ಶನಿವಾರ, ಡಿಸೆಂಬರ್ 3, 2022
21 °C

ಆಳ-ಅಗಲ| Union Budget 2021-ಕೇಂದ್ರದ ಬಜೆಟ್‌ ತಯಾರಿ ಹೇಗೆ?

ಜಯಸಿಂಹ ಆರ್./ಅಮೃತಕಿರಣ್ ಬಿ.ಎಂ. Updated:

ಅಕ್ಷರ ಗಾತ್ರ : | |

Prajavani

ಬಜೆಟ್ ಸಿದ್ಧಪಡಿಸುವ ಮುನ್ನ

ಬಜೆಟ್ ತಯಾರಿ ಪ್ರಕ್ರಿಯೆ ಪ್ರತಿ ವರ್ಷ ಸೆಪ್ಟೆಂಬರ್‌ನಲ್ಲಿಯೇ ಆರಂಭವಾಗುತ್ತದೆ. ಬಜೆಟ್ ತಯಾರಿ ಪ್ರಕ್ರಿಯೆ ಆರಂಭಿಸುವುದಕ್ಕೂ ಮುನ್ನ ಕೇಂದ್ರ ಹಣಕಾಸು ಸಚಿವಾಲಯವು ಆರ್ಥಿಕ ವಲಯದ ತಜ್ಞರು, ಉದ್ಯಮಿಗಳು, ಅರ್ಥಶಾಸ್ತ್ರಜ್ಞರ ನಿರೀಕ್ಷೆ ಮತ್ತು ಸಲಹೆಯನ್ನು ಪಡೆಯುತ್ತದೆ. ಇವರ ಜತೆ ಆರ್ಥಿಕ ಸಚಿವಾಲಯದ ಉನ್ನತ ಅಧಿಕಾರಿಗಳು ಸುದೀರ್ಘ ಚರ್ಚೆ ನಡೆಸುತ್ತಾರೆ. ದೇಶದ ಆರ್ಥಿಕ ಸ್ಥಿತಿಗತಿ, ಬರುವ ಆರ್ಥಿಕ ವರ್ಷದ ಸ್ಥಿತಿಗತಿಯನ್ನು ಅಂದಾಜು ಮಾಡಲಾಗುತ್ತದೆ. ಈ ಚರ್ಚೆಯಲ್ಲಿ ವ್ಯಕ್ತವಾದ ನಿರೀಕ್ಷೆ ಮತ್ತು ಸಲಹೆಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಅವುಗಳ ಕಾರ್ಯಸಾಧ್ಯತೆಯನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತದೆ. ನಂತರ ಅವುಗಳನ್ನು ಬಜೆಟ್‌ ರೂಪಿಸುವಲ್ಲಿ ಬಳಸಿಕೊಳ್ಳಲಾಗುತ್ತದೆ.

ಈ ವರ್ಷ ಕೋವಿಡ್‌ ಅನ್‌ಲಾಕ್ ಜಾರಿಯಲ್ಲಿದ್ದ ಕಾರಣ ಆರ್ಥಿಕ ಸಚಿವಾಲಯವು ಈ ಪ್ರಕ್ರಿಯೆಯನ್ನು ಸೆಪ್ಟೆಂಬರ್‌ನಲ್ಲಿ ಆರಂಭಿಸಲಿಲ್ಲ. ಲಾಕ್‌ಡೌನ್‌ನಲ್ಲಿ ಬಹುತೇಕ ಸ್ಥಗಿತವಾಗಿದ್ದ ಆರ್ಥಿಕತೆಗೆ ಮರುಚಾಲನೆ ದೊರೆತ ನಂತರ ಚರ್ಚೆ ಆರಂಭಿಸಲು ಹಣಕಾಸು ಸಚಿವಾಲಯವು ನಿರ್ಧರಿಸಿತ್ತು. ಹೀಗಾಗಿ 2020ರ ಡಿಸೆಂಬರ್‌ 14ರಿಂದ ಚರ್ಚೆಗೆ ಚಾಲನೆ ನೀಡಲಾಯಿತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಚರ್ಚೆಯನ್ನು ಆರಂಭಿಸಿದರು. ವರ್ಚುವಲ್‌ ಸ್ವರೂಪದಲ್ಲಿ ಈ ಚರ್ಚೆ ನಡೆದಿದೆ.

ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯು, ಬಜೆಟ್‌ ಸಂಬಂಧ ಜನರಿಂದ ಅಭಿಪ್ರಾಯವನ್ನು ಸಂಗ್ರಹಿಸುತ್ತದೆ. ಈ ಪ್ರಕ್ರಿಯೆಯನ್ನು 2020ರ ಡಿಸೆಂಬರ್‌ನಲ್ಲಿಯೇ ಪೂರ್ಣಗೊಳಿಸಲಾಗಿದೆ. ಆರ್ಥಿಕತೆಗೆ ಸಂಬಂಧಿಸಿದಂತೆ, ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ, ಬಜೆಟ್‌ ನಿರೀಕ್ಷೆಗಳ ಬಗ್ಗೆ ಜನರಿಂದ ಅಭಿಪ್ರಾಯ ಪಡೆಯಲಾಗುತ್ತದೆ. ಅಗತ್ಯವಿದ್ದರೆ ಅವನ್ನು ಬಜೆಟ್‌ನಲ್ಲಿ ಸೇರಿಸಲಾಗುತ್ತದೆ.

ಯಾರಿಗೆ ಎಷ್ಟು ಅನುದಾನ...

ಬಜೆಟ್‌ ತಯಾರಿಯಲ್ಲಿ ಅತ್ಯಂತ ಪ್ರಮುಖವಾದ ಘಟ್ಟ ವೆಚ್ಚವನ್ನು ಅಂದಾಜು ಮಾಡುವುದು. ಚಾಲ್ತಿಯಲ್ಲಿರುವ ಆರ್ಥಿಕ ವರ್ಷದ ಸೆಪ್ಟೆಂಬರ್‌ನಲ್ಲಿಯೇ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ. ಆರ್ಥಿಕ ಸಚಿವಾಲಯವು ಕೇಂದ್ರ ಸರ್ಕಾರದ ಎಲ್ಲಾ ಸಚಿವಾಲಯಗಳ ಜತೆ ಮಾತುಕತೆ ನಡೆಸುತ್ತದೆ. ಪ್ರಸಕ್ತ ಆರ್ಥಿಕ ವರ್ಷದ ಬಜೆಟ್‌ನಲ್ಲಿ ನೀಡಲಾಗಿದ್ದ ಅನುದಾನದ ಬಳಕೆಯನ್ನು ಪರಿಶೀಲಿಸಲಾಗುತ್ತದೆ. ಉಳಿದ ಸಚಿವಾಲಯಗಳು ಪರಿಷ್ಕೃತ ಅನುದಾನಕ್ಕೆ ಬೇಡಿಕೆ ಸಲ್ಲಿಸುತ್ತವೆ. ಪರಿಷ್ಕೃತ ಅನುದಾನದ ಅಂದಾಜಿನ ಆಧಾರದ ಮೇಲೆಯೇ ಮುಂದಿನ ಆರ್ಥಿಕ ವರ್ಷದಲ್ಲಿ ಎಷ್ಟು ಅನುದಾನ ಅಗತ್ಯವಿದೆ ಎಂಬುದನ್ನು ಕಂಡುಕೊಳ್ಳಲಾಗುತ್ತದೆ.

ಎಲ್ಲಾ ಸಚಿವಾಲಯಗಳು ಮುಂದಿನ ಆರ್ಥಿಕ ವರ್ಷದಲ್ಲಿ ಕೈಗೊಳ್ಳಲಿರುವ ಯೋಜನೆಗಳನ್ನು ಸಿದ್ಧಪಡಿಸುತ್ತವೆ. ನಂತರ ಆ ಯೋಜನೆಯ ಅನುಷ್ಠಾನಕ್ಕೆ ಅಗತ್ಯವಿರುವ ಅನುದಾನವನ್ನು ಅಂದಾಜು ಮಾಡುತ್ತವೆ. ಯೋಜನೆ ಅನುಷ್ಠಾನದ ಸ್ವರೂಪ ಮತ್ತು ಕಾಲಮಿತಿಯನ್ನೂ ಆಯಾ ಸಚಿವಾಲಯಗಳೇ ನಿಗದಿ ಮಾಡುತ್ತವೆ. ನಂತರ ಇಡೀ ಆರ್ಥಿಕ ವರ್ಷದಲ್ಲಿ ಅಗತ್ಯವಿರುವ ಅನುದಾನದ ಬೇಡಿಕೆಯ ವರದಿಯನ್ನು ಸಿದ್ಧಪಡಿಸುತ್ತವೆ. ಆ ವರದಿಯನ್ನು ಆರ್ಥಿಕ ಸಚಿವಾಲಯಕ್ಕೆ ಸಲ್ಲಿಸುತ್ತವೆ. ಈ ವರದಿಗಳನ್ನು ಆರ್ಥಿಕ ಸಚಿವಾಲಯದ ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸುತ್ತಾರೆ. ಈ ವರದಿಗಳ ಬಗ್ಗೆ ಹಣಕಾಸು ಸಚಿವರ ಜತೆ ಸುದೀರ್ಘ ಚರ್ಚೆ ನಡೆಯುತ್ತದೆ. ನಂತರ ಈ ಅಂದಾಜುಗಳ ಬಗ್ಗೆ ಪ್ರಧಾನಿ ಮತ್ತು ಸಂಪುಟದ ಸಚಿವರ ಮಟ್ಟದಲ್ಲಿ ಸುದೀರ್ಘ ಮಾತುಕತೆ ನಡೆಯುತ್ತದೆ.

ಆನಂತರ ವೆಚ್ಚವನ್ನು ಅಂದಾಜು ಮಾಡಲಾಗುತ್ತದೆ. ಯಾವ ಸಚಿವಾಲಯಕ್ಕೆ ಮತ್ತು ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ನೀಡಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ಯೋಜನಾ ವೆಚ್ಚಗಳಿಗೆ ಎಷ್ಟು ಅನುದಾನ ಬೇಕಾಗುತ್ತದೆ ಮತ್ತು ಯೋಜನೇತರ ವೆಚ್ಚಗಳಿಗೆ ಎಷ್ಟು ಅನುದಾನ ಬೇಕಾಗುತ್ತದೆ ಎಂಬುದನ್ನು ಅಂತಿಮಗೊಳಿಸಲಾಗುತ್ತದೆ.

ವರಮಾನ ಸಂಗ್ರಹ

ಮುಂದಿನ ಆರ್ಥಿಕ ವರ್ಷದಲ್ಲಿ ಅಗತ್ಯವಿರುವ ವೆಚ್ಚವನ್ನು ಅಂದಾಜು ಮಾಡಿದ ನಂತರ, ವೆಚ್ಚ ಮಾಡಲು ಅಗತ್ಯವಿರುವ ಹಣಕಾಸಿನ ಕ್ರೋಡೀಕರಣದ ರೂಪುರೇಷೆಯನ್ನು ಸಿದ್ಧಪಡಿಸಲಾಗುತ್ತದೆ. ಬಜೆಟ್ ಸಿದ್ಧಪಡಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ ಸಂದರ್ಭದಲ್ಲೇ ಆದಾಯ ಕ್ರೋಡೀಕರಣದ ಅಂದಾಜನ್ನು ಸಲ್ಲಿಸುವಂತೆ ಆರ್ಥಿಕ ಸಚಿವಾಲಯವು ಎಲ್ಲಾ ಸಚಿವಾಲಯಗಳಿಗೆ ಸೂಚಿಸುತ್ತದೆ.

ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳು ಆರ್ಥಿಕ ಸಚಿವಾಲಯವು ಸೂಚಿಸಿರುವ ಸ್ವರೂಪದಲ್ಲಿ ವರಮಾನ ಸಂಗ್ರಹದ ಅಂದಾಜನ್ನು ಸಿದ್ಧಪಡಿಸುತ್ತವೆ. ವೆಚ್ಚದ ಅಂದಾಜನ್ನು ಸಿದ್ಧಪಡಿಸುವಾಗಲೇ ಇದನ್ನೂ ಸಿದ್ಧಪಡಿಸಲಾಗಿರುತ್ತದೆ. ಮುಂದಿನ ಆರ್ಥಿಕ ವರ್ಷದಲ್ಲಿ ಯಾವ ರೂಪದಲ್ಲಿ ಎಷ್ಟು ವರಮಾನ ಸಂಗ್ರಹಿಸಲಾಗುತ್ತದೆ ಎಂಬುದರ ಅಂದಾಜನ್ನು ಈ ವರದಿ ಒಳಗೊಂಡಿರುತ್ತದೆ. ಇವುಗಳ ಆಧಾರದ ಮೇಲೆ ಸಂಗ್ರಹವಾಗಬಹುದಾದ ವರಮಾನದ ಮೊತ್ತವನ್ನು ಅಂದಾಜು ಮಾಡಲಾಗುತ್ತದೆ.

ಆದರೆ ಇದನ್ನು ಅಂತಿಮಗೊಳಿಸುವ ಮುನ್ನ ವೆಚ್ಚದ ಅಂದಾಜನ್ನು ಪರಿಶೀಲಿಸಲಾಗುತ್ತದೆ. ಇಡೀ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರವು ವಿನಿಯೋಗ ಮಾಡಬೇಕಾದ ಅಂದಾಜನ್ನು ನಿಗದಿ ಮಾಡಿದ ನಂತರ, ಅಷ್ಟು ಮೊತ್ತವನ್ನು ಸಂಗ್ರಹಿಸುವುದು ಹೇಗೆ ಎಂಬುದನ್ನು ನಿರ್ಧರಿಸಲಾಗುತ್ತದೆ. ಪ್ರತೀ ವರ್ಷ ಹೀಗೆ ಸಂಗ್ರಹಿಸಬಹುದಾದ ವರಮಾನವನ್ನು ಸುಮಾರು ಶೇಕಡಾ 12ರಷ್ಟು ಏರಿಕೆ ಮಾಡಲಾಗುತ್ತದೆ. ಆದರೆ ಏರಿಕೆಯ ನಂತರವೂ ಈ ಮೊತ್ತವು ಒಟ್ಟು ವೆಚ್ಚಕ್ಕಿಂತ ಕಡಿಮೆ ಇರುತ್ತದೆ. ಸಂಗ್ರಹ ಮತ್ತು ವೆಚ್ಚದ ನಡುವಣ ಈ ವ್ಯತ್ಯಾಸವನ್ನು ವಿತ್ತೀಯ ಕೊರತೆ ಎನ್ನಲಾಗುತ್ತದೆ. ಈ ವಿತ್ತೀಯ ಕೊರತೆಯನ್ನು ತುಂಬಲು ಸಾಲ ಎತ್ತಲು ನಿರ್ಧರಿಸಲಾಗುತ್ತದೆ. ಆದರೆ ಇದರ ಪ್ರಮಾಣವು ಆರೋಗ್ಯಕರ ಮಟ್ಟವನ್ನು ಮೀರುವಂತಿಲ್ಲ. ಎತ್ತಬಹುದಾದ ಸಾಲದ ಮೊತ್ತವನ್ನು ನಿಗದಿ ಮಾಡಿದ ನಂತರವೂ ಕೊರತೆಯಾಗುವ ಹಣವನ್ನು ಸಂಗ್ರಹಿಸಲು ತೆರಿಗೆ ಏರಿಕೆಯ ಮೊರೆ ಹೋಗಲಾಗುತ್ತದೆ. ಯಾವ ತೆರಿಗೆಗಳನ್ನು ಏರಿಕೆ ಮಾಡಬೇಕು ಮತ್ತು ಯಾವ ತೆರಿಗೆಗಳನ್ನು ಇಳಿಕೆ ಮಾಡಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ಅಲ್ಲಿಗೆ ವರಮಾನ ಸಂಗ್ರಹದ ಅಂದಾಜು ಅಂತಿಮವಾಗುತ್ತದೆ.

ಹಲ್ವಾ ಸಮಾರಂಭ

ಬಜೆಟ್ ಸಿದ್ಧವಾದ ಬಳಿಕ ಅದನ್ನು ಮುದ್ರಿಸುವುದು ಮಹತ್ವದ ಕೆಲಸ (ಈ ಬಾರಿ ಮುದ್ರಣದ ಬದಲಾಗಿ ಡಿಜಿಟಲ್ ರೂಪದಲ್ಲಿ ಬಜೆಟ್ ಪ್ರತಿಗಳನ್ನು ಒದಗಿಸಲು ಸಿದ್ಧತೆ ನಡೆದಿದೆ). ಬಜೆಟ್ ಪ್ರತಿ ತಯಾರಿಸುವ ಕೆಲಸವನ್ನು ‘ಹಲ್ವಾ’ ತಯಾರಿಸುವ ಮೂಲಕ ಶುರು ಮಾಡುವ ವಾಡಿಕೆ ಇದೆ. ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ದೆಹಲಿಯ ನಾರ್ತ್ ಬ್ಲಾಕ್‌ನಲ್ಲಿ ನಡೆಯುವ ಹಲ್ವಾ ಸಮಾರಂಭದಲ್ಲಿ ಭಾಗಿಯಾಗುತ್ತಾರೆ. ಏನನ್ನಾದರೂ ಪ್ರಾರಂಭಿಸುವ ಮೊದಲು ಸಿಹಿ ಹಂಚುವ ಭಾರತೀಯ ಸಂಪ್ರದಾಯದ ಭಾಗವಾಗಿ ಇದನ್ನು ನಡೆಸಲಾಗುತ್ತದೆ. ಹಣಕಾಸು ಸಚಿವರು, ಅಧಿಕಾರಿಗಳು ಮತ್ತು ಬಜೆಟ್ ತಯಾರಿಕೆ ಪ್ರಕ್ರಿಯೆಯಲ್ಲಿ ತೊಡಗಿರುವ ಸಿಬ್ಬಂದಿ ಹಲ್ವಾ ಸೇವಿಸಿದ ನಂತರ, ನಾರ್ತ್‌ ಬ್ಲಾಕ್ ನೆಲಮಾಳಿಗೆಗೆ ಇಳಿಯುತ್ತಾರೆ.

ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಬಜೆಟ್ ಪ್ರತಿ ಸಿದ್ಧಪಡಿಸುವ ಕೆಲಸ ಮುಗಿಯುವ ತನಕ ತಮ್ಮ ಮನೆಗೂ ಹೋಗುವಂತಿಲ್ಲ. ಸಂಸತ್ತಿನಲ್ಲಿ ಮಂಡಿಸುವ ಬಜೆಟ್ ಏನನ್ನು ಒಳಗೊಂಡಿರುತ್ತದೆ ಎಂಬುದರ ಅರಿವು ಈ ಸಿಬ್ಬಂದಿಗೆ ಇರುವ ಕಾರಣ, ಗೋಪ್ಯತೆಯನ್ನು ಕಾಪಾಡಿಕೊಳ್ಳಲು ಈ ಪದ್ಧತಿ ಅನುಸರಿಸಲಾಗುತ್ತದೆ. ಸಂಸತ್ತಿನಲ್ಲಿ ಹಣಕಾಸು ಸಚಿವರು ಬಜೆಟ್ ಮಂಡಿಸುತ್ತಿದ್ದಂತೆಯೇ ಈ ಅಧಿಕಾರಿಗಳು ಹೊರಬರುತ್ತಾರೆ.

ಬಜೆಟ್ ಸುತ್ತಮುತ್ತ

l ಫೆಬ್ರುವರಿ ತಿಂಗಳ ಕೊನೆಯ ದಿನ ಬಜೆಟ್ ಮಂಡಿಸುವ ಪರಿಪಾಟ 2016ರಲ್ಲಿ ಕೊನೆಗೊಂಡಿತು. ಅಂದಿನಿಂದ ಪ್ರತೀ ವರ್ಷ ಫೆಬ್ರುವರಿ 1ರಂದು ಬಜೆಟ್ ಮಂಡನೆಯಾಗುತ್ತಿದೆ. ಅರುಣ್ ಜೇಟ್ಲಿ ಈ ಬದಲಾವಣೆ ತಂದಿದ್ದರು

l 1955ರವರೆಗೂ ಬಜೆಟ್ ಪ್ರತಿಯನ್ನು ಇಂಗ್ಲಿಷ್‌ನಲ್ಲಿ ಮಾತ್ರ ಮುದ್ರಿಸಲಾಗುತ್ತಿತ್ತು. ಬಳಿಕ ಹಿಂದಿ ಭಾಷೆಯಲ್ಲೂ ಮುದ್ರಿಸುವ ಪರಿಪಾಟ ಶುರುವಾಯಿತು

l 92 ವರ್ಷಗಳ ಬಳಿಕ, ರೈಲ್ವೆ ಬಜೆಟ್‌ ಅನ್ನು ಪ್ರತ್ಯೇಕವಾಗಿ ಮಂಡಿಸುವ ಬದಲು ಹಣಕಾಸು ಬಜೆಟ್‌ನಲ್ಲಿ ವಿಲೀನಗೊಳಿಸುವ ನಿರ್ಧಾರ ಆಗಿದ್ದು 2017ರಲ್ಲಿ

l ವಸಾಹತುಶಾಹಿ ಕಾಲದಿಂದಲೂ ಬಜೆಟ್‌ ಪ್ರತಿಯನ್ನು ಬ್ರೀಫ್‌ಕೇಸ್‌ನಲ್ಲಿ (ಸೂಟ್‌ಕೇಸ್) ತರಲಾಗುತ್ತಿತ್ತು. ಅದನ್ನು  ಕೈಬಿಟ್ಟು, ಕೆಂಪು ಬಟ್ಟೆಯನ್ನು ನಾಲ್ಕು ಮಡಿಕೆ ಮಡಚಿದ ‘ಬಹೀ-ಖಾತಾ’ ಬಳಕೆ ಆರಂಭಿಸಿದ್ದು ನಿರ್ಮಲಾ ಸೀತಾರಾಮನ್ (2019)

l ಬಜೆಟ್ ಮಂಡಿಸಿದ ಒಂದೇ ಕುಟುಂಬದ ಮೂವರು: ಜವಾಹರಲಾಲ್‌ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ

l ಅತಿಹೆಚ್ಚು ಬಜೆಟ್ ಮಂಡಿಸಿದವರು ಮೊರಾರ್ಜಿ ದೇಸಾಯಿ (10 ಬಾರಿ). ಚಿದಂಬರಂ 8 ಬಾರಿ ಮಂಡಿಸಿದ್ದಾರೆ

l ಬಜೆಟ್ ಮಂಡಿಸಿದ ಮೊದಲ ಮಹಿಳೆ ಇಂದಿರಾ ಗಾಂಧಿ; ನಿರ್ಮಲಾ ಸೀತಾರಾಮನ್ ಎರಡನೆಯವರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು