ಸೋಮವಾರ, ಆಗಸ್ಟ್ 15, 2022
22 °C
ಬ್ಯೂಟಿ ಟಿಪ್ಸ್‌

ಕಂಕುಳ ಕಪ್ಪು ಕಲೆ ನಿವಾರಣೆಗೆ ಮನೆಮದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೋಳಿಲ್ಲದ ಉಡುಪು ಧರಿಸುವ ಮೂಲಕ ಅಂದವಾಗಿ ಕಾಣಬೇಕು ಎಂಬ ಎಷ್ಟೋ ಹೆಣ್ಣುಮಕ್ಕಳ ಆಸೆ ಸಹಜವೇ. ಆದರೆ ಕೆಲವರಿಗೆ ಕಂಕುಳ ಕಪ್ಪಿನಿಂದಾಗಿ ತೋಳಿಲ್ಲದ ದಿರಿಸು ಧರಿಸಲು ಹಿಂಜರಿಕೆ. ಈ ಸಮಸ್ಯೆಗೆ ಕಾರಣಗಳು ಹಲವು. ಬೇಡದ ಕೂದಲ ನಿವಾರಣೆಗೆ ಬಳಸುವ ಕ್ರೀಮ್‌, ಫಂಗಸ್‌ ಸೋಂಕು ಮುಂತಾದವುಗಳಿಂದ ಕಂಕುಳ ಕೆಳಗೆ ಕಪ್ಪಾಗಿರುತ್ತದೆ. ಕಂಕುಳಕಪ್ಪನ್ನು ನಿವಾರಿಸಲೆಂದೇ ಕೆಲವೊಂದು ಕ್ರೀಮ್‌ಗಳು ಲಭ್ಯವಿದ್ದರೂ ಅವುಗಳ ಪರಿಣಾಮ ಕಡಿಮೆಯೇ ಎಂದು ಹೇಳಬಹುದು. ಅದರ ಬದಲು ಮನೆಯಲ್ಲಿಯೇ ಈ ಕಲೆಯನ್ನು ತೆಗೆದು ಸಹಜ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.

ಆ್ಯಪಲ್‌ ಸೈಡರ್‌ ವಿನೆಗರ್‌: ಇದರಲ್ಲಿ ಅಮಿನೊ ಹಾಗೂ ಲಾಕ್ಟಿಕ್‌ ಆ್ಯಸಿಡ್‌ ಅಂಶ ಅಧಿಕವಿದ್ದು ಸತ್ತ ಚರ್ಮದ ಜೀವಕೋಶವನ್ನು ನಾಶ ಮಾಡಲು ಇವು ಸಹಕಾರಿ. ಇದು ಕಂಕುಳಿನ ಚಿಕ್ಕ ಚಿಕ್ಕ ರಂಧ್ರಗಳನ್ನು ಮುಚ್ಚಿ ಹೊಳಪು ಹೆಚ್ಚುವಂತೆ ಮಾಡುತ್ತದೆ. ಇದಕ್ಕೆ ನೀವು ಮಾಡಬೇಕಿರುವುದಿಷ್ಟು. ಆ್ಯಪಲ್ ಸೈಡರ್‌ ವಿನೆಗರ್‌ ಅನ್ನು ಹತ್ತಿಯಲ್ಲಿ ಅದ್ದಿ ಕಂಕುಳಿನ ಸುತ್ತಲೂ ಹಚ್ಚಿ ಒಣಗಲು ಬಿಡಿ. ಚೆನ್ನಾಗಿ ಒಣಗಿದ ಮೇಲೆ ನೀರಿನಿಂದ ತೊಳೆಯಿರಿ. ಪ್ರತಿದಿನ ಇದನ್ನು ಮಾಡುವುದರಿಂದ ಕ್ರಮೇಣ ಕಪ್ಪು ಚರ್ಮ ತಿಳಿಯಾಗುತ್ತದೆ.

ಲೋಳೆಸರ: ಲೋಳೆಸರವನ್ನು ಕಂಕುಳಿಗೆ ಹಚ್ಚುವುದರಿಂದ ಆ ಭಾಗದ ಚರ್ಮವು ಮೃದುವಾಗುವುದರೊಂದಿಗೆ ಹೊಳಪು ಹೆಚ್ಚುತ್ತದೆ. ಅದಕ್ಕೆ ನೀವು ಮಾಡಬೇಕಾಗಿರುವುದು ಲೋಳೆಸರದ ಗಿಡದಿಂದ ಎಲೆಯನ್ನು ಕಿತ್ತು ಅದರ ಒಳಗಿರುವ ಲೋಳೆಯನ್ನು ಕಂಕುಳಿಗೆ ಹಚ್ಚಿ. 15 ನಿಮಿಷಗಳ ಕಾಲ ಒಣಗಲು ಬಿಡಿ. ನಂತರ ನೀರಿನಿಂದ ತೊಳೆಯಿರಿ. ಇದನ್ನು ದಿನ ಬಿಟ್ಟು ದಿನ ಮಾಡಿ.

ಸೌತೆಕಾಯಿ: ಸೌತೆಕಾಯಿಯಲ್ಲಿ ಬ್ಲೀಚಿಂಗ್ ಅಂಶವಿದ್ದು ಇದು ಚರ್ಮದ ಉಷ್ಣಾಂಶವನ್ನು ಕಡಿಮೆ ಮಾಡುವ ಜೊತೆಗೆ ಕಾಂತಿಯನ್ನು ಹೆಚ್ಚಿಸುತ್ತದೆ. ಸೌತೆಕಾಯಿಯನ್ನು ಅರೆದು ರಸ ತೆಗೆಯಿರಿ. ನಂತರ ಹತ್ತಿಯನ್ನು ರಸದಲ್ಲಿ ಅದ್ದಿ ಕಂಕುಳಿನ ಸುತ್ತಲೂ ಹಚ್ಚಿ. ಈ ರೀತಿ ಪ್ರತಿದಿನ ಮಾಡುವುದರಿಂದ ಕಂಕುಳ ಹೊಳಪು ಹೆಚ್ಚುವುದಲ್ಲದೇ ಕಂಕುಳಿನಿಂದ ಬರುವ ದುರ್ವಾಸನೆಯೂ ಕಡಿಮೆಯಾಗುತ್ತದೆ.

ಸಕ್ಕರೆ ಹಾಗೂ ಆಲಿವ್ ಎಣ್ಣೆ: ಸಕ್ಕರೆ ಹಾಗೂ ಆಲಿವ್ ಎಣ್ಣೆಯ ಮಿಶ್ರಣವನ್ನು ಹಚ್ಚುವುದರಿಂದ ಒಣಚರ್ಮಕ್ಕೆ ಮರುಜೀವ ಸಿಗುವುದಲ್ಲದೇ ಕಾಂತಿಯು ಹೆಚ್ಚುತ್ತದೆ. ಅದಕ್ಕಾಗಿ ಎರಡು ಚಮಚ ಸಕ್ಕರೆಗೆ ಒಂದು ಚಮಚ ಆಲಿವ್ ಎಣ್ಣೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದನ್ನು ಕಂಕುಳಿಗೆ ಹಚ್ಚಿ ಸ್ಕ್ರಬ್‌ನಂತೆ ಉಜ್ಜಿ. 10 ನಿಮಿಷ ಒಣಗಲು ಬಿಟ್ಟು ನಂತರ ತಣ್ಣೀರಿನಿಂದ ತೊಳೆಯಿರಿ. ಇದನ್ನು ಪ್ರತಿದಿನ ಮಾಡುವುದರಿಂದ ಹದಿನೈದು ದಿನಗಳಲ್ಲಿ ಫಲಿತಾಂಶ ನಿರೀಕ್ಷಿಸಬಹುದು.

ಆಲೂಗೆಡ್ಡೆ: ಚರ್ಮದ ಯಾವುದೇ ಭಾಗ ಕಪ್ಪಾಗಿರಲಿ, ಅಲ್ಲಿ ಅಲೂಗೆಡ್ಡೆ ರಸ ಹಚ್ಚುವುದರಿಂದ ಕಪ್ಪಾದ ಭಾಗ ನಿಧಾನಕ್ಕೆ ಬೆಳ್ಳಗಾಗುವುದಲ್ಲದೇ ಚರ್ಮದ ಹೊಳಪು ಹೆಚ್ಚುತ್ತದೆ. ಆಲೂಗೆಡ್ಡೆಯನ್ನು ಎರಡು ಭಾಗ ಮಾಡಿ ಅದನ್ನು ಕಂಕುಳಿಗೆ ಉಜ್ಜಬಹುದು ಅಥವಾ ಆಲೂಗೆಡ್ಡೆಯ ಸಿಪ್ಪೆ ತೆಗೆದು ಅದನ್ನು ಅರೆದು ರಸ ತೆಗೆದು ಹಚ್ಚಬಹುದು. ಅದನ್ನು 15 ರಿಂದ 20 ನಿಮಿಷಗಳ ಕಾಲ ಹಾಗೇ ಬಿಟ್ಟು ಒಣಗಿದ ಮೇಲೆ ತೊಳೆಯಬೇಕು. ಪ್ರತಿದಿನ ಹೀಗೆ ಮಾಡುವುದರಿಂದ ಕಪ್ಪು ಕಲೆ ನಿವಾರಣೆಯಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು