ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಫ್ಯೂಚರ್‌’ನಿಂದ ತಪ್ಪು ಮಾಹಿತಿ: ಸೆಬಿಗೆ ಪತ್ರ ಬರೆದ ಅಮೆಜಾನ್‌

Last Updated 31 ಅಕ್ಟೋಬರ್ 2020, 11:16 IST
ಅಕ್ಷರ ಗಾತ್ರ

ನವದೆಹಲಿ: ಫ್ಯೂಚರ್‌ ರಿಟೇಲ್‌ ಕಂಪನಿಯು ತನ್ನೊಂದಿಗೆ ಮಾಡಿಕೊಂಡಿರುವ ಒಪ್ಪಂದ ಕರಾರನ್ನು ಅನುಸರಿಸುತ್ತಿರುವುದಾಗಿ ಷೇರುದಾರರಿಗೆ ತಪ್ಪು ಮಾಹಿತಿ ನೀಡುತ್ತಿದೆ ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಅಮೆಜಾನ್‌ ಡಾಟ್‌ ಕಾಂ ದೂರು ನೀಡಿದೆ.

ಸೆಬಿ ಅಧ್ಯಕ್ಷ ಅಜಯ್‌ ತ್ಯಾಗಿ ಅವರಿಗೆ ಪತ್ರ ಬರೆದಿರುವ ಅಮೆಜಾನ್‌, ಫ್ಯೂಚರ್‌ ಹೊರಡಿಸಿರುವ ಪತ್ರಿಕಾ ಪ್ರಕಟಣೆ ಮತ್ತು ಷೇರು ವಿನಿಯಮದ ಮಾಹಿತಿಯು ಭಾರತೀಯ ನಿಯಂತ್ರಣ ವ್ಯವಸ್ಥೆಯ ಉಲ್ಲಂಘನೆಯಾಗಿದೆ. ಈ ಪ್ರಕಟಣೆ ಮತ್ತು ಮಾಹಿತಿ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದ್ದು, ಷೇರುದಾರರನ್ನು ತಪ್ಪುದಾರಿಗೆ ಎಳೆಯುತ್ತಿದೆ.ಫ್ಯೂಚರ್ ರಿಟೇಲ್‌ನ ಕಿಶೋರ್ ಬಿಯಾನಿ ಅವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ವಂಚನೆ ಎಸಗಲಾಗುತ್ತಿದೆ ಎಂದು ವಿವರಿಸಿದೆ. ಹೀಗಾಗಿ ಈ ವಿಷಯವನ್ನು ತನಿಖೆ ನಡೆಸುವಂತೆ ಹಾಗೂ ಫ್ಯೂಚರ್‌–ರಿಲಯನ್ಸ್‌ ಒಪ್ಪಂದಕ್ಕೆ ಅನುಮತಿ ನೀಡದೇ ಇರುವಂತೆ ಪತ್ರದಲ್ಲಿ ಹೇಳಿದೆ.

ಈ ಕುರಿತು ಪ್ರತಿಕ್ರಿಯೆ ನೀಡಲು ಫ್ಯೂಚರ್‌ ಗ್ರೂಪ್‌ ಮತ್ತು ಬಿಯಾನಿ ಕುಟುಂಬ ನಿರಾಕರಿಸಿದೆ. ಅಮೆಜಾನ್‌ ಮಾಡಿರುವ ಆರೋಪಗಳನ್ನು ಫ್ಯೂಚರ್‌ ಗ್ರೂಪ್‌ ತಳ್ಳಿಹಾಕಿದೆ. ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಲು ಅಮೆಜಾನ್‌ ನಿರಾಕರಿಸಿದೆ. ಪತ್ರದ ಕುರಿತು ರಿಲಯನ್ಸ್‌ ಮತ್ತು ಸೆಬಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕಿಶೋರ್ ಬಿಯಾನಿ ನೇತೃತ್ವದ ಫ್ಯೂಚರ್ ರಿಟೇಲ್ ಕಂಪನಿಯ ಆಸ್ತಿಯನ್ನು ರಿಲಯನ್ಸ್ ಇಂಡಸ್ಟ್ರೀಸ್‌ ಲಿಮಿಟೆಡ್‌ಗೆ (ಆರ್‌ಐಎಲ್‌) ₹ 24,713 ಕೋಟಿಗೆ ಮಾರಾಟ ಮಾಡುವ ಒಪ್ಪಂದಕ್ಕೆ ಸಿಂಗಪುರದ ಮಧ್ಯಸ್ಥಿಕೆ ಕೇಂದ್ರವು ತಡೆಯಾಜ್ಞೆ ನೀಡಿದೆ. ಆದರೆ, ಅಮೆಜಾನ್ ಕಂಪನಿಯು ಉಲ್ಲೇಖಿಸಿರುವ ಒಪ್ಪಂದದಲ್ಲಿ ತಾನು ಭಾಗೀದಾರ ಅಲ್ಲ ಎನ್ನುವುದು ಫ್ಯೂಚರ್ ಕಂಪನಿಯ ಹೇಳಿಕೆಯಾಗಿದೆ.

ಏನಿದು ಬಿಕ್ಕಟ್ಟು?

2019ರ ಹೂಡಿಕೆ ಒಪ್ಪಂದ ಪ್ರಕಾರ, ಫ್ಯೂಚರ್‌ ಗ್ರೂಪ್‌ನಲ್ಲಿ ಅಮೆಜಾನ್‌ ಕಂಪನಿಯು ₹ 1,460 ಕೋಟಿ ಹೂಡಿಕೆ ಮಾಡಿತ್ತು. ಒಪ್ಪಂದ ಪ್ರಕಾರ, ಫ್ಯೂಚರ್‌ ಸಮೂಹವು ತನ್ನ ಆಸ್ತಿಯನ್ನು ‘ನಿರ್ಬಂಧಿತ ವ್ಯಕ್ತಿಗಳ’ ಪಟ್ಟಿಯಲ್ಲಿ ಹೇಳಿರುವ ಯಾರೊಬ್ಬರಿಗೂ ಮಾರಾಟ ಮಾಡುವಂತಿಲ್ಲ. ಆ ಪಟ್ಟಿಯಲ್ಲಿ ರಿಲಯನ್ಸ್‌ ಸಹ ಸೇರಿಕೊಂಡಿದೆ.

ಆದರೆ, ರಿಲಯನ್ಸ್‌ ಕಂಪನಿಯು 2020ರ ಆಗಸ್ಟ್‌ನಲ್ಲಿ ಫ್ಯೂಚರ್‌ ರಿಟೇಲ್‌ನ ಸಗಟು ಮತ್ತು ಇತರೆ ವಹಿವಾಟುಗಳನ್ನು ಖರೀದಿಸುವ ಒಪ್ಪಂದ ಮಾಡಿಕೊಂಡಿದೆ.ಇದು 2019ರಲ್ಲಿ ಫ್ಯೂಚರ್‌ ಮಾಡಿಕೊಂಡಿದ್ದ ಒಪ್ಪಂದದ ಉಲ್ಲಂಘನೆಯಾಗಿದೆ ಎನ್ನುವುದು ಅಮೆಜಾನ್‌ನ ಆರೋಪವಾಗಿದೆ.

ಅಮೆಜಾನ್‌ ಕಂಪನಿಯು ಕೇವಲ ಫ್ಯೂಚರ್‌ ರಿಟೇಲ್‌ನೊಂದಿಗೆ ಸಂಘರ್ಷಕ್ಕೆ ಇಳಿದಿಲ್ಲ. ಬದಲಾಗಿ ಏಷ್ಯಾದ ಅತ್ಯಂತ ಸಿರಿವಂತ ವ್ಯಕ್ತಿ ಮುಕೇಶ್‌ ಅಂಬಾನಿ ಹಾಗೂ ಅಮೆಜಾನ್‌ನಂತಹ ಕಂಪನಿಗಳಿಗೆ ಪ್ರಬಲ ಪೈಪೋಟಿ ನೀಡಬಲ್ಲ, ಅತ್ಯಂತ ವೇಗವಾಗಿ ಇ–ಕಾಮರ್ಸ್‌ ವಹಿವಾಟು ವಿಸ್ತರಿಸಿಕೊಳ್ಳುತ್ತಿರುವ ರಿಲಯನ್ಸ್‌ ಸಮೂಹದೊಂದಿಗೂ ಸಂಘರ್ಷಕ್ಕೆ ಎಡೆಮಾಡಿಕೊಡಲಿದೆ.

ಪ್ರಮುಖ ಅಂಶಗಳು

* ಫ್ಯೂಚರ್‌–ರಿಲಯನ್ಸ್‌ ಒಪ್ಪಂದದಿಂದ ಭಾರತದ ರಿಟೇಲ್‌ ವಹಿವಾಟಿನ ಮೇಲಿನ ಹಿಡಿತ ತಪ್ಪಲಿದೆ ಎನ್ನುವುದು ಅಮೆಜಾನ್‌ ಹೇಳಿಕೆ

* ಮಧ್ಯಸ್ಥಿಕೆ ಕೇಂದ್ರದ ತಡೆಯಾಜ್ಞೆ ನಿರಾಕರಿಸಿ ಫ್ಯೂಚರ್‌–ರಿಲಯನ್ಸ್‌ ಒಪ್ಪಂದಕ್ಕೆ ಒಪ್ಪಿಗೆ ನೀಡಿದರೆ ಅದರಿಂದ ತುಂಬಲಾರದ ನಷ್ಟವಾಗಲಿದೆ ಎಂದು ಅಮೆಜಾನ್‌ ಕಂಪನಿಯು ‘ಸೆಬಿ’ಗೆ ಹೇಳಿದೆ.

* ಕೋವಿಡ್–19 ಬಿಕ್ಕಟ್ಟಿನಿಂದ ವಹಿವಾಟಿನ ಮೇಲೆ ತೀವ್ರ ಪರಿಣಾಮ ಉಂಟಾಗಿದೆ. ಹೀಗಾಗಿ ಷೇರುದಾರರನ್ನು ರಕ್ಷಿಸಲು ರಿಲಯನ್ಸ್‌ ಜತೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ ಎನ್ನುವುದು ಫ್ಯೂಚರ್‌ ಸಮೂಹದ ವಾದ.

* ಉದ್ದಿಮೆಗಳು ತಮ್ಮ ಒಪ್ಪಂದವನ್ನು ಗೌರವಿಸಬೇಕು ಎನ್ನುವುದು ಕಾನೂನು ನಿರೀಕ್ಷೆ ಮಾಡುತ್ತದೆ ಎಂದು ಮಧ್ಯಸ್ಥಿಕೆ ವಹಿಸಿರುವ ಸಿಂಗಪುರದ ಮಾಜಿ ಅಟಾರ್ನಿ ಜನರಲ್‌ ವಿ.ಕೆ. ರಾಜ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT