ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಸಮೀಕ್ಷೆ: ಥಾಲಿನಾಮಿಕ್ಸ್‌ಗೆ ಗುರು ರಾಜನ್ ಬಳಸಿದ ದೋಸನಾಮಿಕ್ಸ್ ಪ್ರೇರಣೆ?

Last Updated 31 ಜನವರಿ 2020, 12:31 IST
ಅಕ್ಷರ ಗಾತ್ರ

ನವದೆಹಲಿ: ಆರ್ಥಿಕ ಸಮೀಕ್ಷೆ ಕುರಿತು ವಿವರ ನೀಡಿದ ದೇಶದ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್‌, ದೇಶದಲ್ಲಿ ಒಂದು ತಟ್ಟೆ ಊಟದ ಆರ್ಥಿಕತೆಯನ್ನು ವಿವರಿಸಲು ಬಳಸಿದ 'ಥಾಲಿನಾಮಿಕ್ಸ್‌' ಪದ ಈಗ ಗಮನ ಸೆಳೆದಿದೆ.

ಸುಬ್ರಮಣಿಯನ್‌ ಅವರ ಗುರುಗಳಲ್ಲಿ ಒಬ್ಬರಾದ ರಘುರಾಮ್‌ ರಾಜನ್‌ ಅವರ ವಿಚಾರ ಈಗ ಮತ್ತೆ ಪ್ರಸ್ತಾಪವಾಗಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮಾಜಿ ಗವರ್ನರ್‌ ರಘುರಾಮ್‌ ಜಿ.ರಾಜನ್‌ ಅವರು ಹಿಂದೆ ಹಣದುಬ್ಬರ ಮತ್ತು ಬಡ್ಡಿ ದರ ವಿವರಿಸುವ ಸಂದರ್ಭದಲ್ಲಿ 'ದೋಸನಾಮಿಕ್ಸ್‌' ಪದ ಬಳಸಿದ್ದರು.

ಸಾಮಾನ್ಯ ವ್ಯಕ್ತಿಯೊಬ್ಬ ಹೊತ್ತಿನ ಊಟಕ್ಕೆ ಮಾಡುವ ಖರ್ಚನ್ನು ವಿವರಿಸುವ ನಿಟ್ಟಿನಲ್ಲಿ 'ಥಾಲಿನಾಮಿಕ್ಸ್‌: ಭಾರತದಲ್ಲಿ ಒಂದು ತಟ್ಟೆ ಊಟದ ಆರ್ಥಿಕತೆ' ಬಳಸಲಾಗಿದೆ. ಊಟಕ್ಕೆ (ಥಾಲಿ) ಭಾರತದಲ್ಲಿ ಖರ್ಚು ಮಾಡುವ ಹಣದ ಪರಿಮಾಣವನ್ನು ಗುರುತಿಸುವ ಪ್ರಯತ್ನ 2019–20ರ ಆರ್ಥಿಕ ಸಮೀಕ್ಷೆಯಲ್ಲಿ ಮಾಡಲಾಗಿದೆ.

2006-07 ರಿಂದ 2019–20ಕ್ಕೆಸಸ್ಯಹಾರಿ ಊಟ ಪಡೆಯುವ ಪ್ರಮಾಣ ಶೇ 29ರಷ್ಟು ಹೆಚ್ಚಳವಾಗಿದೆ ಹಾಗೂ ಮಾಂಸಹಾರಿ ಊಟ ಮಾಡುವ ಪ್ರಮಾಣ ಶೇ 18ರಷ್ಟು ಉತ್ತಮಗೊಂಡಿದೆ.

25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 80 ಕೇಂದ್ರಗಳಲ್ಲಿ ಕೈಗಾರಿಕೆಗಳ ಕಾರ್ಮಿಕರ ಬೆಲೆ ಮಾಹಿತಿಗಳನ್ನು ಒಳಗೊಂಡಗ್ರಾಹಕ ಬೆಲೆ ಸೂಚ್ಯಂಕವನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ. ಏಪ್ರಿಲ್‌ 2006 ರಿಂದ ಅಕ್ಟೋಬರ್‌ 2019ರ ದತ್ತಾಂಶ ಅಧ್ಯಯನಕ್ಕೆ ಒಳಪಡಿಸಲಾಗಿದೆ.

ಐದು ಜನರ ಕುಟುಂಬದಲ್ಲಿ ದಿನಕ್ಕೆ ಎರಡು ಹೊತ್ತು ಸಸ್ಯಹಾರಿ ಊಟಕ್ಕೆ ವರ್ಷದಲ್ಲಿ ಸುಮಾರು ₹ 10,887 ಆಗುತ್ತದೆ. ಅದೇ ಮಾಂಸಹಾರ ಬಳಸುವ ಕುಟುಂಬಕ್ಕೆ ವರ್ಷದಲ್ಲಿ ಸುಮಾರು ₹ 11,787 ತಗುಲುತ್ತದೆ.ದೇಶದ ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ಸಸ್ಯಹಾರಿ ಊಟದ ಬೆಲೆ 2015–16ರಿಂದ ಇಳಿ ಮುಖವಾಗಿದ್ದು, 2019ರಲ್ಲಿ ಬೆಲೆ ಏರಿಕೆಯಾಗಿದೆ ಎಂದು ಸಮೀಕ್ಷೆಯಲ್ಲಿ ಪ್ರಸ್ತಾಪಿಸಲಾಗಿದೆ.

ಆಹಾರ ಒಂದೇ ಎಲ್ಲಕ್ಕೂ ಅಂತಿಮ ಅಲ್ಲ. ಆದರೆ, ಮಾನವ ಬಂಡವಾಳ ಹೆಚ್ಚಳಕ್ಕೆ ಆಹಾರ ಬಹು ಮುಖ್ಯವಾಗಿದೆ. ಇದು ರಾಷ್ಟ್ರದ ಸಂಪತ್ತು ಸೃಷ್ಟಿಗೆ ಪ್ರಮುಖವಾಗಿದೆ ಎನ್ನಲಾಗಿದೆ.

ಥಾಲಿ ಕೈಗೆಟುಕುವ ದರದಲ್ಲಿದೆಯೇ? ಥಾಲಿ ಮೇಲಿನ ಹಣದುಬ್ಬರ ಹೆಚ್ಚಿದೆಯೇ ಅಥವಾ ಕಡಿಮೆಯಾಗಿದೆಯೇ? ಸಸ್ಯಹಾರಿ ಮತ್ತು ಮಾಂಸಹಾರಿ ಥಾಲಿ ಎರಡಕ್ಕೂ ಹಣದುಬ್ಬರ ಒಂದೇ ರೀತಿಯಲ್ಲಿದೆಯೇ? ಭಾರತದ ವಲಯವಾರು ಥಾಲಿ ಬೆಲೆ ಹಣದುಬ್ಬರದಲ್ಲಿ ವ್ಯತ್ಯಾಸವಿದೆಯೇ? ಧಾನ್ಯ, ಬೇಳೆ–ಕಾಳುಗಳು, ತರಕಾರಿ ಅಥವಾ ಇಂಧನದ ಬೆಲೆ,..ಯಾವುದು ಥಾಲಿ ಬೆಲೆಯಲ್ಲಿ ವ್ಯತ್ಯಾಸಕ್ಕೆ ಕಾರಣವಾಗಿದೆ? ಎಂಬ ಪ್ರಶ್ನೆಗಳನ್ನು ಸಮೀಕ್ಷೆ ಕೇಳಿಕೊಂಡಿದೆ.

ರಘುರಾಮ್‌ ರಾಜನ್‌ ಅವರು ಅಮೆರಿಕದ ಚಿಕಾಗೊ ಬೂಥ್‌ ಸ್ಕೂಲ್‌ ಆಫ್‌ ಬಿಸಿನೆಸ್‌ನಲ್ಲಿ ಸುಬ್ರಮಣಿಯನ್‌ ಅವರಿಗೆ ಪಿಎಚ್‌.ಡಿ ಮಾರ್ಗದರ್ಶಕರಾಗಿದ್ದರು. 'ಶಿಕ್ಷಕ ತನ್ನ ಯೋಚನೆ, ಯೋಜನೆಗಳು ಹಾಗೂ ಉದಾಹರಣೆಗಳ ಮೂಲಕ ಬೋಧಿಸುತ್ತಾರೆ. ರಾಜನ್‌ ಅವರು ಸೆಲೆಬ್ರಿಟಿ ಆಗುವ ಮೊದಲೇ ಅವರನ್ನು ಗಮನಿಸುವ ಮೂಲಕ ಹಾಗೂ ಅವರ ಯೋಚನೆಗಳಿಂದ ಕಲಿಯುವ ಭಾಗ್ಯ ನನಗೆ ಸಿಕ್ಕಿತು' ಎಂದು ಸುಬ್ರಮಣಿಯನ್‌ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT