ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Budget 2023: ರೈತರ ಉತ್ಪನ್ನಗಳಿಗೆ ಬ್ರ್ಯಾಂಡಿಂಗ್‌, ಕೃಷಿಗೆ ಚೈತನ್ಯ

Published 7 ಜುಲೈ 2023, 23:30 IST
Last Updated 7 ಜುಲೈ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಕೃಷಿ ವಲಯದ ಅನುದಾನದಲ್ಲಿ ಕಡಿತಗೊಳಿಸಿದ್ದರೂ ಹಳೆಯ ಯೋಜನೆಗಳನ್ನು ಜಾರಿಗೊಳಿಸಿ ಸಂಕಷ್ಟದಲ್ಲಿರುವ ರೈತರ ನಿರೀಕ್ಷೆಗಳನ್ನು ಈಡೇರಿಸುವ ಪ್ರಯತ್ನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹರಸಾಹಸ ಮಾಡಿದ್ದಾರೆ. ಕೃಷಿ ವಲಯಕ್ಕೆ ಉದ್ಯಮದ ಸ್ಪರ್ಶ ನೀಡುವ ನಿಟ್ಟಿನಲ್ಲಿ ಹಲವು ಹೊಸ ಯೋಜನೆಗಳನ್ನು ಸಹ ಘೋಷಿಸಲಾಗಿದೆ. ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನು ಬಲವರ್ಧನೆಗೊಳಿಸುವುದು, ಕೃಷಿ ಭಾಗ್ಯ ಯೋಜನೆಗೆ ಮರು ಚೈತನ್ಯ, ಕೃಷಿ ಉತ್ಪನ್ನಗಳಿಗೆ ಬ್ರ್ಯಾಂಡಿಂಗ್‌ ಪರಿಕಲ್ಪನೆ ಹಾಗೂ ನವೋದ್ಯಮಗಳಿಗೆ ಉತ್ತೇಜನ ನೀಡುವ ಆಶಯವನ್ನು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಆದರೆ, ಸಿರಿಧಾನ್ಯಗಳು, ಸಾವಯವ ಕೃಷಿ ಮತ್ತು ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಪದ್ಧತಿಗೆ ಆದ್ಯತೆ ನೀಡುವ ಬಗ್ಗೆ  ಉಲ್ಲೇಖವೇ ಇಲ್ಲ. ಈ ಬಾರಿಯೂ ಕೃಷಿ ಉತ್ಪನ್ನಗಳಿಗೆ ಖಚಿತ ಮತ್ತು ನಿಶ್ಚಿತವಾದ ಬೆಲೆ ನಿಗದಿಪಡಿಸುವ ಮಾರುಕಟ್ಟೆ ನೀತಿ ಪ್ರಕಟಿಸಿಲ್ಲ. ರೈತರ ಸಂತೆಗಳಿಗೆ ಕಾಯಕಲ್ಪ ನೀಡುವ ಬಗ್ಗೆಯೂ ಯೋಚಿಸಿಲ್ಲ.

ಕೃಷಿ ಮತ್ತು ತೋಟಗಾರಿಕೆ ವಲಯಕ್ಕೆ ಬಸವರಾಜ ಬೊಮ್ಮಾಯಿ ಅವರು 2022ರ ಮಾರ್ಚ್‌ 4ರಂದು ಮಂಡಿಸಿದ್ದ ಬಜೆಟ್‌ನಲ್ಲಿ 8457 (ಒಟ್ಟು ಹಂಚಿಕೆಯ ಶೇ 3) ನಿಗದಿಪಡಿಸಿದ್ದರು. ನಂತರ, ಫೆಬ್ರುವರಿಯಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ ₹9456 ಕೋಟಿ (ಒಟ್ಟಾರೆ ಹಂಚಿಕೆಯ ಶೇ 2) ಅನುದಾನ ಮೀಸಲಿಟ್ಟಿದ್ದರು. ಆದರೆ, ಪ್ರಸಕ್ತ ಬಜೆಟ್‌ನಲ್ಲಿ ₹ 5860 ಕೋಟಿ (ಶೇ 2ರಷ್ಟು) ನಿಗದಿಪಡಿಸಲಾಗಿದೆ. ಕೃಷಿ ಉತ್ಪನ್ನಗಳಿಗೆ ಬ್ರ್ಯಾಂಡಿಂಗ್‌ ಪರಿಕಲ್ಪನೆ ಮತ್ತು ನವೋದ್ಯಮಗಳಿಗೆ ಉತ್ತೇಜನ ನೀಡುವ ಯೋಜನೆಗಳಿಂದ ಯುವಕರನ್ನು ಕೃಷಿ ವಲಯಕ್ಕೆ ಆಕರ್ಷಿಸುವ ಯತ್ನವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕಾಂಗ್ರೆಸ್‌ ಸರ್ಕಾರ ಹಿಂದೆ ಜಾರಿಗೊಳಿಸಿದ್ದ ಕೃಷಿ ಭಾಗ್ಯ ಯೋಜನೆಯನ್ನು ಉದ್ಯೋಗ ಖಾತರಿ ಯೋಜನೆಯೊಂದಿಗೆ ಸಂಯೋಜಿಸಿ ₹100 ಕೋಟಿ ವೆಚ್ಚದಲ್ಲಿ ಮರು ಜಾರಿಗೊಳಿಸಲು ಉದ್ದೇಶಿಸಿರುವುದು ಉತ್ತಮ ಹೆಜ್ಜೆಯಾಗಿದೆ ಎನ್ನುವುದು ರೈತರ ವಲಯದ ಅಭಿಮತ. ಕೃಷಿ ಉದ್ಯಮಗಳಿಗೆ ಉತ್ತೇಜನ ನೀಡಲು ನವೋದ್ಯಮ ಎನ್ನುವ ಹೊಸ ಯೋಜನೆಯಡಿ ₹10 ಕೋಟಿ ಒದಗಿಸಲು ಉದ್ದೇಶಿಸಲಾಗಿದೆ. ಜತೆಗೆ, ರೈತರು ಬೆಳೆದ ಉತ್ಪನ್ನಗಳನ್ನು ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅನುಕೂಲವಾಗುವಂತೆ ನಂದಿನಿ ಮಾದರಿಯಲ್ಲಿ ರೈತ ಉತ್ಪನ್ನಗಳಿಗೆ ಏಕೀಕೃತ ಬ್ರಾಂಡಿಂಗ್‌ ವ್ಯವಸ್ಥೆ ರೂಪಿಸಲು ₹10 ಕೋಟಿ ಒದಗಿಸಲು ಉದ್ದೇಶಿಸಲಾಗಿದೆ.

ಹಿಂದುಳಿದ ತಾಲ್ಲೂಕುಗಳ 100 ರೈತ ಉತ್ಪಾದಕ ಸಂಸ್ಥೆಗಳಿಗೆ ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕ್‌ಗಳು ನೀಡುವ ತಲಾ ₹20 ಲಕ್ಷವರೆಗಿನ ಸಾಲಕ್ಕೆ ಶೇ 4ರ ಬಡ್ಡಿ ಸಹಾಯಧನ ನೀಡುವುದನ್ನು ಪ್ರಸ್ತಾಪಿಸಲಾಗಿದೆ. ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ಆಧಾರದಲ್ಲಿ ಒದಗಿಸುವ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಈ ಕೇಂದ್ರಗಳನ್ನು ಇನ್ನಷ್ಟು ಬಲಪಡಿಸಿ, 300 ಹೈಟೆಕ್‌ ಹಾರ್ವೆಸ್ಟರ್‌ ಹಬ್‌ಗಳನ್ನು ಹಂತ ಹಂತವಾಗಿ ಸ್ಥಾಪಿಸಲು ಉದ್ದೇಶಿಸಲಾಗಿದೆ. 2023-24ನೇ ಸಾಲಿನಲ್ಲಿ 100 ಹಬ್‌ಗಳನ್ನು ಸ್ಥಾಪಿಸಲು ₹50 ಕೋಟಿ ಒದಗಿಸಲು ಪ್ರಸ್ತಾಪಿಸಲಾಗಿದೆ.

ತೋಟಗಾರಿಕೆಗೆ ಸಂಬಂಧಿಸಿ ಹಲವು ಯೋಜನೆಗಳನ್ನು ಪ್ರಕಟಿಸಿದ್ದರೂ ಅನುದಾನ ಮೀಸಲು ಕುರಿತು ಪ್ರಸ್ತಾಪಿಸಿಲ್ಲ. ತೆಂಗು, ಅಡಿಕೆ, ದ್ರಾಕ್ಷಿ, ದಾಳಿಂಬೆ, ಮಾವು ಮತ್ತಿತರ ಹಣ್ಣು, ತರಕಾರಿ, ಹೂವುಗಳು ಸೇರಿದಂತೆ ತೋಟಗಾರಿಕಾ ಬೆಳೆಗಳ ಉತ್ಪಾದನೆ, ಸಂಸ್ಕರಣೆ, ಬ್ರಾಂಡಿಂಗ್ ಮತ್ತು ರಫ್ತಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎನ್ನುವುದನ್ನು ಮಾತ್ರ ಪ್ರಸ್ತಾಪಿಸಲಾಗಿದೆ. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತೋಟಗಾರಿಕಾ ಕ್ಷೇತ್ರದ ಪ್ರಾಯೋಗಿಕ ಅರಿವು ಮೂಡಿಸಲು ವಿದ್ಯಾರ್ಥಿಗಳಿಗಾಗಿ ತೋಟಗಾರಿಕೆ ಯೋಜನೆಯನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ.

ರೈತರಿಗೆ ಶೂನ್ಯ ಬಡ್ಡಿದರದಲ್ಲಿ ನೀಡುತ್ತಿರುವ ಅಲ್ಪಾವಧಿ ಸಾಲದ ಮಿತಿಯನ್ನು ₹3 ಲಕ್ಷಗಳಿಂದ ₹5 ಲಕ್ಷಗಳಿಗೆ ಹೆಚ್ಚಿಸಲು, ಶೇ 3ರ ಬಡ್ಡಿದರದಲ್ಲಿ ನೀಡುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಮಿತಿಯನ್ನು ₹10 ಲಕ್ಷಗಳಿಂದ ₹15 ಲಕ್ಷಗಳಿಗೆ ಹೆಚ್ಚಿಸಲಾಗುತ್ತದೆ. ಪ್ರಸಕ್ತ ವರ್ಷ 35 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ 25 ಸಾವಿರ ಕೋಟಿಗಳಷ್ಟು ಸಾಲ ವಿತರಿಸುವ ಗುರಿ ಹೊಂದಲಾಗಿದೆ. ಇದರಿಂದ, ಕೃಷಿಕರ ಆರ್ಥಿಕತೆ ಹೆಚ್ಚಿಸುವ ಕ್ರಮವಾಗಿದೆ ಎಂದು ವಿಶ್ಲೇಷಿಸಲಾಗಿದೆ. ಜಾನುವಾರುಗಳ ಆಕಸ್ಮಿಕ ಸಾವಿನ ಸಂದರ್ಭದಲ್ಲಿ ರೈತರು ಅನುಭವಿಸುವ ಸಂಕಷ್ಟ ನಿವಾರಣೆಗೆ ಅನುಗ್ರಹ ಯೋಜನೆಯನ್ನು ಮತ್ತೆ ಆರಂಭಿಸಿ ಕುರಿ ಮತ್ತು ಮೇಕೆಗಳಿಗೆ ₹5 ಸಾವಿರ ಹಾಗೂ ಹಸು, ಎಮ್ಮೆ ಮತ್ತು ಎತ್ತುಗಳಿಗೆ ₹10 ಸಾವಿರ ಪರಿಹಾರ ಒದಗಿಸುವುದನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.

ರೇಷ್ಮೆ ಬೆಳೆಗಾರರಿಗೆ ಆರ್ಥಿಕ ಚೈತನ್ಯ ನೀಡಲು ಶಿಡ್ಲಘಟ್ಟದಲ್ಲಿ ₹75 ಕೋಟಿ ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆಯಾಗಿ ಅಭಿವೃದ್ಧಿಪಡಿಸಲು ಪ್ರಸ್ತಾಪಿಸಲಾಗಿದೆ. ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ ಸುಲಭವಾಗಿ ದುಡಿಯುವ ಬಂಡವಾಳವನ್ನು ಒದಗಿಸಲು ಮತ್ತು ರೇಷ್ಮೆಗೂಡಿನ ಖರೀದಿಯಲ್ಲಿ ಸಕ್ರಿಯವಾಗಿ ಭಾಗವಹಿಸಲು ₹5 ಲಕ್ಷವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಲು ಉದ್ದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT