ಶನಿವಾರ, ಜೂನ್ 19, 2021
23 °C

‘ಗ್ರಾವಿಟಾಸ್‌’: ಟಾಟಾ ಮೋಟರ್ಸ್‌ನ ನೂತನ ಐಷಾರಾಮಿ ಎಸ್‌ಯುವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಟಾಟಾ ಮೋಟರ್ಸ್‌ ತನ್ನ ನೂತನ ಐಷಾರಾಮಿ ‘ಸ್ಫೋರ್ಟ್ಸ್‌ ಯುಟಿಲಿಟಿ ವೆಹಿಕಲ್‌’ನ (ಎಸ್‌ಯುವಿ) ಹೆಸರನ್ನು ಅನಾವರಣ ಮಾಡಿದೆ. 7 ಸೀಟುಗಳ ಸಾಮರ್ಥ್ಯದ ಈ ಎಸ್‌ಯುವಿಗೆ ಟಾಟಾ ಮೋಟರ್ಸ್‌, ‘ಗ್ರಾವಿಟಾಸ್’ ಎಂದು ಹೆಸರಿಟ್ಟಿದೆ.

ಲ್ಯಾಂಡ್‌ ರೋವರ್‌ನ ಡಿ8 ಪ್ಲಾಟ್‌ಫಾರಂನಿಂದ ಎರವಲು ಪಡೆದು ರೂಪಿಸಲಾಗಿರುವ ‘ಒಮೆಗಾ’ ಪ್ಲಾಟ್‌ಫಾರಂ ಬಳಸಿಕೊಂಡು ‘ಗ್ರಾವಿಟಾಸ್‌’ ಅನ್ನು ಅಭಿವೃದ್ಧಿಪಡಿಸಲಾಗಿದೆ. ಟಾಟಾ ಮೋಟರ್ಸ್‌ನ ಜನಪ್ರಿಯ ಎಸ್‌ಯುವಿ ‘ಹ್ಯಾರಿಯರ್‌’ ಸಹ ಇದೇ ಪ್ಲಾಟ್‌ಫಾರಂ ಹೊಂದಿದೆ.

‘ಕಾರ್ಯಕ್ಷಮತೆ, ಐಷಾರಾಮ ಮತ್ತು ಚಾಲನೆಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಎಸ್‌ಯುವಿಗಳಿಗೆ ‘ಗ್ರಾವಿಟಾಸ್’ ಸಮನಾಗಿರಲಿದೆ’ ಎಂದು ಟಾಟಾ ಮೋಟರ್ಸ್‌ ಹೇಳಿದೆ.

‘ಅತ್ಯಂತ ಕೌಶಲದಿಂದ ಅಭಿವೃದ್ಧಿಪಡಿಸಲಾದ ‘ಗ್ರಾವಿಟಾಸ್‌’ ಅನ್ನು ನಮ್ಮ ಗ್ರಾಹಕರಿಗೆ ನೀಡಲು ನಾವು ಉತ್ಸುಕರಾಗಿದ್ದೇವೆ. ಐಷಾರಾಮ ಮತ್ತು ಕಾರ್ಯಕ್ಷಮತೆಯಲ್ಲಿ ಗ್ರಾವಿಟಾಸ್ ಪ್ರಬಲ ಪೈಪೋಟಿ ಒಡ್ಡಲಿದೆ. 2020ರ ಫೆಬ್ರುವರಿಯಲ್ಲಿ ಗ್ರಾವಿಟಾಸ್‌ ಅನ್ನು ಮಾರುಕಟ್ಟೆಗೆ ಬಿಡಲಿದ್ದೇವೆ. ಮಾರುಕಟ್ಟೆಯಲ್ಲಿ ಗ್ರಾವಿಟಾಸ್ ಮುಂಚೂಣಿಯಲ್ಲಿ ಇರಲಿದೆ’ ಎಂದು ಟಾಟಾ ಮೋಟರ್ಸ್‌ನ ಪ್ಯಾಸೆಂಜರ್ ವಾಹನಗಳ ವಿಭಾಗದ ಅದ್ಯಕ್ಷ ಮಯಾಂಕ್ ಪಾರೀಕ್ ಹೇಳಿದ್ದಾರೆ.

ಗ್ರಾವಿಟಾಸ್‌ನ ಟೀಸರ್‌ ಬಿಡುಗಡೆ

ಗ್ರಾವಿಟಾಸ್‌ ಎಸ್‌ಯುವಿಯ ಟೀಸರ್ ಅನ್ನ ಸಹ ಟಾಟಾ ಮೋಟರ್ಸ್‌ ಬಿಡುಗಡೆ ಮಾಡಿದೆ. ಗ್ರಾವಿಟಾಸ್‌ನ ‘ಶೇಪ್‌’ ಹೇಗಿರಲಿದೆ ಎಂಬುದನ್ನಷ್ಟೇ ಈ ಟೀಸರ್ ತೋರಿಸುತ್ತದೆ.

ಆದರೆ, 2019ರ ಜಿನಿವಾ ಮೋಟರ್‌ ಷೋನಲ್ಲಿ ಟಾಟಾ ಮೋಟರ್ಸ್‌ ಪ್ರದರ್ಶನಕ್ಕೆ ಇಟ್ಟಿದ್ದ ‘ಬಝಾರ್ಡ್‌’ ಕಾನ್ಸೆಪ್ಟ್‌ ಎಸ್‌ಯುವಿಯನ್ನು ‘ಗ್ರಾವಿಟಾಸ್’ ಹೋಲುತ್ತದೆ. ಹೀಗಾಗಿ ಬಝಾರ್ಡ್‌ ಎಸ್‌ಯುವಿಯೇ ‘ಗ್ರಾವಿಟಾಸ್’ ಆಗಿರಬಹುದು ಎಂದು ವಾಹನಲೋಕದ ತಜ್ಞರು ಊಹಿಸಲು ಆರಂಭಿಸಿದ್ದಾರೆ. ಹ್ಯಾರಿಯರ್‌ನ ‘7 ಸೀಟರ್‌’ ಅವತರಣಿಕೆಯಂತಿದ್ದ ಬಝಾರ್ಡ್‌ಗೂ, ಗ್ರಾವಿಟಾಸ್‌ಗೂ ಸಾಮ್ಯತೆ ಇದೆ. 

ಗ್ರಾವಿಟಾಸ್–ಬಝಾರ್ಡ್‌ ಸಾಮ್ಯತೆಗಳು

* ಎರಡೂ ಎಸ್‌ಯುವಿಗಳನ್ನು ಒಮೆಗಾ ಪ್ಲಾಟ್‌ಫಾರಂ ಬಳಸಿಕೊಂಡು ಅಭಿವೃದ್ಧಿಪಡಿಸಲಾಗಿದೆ

* ಎರಡೂ ಎಸ್‌ಯುವಿಗಳ ಹೊರವಿನ್ಯಾಸ (ಶೇಪ್‌) ಒಂದೇ ರೀತಿ ಇದೆ

ಕ್ರಯೋಟೆಕ್ ಎಂಜಿನ್‌

ಬಝಾರ್ಡ್‌ ಎಸ್‌ಯುವಿಯೇ ಗ್ರಾವಿಟಾಸ್ ಆಗಿದ್ದಲ್ಲಿ ಅದು 2 ಲೀಟರ್ ಸಾಮರ್ಥ್ಯದ ಕ್ರಯೋಟೆಕ್ ಎಂಜಿನ್‌ ಹೊಂದಿರಲಿದೆ. ಕ್ರಯೋಟೆಕ್‌ ಎಂಜಿನ್ ಬರೋಬ್ಬರಿ 170 ಬಿಎಚ್‌ಪಿ ಶಕ್ತಿ ಮತ್ತು 350 ನ್ಯೂಟನ್‌ ಮೀಟರ್‌ನಷ್ಟು ಟಾರ್ಕ್ ಉತ್ಪಾದಿಸುತ್ತದೆ. ಜತೆಗೆ ಈ ಎಸ್‌ಯುವಿಯು 6 ಫಾರ್ವಾರ್ಡ್‌ ಗಿಯರ್‌ಗಳ ಮ್ಯಾನುಯಲ್ ಮತ್ತು 6 ಫಾರ್ವಾರ್ಡ್‌ ಗಿಯರ್‌ಗಳ ಆಟೊಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿರುವ ಸಾಧ್ಯತೆ ಇದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು