ಶನಿವಾರ, ಜೂಲೈ 11, 2020
23 °C

ಹೂಡಿಕೆ: ದಕ್ಷಿಣ ಭಾರತಕ್ಕೆವಿಫುಲ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೂಡಿಕೆ: ದಕ್ಷಿಣ ಭಾರತಕ್ಕೆವಿಫುಲ ಅವಕಾಶ

ಬೆಂಗಳೂರು: ಮೂಲಸೌಕರ್ಯ ವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ, ಭೂಸ್ವಾಧೀನ ಪ್ರಕ್ರಿಯೆ ವಿಳಂಬ ತಪ್ಪಿಸಿದರೆ ದಕ್ಷಿಣ ಭಾರತ ರಾಜ್ಯಗಳು ಗರಿಷ್ಠ ಮಟ್ಟದ ಹೂಡಿಕೆ ಆರ್ಕಷಿಸಬಹುದು ಎಂದು ಇನ್ಫೋಸಿಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ದಕ್ಷಿಣ ವಲಯದ ಅಧ್ಯಕ್ಷ ಎಸ್. ಗೋಪಾಲಕೃಷ್ಣನ್ ಅಭಿಪ್ರಾಯಪಟ್ಟರು.

  ಶನಿವಾರ ಇಲ್ಲಿ ‘ಸಿಐಐ’ನ ದಕ್ಷಿಣ ವಲಯದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಒಟ್ಟು ಆರ್ಥಿಕ ವೃದ್ಧಿ ದರದಲ್ಲಿ (ಜಿಡಿಪಿ) ದಕ್ಷಿಣ ಭಾರತದ ಪಾಲು ಶೇ 24ರಷ್ಟಿದೆ. ಆದರೆ, ಇದು ಇತ್ತೀಚಿನ ವರ್ಷಗಳಲ್ಲಿ ಕುಸಿತ ಕಾಣುತ್ತಿದ್ದು, ಹೊಸ ಹೂಡಿಕೆಯನ್ನು ಆಕರ್ಷಿಸಲು ರಾಜ್ಯ ಸರ್ಕಾರಗಳು ತಮ್ಮ ಹೂಡಿಕೆ ನೀತಿಯಲ್ಲಿ ಬದಲಾವಣೆ ತರಬೇಕು ಎಂದರು.

 

 ಕರ್ನಾಟಕದಲ್ಲಿ ಮಾಹಿತಿ ತಂತ್ರಜ್ಞಾನ, ಆಂಧ್ರದಲ್ಲಿ ಔಷಧ ತಯಾರಿಕೆ, ತಮಿಳುನಾಡಿನಲ್ಲಿ ವಾಹನಗಳ ಬಿಡಿಭಾಗಗಳ ಉದ್ಯಮ ಹಾಗೂ ಕೇರಳದಲ್ಲಿ ಪ್ರವಾಸೋದ್ಯಮ ರಂಗದಲ್ಲಿ ವಿಫುಲ ಹೂಡಿಕೆ ಗೆ ಅವಕಾಶಗಳಿವೆ. ಈ ಅವಕಾಶಗಳನ್ನು ಬಳಸಿಕೊಳ್ಳಲು ‘ಸಿಐಐ’ ರಾಜ್ಯಗಳ ಪ್ರಧಾನ ಕಾರ್ಯದರ್ಶಿಗಳು ಮತ್ತು ಉದ್ದಿಮೆ ಮುಖಂಡರ ಸಹಭಾಗಿತ್ವದಲ್ಲಿ ಪರಿಶೀಲನಾ ಸಮಿತಿ ರಚಿಸಿದೆ ಎಂದರು.‘ಹಣದುಬ್ಬರವನ್ನು ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಸಾಲದ ಮೇಲಿನ ಬಡ್ಡಿ ದರ ಹೆಚ್ಚಿಸಿರುವುದು ಕೈಗಾರಿಕಾ ವೃದ್ಧಿ ದರದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಪೂರೈಕೆ  ಸರಪಣಿ ಸರಿಪಡಿಸುವ ಮೂಲಕ ಆಹಾರ ಹಣದುಬ್ಬರ ನಿಯಂತ್ರಿಸಬಹುದು. ಆದರೆ, ಕಳೆದ ಕೆಲವು ವರ್ಷಗಳಲ್ಲಿ ಕುಸಿತ ಕಂಡಿರುವ ಕಾರ್ಪೊರೇಟ್ ಹೂಡಿಕೆಯನ್ನು ಮರಳಿ ಪಡೆಯಲು ಸರ್ಕಾರ ಸೂಕ್ತ ರೂಪುರೇಷೆ ಸಿದ್ಧಪಡಿಸಬೇಕಿದೆ’ ಎಂದು ಭಾರತೀಯ ಕೈಗಾರಿಕಾ ಒಕ್ಕೂಟದ  ಅಧ್ಯಕ್ಷ ಹರಿ ಎಸ್. ಭಾರ್ತಿಯ ಹೇಳಿದರು.

 

‘ಮುಂದಿನ ಪಂಚವಾರ್ಷಿಕ ಯೋಜನೆಯಲ್ಲಿ ಸುಸ್ಥಿರ ಮತ್ತು ಪರಿಸರ ಸ್ನೇಹಿ ಅಭಿವೃದ್ಧಿ ಸಾಧಿಸಲು ಹೊಸ ಹೂಡಿಕೆ ಯೋಜನೆ ರೂಪಿಸಲಿದ್ದೇವೆ.  ಸರ್ಕಾರಿ-ಖಾಸಗಿ ಸಹಭಾಗಿತ್ವ ಪ್ರೋತ್ಸಾಹಿಸುವ ಮೂಲಕ, ಒಟ್ಟಾರೆ ಪ್ರಗತಿ ನೀತಿಗಳ ಮರು ವಿನ್ಯಾಸಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಕೇಂದ್ರ ಯೋಜನಾ ಆಯೋಗದ ಸದಸ್ಯ ಅರುಣ್ ಮೈರಾ ಅಭಿಪ್ರಾಯಪಟ್ಟರು.

ದಕ್ಷಿಣ ಭಾರತದಲ್ಲಿ ಜಿಡಿಪಿ ಕುಸಿತ: ಮೆಕಿನ್ಸಿ ಸಮೀಕ್ಷೆ

ಬೆಂಗಳೂರು: ದಕ್ಷಿಣ ಭಾರತ ಪ್ರಮುಖ ನಾಲ್ಕು ರಾಜ್ಯಗಳ ಆರ್ಥಿಕ ವೃದ್ಧಿ ದರ (ಜಿಡಿಪಿ) ಇತ್ತೀಚಿನ ವರ್ಷಗಳಲ್ಲಿ ತೀವ್ರ ಕುಸಿತ ಕಂಡಿದೆ ಎಂದು  ಭಾರತೀಯ ಕೈಗಾರಿಕಾ ಒಕ್ಕೂಟ  ನಿಯೋಜಿಸಿದ್ದ  ಮೆಕಿನ್ಸಿ ಸಮೀಕ್ಷಾ ವರದಿ ತಿಳಿಸಿದೆ.

ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಜಿಡಿಪಿ ದರ ರಾಷ್ಟ್ರೀಯ ಸರಾಸರಿಗಿಂತಲೂ ಕಡಿಮೆ ಇದೆ. ದೇಶದ ನೈಜ ಜಿಡಿಪಿ ದರ ಶೇ 8.7ಕ್ಕೆ ಹೋಲಿಸಿದರೆ  ಈ ನಾಲ್ಕು ರಾಜ್ಯಗಳ ಒಟ್ಟು ವೃದ್ಧಿ ದರ ಶೇ 7.85ರಷ್ಟಿದೆ ಎಂದು ಮೆಕಿನ್ಸಿ ಪಾಲುದಾರ ಅನಂತ್ ನಾರಾಯಣ್ ಇಲ್ಲಿ ಮಾಹಿತಿ ನೀಡಿದರು.

 

 ’ದಕ್ಷಿಣ ಭಾರತದಲ್ಲಿ ಮುಂದಿನ ಪ್ರಗತಿ ಅಲೆ’ ಕುರಿತು ಸಮೀಕ್ಷೆ ನಡೆಸಿರುವ ಮೆಕಿನ್ಸಿ ತಂಡ, ಕರ್ನಾಟಕ ಶೇ 8.7ರಷ್ಟು, ಕೇರಳ 8.1ರಷ್ಟು ಆಂಧ್ರಪ್ರದೇಶ ಮತ್ತು ತಮಿಳುನಾಡು ಶೇ 7.4ರಷ್ಟು ವೃದ್ಧಿ ದರ ಹೊಂದಿದೆ. ಆದರೆ, ಗುಜರಾತ್‌ನಲ್ಲಿ ಜಿಡಿಪಿ   ಶೇ 11ರಷ್ಟಿದ್ದು, ಕಳೆದ 5 ವರ್ಷಗಳಲ್ಲಿ ಶೇ 35ರಷ್ಟು ಹೊಸ ಹೂಡಿಕೆಗಳನ್ನು ಆರ್ಕಷಿಸಿದೆ ಎಂದರು.

ದಕ್ಷಿಣ ಭಾರತದಲ್ಲಿ ಭೂಮಿಯ ಬೆಲೆ ಹೆಚ್ಚಿರುವುದು, ಕಾರ್ಮಿಕರ ಕೊರತೆ, ಸಾರಿಗೆ, ವಿದ್ಯುತ್ ಸಮಸ್ಯೆ, ಹೆಚ್ಚಿರುವುದರಿಂದ ಹೂಡಿಕೆ ಆರ್ಕಷಣೆ ಕಡಿಮೆಯಾಗಿದೆ. ಕೈಗಾರಿಕಾ ಸಮೂಹಗಳನ್ನು ಸೃಷ್ಟಿಸಿಕೊಳ್ಳುವ ಮೂಲಕ ಜಾಗತಿಕ ಹೂಡಿಕೆದಾರರನ್ನು ಸೆಳೆಯಬಹುದು ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.