ಗುರುವಾರ , ಮೇ 6, 2021
22 °C

ಚರಕ ಉತ್ಸವ: ಇದೋ ದೇಸಿ ಫ್ಯಾಷನ್‌!

ಎಂ.ರಾಘವೇಂದ್ರ Updated:

ಅಕ್ಷರ ಗಾತ್ರ : | |

Prajavani

‘ಡಿಸೈನ್’ ಎಂಬುದು ಸದ್ಯದ ಮಟ್ಟಿಗೆ ಕಾರ್ಪೋರೇಟ್ ಭಾಷೆಯಾಗಿ ಚಾಲ್ತಿಯಲ್ಲಿದೆ. ಅದನ್ನು ಬೇರುಮಟ್ಟಕ್ಕೆ ಇಳಿಸಿ ನಗರಗಳಿಂದ ಹಳ್ಳಿಗೆ ತರಬೇಕು. ಕುಶಲಕರ್ಮಿಗಳು ಮತ್ತು ವಿನ್ಯಾಸಕಾರರ ನಡುವಿನ ಅಂತರವನ್ನು ಹೋಗಲಾಡಿಸಬೇಕು ಎಂಬ ಆಶಯ ಚರಕದ ಈ ಯತ್ನದ ಹಿಂದಿದೆ…

***

ಸಾಗರ ತಾಲ್ಲೂಕಿನ ಹೊನ್ನೇಸರ ಗ್ರಾಮದಲ್ಲಿ ನಡೆದ ಚರಕ ಉತ್ಸವ ನೋಡಲು ಬಂದವರಿಗೊಂದು ಅಚ್ಚರಿ ಕಾದಿತ್ತು. ಕೊರೊನಾ ಏರುಗತಿಯಲ್ಲಿದ್ದ ಕಾಲದಲ್ಲಿ ಚರಕದ ‘ಶ್ರಮಜೀವಿ’ಗಳು ನಿರ್ಮಿಸಿದ ಮಣ್ಣಿನ ಕಟ್ಟಡದಲ್ಲಿ ಹಿನ್ನೆಲೆಯಿಂದ ಪಾಶ್ಚಾತ್ಯ ಸಂಗೀತ ಅಲೆ ಅಲೆಯಾಗಿ ತೇಲಿ ಬರುತ್ತಿತ್ತು. ವೇದಿಕೆಯಲ್ಲಿ ಮಂದವಾದ ಬೆಳಕು ಉಜ್ವಲಗೊಂಡು ವಿವಿಧ ರೂಪ ಪಡೆಯುತ್ತಿದ್ದಂತೆ ತರಹೇವಾರಿ ಕೈಮಗ್ಗದ ಉಡುಪು ಧರಿಸಿದ್ದ ಹೆಣ್ಣುಮಕ್ಕಳು ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದರು. ಹೀಗೆ ‘ಕ್ಯಾಟ್ ವಾಕ್‌’ ಮಾಡಿದ ರೂಪದರ್ಶಿಗಳು ಚರಕದಲ್ಲೇ ಕೆಲಸ ಮಾಡುವ ಹೆಣ್ಣುಮಕ್ಕಳೇ ಆಗಿದ್ದರು. ಅವರು ಮೈತುಂಬಾ ತೊಟ್ಟಿದ್ದ ಅಪ್ಪಟ ದೇಸಿ ಉಡುಪುಗಳನ್ನು ನೋಡಿ ಕೈಮಗ್ಗದ ಉತ್ಪನ್ನಗಳಿಗೆ ಇಂತಹ ವಿನ್ಯಾಸ ಸಾಧ್ಯವೇ ಎಂದು ಅಲ್ಲಿ ನೆರೆದಿದ್ದವರು ಹುಬ್ಬೇರಿಸಿ ಚಪ್ಪಾಳೆ ತಟ್ಟಿದರು.

ಚರಕದ ಮಹಿಳೆಯರ ಪುಟ್ಟ ಮಕ್ಕಳು ಶುಭ್ರ ಬಿಳಿಬಣ್ಣದ ಪುಟ್ಟ ಗಾತ್ರದ ಪಂಚೆ, ಅಡಿಕೆ ಚೊಗರು ಬಳಸಿದ ಕೈಮಗ್ಗದ ಅಂಗಿ, ಅದರ ಮೇಲೊಂದು ಶಲ್ಯ ಹೊದ್ದು ಹಿನ್ನೆಲೆಯಲ್ಲಿ ಕೇಳುತ್ತಿದ್ದ ಸಂಗೀತಕ್ಕೆ ತಕ್ಕಂತೆ ಲಯಬದ್ಧವಾಗಿ ಪುಟ್ಟ ಪುಟ್ಟ ಹೆಜ್ಜೆ ಇಟ್ಟಾಗ ಚಪ್ಪಾಳೆ ಸದ್ದು ತಾರಕಕ್ಕೇರಿತ್ತು.

ಕೈಮಗ್ಗದ ಉತ್ಪನ್ನಗಳು ಎಂದರೆ ಅದರಲ್ಲಿ ವೈವಿಧ್ಯವಿಲ್ಲ ಎಂಬ ಭಾವನೆ ಸಾಮಾನ್ಯ. ಈ ಭಾವನೆಯನ್ನೇ ಸುಳ್ಳು ಮಾಡುವಂತೆ ಅವತ್ತು ಮಲೆನಾಡಿನ ಹಳ್ಳಿಯ ಹೆಣ್ಣುಮಕ್ಕಳು ‘ದೇಸಿ ಫ್ಯಾಷನ್ ಶೋ’ ಮೂಲಕ ಹೊಸ ಲೋಕವನ್ನೇ ಅನಾವರಣಗೊಳಿಸಿದ್ದರು.

ಕೈಮಗ್ಗದ ಉತ್ಪನ್ನಗಳಿಗೆ ‘ವಿನ್ಯಾಸ’ದ ಹೊಸ ಸಾಧ್ಯತೆಗಳನ್ನು ಅನ್ವೇಷಿಸುವ ಕಾರ್ಯ ಈಗ ಚರಕ ಸಂಸ್ಥೆಯಲ್ಲಿ ಆರಂಭವಾಗಿದೆ. ಇಲ್ಲಿನ ಉತ್ಪನ್ನಗಳಾದ ಸೀರೆ, ಚೂಡಿದಾರ್, ದುಪ್ಪಟ್ಟಾ, ಓವರ್ ಕೋಟ್, ಶಾರ್ಟ್ ಟಾಪ್, ಸ್ಕರ್ಟ್, ಪಂಚೆ, ಕುರ್ತಾ, ಪೈಜಾಮಾ, ಜುಬ್ಬಾ, ನೈಟ್ ಪ್ಯಾಂಟ್, ಶರ್ಟ್, ಮಕ್ಕಳ ಉಡುಪು, ಗಾಂಧಿ ಟೋಪಿ, ಶಾಲು, ಶಲ್ಯ, ಟವೆಲ್, ಕೌದಿ, ಬ್ಯಾಗ್, ಪರ್ಸ್ ಮೊದಲಾದ ಉತ್ಪನ್ನಗಳಿಗೆ ಹೊಸರೂಪ ನೀಡುವ ಪ್ರಯೋಗಕ್ಕೆ ಚರಕ ಮುಂದಾಗಿದೆ.

ಚರಕದ ಈ ಹೆಜ್ಜೆಯು ತಜ್ಞರ ಮೆಚ್ಚುಗೆಯನ್ನೂ ಗಳಿಸಿದೆ. ‘ಈಗಿನ ಬಹುತೇಕ ಯೋಜನೆಗಳು ನಗರ ಕೇಂದ್ರಿತವಾಗಿವೆ. ಹಳ್ಳಿಯ ಜನರನ್ನು ನಗರಕ್ಕೆ ತರುವುದೇ ಅಭಿವೃದ್ಧಿಯ ಸೂಚ್ಯಂಕ ಎನ್ನಲಾಗುತ್ತಿದೆ. ನಗರದವರನ್ನು ಹಳ್ಳಿಗೆ ಕರೆಸುವ ಡಿಸೈನ್ ಸೆಂಟರ್‌ನ ಪರಿಕಲ್ಪನೆ ವಿಶಿಷ್ಟವಾಗಿದೆ’ ಎನ್ನುತ್ತಾರೆ ಸಮಾಜಶಾಸ್ತ್ರಜ್ಞ ಚಂದನ್ ಗೌಡ.

ನೈಸರ್ಗಿಕ ಬಣ್ಣದ ಉಡುಪುಗಳು ಚರಕದ ಹೆಗ್ಗಳಿಕೆ. ಯಂತ್ರಚಾಲಿತ ಮುದ್ರಣ ವ್ಯವಸ್ಥೆ ಬರುವ ಮೊದಲು ಬಟ್ಟೆಗಳ ಮೇಲೆ ಪಡಿಯಚ್ಚು ಮೂಲಕ ಚಿತ್ರಗಳನ್ನು ಮುದ್ರಿಸಲಾಗುತ್ತಿತ್ತು. ಚರಕ ಈಗಲೂ ಪಡಿಯಚ್ಚು ಮುದ್ರಣ ತಂತ್ರಜ್ಞಾನವನ್ನೇ ಬಳಸುತ್ತಿದೆ. ಕರ್ನಾಟಕದ ಪ್ರಮುಖ ಜಾನಪದ ದೃಶ್ಯಕಲಾ ಪ್ರಕಾರವಾಗಿರುವ ಹಸೆಚಿತ್ತಾರ ಕಲೆಯನ್ನು ತನ್ನ ಉಡುಪುಗಳ ಮೇಲೆ ವಿನ್ಯಾಸದ ರೂಪದಲ್ಲಿ ಯಶಸ್ವಿಯಾಗಿ ಚರಕ ಅಳವಡಿಸುತ್ತಿದೆ.

ಹೊನ್ನೇಸರ ಗ್ರಾಮದ ಶ್ರಮಜೀವಿ ಆಶ್ರಮದಲ್ಲಿ ‘ಡಿಸೈನ್ ಸೆಂಟರ್’ ಆರಂಭಿಸಲು ಭರದಿಂದ ಸಿದ್ಧತೆಗಳು ನಡೆದಿವೆ. ನೇಕಾರರು, ವಿನ್ಯಾಸಕಾರರು, ಉದ್ಯಮಿಗಳು, ಸಮಾಜ ಶಾಸ್ತ್ರಜ್ಞರು, ಕಲಾ ಮಾಧ್ಯಮದ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಪರಿಣತರ ಕಾರ್ಯಾಗಾರವನ್ನೂ ಸಂಘಟಿಸಲಾಗಿದೆ. ಚರಕ ಸಂಸ್ಥೆಯಲ್ಲಿ ರೂಪುಗೊಳ್ಳಲಿರುವ ‘ಡಿಸೈನ್ ಸೆಂಟರ್’ನ ಸ್ವರೂಪ ಹೇಗಿರಬೇಕು? ದೇಶದ ಇತರ ರಾಜ್ಯಗಳಲ್ಲಿ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆಗಳ ಮಾದರಿಯನ್ನು ಅಳವಡಿಸಿ ಕೊಳ್ಳಬಹುದೇ  ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಕ್ರಿಯೆ ನಡೆದಿದೆ.

‘ಡಿಸೈನ್’ ಎಂಬುದು ಸದ್ಯದ ಮಟ್ಟಿಗೆ ಕಾರ್ಪೊರೇಟ್ ಭಾಷೆಯಾಗಿ ಚಾಲ್ತಿಯಲ್ಲಿದೆ. ಅದನ್ನು ಬೇರುಮಟ್ಟಕ್ಕೆ ಇಳಿಸಿ ನಗರಗಳಿಂದ ಹಳ್ಳಿಗೆ ತರಬೇಕು. ಕುಶಲಕರ್ಮಿಗಳು ಮತ್ತು ವಿನ್ಯಾಸಕಾರರ ನಡುವಿನ ಅಂತರವನ್ನು ಹೋಗಲಾಡಿಸಬೇಕು ಎಂಬ ಆಶಯ ಚರಕದ ಈ ಯತ್ನದ ಹಿಂದಿದೆ. ಸದ್ಯಕ್ಕೆ ಚಾಲ್ತಿಯಲ್ಲಿರುವ ಆರ್ಟ್ ಸ್ಕೂಲ್‌ಗಳಿಗೆ ಕುಶಲಕರ್ಮಿಗಳ ಮಕ್ಕಳು ಪ್ರವೇಶ ಪಡೆಯಲು ಸಾಧ್ಯವಾಗದ ಸ್ಥಿತಿ ಇದೆ. ನೂತನ ಡಿಸೈನ್ ಸೆಂಟರ್‌ನಲ್ಲಿ ಅಂತಹ ಮಕ್ಕಳಿಗೂ ಪ್ರವೇಶ ದೊರಕಿಸಿ ಕೂಲಿಕಾರರನ್ನು ಕಲಾಕಾರರನ್ನಾಗಿ ರೂಪಿಸುವ ಆಶಯವನ್ನೂ ಸಂಸ್ಥೆ ಹೊಂದಿದೆ.

‘ಡಿಸೈನ್’ ಎನ್ನುವುದು ತಂತ್ರಜ್ಞಾನವನ್ನು ಬಿಟ್ಟಿಲ್ಲ. ಆದರೆ ಮಿತವ್ಯಯದ, ಪರಿಸರಸ್ನೇಹಿಯಾಗಿರುವ, ಸುಸ್ಥಿರ ಮಾದರಿಯ ತಂತ್ರಜ್ಞಾನ ಬಳಕೆ ಹೊಸ ಡಿಸೈನ್ ಸೆಂಟರ್‌ನಲ್ಲಿ ಇರಬೇಕು ಎಂಬ ಆಶಯದಿಂದ ಕೆಲಸ ಆರಂಭಿಸಲಾಗಿದೆ. ಕಲೆ-ಕುಶಲಕರ್ಮಿ, ವಿನ್ಯಾಸಕಾರ-ಕುಶಲಕರ್ಮಿ, ಪರಂಪರೆ-ಆಧುನಿಕತೆ, ತಂತ್ರಜ್ಞಾನ-ದೇಸಿಜ್ಞಾನ ಇವುಗಳ ನಡುವೆ ಸಾವಯವ ಸಂಬಂಧ ಕಲ್ಪಿಸಿ ಅಂತಿಮವಾಗಿ ಕುಶಲಕರ್ಮಿಗಳೇ ವಿನ್ಯಾಸಕಾರರಾಗಬೇಕು ಎಂಬ ಮಹತ್ವಾಕಾಂಕ್ಷೆ ನೂತನ ಡಿಸೈನ್ ಸೆಂಟರ್‌ನ ಹಿಂದಿದೆ.

ದೇಸಿ ಚಿಂತಕ ಪ್ರಸನ್ನ ಅವರ ಮಾತಿನಲ್ಲಿ ಈ ಆಶಯ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ‘ಇದೊಂದು ಪರಂಪರೆ-ಆಧುನಿಕತೆಯನ್ನು ಬೆಸೆಯುವ ಕೆಲಸ. ಡಿಸೈನ್ ಸೆಂಟರ್‌ನಲ್ಲಿ ವಿನ್ಯಾಸಕಾರರು, ಕುಶಲಕರ್ಮಿಗಳು ಒಟ್ಟಾಗಿ ಕಲಿಯುತ್ತಾರೆ ಮತ್ತು ಕಲಿಸುತ್ತಾರೆ. ವಿದ್ಯಾವಂತರಾಗಿರುವ ವಿನ್ಯಾಸಕಾರರು ಮತ್ತು ಅರೆ ಅಕ್ಷರಸ್ಥರಾಗಿರುವ ಕುಶಲಕರ್ಮಿಗಳ ಭಾಷೆ ಒಂದೇ ಸ್ವರೂಪದಲ್ಲಿರುವಂತೆ ಮಾಡಬೇಕಿದೆ’ ಎಂದು ಅವರು ಹೇಳುತ್ತಾರೆ.

‘ವಿನ್ಯಾಸಕ್ಕೆ ಸಂಬಂಧಪಟ್ಟಂತೆ ಇರುವ ಆಧುನಿಕ ಮತ್ತು ದೇಸಿ ತಂತ್ರಜ್ಞಾನಗಳ ವಿನಿಮಯ ಆಗಬೇಕಿದೆ. ಗ್ರಾಮೀಣ ಜನತೆಯ ಜನಪದೀಯ ಸ್ಪರ್ಶ ವಿನ್ಯಾಸಕಾರರಿಗೆ ದೊರೆತರೆ ಕೈಮಗ್ಗ ಉತ್ಪನ್ನಗಳ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಬದಲಾವಣೆ ಕಾಣಲು ಸಾಧ್ಯ’ ಎಂದು ವಿನ್ಯಾಸಕಾರ ಗೋಪಿಕೃಷ್ಣ ಅಭಿಪ್ರಾಯಪಡುತ್ತಾರೆ.

ಕೈಮಗ್ಗ ಉತ್ಪನ್ನಗಳಿಗೆ ಜನಪದ ಮತ್ತು ಆಧುನಿಕತೆ ಬೆಸೆದು ಹೊಸ ರೂಪವನ್ನು ಕೊಟ್ಟು ಅದರ ಮಾರುಕಟ್ಟೆ ವಿಸ್ತರಣೆಗೆ ಸಿದ್ಧತೆ ಕೂಡ ನಡೆದಿದೆ. ಕೈಮಗ್ಗ ಅವನತಿಯ ಹಾದಿಯಲ್ಲಿರುವ ಉದ್ಯಮ ಎನ್ನುವುದನ್ನು ಸುಳ್ಳು ಮಾಡಿ ಅದು ಗ್ರಾಮೀಣ ಜನರ ಕೈಗೆ ಉದ್ಯೋಗ ಕೊಡುವ ಕಾಯಕಲ್ಪದ ಕಸುಬು ಎಂಬುದನ್ನು ದೃಢಪಡಿಸಲು ಚರಕ ಹೊಸ ಹೆಜ್ಜೆ ಇಡಲು ಮುಂದಾಗಿದೆ.

ಚರಕದ ಬೆಳ್ಳಿ ಹೆಜ್ಜೆಗಳು
ಸಾಗರ ತಾಲ್ಲೂಕಿನ ಭೀಮನಕೋಣೆ-ಹೆಗ್ಗೋಡು ಗ್ರಾಮದಲ್ಲಿ 1994ರಲ್ಲಿ ಎರಡು ಕೈಮಗ್ಗಗಳು ಬೆರಳೆಣಿಕೆಯ ನೌಕರರೊಂದಿಗೆ ಆರಂಭಿಸಿದ ಚರಕ ಸಂಸ್ಥೆಯಲ್ಲಿ ಈಗ 800 ಕೆಲಸಗಾರರಿದ್ದಾರೆ. ವರ್ಷಕ್ಕೆ ರೂ 4.5 ಕೋಟಿ ವಹಿವಾಟು. ಶೇ 90ರಷ್ಟು ಮಹಿಳಾ ನೌಕರರಿದ್ದಾರೆ. ಗ್ರಾಮೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಚರಕ ಸಂಸ್ಥೆ ಬೆಳ್ಳಿಹಬ್ಬದ ಸಂಭ್ರಮವನ್ನೂ ಆಚರಿಸಿಕೊಂಡಿದೆ.

ಲಾಕ್‌ಡೌನ್ ನಡುವೆಯೂ ಚರಕ ಸಂಸ್ಥೆ ತನ್ನ 800 ನೇಕಾರರು ಹಾಗೂ ಕುಶಲಕರ್ಮಿಗಳಿಗೆ ಕೆಲಸ ನೀಡುವ ಮೂಲಕ ಗ್ರಾಮೀಣ ಭಾಗದ ಬಡವರನ್ನು ಕಾಯುವ ಕೆಲಸ ಮಾಡಿದೆ. ಆ ಅವಧಿಯಲ್ಲಿ ಚರಕ ಸಂಸ್ಥೆ ಉತ್ಪಾದಿಸಿದ ಕೈಮಗ್ಗದ ಸಿದ್ಧ ಉಡುಪುಗಳು ಮಾರಾಟವಾಗದೆ ಸಂಸ್ಥೆಯ ಗೋದಾಮಿನಲ್ಲಿ ಉಳಿದಿದ್ದವು. ಹೀಗಾಗಿ ನೇಕಾರಿಕೆಗೆ ಸಂಬಂಧಪಟ್ಟ ಕೆಲಸಗಳನ್ನು ನಿಲ್ಲಿಸಿ ಮಣ್ಣಿನ ಕೆಲಸ, ಸಾರ್ವಜನಿಕ ಕೆರೆ ಅಭಿವೃದ್ಧಿ, ಹಸೆ ಚಿತ್ತಾರ ಮೊದಲಾದ ಕೆಲಸಗಳಲ್ಲಿ ಸಂಸ್ಥೆಯು ಕೆಲಕಾಲ ನಿರತವಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು