ಮಂಗಳವಾರ, ಫೆಬ್ರವರಿ 18, 2020
31 °C
ಮಂದಗತಿಯ ಆರ್ಥಿಕ ಬೆಳವಣಿಗೆ l ಷೇರು ವಿಕ್ರಯದಲ್ಲಿ ಭಾರಿ ಹಿನ್ನಡೆ l ತೆರಿಗೆ ವರಮಾನ ಸಂಗ್ರಹದಲ್ಲಿ ಇಳಿಕೆ

ಕೇಂದ್ರ ಬಜೆಟ್‌ 2020| ಗುರಿ ತಪ್ಪಿದ ವಿತ್ತೀಯ ಶಿಸ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವರಮಾನ ಸಂಗ್ರಹದಲ್ಲಿ ಕೊರತೆ ಎದುರಿಸುತ್ತಿರುವುದರಿಂದ ಪ್ರಸಕ್ತ ಹಣಕಾಸು ವರ್ಷಕ್ಕೆ (2019–20) ವಿತ್ತೀಯ ಶಿಸ್ತು ಕಾಯ್ದುಕೊಳ್ಳವಲ್ಲಿ ಕೇಂದ್ರ ಸರ್ಕಾರ ವಿಫಲವಾಗಲಿದೆ. 

ದೇಶದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 3.3ರಷ್ಟಕ್ಕೆ ನಿಯಂತ್ರಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿತ್ತು. ಆದರೆ ಡಿಸೆಂಬರ್‌ ಅಂತ್ಯದ ವೇಳೆಗೆ ಶೇ 132ರಷ್ಟಾಗಿದೆ. ಹೀಗಾಗಿ ಕೇಂದ್ರ ಬಜೆಟ್‌ನಲ್ಲಿ ಗುರಿಯನ್ನು ಪರಿಷ್ಕರಣೆ ಮಾಡಿದ್ದು ಶೇ 3.8ಕ್ಕೆ ಹೆಚ್ಚಿಸಲಾಗಿದೆ.  ಸರ್ಕಾರದ ವರಮಾನ ಮತ್ತು ವೆಚ್ಚದ ನಡುವಣ ಅಂತರವೇ ವಿತ್ತೀಯ ಕೊರತೆಯಾಗಿದೆ. 2020–21ನೇ ಹಣಕಾಸು ವರ್ಷಕ್ಕೆ ಶೇ 3.5ರಷ್ಟಿರಲಿದೆ ಎಂದು ಹೇಳಿದೆ.

‘ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್‌ ನಿರ್ವಹಣೆ (ಎಫ್‌ಆರ್‌ಬಿಎಂ) ಕಾಯ್ದೆಯ ಸೆಕ್ಷನ್‌ 4 (2)ರಲ್ಲಿ ವಿತ್ತೀಯ ಕೊರತೆ ಅಂದಾಜಿನಲ್ಲಿ ಬದಲಾವಣೆ ಮಾಡಿಕೊಳ್ಳಲು ಅವಕಾಶ ಇದೆ. ಹೀಗಾಗಿ ಶೇ 0.5ರಷ್ಟು ಬದಲಾವಣೆ ಮಾಡಿಕೊಳ್ಳಲಾಗಿದೆ’ ಎಂದು ಸಚಿವೆ ನಿರ್ಮಲಾ ಸೀತಾರಾಮನ್‌  ತಿಳಿಸಿದ್ದಾರೆ.

ಆರ್ಥಿಕ ಬೆಳವಣಿಗೆಯಲ್ಲಿ ಕುಸಿತ ಕಾಣುತ್ತಿರುವ ಸಂದರ್ಭದಲ್ಲಿ ವಿತ್ತೀಯ ಕೊರತೆ ಅಂದಾಜಿನಲ್ಲಿ ಈ ರೀತಿಯ ಬದಲಾವಣೆ ಮಾಡಿಕೊಳ್ಳಬಹುದು.

‘ಸಾರ್ವಜನಿಕ ಹೂಡಿಕೆಗೆ ಯಾವುದೇ ಅಪಾಯ ಬಾರದ ರೀತಿಯಲ್ಲಿ ವಿತ್ತೀಯ ಶಿಸ್ತು ಕಾಯ್ದುಕೊಳ್ಳಲು ನೀತಿಯನ್ನು ರೂಪಿಸಿ ಸಂಸತ್‌ನ ಅನುಮೋದನೆಗೆ ಸಲ್ಲಿಸಲಾಗುವುದು’ ಎಂದು ಹೇಳಿದ್ದಾರೆ.

ಷೇರು ವಿಕ್ರಯ: 2020–21ನೇ ಹಣಕಾಸು ವರ್ಷಕ್ಕೆ ಷೇರು ವಿಕ್ರಯದ ಮೂಲಕ ₹1.20 ಲಕ್ಷ ಕೋಟಿ ಸಂಗ್ರಹಿಸುವ ಗುರಿಯನ್ನು ಸರ್ಕಾರ ಇಟ್ಟುಕೊಂಡಿದೆ. 2019–20ನೇ ಹಣಕಾಸು ವರ್ಷಕ್ಕೆ ನಿಗದಿಪಡಿಸಿರುವ ಗುರಿಗಿಂತಲೂ ಹೆಚ್ಚಿಗೆ ಇದೆ.

ಒಟ್ಟಾರೆ ಮೊತ್ತದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳ ಷೇರು ಮಾರಾಟದಿಂದಲೇ ₹90 ಸಾವಿರ ಕೋಟಿ ಸಂಗ್ರಹಿಸುವ ನಿರೀಕ್ಷೆ ಇಟ್ಟುಕೊಂಡಿದೆ.

ಪ್ರಸಕ್ತ ಹಣಕಾಸು ವರ್ಷಕ್ಕೆ ಷೇರು ವಿಕ್ರಯದ ಮೂಲಕ ₹1.05 ಲಕ್ಷ ಕೋಟಿ ಸಂಗ್ರಹಿಸುವ ಗುರಿಯನ್ನು ಸರ್ಕಾರ ತಲುಪಲು ಸಾಧ್ಯವಾಗಿಲ್ಲ. ಇದುವರೆಗೆ ₹18 ಸಾವಿರ ಕೋಟಿ ಸಂಗ್ರಹವಾಗಿದ್ದು, ಒಟ್ಟಾರೆಯಾಗಿ ₹65 ಸಾವಿರ ಕೋಟಿಗಳಷ್ಟಾಗುವ ಅಂದಾಜು ಮಾಡಲಾಗಿದೆ. 

ಪರಿಷ್ಕೃತ ಗುರಿಯೂ ಕಷ್ಟ!

ಆರ್ಥಿಕತೆ ಮಂದಗತಿಯಲ್ಲಿ ಸಾಗುತ್ತಿದೆ. ಇಂತಹ ಸಂದರ್ಭದಲ್ಲಿ ತೆರಿಗೆ ದರ ಕಡಿತದಿಂದಾಗಿ ವರಮಾನ ಸಂಗ್ರಹ ಕಷ್ಟವಾಗಲಿದ್ದು, ವಿತ್ತೀಯ ಕೊರತೆಯನ್ನು ಶೇ 3.5ರಲ್ಲಿ ನಿಯಂತ್ರಿಸುವುದು ಸಹ ಕಷ್ಟವಾಗಲಿದೆ ಎಂದು ಜಾಗತಿಕ ರೇಟಿಂಗ್ಸ್‌ ಸಂಸ್ಥೆ ಮೂಡಿಸ್‌ ಅಭಿಪ್ರಾಯಪಟ್ಟಿದೆ.

ವೆಚ್ಚದಲ್ಲಿ ಕಡಿತ ಮಾಡಲು ಸೀಮಿತ ಅವಕಾಶವನ್ನಷ್ಟೇ ಸರ್ಕಾರ ಹೊಂದಿದೆ ಎಂದು ಹೇಳಿದೆ.

ಸದ್ಯದ ಆರ್ಥಿಕ ಬೆಳವಣಿಗೆಯನ್ನು ಗಮನಿಸಿದರೆ, ವಿತ್ತೀಯ ಬಲವರ್ಧನೆಯ ಹಾದಿ ಸವಾಲುಗಳಿಂದ ಕೂಡಿರಲಿದೆ. ಇದು ಸರ್ಕಾರದ ಅಂದಾಜನ್ನೂ ಮೀರಲಿದೆ ಎಂದು ತಿಳಿಸಿದೆ.

ಕಾರ್ಪೊರೇಟ್‌ ಬಾಂಡ್‌: ಎಫ್‌ಪಿಐ ಮಿತಿ ಹೆಚ್ಚಳ

ಕಾರ್ಪೊರೇಟ್‌ ಬಾಂಡ್‌ಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರಿಗೆ (ಎಫ್‌ಪಿಐ) ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಕಾರ್ಪೊರೇಟ್‌ ಬಾಂಡ್‌ಗಳಲ್ಲಿ ಎಫ್‌ಪಿಐ ಹೂಡಿಕೆ ಮಿತಿಯನ್ನು ಶೇ 9ರಿಂದ ಶೇ 15ಕ್ಕೆ ಹೆಚ್ಚಿಸಲಾಗಿದೆ.

ಸರ್ಕಾರದ ಕೆಲವು ಸಾಲಪತ್ರಗಳು ವಿದೇಶಿ ಹೂಡಿಕೆದಾರರಿಗೆ ಮುಕ್ತವಾಗಲಿವೆ ಎಂದು ಸಚಿವೆ ನಿರ್ಮಲಾ ತಿಳಿಸಿದ್ದಾರೆ. ಸರ್ಕಾರಿ ಸಾಲಪತ್ರಗಳನ್ನು ಒಳಗೊಂಡಿರುವ ಸಾಲ ವಿನಿಮಯ ವಹಿವಾಟು ನಿಧಿಗಳನ್ನು ಸ್ಥಾಪಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ.

-ಸಹಕಾರಿ ಸಂಘಗಳ ಮೇಲಿನ ತೆರಿಗೆ ಶೇ 30ರಿಂದ ಶೇ 22ಕ್ಕೆ ಇಳಿಕೆ

-ಜಿಎಸ್‌ಟಿಯ ಸರಳೀಕೃತ ರಿಟರ್ನ್ಸ್‌ ಅರ್ಜಿ ನಮೂನೆ ಏಪ್ರಿಲ್‌ 1 ರಿಂದ ಜಾರಿಗೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು