ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Union Budget-2022 ವಿಶ್ಲೇಷಣೆ | ಹೊರೆ: ಹೆಚ್ಚಿಸಿಲ್ಲ, ಇಳಿಕೆಯೂ ಇಲ್ಲ

Last Updated 1 ಫೆಬ್ರುವರಿ 2022, 19:31 IST
ಅಕ್ಷರ ಗಾತ್ರ

ನಿರ್ಮಲಾ ಸೀತಾರಾಮನ್ ಅವರು ಈ ಬಾರಿಯ ಬಜೆಟ್ ಮೂಲಕ ಜನಸಾಮಾನ್ಯರ ಆಸೆ-ಆಕಾಂಕ್ಷೆಗಳನ್ನು ಸಾಕಾರಗೊಳಿಸಿದ್ದಾರೆಯೇ ಎಂದು ಕೇಳಿದರೆ, ಖಂಡಿತವಾಗಿಯೂ ಇಲ್ಲವೆಂದೇ ಹೇಳಬೇಕಾಗುತ್ತದೆ. ಬಹು ಮುಖ್ಯವಾಗಿ, ಆದಾಯ ತೆರಿಗೆಯ ಸೆಕ್ಷನ್ 80ಸಿ ಅಡಿ ಮಿತಿ ಹೆಚ್ಚಳ ಅಥವಾ ಯಾವುದೇ ತೆರಿಗೆ ರಿಯಾಯಿತಿ ಅಧಿಕಗೊಳಿಸಿಲ್ಲ ಎನ್ನುವುದು ಇದಕ್ಕೆ ಪುಷ್ಟಿ ನೀಡುವ ವಿಚಾರ. ಅಷ್ಟೇ ಅಲ್ಲದೆ, ಗೃಹ ಸಾಲಗಳ ಮೇಲೆ ನೀಡಲಾಗುವ ₹ 2 ಲಕ್ಷದ ಬಡ್ಡಿ ರಿಯಾಯಿತಿಯನ್ನೂ ಹೆಚ್ಚಿಸಲಾಗಿಲ್ಲ.

2020ರಲ್ಲಿ, ಸರ್ಕಾರವು ನೀಡಿದ ವಿವಿಧ ವಿನಾಯಿತಿಗಳನ್ನು ತ್ಯಜಿಸಲು ಸಿದ್ಧರಿರುವವರಿಗೆ ಕಡಿಮೆ ದರದ ತೆರಿಗೆ ಸ್ಲ್ಯಾಬ್‌ಗಳೊಂದಿಗೆ ಹೊಸ ತೆರಿಗೆ ದರವನ್ನು ಸರ್ಕಾರ ಘೋಷಿಸಿತ್ತು. ಆದರೆ ಇದು ನಿಜವಾಗಿ ಯಾವ ಅರ್ಥದಲ್ಲೂ ಸ್ವಂತ ಮನೆಗಾಗಿ ಗೃಹ ಸಾಲ ಹೊಂದಿದವರಿಗೆ ಅಥವಾ ಬಹಳಷ್ಟು ಉಳಿತಾಯ ಮಾಡುವವರಿಗೆ ಪ್ರಯೋಜನ ತಂದುಕೊಟ್ಟಿಲ್ಲ ಎನ್ನುವುದು ಜನರಿಗೆ ಬಜೆಟ್ ವಿವರಗಳು ಸಿಕ್ಕ ನಂತರ ನಿಧಾನವಾಗಿ ಮನವರಿಕೆಯಾಗುತ್ತಾ ಹೋಯಿತು. ಇದು ಈಗಲೂ ಜನಸಾಮಾನ್ಯರಿಗೆ ಸರಿಯಾಗಿ ಅರ್ಥವಾಗದೆ ಮುಂದುವರಿಯುತ್ತಿರುವ ಸಮಾನಾಂತರ ತೆರಿಗೆ.

ಕೇಂದ್ರ ಸರ್ಕಾರವು ದೊಡ್ಡ ಯೋಜನೆಗಳನ್ನು ಅನೇಕ ಕ್ಷೇತ್ರಗಳಲ್ಲಿ ಕೈಗೆತ್ತಿಕೊಳ್ಳುತ್ತಿದ್ದರೂ, ಜನಸಾಮಾನ್ಯನ ಆಕಾಂಕ್ಷೆಗಳನ್ನು ತಿಳಿದೂ ತಿಳಿಯದಂತೆ ನಟಿಸುತ್ತಿರುವಂತಿದೆ. ಸಾಮಾನ್ಯ ಜನರ ನಿರೀಕ್ಷೆಗಳಾದ ಆದಾಯ ತೆರಿಗೆ ದರ ಕಡಿತ, ಮೂಲ ವಿನಾಯಿತಿ ಮೊತ್ತದ ಹೆಚ್ಚಳ, ತೆರಿಗೆ ಉಳಿತಾಯದ ವಿನಾಯಿತಿಯಲ್ಲಿ ಹೆಚ್ಚಳ, ಹೊಸ ರಿಯಾಯಿತಿಗಳನ್ನು ನೀಡುವುದು ಇತ್ಯಾದಿಗಳಷ್ಟೇ ಬಜೆಟ್ಟನ್ನು ಜನಮೆಚ್ಚುಗೆಗೆ ಪಾತ್ರವಾಗುವಂತೆ ಮಾಡುವ ಅಂಶಗಳು. ಕಳೆದ ಕೆಲವು ವರ್ಷಗಳಿಂದ ಇಂತಹ ಸೂಕ್ಷ್ಮ ವಿಚಾರಗಳಿಗೆ ಸ್ಪಂದಿಸದಿರುವ ಸರ್ಕಾರವು ಈ ಬಾರಿಯೂ ಅದೇ ಹಾದಿಯಲ್ಲಿ ಸಾಗಿದೆ. ದೇಶದಲ್ಲಿ ಶೇಕಡ 6ರ ಪ್ರಮಾಣದ ಹಣದುಬ್ಬರ ಇರುವಾಗ, ಕನಿಷ್ಠ ಎರಡೋ ಮೂರೋ ವರ್ಷಗಳಿಗೊಮ್ಮೆಯಾದರೂ ಪ್ರಮುಖ ತೆರಿಗೆ ರಿಯಾಯಿತಿಗಳನ್ನು ಸರ್ಕಾರ ಪುನರ್ ಅವಲೋಕನ ಮಾಡುವುದು ಜನ ಸಾಮಾನ್ಯರ ಹಿತಾಸಕ್ತಿಯಿಂದ ಸಮಂಜಸ ನಡೆಯಾಗುತ್ತದೆ.

ತೆರಿಗೆದಾರರಿಗೆ, ಅವರು ಆದಾಯವನ್ನು ವರದಿ ಮಾಡಲು ತಪ್ಪಿದಲ್ಲಿ ಸಂಬಂಧಿತ ಮೌಲ್ಯಮಾಪನ ವರ್ಷದಿಂದ ಎರಡು ವರ್ಷಗಳವರೆಗೆ ನವೀಕರಿಸಿದ ಐಟಿಆರ್ ಅನ್ನು ಸಲ್ಲಿಸಲು ಸಾಧ್ಯವಾಗಿಸುವ ಹೆಚ್ಚುವರಿ ಅವಕಾಶವನ್ನು ಕೊಟ್ಟಿರುವುದು ಈ ಬಾರಿಯ ವಿಶೇಷ.

ಇತ್ತೀಚಿನ ದಿನಗಳಲ್ಲಿ ಪ್ರಚಾರ ಪಡೆಯುತ್ತಿರುವ ಕ್ರಿಪ್ಟೊ ಹಣದ ವಹಿವಾಟಿಗೆ ಸಂಬಂಧಿಸಿದ ತೆರಿಗೆ ಗೊಂದಲಕ್ಕೆ ತೆರೆ ಬಿದ್ದಿದೆ. ಇದು ಲಾಭಾಂಶದ ಮೇಲೆ ಶೇಕಡಾ 30ರ ದರದಲ್ಲಿ ತೆರಿಗೆಗೆ ಒಳಪಡಲಿದೆ. ಇದರ ಖರೀದಿ ದರವನ್ನಷ್ಟೇ ವೆಚ್ಚವೆಂದು ಪರಿಗಣಿಸಿ ಉಳಿದ ಲಾಭಾಂಶದ ಮೇಲೆ ತೆರಿಗೆಗೆ ಒಳಪಡಿಸಲಾಗುತ್ತದೆ. ಇಂದು ಜನಸಾಮಾನ್ಯರು ತಮ್ಮ ಮೊಬೈಲ್ ಆ್ಯಪ್‌ಗಳ ಮೂಲಕ ಒಂದಲ್ಲ ಒಂದು ಕ್ರಿಪ್ಟೊ ವೇದಿಕೆಗಳಲ್ಲಿ ವ್ಯವಹರಿಸುತ್ತಿರುವುದು ಸಹಜವಾಗಿರುವಾಗ ಈ ತೆರಿಗೆಯ ಬಗ್ಗೆಯೂ ಮತ್ತಷ್ಟು ಅರಿತು ವ್ಯವಹರಿಸುವ ಅಗತ್ಯವಿದೆ.

ಈ ಬಾರಿಯ ಬಜೆಟ್‌ನಲ್ಲಿ ಕೋವಿಡ್ ಬಗೆಗಿನ ವೈದ್ಯಕೀಯ ವೆಚ್ಚಕ್ಕಾಗಿ ಅಥವಾ ಆ ಕಾರಣದಿಂದಾದ ಸಾವಿನ ಬಾಬ್ತು ಸಂಗ್ರಹವಾಗುವ ಯಾವುದೇ ಹಣಕ್ಕೆ ಷರತ್ತು ಬದ್ಧ ತೆರಿಗೆ ರಿಯಾಯಿತಿಯನ್ನು ಕೊಡಲಾಗಿದೆ. ಈ ರಿಯಾಯಿತಿ ರೋಗಿಗೆ ಅಥವಾ ಮೃತಪಟ್ಟ ಕುಟುಂಬದ ಸದಸ್ಯರಿಗೂ ಸಿಗುತ್ತದೆ.

ದೇಶದ ಎಲ್ಲ ಅಂಚೆ ಕಚೇರಿಗಳನ್ನು ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಡಿ ತರುವ ಉದ್ದೇಶ ಒಳ್ಳೆಯದು. ಇದು ಆರ್ಥಿಕ ರಂಗದಲ್ಲಿ ಇನ್ನಷ್ಟು ಸಂಚಲನ ಮೂಡಿಸಲಿದೆ. ಇದರೊಂದಿಗೆ, ಅಂಚೆ ಕಚೇರಿ ಖಾತೆದಾರರು ಆನ್‌ಲೈನ್ ವಹಿವಾಟುಗಳನ್ನು ಮಾಡಲು ಮತ್ತು ನೆಟ್‌ಬ್ಯಾಂಕಿಂಗ್ ಮೂಲಕ ಇತರ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಲು ಸುಲಭ ಆಗುತ್ತದೆ. ಮಾತ್ರವಲ್ಲ ಇದು ಬ್ಯಾಂಕ್ ಖಾತೆಗಳಿಗೆ ಸಮಾನವಾಗಿ ಪೈಪೋಟಿ ನೀಡಲಿದೆ.

ಲೇಖಕ: ವೈಯಕ್ತಿಕ ತೆರಿಗೆ ತಜ್ಞ

ಇವನ್ನೂ ಓದಿ
*

*
*
*
*
*
*
*
*
*
*
*
*
*
*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT