ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗೆಟಕುವ ಮನೆ: ತಗ್ಗಿದ ಮಾರಾಟ

2022ರಲ್ಲಿ ಶೇ 26ಕ್ಕೆ ಇಳಿಕೆ; ಆಸ್ತಿ ಸಲಹಾ ಸಂಸ್ಥೆ ಅನರಾಕ್ ವರದಿ
Last Updated 27 ಮಾರ್ಚ್ 2023, 18:46 IST
ಅಕ್ಷರ ಗಾತ್ರ

‌ಬೆಂಗಳೂರು: ಕೋವಿಡ್‌ಗೂ ಮೊದಲಿನ ಸಂದರ್ಭ ಹಾಗೂ ಕೋವಿಡ್‌ ನಂತರದ ಸಂದರ್ಭಕ್ಕೆ ಹೋಲಿಸಿದರೆ, ದೇಶದ ಏಳು ಪ್ರಮುಖ ನಗರಗಳಲ್ಲಿ ಕೈಗೆಟಕುವ ದರದ ಮನೆಗಳ ಮಾರಾಟ ಪ್ರಮಾಣದಲ್ಲಿ ಭಾರಿ ಇಳಿಕೆ ದಾಖಲಾಗಿದೆ.

2019ರಲ್ಲಿ ದೇಶದ ಏಳು ಪ್ರಮುಖ ನಗರಗಳಲ್ಲಿ ಮಾರಾಟವಾದ 2.61 ಲಕ್ಷ ಮನೆಗಳ ಪೈಕಿ ಕೈಗೆಟಕುವ ದರ ಮನೆಗಳ ಪ್ರಮಾಣವು ಶೇಕಡ 38ರಷ್ಟು ಆಗಿತ್ತು. ಆದರೆ 2022ರಲ್ಲಿ ಮಾರಾಟವಾದ ಒಟ್ಟು 3.64 ಲಕ್ಷ ಮನೆಗಳ ಪೈಕಿ ಕೈಗೆಟಕುವ ದರದ ಮನೆಗಳ ಪ್ರಮಾಣವು ಶೇ 26ಕ್ಕೆ ಇಳಿಕೆ ಆಗಿದೆ. ಆಸ್ತಿ ಸಲಹಾ ಸಂಸ್ಥೆ ಅನರಾಕ್‌ ಸಿದ್ಧಪಡಿಸಿರುವ ವರದಿಯಲ್ಲಿ ಈ ಅಂಕಿ–ಅಂಶ ಇದೆ.

ಕೈಗೆಟಕುವ ದರದ ಮನೆಗಳನ್ನು ಖರೀದಿಸುವ ವರ್ಗವು ಕೋವಿಡ್‌ ಸಾಂಕ್ರಾಮಿಕದ ಪರಿಣಾಮವಾಗಿ ತೀವ್ರ ತೊಂದರೆಗೆ ಸಿಲುಕಿದೆ. ಈ ವರ್ಗದ ಜನರು ಮನೆ ಖರೀದಿಸುವುದನ್ನು ಮುಂದೂಡಿ, ಬಾಡಿಗೆ ಮನೆಯಲ್ಲಿ ವಾಸಿಸುವುದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ವರದಿ ಹೇಳಿದೆ.

₹ 40 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಬೆಲೆಯ ಮನೆಗಳನ್ನು ‘ಕೈಗೆಟಕುವ ದರದ ಮನೆಗಳು’ ಎಂದು ವ್ಯಾಖ್ಯಾ
ನಿಸಲಾಗಿದೆ.

ಅಗತ್ಯ ವಸ್ತುಗಳಾದ ಸಿಮೆಂಟ್‌, ಉಕ್ಕು ಬೆಲೆ ಹೆಚ್ಚಳ ಮತ್ತು ಕಾರ್ಮಿಕರ ಕೂಲಿ ಏರಿಕೆಯ ಪರಿಣಾಮವಾಗಿ ಡೆವಲಪರ್‌ಗಳಿಗೆ ಕೈಗೆಟಕುವ ದರದ ಮನೆಗಳ ಹೊಸ ಯೋಜನೆ ಆರಂಭಿಸುವುದು ಕಷ್ಟವಾಗುತ್ತಿದೆ.

ಮಧ್ಯಮ ಮತ್ತು ಪ್ರೀಮಿಯಂ ವರ್ಗದ ಮನೆಗಳಿಗೆ (₹ 40 ಲಕ್ಷದಿಂದ ₹ 1.50 ಕೋಟಿವರೆಗಿನವು) ಬೇಡಿಕೆ ಹೆಚ್ಚಿದೆ. ಈ ವರ್ಗದ ಮನೆಗಳಿಗೆ ಹೆಚ್ಚು ಬೇಡಿಕೆ ಬರುತ್ತಿರುವುದು ಐ.ಟಿ., ಐ.ಟಿ. ಆಧಾರಿತ ಉದ್ಯಮಗಳಲ್ಲಿ, ನವೋದ್ಯಮಗಳಲ್ಲಿ ಕೆಲಸ ಮಾಡುತ್ತಿರುವ ಮಿಲೆನಿಯಲ್‌ಗಳಿಂದ ಎಂದು ಅನರಾಕ್ ಹೇಳಿದೆ.

ಬೇಡಿಕೆ ಕಡಿಮೆ ಆಗುತ್ತಿರುವ ಕಾರಣ ಡೆವಲಪರ್‌ಗಳು ಕೈಗೆಟಕುವ ದರದ ಮನೆಗಳ ಯೋಜನೆ ಆರಂಭಿಸುತ್ತಿರುವುದು ಕೂಡ ಕಡಿಮೆ ಆಗಿದೆ. 2022ರಲ್ಲಿ ಏಳು ನಗರಗಳಲ್ಲಿ ಡೆವಲಪರ್‌ಗಳು 3.58 ಲಕ್ಷ ಮನೆಗಳ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ. ಇದರಲ್ಲಿ ಕೈಗೆಟಕುವ ದರದ ಮನೆಗಳ ಪ್ರಮಾಣ ಶೇ 20ರಷ್ಟು ಮಾತ್ರ. 2018ರಲ್ಲಿ ಈ ಪ್ರಮಾಣವು ಶೇ 40ರಷ್ಟು ಇತ್ತು.

‘ವ್ಯಾಖ್ಯಾನ ಬದಲಾಗಬೇಕು’: ಮನೆ ಖರೀದಿಸಲು ಬಯಸುವವರು 2–ಬಿಎಚ್‌ಕೆ ಮನೆಗಳನ್ನು ಹೆಚ್ಚಾಗಿ ಬಯಸು
ತ್ತಾರೆ. ಆದರೆ 2–ಬಿಎಚ್‌ಕೆ ಮನೆಗಳನ್ನು ಕೈಗೆಟಕುವ ದರದಲ್ಲಿ ಕಟ್ಟಲು ಈಗಿನ ಪರಿಸ್ಥಿತಿಯಲ್ಲಿ ಆಗುತ್ತಿಲ್ಲ. ಮನೆ ನಿರ್ಮಾಣಕ್ಕೆ ಅಗತ್ಯವಿರುವ ವಸ್ತುಗಳ ಬೆಲೆಯು ಶೇ 9ರಿಂದ ಶೇ 11ರಷ್ಟು ಹೆಚ್ಚಾಗಿದೆ. ವೆಚ್ಚ ಹೆಚ್ಚಳವನ್ನು ಗಮನದಲ್ಲಿ ಇರಿಸಿಕೊಂಡು, ‘ಕೈಗೆಟಕುವ ದರದ ಮನೆ’ಯ ವ್ಯಾಖ್ಯಾನವನ್ನು ಬದಲಿಸಬೇಕಾಗಿದೆ ಎಂದು ಪ್ರಾವಿಡೆಂಟ್‌ ಹೌಸಿಂಗ್‌ ಲಿಮಿಟೆಡ್‌ ಕಂಪನಿಯ ಸಿಒಒ ಮಲ್ಲಣ್ಣ ಸಾಸಲು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಹಣದುಬ್ಬರ ಹೆಚ್ಚಳವನ್ನು ಪರಿಗಣಿಸಿ, ₹ 60 ಲಕ್ಷ ಅಥವಾ ₹ 65 ಲಕ್ಷಕ್ಕಿಂತ ಕಡಿಮೆ ಬೆಲೆಯ ಮನೆಗಳ
ನ್ನೆಲ್ಲ ಕೈಗೆಟಕುವ ದರದ ಮನೆಗಳು ಎಂಬ ವ್ಯಾಖ್ಯಾನದ ಅಡಿ ತರಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ‘ಈ ಮೌಲ್ಯದ ಮನೆಗಳ ಮಾರಾಟವನ್ನು ಪರಿಗಣಿಸಿದರೆ, ಕೈಗೆಟಕುವ ದರದ ಮನೆಗಳ ಮಾರಾಟವು ಕಡಿಮೆ ಆಗಿಲ್ಲ’ ಎಂದು ಮಲ್ಲಣ್ಣ ಹೇಳಿದರು.

ಕೈಗೆಟಕುವ ದರದ ಮನೆಗಳಿಗೆ ಬೇಡಿಕೆಯು ದೊಡ್ಡ ಮಟ್ಟದಲ್ಲಿ ಕುಸಿದಿಲ್ಲ. ಆದರೆ, ತುಸು ಮಟ್ಟಿಗೆ ಕುಸಿದಿರುವುದು ನಿಜ. ಜಮೀನಿಗೆ ಭಾರಿ ಬೆಲೆ, ಅಗತ್ಯ ವಸ್ತುಗಳ ವೆಚ್ಚ
ಹಾಗೂ ಕಾರ್ಮಿಕರ ವೇತನ ಹೆಚ್ಚಾಗಿರುವುದು ಈ ವಲಯಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಭಾರತೀಯ ಬಿಲ್ಡರ್‌ಗಳ ಒಕ್ಕೂಟದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಜಿ.ಎಂ. ರವೀಂದ್ರ ತಿಳಿಸಿದರು.

ಏನು ಸಮಸ್ಯೆ?

l ದೊಡ್ಡ ನಗರಗಳಲ್ಲಿ ಜಮೀನಿನ ಬೆಲೆ ಹೆಚ್ಚಾಗಿದೆ. ಇಂತಹ ಜಮೀನಿನಲ್ಲಿ ಕೈಗೆಟಕುವ ದರದ ಮನೆಗಳನ್ನು ನಿರ್ಮಿಸಿ ಮಾರಾಟ ಮಾಡುವುದಕ್ಕಿಂತ, ದುಬಾರಿ ಬೆಲೆಯ ಮನೆ ನಿರ್ಮಿಸಿ ಮಾರಾಟ ಮಾಡುವುದು ಹೆಚ್ಚು ಲಾಭದಾಯಕ.

l ನಗರಗಳ ಹೊರವಲಯದಲ್ಲಿ ಜಮೀನು ಕಡಿಮೆ ಬೆಲೆಗೆ ಸಿಗುತ್ತದೆಯಾದರೂ ಅಲ್ಲಿ ಮೂಲಸೌಕರ್ಯಗಳ ಕೊರತೆ ಇರುತ್ತದೆ. ಮೂಲಸೌಕರ್ಯ ಚೆನ್ನಾಗಿಲ್ಲದ ಕಡೆಗಳಲ್ಲಿ ಕೈಗೆಟಕುವ ದರದ ಮನೆಗಳನ್ನು ನಿರ್ಮಿಸಿದರೆ ಖರೀದಿದಾರರು ಆಸಕ್ತಿ ತೋರುವುದಿಲ್ಲ.

l ಕೈಗೆಟಕುವ ದರದ ಮನೆಗಳನ್ನು ನಿರ್ಮಿಸುವ ಡೆವಲಪರ್‌ಗಳಲ್ಲಿ ಹೆಚ್ಚಿನವರು ಸಣ್ಣ ಪ್ರಮಾಣದವರು. ಅವರಿಗೆ ಸಾಲಕ್ಕೆ ಅಡಮಾನವಾಗಿ ಇರಿಸಲು ಹೆಚ್ಚು ಆಸ್ತಿ ಇರುವುದಿಲ್ಲ. ಹೀಗಾಗಿ ಅವರಿಗೆ ಬಂಡವಾಳ ಸಂಗ್ರಹದ ಸಮಸ್ಯೆ ಇದೆ.

l ಕೈಗೆಟಕುವ ದರದ ಮನೆಗಳ ಮಾರಾಟದಿಂದ ಬರುವ ಲಾಭದ ಪ್ರಮಾಣ ಕಡಿಮೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT