ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಕೆಂಡ್‌ ಹ್ಯಾಂಡ್‌ ಕಾರುಗಳಿಗೆ ಹೆಚ್ಚಿದ ಬೇಡಿಕೆ

Last Updated 28 ಜುಲೈ 2020, 14:20 IST
ಅಕ್ಷರ ಗಾತ್ರ

ಬೆಂಗಳೂರು: ಕಾರುಗಳನ್ನು ಖರೀದಿಸುವ ವಿಚಾರದಲ್ಲಿ ಗ್ರಾಹಕರ ಮನಃಸ್ಥಿತಿ ಹೇಗಿದೆ ಎಂಬ ಸಮೀಕ್ಷೆಯಲ್ಲಿ ಕಂಡುಕೊಂಡ ಕೆಲವು ಅಂಶಗಳನ್ನು ಜೂನ್‌ ತಿಂಗಳಲ್ಲಿ ಹಂಚಿಕೊಂಡಿದ್ದ ‘ಕಾರ್ಸ್‌24’ ವೇದಿಕೆಯು, ಸೆಕೆಂಡ್‌ ಹ್ಯಾಂಡ್‌ ಕಾರುಗಳ ಖರೀದಿಗೆ ಜನ ಆಸಕ್ತಿ ತೋರುತ್ತಿರುವುದು ಲಾಕ್‌ಡೌನ್‌ ಸಡಿಲಿಕೆಯಾಗುತ್ತಿರುವ ಹೊತ್ತಿನಲ್ಲಿ ಹೆಚ್ಚಾಗಿದೆ ಎಂದು ಹೇಳಿತ್ತು. ಜನ ಹಣದ ಕೊರತೆ ಎದುರಿಸುತ್ತಿರುವುದೂ ಇದಕ್ಕೆ ಒಂದು ಕಾರಣ ಎಂದು ಅದು ಹೇಳಿತ್ತು.

‘ಸರಿಸುಮಾರು ಅದೇ ಸ್ಥಿತಿ ಈಗಲೂ ಇದೆ, ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಖರೀದಿಸುತ್ತಿರುವವರ ಹಾಗೂ ಅವುಗಳ ಬಗ್ಗೆ ವಿಚಾರಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ’ ಎನ್ನುತ್ತಾರೆ ಕೆಲವು ವ್ಯಾಪಾರಿಗಳು. ‘ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಳಸಿಕೊಳ್ಳಲು ಜನ ಈಗ ಅಷ್ಟೊಂದು ಒಲವು ತೋರುತ್ತಿಲ್ಲ; ಸ್ವಂತ ವಾಹನದಲ್ಲಿ ಓಡಾಡಲು ಬಯಸುತ್ತಿದ್ದಾರೆ. ಇದಕ್ಕೆ ಕಾರಣ ಕೊರೊನಾ ಸೋಂಕಿನ ಭೀತಿ. ಹಣದ ಚಲಾವಣೆ ಕಡಿಮೆಯಾಗಿರುವ ಕಾರಣ ಹೊಸ ಕಾರು ಖರೀದಿಸಲು ಅವರು ಮನಸ್ಸು ಮಾಡುತ್ತಿಲ್ಲ. ಹೀಗಾಗಿ, ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟದಲ್ಲಿ ಏರಿಕೆ ಕಂಡುಬಂದಿದೆ’ ಎಂದು ಬೆಂಗಳೂರಿನ ಸೆಕೆಂಡ್‌ ಹ್ಯಾಂಡ್‌ ಕಾರು ವ್ಯಾಪಾರಿಯೊಬ್ಬರು ಹೇಳಿದರು.

‘ಕೋವಿಡ್‌–19 ಹರಡುವ ಮೊದಲಿನ ಹಾಗೂ ನಂತರದ ಪರಿಸ್ಥಿತಿಯನ್ನು ಹೋಲಿಸಿದರೆ, ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟದಲ್ಲಿ ಶೇಕಡ 50ರಿಂದ ಶೇ 60ರಷ್ಟು ಹೆಚ್ಚಳ ಆಗಿದೆ’ ಎಂದರು. ‘ಕೋವಿಡ್–19 ವ್ಯಾಪಕವಾದ ನಂತರ ಸಣ್ಣ ಕಾರುಗಳ ಸೆಕೆಂಡ್ ಹ್ಯಾಂಡ್ ವ್ಯಾಪಾರ ಹೆಚ್ಚಾಗಿದೆ’ ಎಂದು ಮಂಗಳೂರಿನ ಕಾರು ವ್ಯಾಪಾರಿ ಬಾವಾ ತಿಳಿಸಿದರು.

ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಖರೀದಿ ಮಾಡುತ್ತಿರುವವರಲ್ಲಿ ಮಹಿಳೆಯರೂ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ ಎಂದು ಮಾರುತಿ ಟ್ರೂ ವ್ಯಾಲ್ಯು ಪ್ರತಿನಿಧಿ ಸಿ.ಎಸ್. ಸುದರ್ಶನ್ ಹೇಳಿದರು. ‘ಖರೀದಿಗೆ ಹಾಗೂ ಕಾರುಗಳ ಬಗ್ಗೆ ವಿಚಾರಿಸಲು ಬರುತ್ತಿರುವವರಲ್ಲಿ ಮಹಿಳೆಯರ ಪ್ರಮಾಣ ಅಂದಾಜು ಶೇಕಡ 30ರಷ್ಟು ಇದೆ’ ಎಂದು ಅವರು ತಿಳಿಸಿದರು. ‘₹ 4 ಲಕ್ಷದಿಂದ ₹ 5 ಲಕ್ಷದ ಒಳಗಿನ ಹ್ಯಾಚ್‌ಬ್ಯಾಕ್‌ ಕಾರುಗಳ ಮಾರಾಟ ಮಾತ್ರ ಹೆಚ್ಚಾಗಿದೆ. ದುಬಾರಿ ಕಾರುಗಳ ಮಾರಾಟ ಹೆಚ್ಚಾಗಿಲ್ಲ. ಮೊದಲ ಬಾರಿಗೆ ಕಾರು ಖರೀದಿ ಮಾಡುತ್ತಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ’ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಕಾರುಗಳನ್ನು ಮಾರಾಟ ಮಾಡುವವರ ಸಂಖ್ಯೆ ತುಸು ಕಡಿಮೆ ಆಗಿದೆ ಎಂದು ಸುದರ್ಶನ್ ಹೇಳಿದರು. ‘ಇರುವ ಕಾರು ಮಾರಾಟ ಮಾಡಿದರೆ, ಹೊಸ ಕಾರು ಖರೀದಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಹಣದ ಚಲಾವಣೆ ಕೊರೊನಾ ಪೂರ್ವದ ಹೊತ್ತಿನಲ್ಲಿ ಇದ್ದಷ್ಟು ಇಲ್ಲ. ಈ ಕಾರಣಕ್ಕಾಗಿ, ಇರುವ ಕಾರನ್ನು ಸದ್ಯಕ್ಕೆ ಹೀಗೇ ಇಟ್ಟುಕೊಳ್ಳೋಣ ಎಂದು ಜನ ತೀರ್ಮಾನಿಸುತ್ತಿರಬಹುದು’ ಎಂದು ಹಳೆಯ ಕಾರುಗಳ ವ್ಯಾಪಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT