ಭಾನುವಾರ, ಜುಲೈ 3, 2022
27 °C
ಕೃಷಿ ಮತ್ತು ಪೂರಕ ವಲಯಕ್ಕೆ ₹33,700 ಕೋಟಿ ಅನುದಾನ l ಸಣ್ಣ, ಅತಿ ಸಣ್ಣ ರೈತರಿಗೆ ಹೆಚ್ಚಿನ ಒತ್ತು

Karnataka Budget: ‘ಅನ್ನದಾತ’ರಿಗೆ ಶಕ್ತಿ ತುಂಬುವ ಕಸರತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಎರಡು– ಮೂರು ವರ್ಷಗಳ ನಿರಂತರ ಅತಿವೃಷ್ಟಿ, ಕೋವಿಡ್‌ ಪರಿಸ್ಥಿತಿ ಮತ್ತು ಲಾಕ್‌ಡೌನ್‌ ಆರ್ಥಿಕ ಸಂಕಷ್ಟದಿಂದ ಬಸವಳಿದಿರುವ ‘ಅನ್ನದಾತ’ರಿಗೆ ಶಕ್ತಿ ತುಂಬುವ ಪ್ರಯತ್ನ ನಡೆದಿದೆ. ವಿಶೇಷವಾಗಿ ಕೃಷಿ ವಲಯದ ದೊಡ್ಡ ಸಮುದಾಯವಾಗಿರುವ ಸಣ್ಣ, ಅತಿ ಸಣ್ಣ ರೈತರು ಮತ್ತು ಕೃಷಿ ಕಾರ್ಮಿಕರ ಮೇಲೆ ಗಮನ ಕೇಂದ್ರೀಕರಿಸಿರುವುದು ನಿಚ್ಚಳವಾಗಿದೆ.

ಸಾಲ ಸೌಲಭ್ಯ, ಯಂತ್ರೋಪಕರಣಗಳ ಹೆಚ್ಚಿನ ಬಳಕೆಗೆ ಪ್ರೋತ್ಸಾಹ ಮತ್ತು ಸಹಾಯಧನ, ತೋಟಗಾರಿಕೆ ಮತ್ತು ಸಾವಯವ ಉತ್ಪನ್ನಗಳು, ಹೈನುಗಾರಿಕೆ, ರೇಷ್ಮೆ ಕೃಷಿಕರಿಗೂ ಆದ್ಯತೆ ನೀಡಲಾಗಿದೆ.

‘ರೈತರ ಆದಾಯವನ್ನು ದ್ವಿಗುಣ ಗೊಳಿಸುವ ದಿಸೆಯಲ್ಲಿ ನಿರ್ದಿಷ್ಟ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಕೃಷಿ ಕ್ಷೇತ್ರದ ಸುಧಾರಣೆಗಾಗಿ ಮತ್ತು ಕೃಷಿಯನ್ನು ಲಾಭದಾಯಕವಾಗಿಸಲು ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌, ನೀರಾವರಿ ಸೌಲಭ್ಯ, ರಿಯಾಯಿತಿ ದರದಲ್ಲಿ ಬೀಜ, ಗೊಬ್ಬರ, ಕೃಷಿ ಯಂತ್ರೋಪಕರಣಗಳಿಗೆ ಸಹಾಯಧನ, ಪಿಎಂ ಕಿಸಾನ್‌ ಸಹಾಯಧನ ಹಲವು ಸೌಲಭ್ಯ ಒದಗಿಸಲಾಗಿದೆ. ಇದು ಆತ್ಮನಿರ್ಭರ ಭಾರತ ನಿರ್ಮಾಣದ ಆಶಯಕ್ಕೆ ಪೂರಕವಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಈ ಮೂಲಕ ಕೃಷಿ ವಲಯದ ದೊಡ್ಡ ಸಮುದಾಯವನ್ನು ತಲುಪಿ, ‘ಮತದ ಬುಟ್ಟಿ’ಯನ್ನು ಭದ್ರಪಡಿಸುವ ಚಾಣಕ್ಷತನವನ್ನು ತೋರಿದ್ದಾರೆ.

ಕೃಷಿ ಉತ್ಪಾದಕತೆ ಹೆಚ್ಚಿಸಲು ಯಂತ್ರಗಳ ಬಳಕೆಯನ್ನು ಪ್ರೋತ್ಸಾಹಿಸಲು ‘ರೈತ ಶಕ್ತಿ’ ಯೋಜನೆ ಪ್ರಸ್ತಾಪಿಸಲಾಗಿದೆ.

ನೈಸರ್ಗಿಕ ಕೃಷಿ ಪದ್ಧತಿಯನ್ನು ಇನ್ನಷ್ಟು ಪ್ರದೇಶಕ್ಕೆ ವಿಸ್ತರಿಸುವುದು, ರೈತರ ಮಕ್ಕಳಿಗೆ ಕೃಷಿ ಶಿಕ್ಷಣ ನೀಡಲು ಬಳ್ಳಾರಿ ಜಿಲ್ಲೆಯ ಹಗರಿ ಮತ್ತು ಬೆಳಗಾವಿ ಅಥಣಿಯಲ್ಲಿ ಹೊಸ ಕೃಷಿ ಕಾಲೇಜುಗಳ ಆರಂಭ, ಬೆಳೆಗಳಿಗೆ ಉತ್ತಮ ಬೆಲೆ ತಂದು ಕೊಡುವ ನಿಟ್ಟಿನಲ್ಲಿ ಭೌಗೋಳಿಕ ಸೂಚ್ಯಂಕ ಹೊಂದಿರುವ ತೊಗರಿಬೇಳೆಯನ್ನು ‘ಭೀಮಾ ಪಲ್ಸ್‌’ ಮತ್ತು ಕೊಡಗು ಹಾಗೂ ಜಾಂಬೋಟಿ ಜೇನು ತುಪ್ಪವನ್ನು ಬ್ರಾಂಡ್‌  ಅಡಿ ಮಾರಾಟಕ್ಕೆ ವ್ಯವಸ್ಥೆ. ಮಹಿಳೆಯರಿಗೆ ಪ್ರೋತ್ಸಾಹ ನೀಡಲು ಕೃಷಿ ಪ್ರಶಸ್ತಿ, ಕೃಷಿ ಪಂಡಿತ ಪ್ರಶಸ್ತಿ ನೀಡುವ ಪ್ರಸ್ತಾವನೆ ಇದೆ.

ಹೈನುಗಾರಿಕೆ, ತೋಟಗಾರಿಕೆ, ಕುರಿ, ಕೋಳಿ, ಹಂದಿ ಸಾಕಣೆ, ರೇಷ್ಮೆ ಕೃಷಿಕರು, ಮೀನುಗಾರಿಕೆ ಹಲವು ಪ್ರೋತ್ಸಾಹಕ ಯೋಜನೆಗಳು ಮತ್ತು ಸಹಾಯಧನವನ್ನು ಪ್ರಕಟಿಸಲಾಗಿದೆ.

ವಲಸೆ ಕುರಿ–ಮೇಕೆ ಸಾಕಣೆದಾರರು ಪ್ರಾಕೃತಿಕ ವಿಕೋಪಗಳಲ್ಲಿ ಮತ್ತು ಅಸಹಜವಾಗಿ ಮರಣ ಹೊಂದಿದ ಸಂದರ್ಭದಲ್ಲಿ ₹ 5 ಲಕ್ಷ ವಿಮಾ ಭದ್ರತೆಯ ಸೌಲಭ್ಯ. ಆಕಸ್ಮಿಕ ಮರಣ ಹೊಂದಿದ 3–6 ತಿಂಗಳಿನ ಕುರಿ, ಮೇಕೆಗಳಿಗೆ ಅನುಗ್ರಹ ಯೋಜನೆಯಡಿ ನೀಡುವ ಪರಿಹಾರ ಧನ ₹2,500ರಿಂದ ₹3,500ಕ್ಕೆ ಹೆಚ್ಚಿಸಲಾಗಿದೆ.

‘ಪುಣ್ಯಕೋಟಿ ದತ್ತು’ ಯೋಜನೆ
ಗೋಶಾಲೆಗಳಲ್ಲಿ ಸಾರ್ವಜನಿಕರು ಮತ್ತು ಖಾಸಗಿ ಸಂಸ್ಥೆಗಳು ವಾರ್ಷಿಕ ₹11,000 ಮೊತ್ತಕ್ಕೆ ಗೋವು ದತ್ತು ಪಡೆಯುವುದನ್ನು ಪ್ರೋತ್ಸಾಹಿಸಲು ‘ಪುಣ್ಯಕೋಟಿ ದತ್ತು ಯೋಜನೆ’ ಪ್ರಕಟಿಸಲಾಗಿದೆ. ಅಲ್ಲದೆ ರಾಜ್ಯದಲ್ಲಿ ಗೋಶಾಲೆಗಳನ್ನು ಈಗಿರುವ 31ರಿಂದ 100ಕ್ಕೆ ಹೆಚ್ಚಿಸಲೂ ತೀರ್ಮಾನಿಸಿದೆ. ರಾಜ್ಯದ ಸ್ಥಳೀಯ ಗೋವು ತಳಿಗಳ ರಕ್ಷಣೆ ಮತ್ತು ಸಂತತಿ ವೃದ್ಧಿ ಯತ್ನವಾಗಿ ಕೆಎಂಎಫ್‌ ಮೂಲಕ 2,000 ಗೋ ತಳಿಯನ್ನು ಹಂಚಿಕೆ ಮಾಡಲಾಗುವುದು.

ಗೋ ಮಾತಾ ಸಹಕಾರ ಸಂಘ: ಗೋಶಾಲೆಗಳ ತ್ಯಾಜ್ಯವನ್ನು ಪರಿಸರ ಸ್ನೇಹಿ ಉತ್ಪನ್ನಗಳಾಗಿಸಲು ಆರ್ಥಿಕ ನೆರವು, ಗೋ ಉತ್ಪನ್ನಗಳ ಮಾರಾಟಕ್ಕಾಗಿ ‘ಗೋಮಾತಾ ಸಹಕಾರ ಸಂಘ’ವನ್ನು ಸ್ಥಾಪಿಸಲಾಗುವುದು. ಗೋ ಉತ್ಪನ್ನಗಳ ತಾಂತ್ರಿಕತೆ ಮತ್ತು ಪ್ರಮಾಣೀಕರಣದ ಅಭಿವೃದ್ಧಿಗಾಗಿ ಪಶುವಿಶ್ವವಿದ್ಯಾಲಯದಲ್ಲಿ ಒಂದು ಸಂಶೋಧನಾ ಕೋಶ ಸ್ಥಾಪಿಸಲಾಗುವುದು. ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಪೂರಕವಾಗಿ ಇವುಗಳನ್ನು ಆರಂಭಿಸಲಾಗಿದೆ.

ಹಾಲು ಉತ್ಪಾದಕರಿಗೆ ಸಾಲ ಸೌಲಭ್ಯ ನೀಡಲು ‘ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್‌’ ಸ್ಥಾಪಿಸಲಿದ್ದು, ಇದಕ್ಕಾಗಿ ಕೆಎಂಎಫ್‌, ಜಿಲ್ಲಾ ಹಾಲು ಒಕ್ಕೂಟಗಳು ₹ 260 ಕೋಟಿ ಮತ್ತು ರಾಜ್ಯ ಸರ್ಕಾರ ₹100 ಕೋಟಿ ನೀಡಲಿವೆ.

ಕಾಳಿನದಿ ತಿರುವು ಯೋಜನೆ
ಪಶ್ಚಿಮಘಟ್ಟದಲ್ಲಿ ಹರಿಯುವ ಕಾಳಿನದಿಯ ನೀರು ಬಳಸಿ ಉತ್ತರ ಕರ್ನಾಟಕದ 5 ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಲು ಯೋಜನೆ ರೂಪಿಸಲಾಗುವುದು ಎಂದು ಪ್ರಸ್ತಾಪಿಸಲಾಗಿದೆ.ಇದು ಚರ್ಚೆಗೆ ಕಾರಣವಾಗಲಿದೆ.

ಪ್ರಮುಖ ನೀರಾವರಿ ಯೋಜನೆ ಗಳಾದ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ ₹5,000 ಕೋಟಿ, ಕಳಸಾ– ಬಂಡೂರಿ ₹1,000 ಕೋಟಿ, ಭದ್ರಾ ಮೇಲ್ದಂಡೆ ಯೋಜನೆ ₹3,000 ಕೋಟಿ, ಎತ್ತಿನ ಹೊಳೆ ಯೋಜನೆ ₹1,000 ಕೋಟಿ, ನವಲೆ ಸಮತೋಲನಾ ಜಲಾಶಯ ₹1,000 ಕೋಟಿ ಅನುದಾನ ಪ್ರಕಟಿಸಲಾಗಿದೆ.

ನಲ್ಲಿ ಸಂಪರ್ಕಕ್ಕೆ ₹7,000 ಕೋಟಿ: ಜಲ್‌ ಜೀವನ್‌ ಮಿಷನ್‌ ಅಡಿ ಈವರೆಗೆ 21.28 ಲಕ್ಷ ಮನೆಗಳಿಗೆ ₹3592 ಕೋಟಿ ವೆಚ್ಚದಲ್ಲಿ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. 2022–23ನೇ ಸಾಲಿನಲ್ಲಿ ಇನ್ನೂ 25 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲು  ₹7000 ಕೋಟಿ ವೆಚ್ಚ ಮಾಡಲಾಗುವುದು. ಪಂಚಾಯಿತಿ ಆರೋಗ್ಯ ಯೋಜನೆಯನ್ನು ಇನ್ನೂ 3,146 ಗ್ರಾಮ ಪಂಚಾಯಿತಿಗಳಿಗೆ ವಿಸ್ತರಿಸಲು ತೀರ್ಮಾನಿಸಲಾಗಿದೆ.

33 ಸಾವಿರ ಕೆರೆಗಳನ್ನು ಸರ್ವೆಮಾಡಿಸಿ, ಮೊದಲ ಹಂತದಲ್ಲಿ 1,000 ಕೆರೆಗಳನ್ನು ಗುರುತಿಸಿ ತಲಾ ₹10 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಇದಕ್ಕೆ ₹100 ಕೋಟಿ ಅನುದಾನ ನೀಡಲಾಗಿದೆ.

ಇವನ್ನೂ ಓದಿ...

Karnataka Budget: ಬೊಮ್ಮಾಯಿ ಬಜೆಟ್‌ನಲ್ಲಿ ಏನೇನಿದೆ? ಇಲ್ಲಿವೆ ಮುಖ್ಯಾಂಶಗಳು
ರಾಜ್ಯ ಬಜೆಟ್: ನವ ಭಾರತಕ್ಕಾಗಿ ನವಕರ್ನಾಟಕ: ರಾಜ್ಯ ಅಭಿವೃದ್ಧಿಗೆ ಪಂಚಸೂತ್ರಗಳು
ಕರ್ನಾಟಕ ಬಜೆಟ್–2022 | ನೀರಾವರಿಗೆ ಆದ್ಯತೆ; ಎತ್ತಿನಹೊಳೆ ಯೋಜನೆಗೆ 3 ಸಾವಿರ ಕೋಟಿ
Karnataka Budget: ಮೇಕೆದಾಟು ಯೋಜನೆಗೆ ₹1,000 ಕೋಟಿ ಮೀಸಲು–ಬೊಮ್ಮಾಯಿ
Karnataka Budget 2022: ಬೆಂಗಳೂರಿಗೆ ಏನೇನು?
ಬೊಮ್ಮಾಯಿ ಬಜೆಟ್‌: ಕೃಷಿ ಕ್ಷೇತ್ರಕ್ಕೇನು ಕೊಡುಗೆ? ಇಲ್ಲಿದೆ ವಿವರ
ಕರ್ನಾಟಕ ಬಜೆಟ್–2022: ಯಾವ ವಲಯಕ್ಕೆ ಎಷ್ಟು ಅನುದಾನ?
Karnataka Budget: ಯಕ್ಷಗಾನ ಸಮ್ಮೇಳನ, ಕಾಸರಗೋಡು, ಗೋವಾದಲ್ಲಿ ಕನ್ನಡ ಭವನ ಘೋಷಣೆ
Karnataka Budget: ಆರೋಗ್ಯ ಕ್ಷೇತ್ರಕ್ಕೆ ಸಿಕ್ಕಿದ್ದೇನು?
ಬಜೆಟ್ ಪ್ರತಿ ಹಿಡಿದು ಮಿಂಚಿದ ಸಿಎಂ ಬೊಮ್ಮಾಯಿ
ಕರ್ನಾಟಕ ಬಜೆಟ್–2022: ತೆರಿಗೆ ದರದಲ್ಲಿ ಯಥಾಸ್ಥಿತಿ –ಸಿಎಂ ಬೊಮ್ಮಾಯಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು