ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳ ಮಾರುಕಟ್ಟೆ: ಎಂ.ಎಫ್‌ ಕಂಪನಿಗಳು ಹೇಗೆ ಹಣ ಗಳಿಸುತ್ತವೆ?

Published 5 ನವೆಂಬರ್ 2023, 23:30 IST
Last Updated 5 ನವೆಂಬರ್ 2023, 23:30 IST
ಅಕ್ಷರ ಗಾತ್ರ

ಸ್ವಿಗ್ಗಿ, ಜೊಮಾಟೊ, ಟಾಟಾ ಪ್ಲೇ, ಅಮೆಜಾನ್ ಪ್ರೈಂ, ನೆಟ್‌ಫ್ಲಿಕ್ಸ್‌... ಹೀಗೆ ಅನೇಕ ಸೇವೆಗಳನ್ನು ಒಂದಲ್ಲ ಒಂದು ಹಂತದಲ್ಲಿ ಬಳಕೆ ಮಾಡುತ್ತೀರಿ. ಉದಾಹರಣೆಗೆ ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ ಮೇಲೆ ನಿಮ್ಮ ಮನೆಗೆ ಹೊಟೇಲ್‌ನಿಂದ ಆಹಾರ ಬರಬೇಕು ಅಂದ್ರೆ ಒಬ್ಬ ಡೆಲಿವರಿ ಬಾಯ್ ಕೆಲಸ ಮಾಡಬೇಕು, ಆತ ಸಂಚರಿಸಲು ಗಾಡಿ ಮತ್ತು ಪೆಟ್ರೋಲ್ ಬೇಕು, ಆಹಾರ ಬುಕ್ ಮಾಡಲು ಆ್ಯಪ್ ಬೇಕು... ಹೀಗೆ ಅನೇಕ ಖರ್ಚುಗಳು ಫುಡ್ ಡೆಲಿವರಿ ಕಂಪನಿಗೆ ಬರುತ್ತವೆ. ಅವೆಲ್ಲವನ್ನೂ ಒಳಗೊಂಡು ಒಂದಿಷ್ಟು ಲಾಭಾಂಶ ಸೇರಿಸಿ ಫುಡ್ ಡೆಲಿವರ್ ಕಂಪನಿ ಒಂದು ಶುಲ್ಕ ನಿಗದಿ ಮಾಡುತ್ತದೆ. ಅದನ್ನು ಪಾವತಿಸಲು ಒಪ್ಪುವ ಗ್ರಾಹಕನಿಗೆ ಫುಡ್ ಡೆಲಿವರ್ ಕಂಪನಿ ಸೇವೆ ಒದಗಿಸುತ್ತದೆ.

ಇದೇ ಮಾದರಿಯಲ್ಲಿ ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವಾಗ ಹೂಡಿಕೆದಾರ ಕೆಲ ವೆಚ್ಚಗಳನ್ನು ಭರಿಸಬೇಕಾಗುತ್ತದೆ. ಮ್ಯೂಚುಯಲ್ ಫಂಡ್ ಕಂಪನಿಗಳು ನಿಮ್ಮ ಹೂಡಿಕೆ ಮೊತ್ತವನ್ನು ನಿರ್ವಹಣೆ ಮಾಡಲು ಪಡೆಯುವ ಶುಲ್ಕಕ್ಕೆ ಎಕ್ಸ್‌ಪೆನ್ಸ್ ರೇಶಿಯೋ (ನಿರ್ವಹಣಾ ಶುಲ್ಕ) ಎಂದು ಕರೆಯಲಾಗುತ್ತದೆ. ಹೂಡಿಕೆಯನ್ನು ಸುರಕ್ಷಿತವಾಗಿ ನಿರ್ವಹಿಸಲು ರಿಜಿಸ್ಟ್ರಾರ್‌ಗೆ ಶುಲ್ಕ ಪಾವತಿಸುವುದು, ಬ್ರೋಕರೇಜ್ ಶುಲ್ಕ ಕಟ್ಟುವುದು, ಫಂಡ್ ಮ್ಯಾನೇಜರ್ ಸೇರಿದಂತೆ ಕಂಪನಿಯ ಸಿಬ್ಬಂದಿಗೆ ಸಂಬಳ ಕೊಡುವುದು, ಮ್ಯೂಚುಯಲ್ ಫಂಡ್‌ನ ಮಾರ್ಕೆಟಿಂಗ್‌ಗೆ ತಗಲುವ ವೆಚ್ಚ ನಿಭಾಯಿಸುವುದು ಸೇರಿದಂತೆ ಅನೇಕ ಖರ್ಚುಗಳು ಮ್ಯೂಚುಯಲ್ ಫಂಡ್ ಕಂಪನಿಗಳಿಗೆ ಇರುತ್ತವೆ. ಮ್ಯೂಚುಯಲ್ ಫಂಡ್ ಕಂಪನಿಗಳು ಹೂಡಿಕೆದಾರರಿಂದ ಬಹಳ ನಾಜೂಕಾಗಿ ನಿರ್ವಹಣಾ ಶುಲ್ಕ ಪಡೆಯುತ್ತವೆ. ಹಾಗಾಗಿ ಹೂಡಿಕೆದಾರರಿಗೆ ಅಷ್ಟು ಹೊರೆ ಅನಿಸುವುದಿಲ್ಲ.

ಕಂಪನಿಗಳು ಹಣ ಗಳಿಸುವುದು ಹೇಗೆ: ಮ್ಯೂಚುಯಲ್ ಫಂಡ್‌ನಲ್ಲಿ ಹೂಡಿಕೆ ಮಾಡುವಾಗ ಯಾವ ಫಂಡ್‌ನ ಎಕ್ಸ್‌ಪೆನ್ಸ್ ರೇಷಿಯೋ (ನಿರ್ವಹಣಾ ಶುಲ್ಕ) ಎಷ್ಟು?, ಮ್ಯೂಚುಯಲ್ ಫಂಡ್ ಕಂಪನಿಗಳು ನಿರ್ವಹಣಾ ಶುಲ್ಕವನ್ನು ಹೇಗೆ ಪಡೆಯುತ್ತವೆ?, ಆ ವೆಚ್ಚದ ಹೊರೆಯನ್ನು ನಾವು ಹೇಗೆ ತಗ್ಗಿಸಿಕೊಳ್ಳಬಹುದು?, ಎನ್ನುವ ಬಗ್ಗೆ ತಿಳಿಯುವುದು ಬಹಳ ಮುಖ್ಯ. ಮೊದಲಿಗೆ ಎಕ್ಸ್‌ಪೆನ್ಸ್ ರೇಶಿಯೋ ಹೇಗೆ ಕೆಲಸ ಮಾಡುತ್ತದೆ ತಿಳಿಯೋಣ. ಉದಾಹರಣೆಗೆ ಮ್ಯೂಚುಯಲ್ ಫಂಡ್ ಕಂಪನಿ ಶೇ 1 ರಷ್ಟು ಎಕ್ಸ್ ಪೆನ್ಸ್ ರೇಶಿಯೋ ಪಡೆಯುತ್ತದೆ ಎಂದುಕೊಳ್ಳೋಣ. ಅದರಂತೆ ನೀವು ಹೂಡಿಕೆ ಮಾಡುವ ಪ್ರತಿ ಒಂದು ಲಕ್ಷಕ್ಕೆ ಮ್ಯೂಚುಯಲ್ ಫಂಡ್ ಕಂಪನಿ ₹ 1 ಸಾವಿರವನ್ನು ನಿರ್ವಹಣಾ ಶುಲ್ಕವಾಗಿ ಪಡೆಯುತ್ತದೆ. ಈ ಶುಲ್ಕವನ್ನು ಮ್ಯೂಚುಯಲ್ ಫಂಡ್ ಕಂಪನಿಗಳು ವಾರ್ಷಿಕ, ಅರೆ ವಾರ್ಷಿಕ ಅಥವಾ ತ್ರೈಮಾಸಿಕದ ಲೆಕ್ಕಾಚಾರದಲ್ಲಿ ಪಡೆಯುವುದಿಲ್ಲ, ಬದಲಿಗೆ ಪ್ರತಿದಿನ ಶುಲ್ಕ ತೆಗೆದುಕೊಳ್ಳುತ್ತವೆ. ₹ 1 ಸಾವಿರವನ್ನು ನೀವು 365 ರೊಂದಿಗೆ ಭಾಗಿಸಿದರೆ (1000/365= ₹ 2.73) ಪ್ರತಿದಿನ ₹ 2.73 ಅನ್ನು ಶುಲ್ಕವಾಗಿ ಪಡೆಯುತ್ತವೆ. ಎಷ್ಟು ದಿನ ಹೂಡಿಕೆ ಮಾಡಿರುತ್ತಿರೋ ಅಲ್ಲಿಯ ತನಕ ಪ್ರತಿ ದಿನ ₹ 2.73 ಶುಲ್ಕವನ್ನು ಮ್ಯೂಚುಯಲ್ ಫಂಡ್ ಕಂಪನಿ ಪಡೆಯುತ್ತಿರುತ್ತದೆ. ಹೂಡಿಕೆ ಮೇಲೆ ಗಳಿಕೆ ಬರಲಿ ಬಿಡಲಿ ಮ್ಯೂಚುಯಲ್ ಫಂಡ್ ಕಂಪನಿ ಪ್ರತಿದಿನ ₹ 2.73 ಅನ್ನು ಮುರಿದುಕೊಳ್ಳುತ್ತದೆ.

ಡೈರೆಕ್ಟ್ ಮ್ಯೂಚುಯಲ್ ಫಂಡ್‌ನಲ್ಲಿ ಶುಲ್ಕ ಕಮ್ಮಿ: ಮ್ಯೂಚುಯಲ್ ಫಂಡ್ ಹೂಡಿಕೆಗೆ ಎರಡು ಮಾರ್ಗಗಳಿವೆ. ನೇರವಾಗಿ ನೀವೇ ಮ್ಯೂಚುಯಲ್ ಫಂಡ್ ವೆಬ್ ಸೈಟ್ ಮೂಲಕ ಅಥವಾ ಮೊಬೈಲ್ ಆ್ಯ‍ಪ್‌ಗಳ ಮೂಲಕ ಹೂಡಿಕೆ ಮಾಡಿದರೆ ಅದನ್ನು ಡೈರೆಕ್ಟ್ ಮ್ಯೂಚುಯಲ್ ಫಂಡ್ ಎಂದು ಕರೆಯಲಾಗುತ್ತದೆ. ಮ್ಯೂಚುಯಲ್ ಫಂಡ್ ಏಜೆಂಟ್ ಮೂಲಕ ಹೂಡಿಕೆ ಮಾಡಿದರೆ ಅದನ್ನು ರೆಗ್ಯೂಲರ್ ಮ್ಯೂಚುಯಲ್ ಫಂಡ್ ಎಂದು ಪರಿಗಣಿಸಲಾಗುತ್ತದೆ. ಡೈರೆಕ್ಟ್ ಮ್ಯೂಚುಯಲ್ ಫಂಡ್‌ನಲ್ಲಿ  ನಿರ್ವಹಣಾ ಶುಲ್ಕ ಕಡಿಮೆ ಇರುತ್ತದೆ. ಆದರೆ ರೆಗ್ಯೂಲರ್ ಮ್ಯೂಚುಯಲ್ ಫಂಡ್‌ನಲ್ಲಿ ಏಜೆಂಟ್‌ನ ಕಮಿಷನ್ ಸಹ ಸೇರುವುದರಿಂದ ನಿರ್ವಹಣಾ ವೆಚ್ಚ ಹೆಚ್ಚಿರುತ್ತೆ. ಉದಾಹರಣೆಗೆ ಡೈರೆಕ್ಟ್ ಮ್ಯೂಚುಯಲ್ ಫಂಡ್‌ನ ನಿರ್ವಹಣಾ ಶುಲ್ಕ ಶೇ 1.5 ರಷ್ಟಿದ್ದರೆ , ರೆಗ್ಯೂಲರ್ ಮ್ಯೂಚುಯಲ್ ಫಂಡ್‌ನ ನಿರ್ವಹಣಾ ಶುಲ್ಕ ಶೇ 2.5 ರಷ್ಟಿರುತ್ತದೆ. ಮ್ಯೂಚುಯಲ್ ಫಂಡ್ ಬಗ್ಗೆ ಒಂದಷ್ಟು ಅರಿವಿದೆ ಎನ್ನುವವರು ಡೈರೆಕ್ಟ್ ಮ್ಯೂಚುಯಲ್ ಫಂಡ್ ಪರಿಗಣಿಸಬಹುದು. ಮ್ಯೂಚುಯಲ್ ಫಂಡ್ ಬಗ್ಗೆ ಏನೂ ತಿಳಿದಿಲ್ಲ ಎನ್ನುವವರು ಮ್ಯೂಚುಯಲ್ ಫಂಡ್ ಡಿಸ್ಟ್ರಿಬ್ಯೂಟರ್‌ಗಳ ಮೂಲಕ ರೆಗ್ಯೂಲರ್ ಫಂಡ್‌ನಲ್ಲಿ ಹೂಡುವುದು ಒಳಿತು.

ಗಳಿಕೆಯ ಲಯಕ್ಕೆ ಮರಳಿದ ಷೇರುಪೇಟೆ

ಕಳೆದ ಎರಡು ವಾರಗಳಿಂದ ಕುಸಿತದ ಹಾದಿಯಲ್ಲಿದ್ದ ಷೇರುಪೇಟೆ ಸೂಚ್ಯಂಕಗಳು ಗಳಿಕೆಯ ಲಯಕ್ಕೆ ಮರಳಿವೆ. ನವೆಂಬರ್ 3ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಗಳಿಕೆ ದಾಖಲಿಸಿವೆ. 64363 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 0.91 ರಷ್ಟು ಗಳಿಸಿಕೊಂಡಿದೆ. 19230 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 0.96 ರಷ್ಟು ಜಿಗಿದಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಸಕಾರಾತ್ಮಕತೆ ಅಮೆರಿಕ ಫೆಡರಲ್ ಬ್ಯಾಂಕ್ ಬಡ್ಡಿ ದರಗಳನ್ನು ಯಥಾಸ್ಥಿತಿಯಲ್ಲಿ ಇಟ್ಟಿದ್ದು ತೈಲ ಬೆಲೆ ಇಳಿಕೆ ಸೇರಿ ಅನೇಕ ಅಂಶಗಳು ಷೇರುಪೇಟೆ ಮೇಲೆ ಪರಿಣಾಮ ಬೀರಿವೆ. ವಲಯವಾರು ಪ್ರಗತಿಯಲ್ಲಿ ಬಿಎಸ್ಇ ರಿಯಲ್ ಎಸ್ಟೇಟ್ ಶೇ 10 ಬಿಎಸ್ಇ ಟೆಲಿಕಾಂ  ಶೇ 5.3 ಬಿಎಸ್ಇ ತೈಲ ಮತ್ತು ಅನಿಲ ಸೂಚ್ಯಂಕ ಶೇ 3.6 ರಷ್ಟು ಗಳಿಸಿಕೊಂಡಿವೆ. ಆದರೆ ಬಿಎಸ್ಇ ಆಟೋ ಸೂಚ್ಯಂಕ ಶೇ 1 ರಷ್ಟು ಕುಸಿದಿದೆ.  ಗಳಿಕೆ: ಬಿಎಸ್ಇ ಲಾರ್ಜ್ ಕ್ಯಾಪ್‌ನಲ್ಲಿ ಇಂಡಸ್ ಟವರ್ಸ್ ಡಿಎಲ್‌ಎಫ್ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಜೊಮಾಟೊ ಅದಾನಿ ಪವರ್ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ವೇದಾಂತ ಮತ್ತು ಅಪೋಲೊ ಹಾಸ್ಪಿಟಲ್ ಎಂಟರ್ ಪ್ರೈಸಸ್ ಗಳಿಸಿಕೊಂಡಿವೆ. ಮುನ್ನೋಟ: ಅದಾನಿ ಎನರ್ಜಿ ಸೊಲ್ಯೂಷನ್ಸ್ ಬಜಾಜ್ ಎಲೆಕ್ಟ್ರಿಕಲ್ಸ್ ಲಿಮಿಟೆಡ್ ಬಾರ್ಬಿಕ್ಯೂ ನೇಷನ್ ಹಾಸ್ಪೆಟಾಲಿಟಿ ಬಿಕಾಜಿ ಫುಡ್ಸ್ ಇಂಟರ್ ನ್ಯಾಷನಲ್ ಲಿ. ಮ್ಯಾಕ್ಸ್ ಹೆಲ್ತ್ ಶೋಭಾ ಲಿ. ಉಜ್ಜೀವನ್ ಫೈನಾನ್ಷಿಯಲ್ ಸರ್ವಿಸಸ್ ಲಿ. ಅಪೋಲೋ ಟೈಯರ್ಸ್ ಕೊಚ್ಚಿನ್ ಶಿಪ್ ಯಾರ್ಡ್ ಲಿ ಬಿಎಚ್ಇಎಲ್ ಅದಾನಿ ಪೋರ್ಟ್ಸ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಸದ್ಯಕ್ಕೆ ಮಾರುಕಟ್ಟೆ ಸಕಾರಾತ್ಮಕವಾಗಿ ಕಂಡುಬಂದರೂ ಹೆಚ್ಚಿನ ಏರಿಳಿತಗಳಿರುತ್ತವೆ.

(ಲೇಖಕಿ ಚಾರ್ಟರ್ಡ್ ಅಕೌಂಟೆಂಟ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT