ಗುರುವಾರ, 21 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳ ಮಾರುಕಟ್ಟೆ: ಗಮನಿಸಿ, ತಾಳಿದವನು ಬಾಳಿಯಾನು...

Published 7 ಮೇ 2023, 19:32 IST
Last Updated 7 ಮೇ 2023, 19:32 IST
ಅಕ್ಷರ ಗಾತ್ರ

ಕಾವ್ಯ ಡಿ.

‘ತಾಳಿದವನು ಬಾಳಿಯಾನು’ ಎನ್ನುವುದು ನಮ್ಮ ಹಿರಿಯರಿಗೆ ಜೀವನದ ಅನುಭವವು ಕಲಿಸಿಕೊಟ್ಟ ವಿವೇಕ. ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸುವವರಿಗೂ ಈ ಮಾತು ಬಹಳ ಅನ್ವಯಿಸುತ್ತದೆ. ಹೂಡಿಕೆ ಮಾಡುವಾಗ ತಾಳ್ಮೆ ಇಲ್ಲದಿದ್ದರೆ ಸಂಪತ್ತು ಸೃಷ್ಟಿ ಸಾಧ್ಯವಾಗುವುದಿಲ್ಲ.

‘ಒಂದು ಷೇರನ್ನು ನೀವು ಕನಿಷ್ಠ ಹತ್ತು ವರ್ಷ ಇಟ್ಟುಕೊಳ್ಳುವಷ್ಟು ತಾಳ್ಮೆ ಹೊಂದಿಲ್ಲ ಎಂದಾದರೆ, ಆ ಷೇರನ್ನು ಹತ್ತು ನಿಮಿಷ ಇಟ್ಟುಕೊಳ್ಳುವ ಯೋಚನೆಯನ್ನೂ ಮಾಡಬೇಡಿ’ ಎಂದು ಹೂಡಿಕೆ ತಜ್ಞ ವಾರನ್ ಬಫೆಟ್ ಪ್ರತಿಪಾದಿಸುತ್ತಾರೆ. ಈ ಹಿನ್ನೆಲೆಯೊಂದಿಗೆ ಷೇರುಪೇಟೆಯಲ್ಲಿ ದೀರ್ಘಾವಧಿ ಹೂಡಿಕೆಯ ಮಹತ್ವ ಏನು ತಿಳಿಯೋಣ ಬನ್ನಿ.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಕಾದರೆ ಎರಡು ನಿಯಮಗಳನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಬಫೆಟ್ ಹೇಳುತ್ತಾರೆ. ನಿಯಮ 1: ಷೇರು ಮಾರುಕಟ್ಟೆಯಲ್ಲಿ ಎಂದಿಗೂ ಹಣ ಕಳೆದುಕೊಳ್ಳಬೇಡಿ; ನಿಯಮ 2: ಒಂದನೇ ನಿಯಮವನ್ನು ಎಂದಿಗೂ ಮರೆಯಬೇಡಿ.

ಆದರೆ ವಾಸ್ತವದಲ್ಲಿ ಷೇರು ಟ್ರೇಡಿಂಗ್‌ನಲ್ಲಿ ಬಹುತೇಕರು ಹಣ ಕಳೆದುಕೊಳ್ಳುತ್ತಿದ್ದಾರೆ  ಎಂಬ ವರದಿಗಳು ಇವೆ. ಸಣ್ಣ ಹೂಡಿಕೆದಾರರು ಷೇರು ಖರೀದಿಸಿದ ಮರುದಿನವೇ ಲಾಭ ನಿರೀಕ್ಷಿಸುತ್ತಾರೆ. ಖರೀದಿ ಬೆಲೆಗಿಂತ ಷೇರಿನ ಬೆಲೆ ಕೊಂಚ ಕೆಳಗಿಳಿದರೂ ಆತಂಕಕ್ಕೆ ಒಳಗಾಗುತ್ತಾರೆ. ನಷ್ಟವಾಗುವ ಭೀತಿಯಿಂದ ಅದನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ, ಒಟ್ಟಾರೆ ನಷ್ಟ ಅನುಭವಿಸುತ್ತಾರೆ. ಷೇರುಪೇಟೆಯಲ್ಲಿ ಆತುರಕ್ಕೆ ಬಿದ್ದು ನಷ್ಟಕ್ಕೆ ಸಿಲುಕುವವರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ.

ವಾರನ್ ಬಫೆಟ್ ಹೇಳುತ್ತಾರೆ, ಒಂದು ಕಂಪನಿಯ ಷೇರು ಖರೀದಿಸುವಾಗ, ‘ಆ ಕಂಪನಿಯನ್ನೇ ಖರೀದಿಸುತ್ತಿದ್ದೇನೆ’ ಎನ್ನುವ ಮನಃಸ್ಥಿತಿ ಇರಬೇಕು. ಒಂದು ಕಂಪನಿ ಖರೀದಿಸುವಾಗ ಯಾವ ಬಗೆಯಲ್ಲಿ ಲೆಕ್ಕಾಚಾರ ಮಾಡುತ್ತೇವೆಯೋ ಹಾಗೆಯೇ ಒಂದು ಷೇರು ಖರೀದಿಸುವ ಮುನ್ನವೂ ಪೂರ್ವಾಪರ ಅರಿತು ಮುನ್ನಡೆಯಬೇಕು. ಆಗ ಮಾತ್ರ ಷೇರು ಮಾರುಕಟ್ಟೆ ಹೂಡಿಕೆಯಿಂದ ಸಂಪತ್ತು ವೃದ್ಧಿ ಸಾಧ್ಯ. ಉದಾಹರಣೆಗೆ, ‘ನನ್ನ ಮಾಲೀಕತ್ವದ ಕಂಪನಿಯ ಮೌಲ್ಯ ₹50 ಕೋಟಿ’ ಎಂದು ಹೇಳುತ್ತೇನೆ ಎಂದಿಟ್ಟುಕೊಳ್ಳಿ. ನೀವು ಸುಮ್ಮನೇ ನನ್ನ ಮಾತು ಒಪ್ಪುವಿರಾ?

ಕಂಪನಿ ಹೇಗೆ ಪ್ರಗತಿ ಸಾಧಿಸಿದೆ, ಎಷ್ಟು ಲಾಭ ಮಾಡಿದೆ, ಎಷ್ಟು ಸಾಲ ಬಾಕಿ ಇದೆ, ಭವಿಷ್ಯದಲ್ಲಿ ಏನೆಲ್ಲ ವಹಿವಾಟು ನಡೆಸುವ ಆಲೋಚನೆ ಹೊಂದಿದೆ ಎಂಬ ಪ್ರಶ್ನೆಗಳನ್ನು ಕೇಳುತ್ತೀರಿ ಅಲ್ಲವೇ? ಹೂಡಿಕೆಯ ಮೂದಲು, ಹಣ ತೊಡಗಿಸುವ ಷೇರು ವಿಚಾರದಲ್ಲಿಯೂ ಇದೇ ಬಗೆಯಲ್ಲಿ ಆಲೋಚನೆ ಮಾಡಿದಾಗ ಮಾತ್ರ ದುಡ್ಡನ್ನು ಬೆಳೆಸಲು ಸಾಧ್ಯವಾಗುತ್ತದೆ.

ಷೇರು ಮಾರುಕಟ್ಟೆಯಲ್ಲಿ ನಿರ್ದಿಷ್ಟ ಷೇರು ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದಾಗ ಅದನ್ನು ಖರೀದಿಸುತ್ತೇವೆ, ಷೇರಿನ ಬೆಲೆ ಗರಿಷ್ಠ ಮಟ್ಟಕ್ಕೆ ಏರಿದಾಗ ಮಾರಾಟ ಮಾಡುತ್ತೇವೆ ಎಂದು ಖಚಿತವಾಗಿ ಹೇಳಲು ಯಾರಿಂದಲೂ ಸಾಧ್ಯವಿಲ್ಲ. ಮಾರುಕಟ್ಟೆಯಲ್ಲಿ ನೀವು ಯಾವಾಗ ಹೂಡಿಕೆ ಮಾಡಿದಿರಿ ಎನ್ನುವುದಕ್ಕಿಂತ ಏರಿಳಿತಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಎಷ್ಟು ಕಾಲ ಮಾರುಕಟ್ಟೆಯಲ್ಲಿ ಉಳಿದುಕೊಂಡಿದ್ದೀರಿ ಎನ್ನುವುದು ಮುಖ್ಯವಾಗುತ್ತದೆ.

2000ನೇ ಇಸವಿಯಿಂದ ಇಲ್ಲಿಯತನಕ, ಅಂದರೆ ಸುಮಾರು 22 ವರ್ಷಗಳಲ್ಲಿ ಷೇರು ಮಾರುಕಟ್ಟೆ ಸೂಚ್ಯಂಕಗಳು ಹಲವು ಏರಿಳಿತಗಳನ್ನು ಕಂಡಿವೆ. ಆದರೆ ಸರಾಸರಿಯನ್ನು ಪರಿಗಣಿಸಿದರೆ,  ಸೂಚ್ಯಂಕಗಳು ಪ್ರತಿ ಐದು ತಿಂಗಳಿಗೊಮ್ಮೆ ಹೊಸ ಮಟ್ಟವನ್ನು ತಲುಪಿವೆ. ಅಂದರೆ ಷೇರುಪೇಟೆ ಸಕಾರಾತ್ಮಕ ಹಾದಿಯಲ್ಲಿ ನಡೆದಿದೆ. ಹಾಗಾಗಿಯೇ, ಷೇರು ಮಾರುಕಟ್ಟೆಯಲ್ಲಿ ದೀರ್ಘಕಾಲದ ಹೂಡಿಕೆ ಬಹಳ ಮುಖ್ಯ.

ಷೇರು ಮಾರುಕಟ್ಟೆಯಲ್ಲಿ ಗೂಳಿ ಓಟವಿರುವಾಗ ಹೂಡಿಕೆದಾರರಲ್ಲಿ ಹಲವರು, ಷೇರಿನ ವಾಸ್ತವ ಮೌಲ್ಯಕ್ಕಿಂತ ಹೆಚ್ಚು ಬೆಲೆ ಕೊಟ್ಟು ಖರೀದಿಸಲು ತಯಾರಿರುತ್ತಾರೆ. ಷೇರುಪೇಟೆಯಲ್ಲಿ ಕರಡಿ ಹಿಡಿತವಿದ್ದು ಕುಸಿತ ಹೆಚ್ಚಾದಾಗ ದೊಡ್ಡ ಮೌಲ್ಯಯುತ ಕಂಪನಿಗಳ ಷೇರುಗಳು ರಿಯಾಯಿತಿ ದರದಲ್ಲಿ ಸಿಗುತ್ತವೆ. ಆದರೆ ಹೂಡಿಕೆದಾರರು ಸೂಚ್ಯಂಕಗಳ ಕುಸಿತಕ್ಕೆ ಹೆದರಿ ಉತ್ತಮ ಕಂಪನಿಗಳ ಷೇರುಗಳು ಕಡಿಮೆ ಬೆಲೆಗೆ ಸಿಕ್ಕರೂ ಖರೀದಿಗೆ ಮುಂದಾಗುವುದಿಲ್ಲ. ವಾರನ್ ಬಫೆಟ್ 2008ರ ಆರ್ಥಿಕ ಕುಸಿತದ ಸಂದರ್ಭದಲ್ಲಿ ಬ್ಯಾಂಕ್ ಆಫ್ ಅಮೆರಿಕ, ಗೋಲ್ಡ್ ಮ್ಯಾನ್ ಸ್ಟಾಚ್ಸ್, ಜಿಇ, ಡೋ ಕಂಪನಿಗಳಲ್ಲಿ ಹೂಡಿಕೆ ಮಾಡಿ ನಂತರದಲ್ಲಿ ಉತ್ತಮ ಲಾಭ ಮಾಡಿಕೊಂಡರು.

ದೀರ್ಘಾವಧಿ ಸಂಪತ್ತು ಸೃಷ್ಟಿಗೆ ಉದಾಹರಣೆಗಳು: ಉತ್ತಮ ಕಂಪನಿಗಳಲ್ಲಿ ದೀರ್ಘಾವಧಿಗೆ ಹೂಡಿಕೆ ಮಾಡಿದಾಗ ಸಂಪತ್ತು ಬೆಳೆಯುತ್ತದೆ ಎನ್ನುವುದಕ್ಕೆ ಸೂಕ್ತ ಉದಾಹರಣೆಗಳು ಟೈಟನ್ ಮತ್ತು ಅವೆನ್ಯೂ ಸೂಪರ್‌ಮಾರ್ಟ್ಸ್ (ಡಿ-ಮಾರ್ಟ್) ಕಂಪನಿ ಷೇರುಗಳು. ಮಾರ್ಚ್ 2017ರಲ್ಲಿ ಐಪಿಒ (ಆರಂಭಿಕ ಸಾರ್ವಜನಿಕ ಕೊಡುಗೆ) ನಡೆದಾಗ ಅವೆನ್ಯೂ ಸೂಪರ್‌ಮಾರ್ಟ್ಸ್ ಷೇರಿನ ಬೆಲೆ ₹299 ಇತ್ತು. ಆರು ವರ್ಷಗಳಲ್ಲಿ ಆ ಷೇರಿನ ಬೆಲೆ ₹3,594 ಆಯಿತು. 2002ರಲ್ಲಿ ಟೈಟನ್ ಷೇರಿನ ಬೆಲೆ ₹3ರ ಆಸುಪಾಸಿನಲ್ಲಿತ್ತು. ಈಗ ಟೈಟನ್ ಷೇರಿನ ಬೆಲೆ ₹2,732ರ ಆಸುಪಾಸಿನಲ್ಲಿದೆ. ಅಷ್ಟೇ ಅಲ್ಲ, ದೀರ್ಘಾವಧಿಗೆ ಹೂಡಿಕೆ ಮಾಡಿದವರಿಗೆ ಉತ್ತಮ ಲಾಭದ ಜೊತೆಗೆ ಬೋನಸ್ ಷೇರುಗಳು, ಡಿವಿಡೆಂಡ್ ಕೂಡ ಸಿಕ್ಕಿದೆ. ಈ ಕಾರಣಕ್ಕಾಗಿಯೇ, ಉತ್ತಮ ಕಂಪನಿಗಳಲ್ಲಿ ದೀರ್ಘಾವಧಿಗೆ ಹೂಡಿಕೆ ಮಾಡುವುದು ಬಹಳ ಮುಖ್ಯ. (ಉದಾಹರಣೆಗೆ ಮಾತ್ರ ಇಲ್ಲಿ ಕೆಲವು ಕಂಪನಿಗಳ ಹೆಸರು ಬಳಸಲಾಗಿದೆ. ಇದು ಹೂಡಿಕೆ ಶಿಫಾರಸು ಅಲ್ಲ)

–(ಲೇಖಕರು ಚಾರ್ಟರ್ಡ್ ಅಕೌಂಟೆಂಟ್)

ಯಥಾಸ್ಥಿತಿ ಕಾಯ್ದುಕೊಂಡ ಷೇರುಪೇಟೆ

ಮೇ 5ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಬಹುತೇಕ ಯಥಾಸ್ಥಿತಿ ಕಾಯ್ದುಕೊಂಡಿವೆ. 61054 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 0.1ರಷ್ಟು ಕುಸಿದಿದೆ. 18069 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 0.2ರಷ್ಟು ಜಿಗಿದಿದೆ. ಕಂಪನಿಗಳ ತ್ರೈಮಾಸಿಕ ಫಲಿತಾಂಶಗಳಲ್ಲಿ ಕಂಡುಬಂದ ಮಿಶ್ರ ಫಲ ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಖರೀದಿ ಭರಾಟೆ ವಾಹನ ಮಾರಾಟ ಅಂಕಿ-ಅಂಶ ಕೈಗಾರಿಕಾ ಉತ್ಪಾದನೆಯಲ್ಲಿ ಹೆಚ್ಚಳ ಮತ್ತು ಉತ್ತಮ ಜಿಎಸ್‌ಟಿ ಸಂಗ್ರಹ ಮಾರುಕಟ್ಟೆ ಯಥಾಸ್ಥಿತಿ ಕಾಯ್ದುಕೊಳ್ಳಲು ನೆರವಾಗಿವೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ವಾಹನ ಸೂಚ್ಯಂಕ ಶೇ 1.19ರಷ್ಟು ಮಿಡ್ ಕ್ಯಾಪ್ 100 ಶೇ 1.11ರಷ್ಟು ಎಫ್‌ಎಂಸಿಜಿ ಶೇ 0.78ರಷ್ಟು ನಿಫ್ಟಿ ಸ್ಮಾಲ್ ಕ್ಯಾಪ್ 100 ಸೂಚ್ಯಂಕ ಶೇ 0.59ರಷ್ಟು ನಿಫ್ಟಿ ಲೋಹ ಶೇ 0.13ರಷ್ಟು ನಿಫ್ಟಿ ಐಟಿ ಶೇ 0.04ರಷ್ಟು ಜಿಗಿದಿವೆ. ನಿಫ್ಟಿ ಬ್ಯಾಂಕ್ ಶೇ 1.32ರಷ್ಟು ಮಾಧ್ಯಮ ಶೇ 0.42ರಷ್ಟು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 0.34ರಷ್ಟು ನಿಫ್ಟಿ ಪಾರ್ಮಾ ಶೇ 0.04ರಷ್ಟು ಕುಸಿದಿವೆ.

ಬಿಎಸ್‌ಇ ಲಾರ್ಜ್ ಕ್ಯಾಪ್‌ನಲ್ಲಿ ಇಂಟರ್ ಗ್ಲೋಬ್ ಏವಿಯೇಷನ್ ನೈಕಾ ಪೇಟಿಎಂ ಸೀಮನ್ಸ್ ಮತ್ತು ಹ್ಯಾವೆಲ್ಸ್ ಇಂಡಿಯಾ ಗಳಿಸಿಕೊಂಡಿವೆ. ಇಂಡಸ್ ಇಂಡ್ ಬ್ಯಾಂಕ್ ಡಾಬರ್ ಇಂಡಿಯಾ ಎಚ್‌ಡಿಎಫ್‌ಸಿ ಬ್ಯಾಂಕ್ ಅದಾನಿ ವಿಲ್ಮರ್ ಮತ್ತು ಯುಪಿಎಲ್ ಕುಸಿತವಾಗಿವೆ. ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹5527.76 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ದೇಶಿ ಸಾಂಸ್ಥಿಕ ಹೂಡಿಕೆದಾರರು ₹2735.25 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಮುನ್ನೋಟ: ಈ ವಾರ ಕೆನರಾ ಬ್ಯಾಂಕ್ ಟಾಟಾ ಮೋಟರ್ಸ್ ನಜಾರಾ ಟೆಕ್ನಾಲಜೀಸ್ ರೇಮಂಡ್ ರೆಲಿಗೇರ್ ಅಗ್ರಿಟೆಕ್ ಡಿಶ್ ಟಿವಿ ಎಚ್ಎಎಲ್ ಹೋಂಡಾ ಪವರ್ ರಿಲ್ಯಾಕ್ಸೊ ಐಷರ್ ಮೋಟರ್ಸ್ ಯುಪಿಎಲ್ ಜೆಎಂ ಫೈನಾನ್ಸಿಯಲ್ ಎಸ್ಕಾರ್ಟ್ಸ್ ಬಾಷ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಉಳಿದಂತೆ ಜಾಗತಿಕ ವಿದ್ಯಮಾನಗಳು ಮತ್ತು ದೇಶಿಯ ಬೆಳವಣಿಗೆಗಳು ಷೇರುಪೇಟೆ ಸೂಚ್ಯಂಕಗಳ ಮೇಲೆ ಪರಿಣಾಮ ಬೀರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT