ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Budget 2021: 7 ರೈಲು ಮಾರ್ಗ, ಹಾಸನಕ್ಕೆ ಏರ್‌ಪೋರ್ಟ್‌

ಕೈಗಾರಿಕಾಭಿವೃದ್ಧಿಗೆ ಸಂಕಲ್ಪ, ಪ್ರಾದೇಶಿಕ ಅಸಮತೋಲನ ನಿವಾರಿಸಲು ಆದ್ಯತೆ
Last Updated 8 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಸಲು ನಮ್ಮ ಸರ್ಕಾರ ಆದ್ಯತೆ ನೀಡಿದೆ’ ಎಂದು ಹೇಳಿಕೊಂಡಿರುವ ಬಿ.ಎಸ್‌.ಯಡಿಯೂರಪ್ಪ, ಹೊಸ ವಿಮಾನ ನಿಲ್ದಾಣಗಳ ಸ್ಥಾಪನೆ, ಹೆದ್ದಾರಿಗಳ ಅಭಿವೃದ್ಧಿ, ವಿದ್ಯುತ್‌ ಸ್ವಾವಲಂಬನೆ, ರೈಲ್ವೆ ಯೋಜನೆಗಳು ಹಾಗೂ ಇತರ ವಲಯಗಳ ಅಭಿವೃದ್ಧಿಗೆ ಚಿತ್ತ ಹರಿಸಿದ್ದಾರೆ.

ಆರ್ಥಿಕ ಅಭಿವೃದ್ಧಿಯ ಪ್ರಚೋದನಾ ಚಟುವಟಿಕೆಗಳಿಗೆ ಕಳೆದ ಸಾಲಿನಲ್ಲಿ ₹55,732 ಕೋಟಿ ಮೀಸಲಿಟ್ಟಿದ್ದರೆ, ಈ ಸಲ ಈ ಮೊತ್ತ ₹52,529 ಕೋಟಿಗೆ ಇಳಿದಿದೆ.

ಪ್ರಾದೇಶಿಕ ಅಸಮತೋಲನ ನಿವಾರಿಸಲು ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗೆ 2020–21ರ ಬಜೆಟ್‌ನಲ್ಲಿ ₹3,060 ಕೋಟಿ ಅನುದಾನ ನೀಡಿದ್ದರೆ, ಈ ಸಲ ₹3,000 ಕೋಟಿ ನೀಡಲಾಗಿದೆ.

ರಾಜ್ಯದ ರೈಲ್ವೆ ಜಾಲ ವಿಸ್ತರಿಸಿ ಮೂಲಸೌಕರ್ಯ ಅಭಿವೃದ್ಧಿಗೆ ಇನ್ನಷ್ಟು ಒತ್ತು ನೀಡಲು ಯೋಜಿಸಲಾಗಿದೆ. ಕೇಂದ್ರ ಹಾಗೂ ರಾಜ್ಯದ ನಡುವೆ ಸಮನ್ವಯ ಕೊರತೆ, ಅನುದಾನದ ಅಲಭ್ಯತೆ ಹಾಗೂ ಭೂಸ್ವಾಧೀನದ ಕಾರಣದಿಂದ ಹಲವು ರೈಲು ಯೋಜನೆಗಳು ಕುಂಟುತ್ತಿರುವ ಹೊತ್ತಿನಲ್ಲೇ ಹೊಸ ಯೋಜನೆಗಳನ್ನು ಪ್ರಕಟಿಸಲಾಗಿದೆ.

ಒಟ್ಟು 1,173 ಕಿ.ಮೀ. ಉದ್ದದ ಹೊಸ ಏಳು ರೈಲು ಮಾರ್ಗಗಳು ನಿರ್ಮಾಣವಾಗಲಿವೆ. ಈ ಕಾಮಗಾರಿಗಳ ಅಂದಾಜು ವೆಚ್ಚ ₹7,984 ಕೋಟಿಗಳಾಗಿದ್ದರೆ, ಇದರಲ್ಲಿ ರಾಜ್ಯ ಸರ್ಕಾರ ₹3,991 ಕೋಟಿಗಳನ್ನು ರಾಜ್ಯ ಸರ್ಕಾರ ಭರಿಸಲಿದೆ. ಈ ರೈಲು ಮಾರ್ಗಗಳ ಭೂಸ್ವಾಧೀನಕ್ಕೆ ರಾಜ್ಯ ಸರ್ಕಾರ ₹2,630 ಕೋಟಿ ವೆಚ್ಚ ಮಾಡಲಿದೆ. ಆದರೆ, ಈ ಏಳು ಮಾರ್ಗಗಳು ಯಾವುವು ಎಂಬುದನ್ನು ಉಲ್ಲೇಖಿಸಿಲ್ಲ.

ಕೇಂದ್ರದ ಸಚಿವರಾಗಿದ್ದ ಸುರೇಶ್‌ ಅಂಗಡಿಯವರ ಕನಸಿನ ಧಾರವಾಡ– ಕಿತ್ತೂರು– ಬೆಳಗಾವಿ (73 ಕಿ.ಮೀ) ಹೊಸ ರೈಲು ಮಾರ್ಗವನ್ನು ಸಾಕಾರಗೊಳಿಸಲು ಯಡಿಯೂರಪ್ಪ ಹೆಜ್ಜೆ ಇಟ್ಟಿದ್ದಾರೆ. ಈ ಯೋಜನೆಗೆ ₹927 ಕೋಟಿ ವೆಚ್ಚ ಮಾಡಲಾಗುತ್ತದೆ. ಈ ಯೋಜನೆಯ ಒಟ್ಟು ವೆಚ್ಚದ ಶೇ 50ರಷ್ಟನ್ನು ಹಾಗೂ ಭೂಸ್ವಾಧೀನದ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ. ಈ ಮಾರ್ಗಕ್ಕೆ ರಾಜ್ಯ ಸರ್ಕಾರ ₹463 ಕೋಟಿ ಅನುದಾನ ನೀಡಲಿದೆ.

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರ ಕನಸಿನ ಕೂಸಾದ ಹಾಸನ ವಿಮಾನ ನಿಲ್ದಾಣದ ಕಾಮಗಾರಿ ಆರಂಭಿಸಲು ಯಡಿಯೂರಪ್ಪ ಭರ‍ಪೂರ ಅನುದಾನ ನೀಡಿದ್ದಾರೆ. ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ವಿಮಾನ ನಿಲ್ದಾಣ ನಿರ್ಮಿಸುವುದಾಗಿ ಪ್ರಕಟಿಸಿದ್ದರು. ಭೂಸ್ವಾಧೀನ ಪ್ರಕ್ರಿಯೆಯೂ ಪೂರ್ಣಗೊಂಡಿತ್ತು. ನಂತರ ಯೋಜನೆ ನನೆಗುದಿಗೆ ಬಿದ್ದಿತ್ತು. ಈ ಸಾಲಿನಲ್ಲಿ ₹175 ಕೋಟಿ ವೆಚ್ಚದಲ್ಲಿ ಯೋಜನೆಯ ಕಾಮಗಾರಿ ಆರಂಭಿಸಲಾಗುತ್ತದೆ. ಶಿವಮೊಗ್ಗ ಹಾಗೂ ವಿಜಯಪುರದಲ್ಲಿ ತಲಾ ₹384 ಕೋಟಿ ಹಾಗೂ ₹220 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣಗಳ ಕಾಮಗಾರಿ ಆರಂಭವಾಗಿದ್ದು, ಕಾರ್ಯಾಚರಣೆಯೂ ಶೀಘ್ರವೇ ಆರಂಭವಾಗಲಿದೆ.

ಸರ್ಕಾರಿ ಸ್ವಾಮ್ಯದ ವಿಮಾನ ನಿಲ್ದಾಣಗಳ ಅಭಿವೃದ್ಧಿ ಹಾಗೂ ಕಾರ್ಯಾಚರಣೆಗಾಗಿ ರಾಜ್ಯ ಹಾಗೂ ವಿಮಾನ ನಿಲ್ದಾಣ ಪ್ರಾಧಿಕಾರದ ನಡುವೆ ಜಂಟಿ ಉದ್ಯಮ ಕಂಪನಿ ರಚಿಸಲಾಗುತ್ತದೆ. ಇದರಿಂದ ರಾಜ್ಯದಲ್ಲಿ ವಿಮಾನ ನಿಲ್ದಾಣಗಳು, ಹೆಲಿಪ್ಯಾಡ್‌ಗಳು ಮತ್ತು ವಾಟರ್‌ ಏರೋಡ್ರೋಮ್‌ಗಳನ್ನು ಶೀಘ್ರವಾಗಿ ನಿರ್ಮಿಸಲು ಸಾಧ್ಯವಾಗುತ್ತದೆ.

ಆತ್ಮನಿರ್ಭರಕ್ಕೆ ಆನ್‌ಲೈನ್‌ ವೇದಿಕೆ: ಕೇಂದ್ರ ಸರ್ಕಾರದ ಆತ್ಮನಿರ್ಭರ್‌ ಯೋಜನೆಯಡಿ ವಿವಿಧ ಇಲಾಖೆಗಳ ಖಾಸಗಿ ಸಹಭಾಗಿತ್ವದ ಮಾದರಿಯ ಪ್ರಸ್ತಾವನೆಗಳನ್ನು ಸಂಯೋಜಿಸಲು ಹಾಗೂ ಮೇಲ್ವಿಚಾರಣೆ ಮಾಡಲು ಆನ್‌ಲೈನ್‌ ವೇದಿಕೆ ರಚಿಸಲಾಗುವುದು. ರಾಜ್ಯದ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜನಸ್ನೇಹಿಯಾಗಿ ಅನುಷ್ಠಾನಗೊಳಿಸಲು ಹಲವು ಯೋಜನೆಗಳನ್ನು ಒಂದೇ ವ್ಯವಸ್ಥೆಯಡಿಗೆ ತರಲಾಗುತ್ತದೆ.

ಕಲ್ಯಾಣ ಕರ್ನಾಟಕಕ್ಕೆ ₹1500 ಕೋಟಿ
ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಕಳೆದ ವರ್ಷದಷ್ಟೇ ಅನುದಾನ ಮೀಸಲಿಡಲಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ₹1500 ಕೋಟಿ ಕೊಡಲಾಗಿದೆ. ಇದರಡಿ ಹೆಚ್ಚಿನ ಗಾತ್ರದ ಯೋಜನೆಗಳಿಗೆ ಆದ್ಯತೆ ನೀಡಲು ಸರ್ಕಾರ ನಿರ್ಧರಿಸಿದೆ.

ಕರಾವಳಿ ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಿ ಮೂಲಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಕರಾವಳಿ ಅಭಿವೃದ್ಧಿ ಮಂಡಳಿಯನ್ನಾಗಿ ಪುನರ್‌ ರಚಿಸಲು ಮಸೂದೆ ತರಲು ಸರ್ಕಾರ ತೀರ್ಮಾನಿಸಿದೆ. ₹100 ಕೋಟಿಗಿಂತ ಅಧಿಕ ವೆಚ್ಚದ ಬೃಹತ್‌ ಯೋಜನೆಗಳನ್ನು ಕಡ್ಡಾಯವಾಗಿ ಮೌಲ್ಯಮಾಪನ ಮಾಡಲಾಗುತ್ತದೆ.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆಗಳಲ್ಲಿರುವ ವಿವಿಧ ಎಂಜಿನಿಯರಿಂಗ್‌ ವಿಭಾಗಗಳನ್ನು ಒಗ್ಗೂಡಿಸಿ ಒಂದೇ ವಿಭಾಗವನ್ನಾಗಿಸುವ ಮೂಲಕ ಆಡಳಿತಾತ್ಮಕ ವೆಚ್ಚ ಕಡಿಮೆ ಮಾಡಲಾಗುತ್ತದೆ. ಈ ಮೂಲಕ ಆಡಳಿತ ಯಂತ್ರದಲ್ಲಿ ದಕ್ಷತೆ ಹೆಚ್ಚಿಸಬಹುದು ಎಂಬುದು ಮುಖ್ಯಮಂತ್ರಿ ಅವರ ಆಲೋಚನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT