚಿತ ಪ್ರಮಾಣಕ್ಕಿಂತ ಹೆಚ್ಚು ಇರಬಾರದು

2. ಬ್ರೇಕ್‌ ಕಾರ್ಯಕ್ಷಮತೆ

ವಾಹನದ ಬ್ರೇಕ್‌ ಗರಿಷ್ಠಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಪರೀಕ್ಷಿಸಲಾಗುತ್ತದೆ. ಎಲ್ಲಾ ಚಕ್ರಗಳಿಗೂ ಬ್ರೇಕ್‌ನ ಒತ್ತಡ ಸಮಪ್ರಮಾಣದಲ್ಲಿ ಪೂರೈಕೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ. ಹಿಂಬದಿಯ ಚಕ್ರಗಳಿಗೆ ಮತ್ತು ಮುಂಬದಿಯ ಚಕ್ರಗಳಿಗೆ ಬ್ರೇಕ್‌ನ ಒತ್ತಡ ಸಮಪ್ರಮಾಣದಲ್ಲಿ ಪೂರೈಕೆಯಾಗುತ್ತಿದೆಯೇ ಎಂಬುದನ್ನು ಇಲ್ಲಿ ಪರೀಕ್ಷಿಸಲಾಗುತ್ತದೆ

3. ಹೆಡ್‌ಲೈಟ್‌ ಕಾರ್ಯಕ್ಷಮತೆ

ವಾಹನದ ಹೆಡ್‌ಲೈಡ್‌ಗಳು ಬೆಳಕಿನ ಕಿರಣಗಳನ್ನು ಸರಿಯಾಗಿ ಹರಡುತ್ತವೆಯೇ ಎಂಬುದನ್ನು ಪರೀಕ್ಷಿಸಲಾಗುತ್ತದೆ. ಎರಡೂ ಹೆಡ್‌ಲೈಟ್‌ಗಳು ಏಕರೂಪದಲ್ಲಿ ಕೆಲಸ ಮಾಡುತ್ತಿವೆಯೇ? ಎರಡೂ ಹೆಡ್‌ಲೈಟ್‌ಗಳ ಬೀಮ್‌ಮಟ್ಟ ಒಂದೇ ಇದೆಯೇ ಎಂಬುದನ್ನು ಪರೀಕ್ಷಿಸಲಾಗುತ್ತದೆ. ಪಾರ್ಕಿಂಗ್‌ ಲೈಟ್, ಟರ್ನ್ ಇಂಡಿಕೇಟರ್‌ಗಳು, ಫಾಗ್‌ಲ್ಯಾಂಪ್‌ಗಳು, ಬ್ರೇಕ್‌ಲ್ಯಾಂಪ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನೂ ಪರೀಕ್ಷಿಸಲಾಗುತ್ತದೆ

4. ಸ್ಪೀಡೋಮೀಟರ್‌

ವಾಹನದ ಸ್ಪೀಡೋಮೀಟರ್‌ ಸರಿಯಾಗಿದೆಯೇ ಎಂಬುದನ್ನು ಇಲ್ಲಿ ಪರೀಕ್ಷಿಸಲಾಗುತ್ತದೆ. ವಾಹನದ ವಾಸ್ತವ ವೇಗಕ್ಕಿಂತ ಕಡಿಮೆ ಅಥವಾ ಹೆಚ್ಚು ವೇಗವನ್ನು ತೋರಿಸುತ್ತಿದೆಯೇ? ಇದರಿಂದ ಸ್ಪೀಡ್‌ ಗವರ್ನರ್‌ನ (ವಾಣಿಜ್ಯ ವಾಹನಗಳಿಗೆ ಅನ್ವಯ) ಕಾರ್ಯಾಚರಣೆಗೆ ಅಡಚಣೆಯಾಗುತ್ತಿದೆಯೇ ಎಂಬುದನ್ನು ಪರೀಕ್ಷಿಸಲಾಗುತ್ತದೆ. ವೇಗಮಿತಿ ಇಂಡಿಕೇಟರ್‌ಗಳು ಸುಸ್ಥಿತಿಯಲ್ಲಿವೆಯೇ ಎಂಬುದನ್ನು ಪರೀಕ್ಷಿಸಲಾಗುತ್ತದೆ

5. ಸ್ಟೀರಿಂಗ್‌ ಕಾರ್ಯಕ್ಷಮತೆ

ಸ್ಟೀರಿಂಗ್‌ನ ಬಿಡಿಭಾಗಗಳು, ಸ್ಟೀರಿಂಗ್‌ ಲಿಂಕೇಜ್‌ ಬಿಡಿಭಾಗಗಳು ಸರಿಯಾಗಿವೆಯೇ ಎಂಬುದರ ಪರೀಕ್ಷೆ. ಸ್ಟೀರಿಂಗ್‌ ತಿರುಗಿಸಿದ್ದಕ್ಕೆ ಸರಿಯಾದ ಅನುಪಾತದಲ್ಲೇ ಚಕ್ರಗಳು ತಿರುಗುತ್ತವೆಯೇ? ಒಳಚಕ್ರ ಮತ್ತು ಹೊರಚಕ್ರದ ತಿರುಗುವಿಕೆಯ ಅನುಪಾತ ಸರಿಯಾಗಿವೆಯೇ ಎಂಬುದನ್ನು ಇಲ್ಲಿ ಪರೀಕ್ಷಿಸಲಾಗುತ್ತದೆ.

6. ವಾಹನದ ಶಬ್ದದ ಪ್ರಮಾಣ

ವಾಹನದ ಎಂಜಿನ್‌ನಿಂದ ಬರುವ ಶಬ್ದ ಮತ್ತು ಎಕ್ಸಾಸ್ಟ್ ಸಿಸ್ಟಂನಿಂದ (ಆಡುಭಾಷೆಯಲ್ಲಿ ಸೈಲೆನ್ಸರ್‌) ಬರುವ ಶಬ್ದವು ನಿಗದಿತ ಡೆಸಿಬಲ್‌ ಮಿತಿಯಲ್ಲೇ ಇದೆಯೇ ಎಂಬುದನ್ನು ಇಲ್ಲಿ ಪರೀಕ್ಷಿಸಲಾಗುತ್ತದೆ.

7. ಸೈಡ್‌ ಸ್ಲಿಪ್ ಪರೀಕ್ಷೆ

ವಾಹನಗಳ ಮುಂಬದಿಯ ಮತ್ತು ಹಿಂಬದಿಯ ಆಕ್ಸೆಲ್‌ಗಳ ಸಂಯೋಜನೆ ಸರಿಯಾಗಿದೆಯೇ ಎಂಬುದನ್ನು ಇಲ್ಲಿ ಪರೀಕ್ಷಿಸಲಾಗುತ್ತದೆ. ಎರಡೂ ಆಕ್ಸೆಲ್‌ಗಳ ಟ್ರಾಕ್‌ (ಅಗಲ) ಸೂಚಿತಮಟ್ಟದಲ್ಲಿ ಇದೆಯೇ, ಸ್ಟೀರಿಂಗ್ ತಿರುಗಿಸಿದಾಗ ಇದರಲ್ಲಿ ಬದಲಾವಣೆ ಆಗುತ್ತದೆಯೇ ಎಂಬುದನ್ನು ಪರೀಕ್ಷಿಸಲಾಗುತ್ತದೆ

8. ಸಸ್ಪೆನ್ಷನ್ ಕಾರ್ಯಕ್ಷಮತೆ

ವಾಹನದ ಸಸ್ಪೆನ್ಸನ್‌ ಸಂಯೋಜನೆ ಉತ್ತಮವಾಗಿದೆಯೇ? ಆಕ್ಸೆಲ್‌, ಲೀಫ್‌ಸ್ಪ್ರಿಂಗ್‌ (ಬ್ಲೇಡ್‌), ಶಾಕ್‌ ಸಬ್ಸರ್ವರ್‌ಗಳು, ಬುಷ್‌ಗಳು, ಟಾಯ್‌ರಾಡ್‌ಗಳು ಸುಸ್ಥಿತಿಯಲ್ಲಿವೆಯೇ ಎಂಬುದನ್ನು ಪರೀಕ್ಷಿಸಲಾಗುತ್ತದೆ. ಚಾಲನೆ ವೇಳೆ ಪ್ರತಿ ಚಕ್ರಗಳ ಮೇಲೆ ಬೀಳುವ ಒತ್ತಡ ಸೂಚಿತಮಟ್ಟದಲ್ಲಿ ಇದೆಯೇ ಎಂಬುದನ್ನು ಪರೀಕ್ಷಿಸಲಾಗುತ್ತದೆ

9. ಡೀಸೆಲ್ ಎಂಜಿನ್ ಕಾರ್ಯಕ್ಷಮತೆ

ಡೀಸೆಲ್‌ ವಾಹನಗಳ ಎಂಜಿನ್‌ಗಳು ಸೂಚಿತ ಆರ್‌ಪಿಎಂನಲ್ಲಿ ಉಗುಳುವ ಹೊಗೆಯ ಪ್ರಮಾಣವನ್ನು ಪರೀಕ್ಷಿಸಲಾಗುತ್ತದೆ. ಹೊಗೆ ಮತ್ತು ಹೊಗೆಯಲ್ಲಿನ ರಾಸಾಯನಿಕ ವಸ್ತುಗಳ ಪ್ರಮಾಣವನ್ನು ಪರಿಶೀಲಿಸಲಾಗುತ್ತದೆ

10. ಬಾಡಿ ಮತ್ತು ಬಿಡಿಭಾಗಗಳ ಕ್ಷಮತೆ

ವಾಹನದ ದೇಹವು ಸುಸ್ಥಿತಿಯಲ್ಲಿ ಇದೆಯೇ ಎಂಬುದನ್ನು ಪರೀಕ್ಷಿಸಲಾಗುತ್ತದೆ. ವಾಹನದ ಕೆಳಭಾಗವನ್ನೂ ಪರಿಶೀಲಿಸಲಾಗುತ್ತದೆ. ಜತೆಗೆ ವಿಂಡ್‌ಶೀಲ್ಡ್‌ಗಳು, ಕಿಟಕಿಯ ಗಾಜುಗಳು, ವೈಪರ್‌ಗಳು, ಟೈರ್‌ಗಳು, ಸೀಟುಗಳು ಸುಸ್ಥಿತಿಯಲ್ಲಿ ಇವೆಯೇ ಎಂಬುದನ್ನು ಪರೀಕ್ಷಿಸಲಾಗುತ್ತದೆ. ಈ ಹಂತದಲ್ಲಿ ಎಕ್ಸ್‌ಟೀರಿಯರ್ ಮತ್ತು ಇಂಟೀರಿಯರ್‌ನ ಬಿಡಿಭಾಗಗಳು ಸುಸ್ಥಿತಿಯಲ್ಲಿವೆಯೇ ಎಂಬುದನ್ನು ಕೂಲಂಕಷವಾಗಿ ಪರೀಕ್ಷಿಸಲಾಗುತ್ತದೆ

ಹೊಸ ನೀತಿಯಿಂದ ಹಲವು ಲಾಭ: ಸರ್ಕಾರ

ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ಪ್ರಸ್ತಾವವನ್ನು ಕೇಂದ್ರ ಹಣಕಾಸು ಸಚಿವರು ಪ್ರಸಕ್ತ ಬಜೆಟ್‌ನಲ್ಲಿ ಮಂಡಿಸಿದ್ದರು. ಸ್ವಯಂ ಪ್ರೇರಿತವಾಗಿ ವಾಹನಗಳನ್ನು ಗುಜರಿಗೆ ಹಾಕಲು ಮುಂದಾಗುವ ಮಾಲೀಕರಿಗೆ ಹೊಸ ವಾಹನಗಳ ಖರೀದಿ ವೇಳೆ ಆಕರ್ಷಕ ಸೌಲಭ್ಯಗಳು ದೊರೆಯಲಿವೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದರು. ಸರ್ಕಾರದ ಪ್ರತಿಪಾದನೆಗಳು ಇಂತಿವೆ...

l ಈ ಕ್ರಮದಿಂದ ದೇಶೀಯ ಆಟೊಮೊಬೈಲ್‌ ಉದ್ಯಮ
ಶೇ 30ರಷ್ಟು ಬೆಳವಣಿಗೆ ಕಾಣಲಿದೆ

l ಪ್ರಸ್ತುತ ₹4.5 ಲಕ್ಷ ಕೋಟಿ ವಹಿವಾಟಿನ ಉದ್ಯಮವು ಭವಿಷ್ಯದಲ್ಲಿ ₹10 ಲಕ್ಷ ಕೋಟಿಗೂ ಹೆಚ್ಚು ವಹಿವಾಟು ನಡೆಸುವ ನಿರೀಕ್ಷೆ ಇದೆ

l ಆಟೊಮೊಬೈಲ್‌ ಉದ್ಯಮವು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಕಲ್ಪಿಸುವ ವಿಶ್ವಾಸವನ್ನು ಸರ್ಕಾರ ಹೊಂದಿದೆ

l ಹಳೆ ವಾಹನ ವಿಲೇವಾರಿ ನೀತಿಯಿಂದ 51 ಲಕ್ಷ ವಾಹನಗಳು ಗುಜರಿ ಸೇರುವ ನಿರೀಕ್ಷೆಯಿದೆ; ಗುಜರಿ ವಸ್ತುಗಳನ್ನು ಆಟೊಮೊಬೈಲ್‌ ವಾಹನ ತಯಾರಿಕೆಗೆ ಬಳಸುವುದರಿಂದ ಹೊಸ ವಾಹನಗಳ ಉತ್ಪಾದನಾ ವೆಚ್ಚ ಶೇ 30ರಿಂದ 40ರಷ್ಟು ಕಡಿಮೆಯಾಗಲಿದೆ

ಮುಂದುವರಿದ ದೇಶಗಳಲ್ಲಿ ಗುಜರಿ ಪದ್ಧತಿ

ಹಳೆಯ ಗುಜರಿ ವಾಹನಗಳನ್ನು ಹೊಸ ಹಾಗೂ ಆಧುನಿಕ ವಾಹನಗಳೊಂದಿಗೆ ಬದಲಿಸುವುದನ್ನು ಉತ್ತೇಜಿಸಲು ಹಲವು ದೇಶಗಳು ಪ್ರಯತ್ನಿಸಿವೆ. ಈ ಯೋಜನೆ ಸಾಮಾನ್ಯವಾಗಿ ಎರಡು ಉದ್ದೇಶಗಳನ್ನು ಹೊಂದಿರುತ್ತದೆ. ವಾಹನ ಉದ್ಯಮವನ್ನು ಉತ್ತೇಜಿಸುವುದು ಹಾಗೂ ವಾಯುಮಾಲಿನ್ಯ ಉಂಟುಮಾಡುವ ವಾಹನಗಳನ್ನು ಗುಜರಿಗೆ ಹಾಕಿ, ವಾತಾವರಣದಲ್ಲಿ ಇಂಗಾಲದ ಪ್ರಮಾಣ ತಗ್ಗಿಸುವುದು.

2008ರಲ್ಲಿ ಪ್ರಾರಂಭವಾದ ಜಾಗತಿಕ ಆರ್ಥಿಕ ಹಿಂಜರಿತದ ಸಮಯದಲ್ಲಿ ಕೈಗಾರಿಕಾ ವಲಯದ ಚೇತರಿಕೆಗೆ ಅನೇಕ ಐರೋಪ್ಯ ರಾಷ್ಟ್ರಗಳು ಆರ್ಥಿಕ ಉತ್ತೇಜನ ಕ್ರಮವಾಗಿ ಗುಜರಿ ಯೋಜನೆ ಜಾರಿಗೆ ತಂದವು.

ಬ್ರಿಟನ್: 2009ರ ಬಜೆಟ್‌ನಲ್ಲಿ ಬ್ರಿಟನ್ ಸರ್ಕಾರವು ಗುಜರಿ ವಾಹನ ನೀತಿ ಜಾರಿಗೆ ತಂದಿತ್ತು. ಕನಿಷ್ಠ 10 ವರ್ಷ ಹಳೆಯದಾದ ಕಾರನ್ನು ಗುಜರಿಗೆ ಹಾಕಿದರೆ 2,000 ಯೂರೊ (ಸುಮಾರು ₹1.76 ಲಕ್ಷ) ಹಣವನ್ನು ಪ್ರೋತ್ಸಾಹಧನವಾಗಿ ನೀಡಲು ಅವಕಾಶ ಕಲ್ಪಿಸಿತು. ಇದರಲ್ಲಿ ಸರ್ಕಾರ ಅರ್ಧಪಾಲು, ವಾಹನ ಉದ್ಯಮವು ಅರ್ಧಪಾಲು ಭರಿಸಲು ತೀರ್ಮಾನಿಸಲಾಗಿತ್ತು.

ಅಮೆರಿಕ: 2009ರಲ್ಲಿ ಅಮೆರಿಕ ಸರ್ಕಾರವು ‘ಕಾರು ಭತ್ಯೆ ರಿಯಾಯಿತಿ ವ್ಯವಸ್ಥೆ (ಸಿಎಆರ್‌ಎಸ್) ಜಾರಿಗೆ ತಂದಿತು. ಇದಕ್ಕಾಗಿ ಸುಮಾರು ₹22 ಸಾವಿರ ಕೋಟಿ ತೆಗೆದಿಟ್ಟಿತು. ಹಳೆಯ, ಹೆಚ್ಚು ಮಾಲಿನ್ಯಕಾರಕ ವಾಹನಗಳನ್ನು ಹೊಸ ಮತ್ತು ಹೆಚ್ಚು ಇಂಧನ ದಕ್ಷತೆಯ ವಾಹನಗಳಿಗೆ ಬದಲಾಯಿಸಲು ನಾಗರಿಕರಿಗೆ ನೆರವು ನೀಡಿತು.

ರಷ್ಯಾ: 2010ರಿಂದ 2011ರ ಅವಧಿಯಲ್ಲಿ ರಷ್ಯಾದಲ್ಲಿ ಕಾರು ಗುಜರಿ ಯೋಜನೆ ಜಾರಿಯಲ್ಲಿತ್ತು. 10 ವರ್ಷಕ್ಕಿಂತ ಹಳೆಯದಾದ ಕಾರಿನ ಮಾಲೀಕ ಹೊಸದನ್ನು ಖರೀದಿಸಿದರೆ 50,000 ರೂಬಲ್ಸ್ (ಸುಮಾರು ₹50 ಸಾವಿರ) ಸಬ್ಸಿಡಿ ಪಡೆಯಲು ಇದು ಅವಕಾಶ ಮಾಡಿಕೊಟ್ಟಿತು. ಈ ಯೋಜನೆಯನ್ನು 2014ರಲ್ಲಿ ಮರು ಆರಂಭಿಸಲಾಯಿತು. ಕನಿಷ್ಠ 6 ವರ್ಷ ಹಳೆಯ ಕಾರುಗಳಿಗೆ ಕನಿಷ್ಠ 40,000 ರೂಬಲ್ಸ್ (ಸುಮಾರು ₹40 ಸಾವಿರ) ಪ್ರೋತ್ಸಾಹ ಧನ ನೀಡಲಾಗುತ್ತಿತ್ತು.

ಚೀನಾ: 2009ರಲ್ಲಿ ಚೀನಾ ಸರ್ಕಾರವು ಗುಜರಿ ವಾಹನ ನೀತಿ ಜಾರಿಗೆ ತಂದಿತು. ಇದು 31 ಮೇ 2010 ರವರೆಗೆ ಜಾರಿಯಲ್ಲಿತ್ತು. ಇದರ ಪ್ರಕಾರ, ಹಳೆಯ, ಭಾರೀ ಮಾಲಿನ್ಯಕಾರಕ ಕಾರುಗಳು ಮತ್ತು ಟ್ರಕ್‌ಗಳನ್ನು ಕೊಟ್ಟು ಹೊಸದನ್ನು ಕೊಂಡರೆ 450 ಡಾಲರ್‌ನಿಂದ 900 ಡಾಲರ್‌ವರೆಗೆ (ಸುಮಾರು ₹32 ಸಾವಿರದಿಂದ ₹65 ಸಾವಿರದವರೆಗೆ) ರಿಯಾಯಿತಿ ನೀಡಿತ್ತು.

ಜರ್ಮನಿ: ಜರ್ಮನಿಯ ವಾಹನ ಗುಜರಿ ಕಾರ್ಯಕ್ರಮ ವಿಶ್ವದಲ್ಲೇ ಅತಿದೊಡ್ಡದು ಎನ್ನಲಾಗಿದೆ. ಇದು ಈಗಲೂ ಚಾಲ್ತಿಯಲ್ಲಿದೆ. 9 ವರ್ಷಕ್ಕಿಂತ ಹಳೆಯದಾದ ಕಾರಿನ ಮಾಲೀಕ ಹೊಸ ಕಾರು ಖರೀದಿಸುವಾಗ 2,500 ಯೂರೊ (ಸುಮಾರು ₹2.2. ಲಕ್ಷ) ಪ್ರೀಮಿಯಂಗೆ ಅರ್ಹರಾಗಿದ್ದರು. 2009ರಲ್ಲಿ ಕಾರ್ಯಕ್ರಮ ಆರಂಭವಾದಾಗ, ಇಂತಹ 6 ಲಕ್ಷ ಕಾರುಗಳನ್ನು ಗುಜರಿಗೆ ಹಾಕುವ ಉದ್ದೇಶವಿತ್ತು. ಅದು ಪುನಃ ವಿಸ್ತರಣೆಯಾಯಿತು.

ಆಸ್ಟ್ರಿಯಾ: ಆಸ್ಟ್ರಿಯಾದಲ್ಲಿ ಗುಜರಿ ವಾಹನ ಯೋಜನೆಯನ್ನು 2009ರಲ್ಲೇ ಪರಿಚಯಿಸಲಾಗಿತ್ತು. ಕಾರು 13 ವರ್ಷಗಳಿಗಿಂತ ಹಳೆಯದಾದರೆ ಮತ್ತು ಹೊಸ ಕಾರು ಯುರೋ-4 ಮಾನದಂಡಗಳನ್ನು ಪೂರೈಸಿದರೆ ಗ್ರಾಹಕರಿಗೆ 1,500 ಯೂರೊ ನಗದು (ಸುಮಾರು ₹1.30 ಲಕ್ಷ) ಅನುದಾನವನ್ನು ನೀಡುವ ಘೋಷಣೆ ಮಾಡಿತ್ತು.

ಕೆನಡಾ: ಕೆನಡಾ ಸರ್ಕಾರವು ‘ರಿಟೈರ್ ಯುವರ್ ರೈಡ್ ಪ್ರೋಗ್ರಾಂ’ ಎಂಬ ಕಾರ್ಯಕ್ರಮದಡಿಯಲ್ಲಿ 1995ಕ್ಕಿಂತ ಮುಂಚೆ ತಯಾರಾದ ವಾಹನಗಳನ್ನು ಗುಜರಿಗೆ ಹಾಕುವಂತೆ ಜನರನ್ನು ಪ್ರೋತ್ಸಾಹಿಸಿತು. ಇದಕ್ಕೆ ಪರಿಹಾರವಾಗಿ ಸಾರ್ವಜನಿಕ ವಾಹನಗಳ ಪಾಸ್‌ ನೀಡುವುದು ಅಥವಾ 300 ಕೆನಡಾ ಡಾಲರ್ (ಸುಮಾರು ₹17 ಸಾವಿರ) ನೀಡುವ ಘೋಷಣೆ ಮಾಡಿತ್ತು.

ವಿದ್ಯುತ್‌ಚಾಲಿತ ವಾಹನಗಳಿಗೆ ದೆಸೆ?

ಬ್ರಿಟನ್‌ನಲ್ಲಿ 2035ರ ಬಳಿಕ ಪೆಟ್ರೋಲ್ ಅಥವಾ ಡೀಸೆಲ್‌ನಿಂದ ಓಡುವ ವಾಹನಗಳನ್ನು ಬಳಸುವಂತಿಲ್ಲ. ಹೀಗಾಗಿ ವಿದ್ಯುತ್‌ಚಾಲಿತ (ಎಲೆಕ್ಟ್ರಿಕ್) ವಾಹನಗಳ ಮಾರುಕಟ್ಟೆ ವಿಸ್ತರಣೆಯಾಗುತ್ತಿದೆ. ಜನರನ್ನು ಇದರತ್ತ ಸೆಳೆಯಲು ಸರ್ಕಾರವು ಕಾರ್ಯಕ್ರಮವೊಂದನ್ನು ರೂಪಿಸಲು ಸಜ್ಜಾಗಿದೆ ಎನ್ನಲಾಗಿದೆ.

ಎಲೆಕ್ಟ್ರಿಕ್ ವಾಹನಗಳಿಗೆ ಹಳೆಯ ಕಾರುಗಳನ್ನು ವಿನಿಮಯ ಮಾಡಿಕೊಂಡರೆ 6,000 ಪೌಂಡ್‌ಗಳವರೆಗೆ (ಸುಮಾರು ₹6 ಲಕ್ಷ) ಪಡೆಯುವ ಪ್ರಸ್ತಾಪವನ್ನು ಬ್ರಿಟನ್ ಸರ್ಕಾರ ಪರಿಗಣಿಸುತ್ತಿದೆ. ಫ್ರಾನ್ಸ್ ಮತ್ತು ಜರ್ಮನಿಯಂತಹ ದೇಶಗಳು ಹೆಚ್ಚು ಹೆಚ್ಚು ವಿದ್ಯುತ್‌ಚಾಲಿತ ವಾಹನಗಳನ್ನು ಪ್ರೋತ್ಸಾಹಿಸಲು ಮುಂದಾಗುತ್ತಿವೆ. ಭಾರತದಲ್ಲಿ ಹಳೆಯ ಬೈಕ್‌ ಅಥವಾ ಆಟೊಗಳನ್ನು ಎಲೆಕ್ಟ್ರಿಕ್ ಸ್ಕೂಟರ್‌ಗೆ ಬದಲಾಯಿಸುವ ಕಾರ್ಯಕ್ರಮಗಳನ್ನು ಕೆಲವು ಎಲೆಕ್ಟ್ರಿಕ್ ವಾಹನ ತಯಾರಕ ಸಂಸ್ಥೆಗಳು ಜಾರಿಗೊಳಿಸಿವೆ.

ಆಧಾರ: ಐಸಿಎಟಿ, ಎನ್‌ಎಟಿಐಎಸ್‌, ಟಿಯುವಿ ಎಸ್‌ಯುಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT