ಶುಕ್ರವಾರ, ಸೆಪ್ಟೆಂಬರ್ 17, 2021
22 °C

ಮಾರುತಿಯ ಪರಿಸರ ಸ್ನೇಹಿ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರ್‌ ತಯಾರಿಕೆಯಲ್ಲಿ ದೇಶದ ಅತಿದೊಡ್ಡ ಕಂಪನಿಯಾಗಿರುವ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ (ಎಂಎಸ್‌ಐಎಲ್‌), ಗ್ರಾಹಕರಿಗೆ ಪರಿಸರ ಸ್ನೇಹಿ ವಾಹನಗಳನ್ನು ಒದಗಿಸಲು ಮಹತ್ವಾಕಾಂಕ್ಷೆಯ ಯೋಜನೆ ‘ಮಿಷನ್‌ ಗ್ರೀನ್‌ ಮಿಲಿಯನ್‌‘ ಹಮ್ಮಿಕೊಂಡಿದೆ. ಹೊಸದಾಗಿ 10 ಲಕ್ಷದಷ್ಟು ವಾಹನಗಳನ್ನು ತ್ವರಿತಗತಿಯಲ್ಲಿ ಮಾರಾಟ ಮಾಡಲು ಕಂಪನಿಯ ‘ಎಸ್‌–ಸಿಎನ್‌ಜಿ‘ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸಲಿದೆ.

ಕಂಪನಿಯ ಈ ಮಹತ್ವಾಕಾಂಕ್ಷೆಯ ಪರಿಸರ ಸ್ನೇಹಿ ಯೋಜನೆಗೆ ಸಿಎನ್‌ಜಿ ಪಂಪ್‌ಗಳ ಸಂಖ್ಯೆ ಹೆಚ್ಚಿಸುವ ಸರ್ಕಾರದ ಕಾರ್ಯಕ್ರಮವೂ ಪೂರಕವಾಗಿದೆ. ಹಿಂದಿನ ವರ್ಷ ದೇಶದಲ್ಲಿ 477 ಸಿಎನ್‌ಜಿ ಪಂಪ್‌ಗಳನ್ನು ಆರಂಭಿಸಲಾಗಿದೆ. ಸದ್ಯಕ್ಕೆ 216 ನಗರಗಳಲ್ಲಿ 2,357 ಸಿಎನ್‌ಜಿ ರಿಟೇಲ್‌ ಪಂಪ್‌ಗಳಿವೆ. ಮುಂದಿನ 5 ವರ್ಷಗಳಲ್ಲಿ 380 ನಗರಗಳಲ್ಲಿ ಇವುಗಳ ಸಂಖ್ಯೆ 11 ಸಾವಿರಕ್ಕೆ ಏರಲಿದೆ.

‘ಇಂಧನಗಳ ಬೆಲೆ ಹೆಚ್ಚಳ ಮತ್ತು ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ನಡುವಣ ಅಂತರ ಗಮನಾರ್ಹವಾಗಿ ತಗ್ಗುತ್ತಿರುವಾಗ ಅಗ್ಗದ ಸಿಎನ್‌ಜಿ ಚಾಲಿತ (ಹೈಬ್ರಿಡ್‌) ವಾಹನಗಳು ಗ್ರಾಹಕರ ಗಮನ ಸೆಳೆಯುತ್ತಿವೆ. ಸಾಂದ್ರೀಕೃತ ನೈಸರ್ಗಿಕ ಅನಿಲ (ಸಿಎನ್‌ಜಿ) ಚಾಲಿತ ವಾಹನಗಳು ಮಿತವ್ಯಯ, ಸುರಕ್ಷತೆ ಮತ್ತು ಶ್ರೇಷ್ಠ ಕಾರ್ಯಕ್ಷಮತೆಯ ಕಾರಣಕ್ಕೆ ಗ್ರಾಹಕರಿಗೆ ಹೆಚ್ಚು ಪ್ರಿಯವಾಗುತ್ತಿವೆ. ಫ್ಯಾಕ್ಟರಿಯಲ್ಲಿಯೇ ಸಿಎನ್‌ಜಿ ಸೌಲಭ್ಯ ಅಳವಡಿಸಿದ (factory-fitted) ವಾಹನಗಳು ಹೆಚ್ಚು ಸುರಕ್ಷಿತವಾಗಿರಲಿವೆ. ಸಿಎನ್‌ಜಿ ಚಾಲಿತ ಆಲ್ಟೊ, ಎಸ್‌–ಪ್ರೆಸ್ಸೊ, ಸೆಲೆರಿಯೊ, ವ್ಯಾಗನ್‌ಆರ್‌, ಇಕೊ, ಟೂರ್‌ ಎಸ್‌, ಎರ್ಟಿಗಾ ಮತ್ತು ಸೂಪರ್‌ ಕ್ಯಾರಿ ವಾಹನಗಳು ಗುಣಮಟ್ಟದ ಭರವಸೆಯ ಕಾರಣಕ್ಕೆ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿವೆ‘ ಎಂದು ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಶಶ್ಯಾಂಕ್‌ ಶ್ರೀವಾಸ್ತವ್ ಅವರು ಹೇಳುತ್ತಾರೆ.

‘ಸಿಎನ್‌ಜಿ ವಾಹನಗಳಿಗೆ ಹೆಚ್ಚುವರಿಯಾಗಿ  ₹ 55 ಸಾವಿರಿಂದ ₹ 60 ಸಾವಿರ ಪಾವತಿಸಿದರೂ ಇಂಧನಕ್ಕೆ ಮಾಡುವ ವೆಚ್ಚ ತುಂಬ ಅಗ್ಗವಾಗಿರುತ್ತದೆ. ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಕರ್ನಾಟಕ 4ನೇ ಸ್ಥಾನದಲ್ಲಿ ಇದೆ. ಶೇ 60ರಷ್ಟು ಮಾರಾಟ ಬೆಂಗಳೂರಿನಿಂದಲೇ ಬರಲಿದೆ.

ಬೆಂಗಳೂರಿನ ಮಾರುಕಟ್ಟೆಯಲ್ಲಿಯೂ ಸಿಎನ್‌ಜಿ ವಾಹನಗಳು ಹೆಚ್ಚು ಜನಪ್ರಿಯಗೊಳ್ಳುತ್ತಿವೆ. ಈ ಹಣಕಾಸು ವರ್ಷದಲ್ಲಿ ಇದುವರೆಗೆ 795ರಷ್ಟು ಎಸ್‌–ಸಿಎನ್‌ಜಿ ವಾಹನಗಳು ಮಾರಾಟವಾಗಿವೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ 12 ಪಟ್ಟು ಹೆಚ್ಚಳವಾಗಿದೆ. ಸದ್ಯಕ್ಕೆ ರಾಜ್ಯದಲ್ಲಿ 24 ಸಿಎನ್‌ಜಿ ಪಂಪ್‌ಗಳಿವೆ. ಈ ವರ್ಷಾಂತ್ಯದ ವೇಳೆಗೆ ಅವುಗಳ ಸಂಖ್ಯೆ 60ಕ್ಕೆ ತಲುಪಲಿದೆ. ಪ್ರತಿಯೊಂದು ಜಿಲ್ಲಾ ಕೇಂದ್ರಗಳಲ್ಲಿ ಸಿಎನ್‌ಜಿ ಪಂಪ್‌ಗಳು ತ್ವರಿತಗತಿಯಲ್ಲಿ ಅಸ್ತಿತ್ವಕ್ಕೆ ಬರಲಿವೆ. ಇದರಿಂದ ಸಿಎನ್‌ಜಿ ವಾಹನಗಳ ಮಾರಾಟಕ್ಕೆ ಭಾರಿ ಉತ್ತೇಜನ ಸಿಗಲಿದೆ‘ ಎನ್ನುವುದು ಅವರ ನಿರೀಕ್ಷೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು